May 21, 2022

Newsnap Kannada

The World at your finger tips!

coorg - ಕೊಡಗು

ಕರ್ನಾಟಕದ ಕಾಶ್ಮೀರ ಕೊಡಗು(Coorg)

Spread the love

ಕರ್ನಾಟಕದ ಕಾಶ್ಮೀರ ಎಂದರೆ ನಮ್ಮ ಶ್ರೀಗಂಧದ ನಾಡಿನ ಮುಕುಟ ಕೊಡಗು(Coorg). ರಮ್ಯ ರಮಣೀಯ ಸುಂದರ ತಾಣಗಳ ವೈಭವ ಸಿರಿ ಕಣ್ ತುಂಬಿಕೊಳ್ಳಲು ಕೊಡಗು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಕಾವೇರಿ ಮಾತೆ ಉಗಮ ಸ್ಥಾನ ತಲಕಾವೇರಿ ಕರ್ನಾಟಕದ ಜಲ ಸಂಪತ್ತನ್ನು ಹೆಚ್ಚಿಸಿ ರಾಜ್ಯಕ್ಕೆ ವರದಾನವಾಗಿದೆ.

ಕೊಡಗು

ಕೊಡಗಿಗೆ ಕೂರ್ಗ್ (Coorg) ಎಂಬ ಆಂಗ್ಲೀಯ ಬಳಕೆಯೂ ಇದೆ. ಭಾರತದ ‘ಸ್ಕಾಟ್ ಲ್ಯಾಂಡ್‘ ಎಂಬ ಹೆಸರೂ ಇದಕ್ಕಿದೆ. ‘ಕೊಡಗು’ – ಕನ್ನಡದ ಕುಡು, ಎಂದರೆ ಗುಡ್ಡ ಅಥವಾ ಬೆಟ್ಟದ ಪ್ರದೇಶ ಎಂಬುದರಿಂದ ಬಂದಿರಬಹುದೆಂದು ಹೇಳಲಾಗಿದೆ. ಕೊಡಗು ಇದು ಪಶ್ಚಿಮ ಘಟ್ಟದ ​​ ತಪ್ಪಲಿನ ದಟ್ಟವಾದ ಕಾಡುಗಳಿಂದ ವೈಭವೀಕರಿಸಿದ ಕರ್ನಾಟಕದ ಅತ್ಯಂತ ಸುಂದರ ಗಿರಿಧಾಮವಾಗಿದೆ.

ಕೊಡಗು ಜಿಲ್ಲೆ, ಕರ್ನಾಟಕ ರಾಜ್ಯ ದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಶಿಯಿಂದ, ತೊರೆ, ಝರಿ, ನದಿಗಳಿಂದ ಕೂಡಿದ ಪರಿಸರದಲ್ಲಿದೆ. ಅದರ ಬಗ್ಗೆ ಹಲವಾರು ಕನ್ನಡ ಕವಿಗಳು ವರ್ಣಿಸಿದ್ದಾರೆ.

ಕೊಡಗು ಜಿಲ್ಲೆಯ ರಾಜಧಾನಿ ಮಡಿಕೇರಿ,ಜಿಲ್ಲೆಯನ್ನು ಮೂರು ಆಡಳಿತಾತ್ಮಕ ತಾಲೂಕುಗಳಾಗಿ ವಿಂಗಡಿಸಲಾಗಿದೆ: ಮಡಿಕೇರಿ, ವಿರಾಜಪೇಟೆ ಮತ್ತು ಸೋಮವಾರಪೇಟೆ.

ಇದು ನೈಋತ್ಯ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ 4,102 ಚದರ ಕಿಲೋಮೀಟರ್ (1,584 ಚದರ ಮೈಲಿ) ಪ್ರದೇಶವನ್ನು ಆವರಿಸಿದೆ. ಇದು ಕರ್ನಾಟಕದ 30 ಜಿಲ್ಲೆಗಳಲ್ಲಿಯೇ ಅತಿ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ.

ಕೊಡಗಿನ ಕಾಫಿ ಮತ್ತು ಕೊಡಗಿನ “ಕೆಚ್ಚೆದೆಯ ಯೋಧರರು” ಪ್ರಪಂಚದಲ್ಲಿ ಪ್ರಸಿದ್ದಿ ಪಡೆದಿದ್ದಾರೆ. ಮಡಿಕೇರಿಯು ಕೊಡಗಿನ ಕೇಂದ್ರಸ್ಥಾನವಾಗಿದೆ. ಕೊಡಗು ಕೊಡವ ಭಾಷೆಯನ್ನು ಮಾತನಾಡುವ ಸ್ಥಳೀಯರಿಗೆ ನೆಲೆಯಾಗಿದೆ.

ಭೂಲಕ್ಷ್ಮಿಯು ದೇವರ ಸನ್ನಿಧಾನದಲ್ಲಿರಬೇಕೆಂಬ ಬಯಕೆಯಿಂದ ಗಂಭೀರ-ವೈಯಾರದಿಂದ ಬಂದು ನೆಲೆಸಿದ ಕ್ಷೇತ್ರ; ಭೂಮಿಯನ್ನು ತಣಿಸಿ ಜನರಿಗೆ ಅನ್ನವನ್ನೀಯುವ ಕಾವೇರಿ ಹುಟ್ಟಿ ಹರಿಯಲಾರಂಭಿಸುವ ಪ್ರದೇಶ ಕೊಡಗು ಎಂದು ಕವಿವರ್ಯ ಪಂಜೆ ಮಂಗೇಶರಾಯರು ತಮ್ಮ ಹುತ್ತರಿ ಹಾಡು ಎಂಬ ಪದ್ಯದಲ್ಲಿ ಬಣ್ಣಿಸಿದ್ದಾರೆ.

ಕೊಡಗು ವನ್ಯಜೀವಿ ಸಂಪನ್ಮೂಲಗಳಿಂದ ಸಮೃದ್ಧವೆಂದು ಪರಿಗಣಿಸಲಾಗಿದೆ . ಮೂರು ವನ್ಯಜೀವಿ ಅಭಯಾರಣ್ಯಗಳು ಮತ್ತು ಒಂದು ರಾಷ್ಟ್ರೀಯ ಉದ್ಯಾನವನವನ್ನು ಹೊಂದಿದೆ: ಬ್ರಹ್ಮಗಿರಿ, ತಲಕಾವೇರಿ ಮತ್ತು ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯಗಳು ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನ ಅಥವಾ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವೆಂದೂ ಕರೆಯಲಾಗುತ್ತದೆ.

ಕೊಡಗು ಪ್ರವಾಸಿಗರ ಸ್ವರ್ಗ ಎಂದೇ ಕರೆಯಲ್ಪಡುತ್ತದೆ. ದಕ್ಷಿಣದ ಕಾಶ್ಮೀರ ಎಂದೇ ಖ್ಯಾತಿ ಪಡೆದಿರುವ ಕೊಡಗು ಹಸಿರು ಗಿರಿವನಗಳ ಸಿರಿವಂತ ಜಿಲ್ಲೆ. ತುಂಬಿ ಹರಿಯುವ ತೊರೆಗಳು, ದಟ್ಟ ಕಾನನ, ಸುವಾಸನಾಭರಿತ ಕಾಫಿ ಹಾಗೂ ಏಲಕ್ಕಿ ತೋಟಗಳು ಅವುಗಳ ನಡುವೆ ಮಧ್ಯೆ ಅಲ್ಲಲ್ಲಿ ಕಂಡುಬರುವ ಜಲಪಾತಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತದೆ.

ಸಾಮಾನ್ಯವಾಗಿ ಕಂಡುಬರುವಂತಹ ಬೆಳೆ ಕಾಫಿ, ಅದರಲ್ಲೂ ವಿಶೇಷವಾಗಿ ಕಾಫೀ ರೋಬಸ್ಟಾ ಹೇರಳವಾಗಿ ಬೆಳೆಯುತ್ತಾರೆ. ಇದು ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿಯ ನಂತರ ಭಾರತದ ಎರಡನೇ ಕಾಫಿ ಉತ್ಪಾದನಾ ಕೇಂದ್ರ ಕೊಡಗು, ಇದರಿಂದ ಕೊಡಗು ಭಾರತದ ಶ್ರೀಮಂತಜಿಲ್ಲೆಗಳಲ್ಲಿ ಒಂದಾಗಿ ಬೆಳೆದಿದೆ.

ಕೂರ್ಗ್ ಕಡಿಮೆ ಜನದಟ್ಟಣೆಯ ಗಿರಿಧಾಮಗಳಲ್ಲಿ ಒಂದಾಗಿದೆ. ಇದರ ನೈಸರ್ಗಿಕ ಮತ್ತು ಸೊಂಪಾದ ಹಸಿರು ಪ್ರಕೃತಿಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಇದು ಬೇಸಿಗೆ ಕಾಲಕ್ಕೆ ಸೂಕ್ತವಾದ ಸ್ಥಳ. ಕೂರ್ಗ್‌ ಕಾಫಿ ತೋಟಗಳು, ಜಲಪಾತಗಳು, ಹಸಿರು ಪರ್ವತಗಳಿಂದ ಕಂಗೊಳಿಸುತ್ತದೆ.

ಸುಂದರ ವಾತಾವರಣ, ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ ಪ್ರವಾಸಿಗರನ್ನು ಕೊಡಗಿನತ್ತ ಸೆಳೆಯುತ್ತದೆ. ಕೆಲವು ಮಂದಿ ಇಲ್ಲಿನ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಬಂದರೆ ಮತ್ತೆ ಕೆಲವರು ಚಾರಣಕ್ಕಾಗಿಯೇ ಬರುತ್ತಾರೆ. ಈಗ ಎಲ್ಲೆಡೆಯೂ ಹೋಂ ಸ್ಟೇ ಇರುವುದರಿಂದ ಪ್ರವಾಸಿಗರ ವಾಸ್ತವ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಆದ್ದರಿಂದ ದೂರದಿಂದ ಬರುವ ಪ್ರವಾಸಿಗರು ಹಲವು ದಿನಗಳ ಕಾಲ ಹೋಂಸ್ಟೇಗಳಲ್ಲಿ ತಂಗುವುದರೊಂದಿಗೆ ಕಾಡುಮೇಡು ಅಲೆದು ಖುಷಿಯಾಗಿ ತಮ್ಮೂರಿಗೆ ತೆರಳುತ್ತಾರೆ. ಇಂತಹ ಪ್ರಕೃತಿ ರಮಣೀಯ, ಸಮೃದ್ಧ ಹಸಿರಿನ ನಾಡಿನಲ್ಲಿ ಹಲವಾರು ಪ್ರವಾಸಿ ತಾಣಗಳಿವೆ.

  1. ಅಬ್ಬಿ ಜಲಪಾತ: ಜಲಪಾತದ ವಿಶೇಷವೆಂದರೆ ಬೇಸಿಗೆಯಲ್ಲೂ ಈ ಅಬ್ಬಿ ಜಲಪಾತ ಧುಮ್ಮಿಕ್ಕಿ ಹರಿಯುತ್ತದೆ. ಕೇವಲ ಪ್ರವಾಸಿಗರಿಗೆ ಮಾತ್ರವಲ್ಲದೇ ಚಿತ್ರರಂಗಕ್ಕೂ ಅಬ್ಬಿ ಜಲಪಾತ ಅಚ್ಚುಮೆಚ್ಚು. ಇದೇ ಕಾರಣಕ್ಕೆ ಇಲ್ಲಿ ಸಾಕಷ್ಟು ಚಿತ್ರೀಕರಣಗಳು ನಡೆದಿವೆ.
  1. ರಾಜಾ ಸೀಟ್‌ :ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಇಲ್ಲಿಂದ ಸೂರ್ಯಾಸ್ತ ಬಹಳ ಸುಂದರವಾಗಿ ಕಾಣುತ್ತದೆ. ಸೂರ್ಯ ಮುಳುಗುವಾಗ ಮೊದಲು ಬಂಗಾರದ ಬಣ್ಣಕ್ಕೆ ತಿರುಗಿ ಬಳಿಕೆ ಕೆಂಬಣ್ಣಕ್ಕೆ ತಿರುಗಿ ಮರೆಯಾಗುತ್ತಾನೆ. ಈ ಅಭೂತಪೂರ್ವ ದೃಶ್ಯ ವೀಕ್ಷ ಣೆಗೆ ಪ್ರತಿನಿತ್ಯ ಇಲ್ಲಿಗೆ ನೂರಾರು ಪ್ರವಾಸಿಗರು ಆಗಮಿಸುತ್ತಾರೆ.
  2. ತಲಕಾವೇರಿ :ಕರ್ನಾಟಕದ ಜೀವನದಿ ಮತ್ತು ರಾಜಧಾನಿ ಬೆಂಗಳೂರು ನಗರದ ಜನತೆಯ ದಾಹ ತಣಿಸುತ್ತಿರುವ ಕಾವೇರಿ ನದಿಯ ಉಗಮ ಸ್ಥಾನ ಈ ತಲಕಾವೇರಿ.ಇಲ್ಲಿ ತುಲಾ ಸಂಕ್ರಮಣವನ್ನು ಕಾವೇರಿ ಸಂಕ್ರಮಣವಾಗಿ ಆಚರಿಸಲಾಗುತ್ತಿದ್ದು, ಆ ದಿನ ಪಾರ್ವತಿ ದೇವಿಯು ಪವಿತ್ರ ಕುಂಡಿಕೆಯಲ್ಲಿ ತೀರ್ಥೋದ್ಭವದ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ ಎಂಬುದು ನಂಬಿಕೆ.
  3. ಬ್ರಹ್ಮಗಿರಿ ಶಿಖರ :ತಲಕಾವೇರಿಯ ಸಮೀಪದಲ್ಲೇ ಬ್ರಹ್ಮಗಿರಿ ಶಿಖರವಿದ್ದು, ಸಪ್ತಋುಷಿಗಳು ಇಲ್ಲಿ ವಿಶೇಷ ಯಜ್ಞ ಮಾಡಿದರೆಂಬ ಕಥೆಯಿದೆ.
  4. ಮಡಿಕೇರಿ ಕೋಟೆ :ಮಡಿಕೇರಿಯ ಮಧ್ಯಭಾಗದಲ್ಲಿ 19ನೇ ಶತಮಾನದ ಒಂದು ಕೋಟೆಯಿದೆ. ಈ ಕೋಟೆಯ ಮೇಲ್ಭಾಗದಿಂದ ಮಡಿಕೇರಿಯ ಸೌಂದರ್ಯ ಸವಿಯಬಹುದು.
  5. ಭಾಗಮಂಡಲ :ಕಾವೇರಿ, ಕನ್ನಿಕಾ ಮತ್ತು ಸುಜ್ಯೋತಿ ಎಂಬ ಮೂರು ನದಿಗಳ ಸಂಗಮ ಕ್ಷೇತ್ರ.
  6. ದುಬಾರೆ ಆನೆ ತರಬೇತಿ ಕೇಂದ್ರ :ಸಿದ್ದಾಪುರ-ಕುಶಾಲನಗರ ರಸ್ತೆಯಲ್ಲಿ ಕಾವೇರಿ ನದಿ ತಟದಲ್ಲಿ ಅರಣ್ಯ ಇಲಾಖೆಗೆ ಸೇರಿದ ಆನೆಗಳ ತರಬೇತಿ ಕೇಂದ್ರವಿದೆ.ಬೋಟಿಂಗ್‌ ಇಲ್ಲಿನ ವಿಶೇಷ ,ಮಾವುತರ ಸಹಾಯದಿಂದ ಆನೆ ಸವಾರಿಗೂ ಕೂಡ ಸರ್ಕಾರ ಅನುಮತಿ ನೀಡಿದೆ.

ಕೊಡವರ ವೇಷ ಭೂಷಣ

kodava 1

ಪುರುಷರು ‘ಕುಪ್ಯ’ವೆಂದು ಹೆಸರಿರುವ ಕಪ್ಪು ಬಣ್ಣದ ತುಂಡು ತೋಳಿನ ಮೊಣಕಾಲ ತುಸು ಕೆಳಗೆ ಬರುವಷ್ಟು ಉದ್ದದ ನಿಲುವಂಗಿಯನ್ನು ಉದ್ದ ತೋಳಿನ ಶರ್ಟಿನ ಮೇಲೆ ಧರಿಸುತ್ತಾರೆ. ಹಿರಿಯರು, ತಕ್ಕ, ಮುಖ್ಯಸ್ಥರು ಉದ್ದ ತೋಳಿನ ಬಿಳೀ ಕುಪ್ಯವನ್ನು ತೊಡುತ್ತಾರೆ. ಕುಂಕುಮ ಬಣ್ಣದ ರೇಷ್ಮೆಯ ಜರಿಯ ಚಿತ್ತಾರವಿರುವ ನಡುಪಟ್ಟಿಯನ್ನು ಕುಪ್ಯದ ಮೇಲೆ ಸುತ್ತಿ ಕಟ್ಟಿಕೊಳ್ಳುತಾರೆ. ಇದಕ್ಕೆ ‘ಚೇಲೆ’ ಎಂದು ಹೆಸರು. ಬಲಭಾಗದಲ್ಲಿ ‘ಪೀಚೆಕತ್ತಿ’ಯನ್ನುಚೇಲೆಗೆ ಸಿಕ್ಕಿಸಿ ಅದಕ್ಕೆ ಜೋಡಿಸಲಾಗಿರುವ ಬೆಳ್ಳಿಯ ತೆಳು ಸರಪಳಿಯ ಕೊನೆಯನ್ನು ಚೇಲೆಯ ಹಿಂಭಾಗದಲ್ಲಿ ಸಿಕ್ಕಿಸಲಾಗುತ್ತದೆ.

ಪೀಚೆಕತ್ತಿಯು ನವಿಲಿನ ತಲೆಯಾಕೃತಿಯ ಹಿಡಿಕೆಯಿರುವ ಗೇಣುದ್ದದ ಕತ್ತಿ. ಇದರ ಒರೆಯ ಹೊರಕವಚವನ್ನು ಬೆಳ್ಳಿಯ ತೆಳು ತಗಡಿನಿಂದ ಮಾಡಿದ್ದು ಅದರ ಮೇಲೆ ಚಿತ್ತಾರದ ಕೆಲಸವಿದೆ. ತಲೆಗೆ ವಿಶೇಷ ರೀತಿಯಲ್ಲಿ ಭದ್ರವಾಗಿ ಸುತ್ತಿ ಕಟ್ಟಲಾದ ರುಮಾಲನ್ನು ಧರಿಸುತ್ತಾರೆ.

ಕೊಡವತಿಯರು ಉಡುವ ಸೀರೆಯ ಶೈಲಿಗೆ ಕೊಡವ ಪೊಡೆಯ ಎನ್ನುವರು. ಇದರಲ್ಲಿ ನಿರಿಗೆಯನ್ನು ಹಿಂಭಾಗದಲ್ಲಿ ಸೊಂಟಕ್ಕೆ ಸಿಕ್ಕಿಸಿ ಸೀರೆಯನ್ನುಡುವರು. ಅದರ ಇನ್ನೊಂದು ಕೊನೆಯು ಬಲ ಭಾಗದಿಂದ ಎಡ ಕಂಕುಳಕ್ಕಾಗಿ ಹಾದು ಬೆನ್ನನ್ನು ದಾಟಿ ಬಲಭುಜದ ಮೇಲಿನಿಂದ ಇಳಿದು, ಅಡ್ಡ ಹಾಯ್ದ ಸೀರೆಯ ಅಂಚಿಗೆ ಪಿನ್ನಿನಿಂದ ಜೋಡಿಸಿಕೊಳ್ಳುತ್ತಾರೆ. ಹಿಂಭಾಗದಲ್ಲಿ ಮೊಣಕಾಲವರೆಗಿರುವಷ್ಟು ಉದ್ದದ ವಸ್ತ್ರವೊಂದನ್ನು ತಲೆಗೆ ಕಟ್ಟಿಕೊಳ್ಳುತ್ತಾರೆ. ಮುಂದಲೆಯ ಮೇಲೆ ಬರುವ ಇದರ ಭಾಗದಲ್ಲಿ ಜರತಾರಿಯ ಪಟ್ಟಿಯನ್ನು ಹಚ್ಚಿರುತ್ತದೆ.

error: Content is protected !!