ಕನ್ನಡ ವಿವಿಯಿಂದ ಡಾ.ರಾಜ್ ಕುರಿತು ಅಧ್ಯಯನಶೀಲ ಮಾಹಿತಿ ಸಂಗ್ರಹಕ್ಕೆ ಕ್ರಮ – ಡಾ ರಮೇಶ್

Team Newsnap
1 Min Read

ಕನ್ನಡ ವಿಶ್ವವಿದ್ಯಾಲಯ ಡಾ.ರಾಜ್ ಕುಮಾರ್ ಬಗ್ಗೆ ಅಧ್ಯಯನಶೀಲ ಮಾಹಿತಿಯನ್ನು ಕ್ರೋಢೀಕರಿಸುವ ಕೆಲಸವನ್ನು ಕೈಗೆತ್ತಿಕೊಂಡಿದೆ ಎಂದು ಹಂಪೆ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸ.ಚಿ.ರಮೇಶ ಹೇಳಿದರು.

ಹಂಪೆ ಕನ್ನಡ ವಿಶ್ವವಿದ್ಯಾಲಯದ ಡಾ.ರಾಜಕುಮಾರ್ ಅಧ್ಯಯನ ಪೀಠ ಹಾಗೂ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಂವಹನ ವಿಭಾಗದ ಆಶ್ರಯದಲ್ಲಿ ಮಂಗಳವಾರ ಜ್ಞಾನಜ್ಯೋತಿ ಸಭಾಂಗಂಣದ ಸೆನೆಟ್ ಹಾಲಿನಲ್ಲಿ ಡಾ.ರಾಜಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣ ಕಾರ್ಯಕ್ರವನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ವಿಶ್ವವಿದ್ಯಾಲಯಗಳು ಕೇವಲ ಪಠ್ಯಪುಸ್ತಕಕ್ಕೆ ಅಂಟಿಕೊಳ್ಳದೆ, ಸಮಾಜಕ್ಕೆ ಕೊಡುಗೆ ನೀಡಿದ ಮಹಾನುಭಾವರನ್ನು ಸಮಾಜಕ್ಕೆ ಹಾಗೂ ವಿದ್ಯಾರ್ಥಿವೃಂದಕ್ಕೆ ಪರಿಚಯ ಮಾಡಿಸುವ ಕೆಲಸವನ್ನು ಮಾಡಬೇಕಿದೆ ಈ ನಿಟ್ಟಿನಲ್ಲಿ
ಬೆಂಗಳೂರು ನಗರ ವಿಶ್ವವಿದ್ಯಾಲಯ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.

ಡಾ.ರಾಜಕುಮಾರ್ ಅವರ ಚಲನಚಿತ್ರಗಳಲ್ಲಿ ಜೀವನಮೌಲ್ಯಗಳಿಂದ ತುಂಬಿದೆ. ಅವರ ಬಗ್ಗೆ ಮಾತನಾಡುವುದು ಕನ್ನಡದ ಬಗ್ಗೆ ಮಾತನಾಡಿದಂತಾಗುತ್ತದೆ ಎಂದರು.

ಡಾ.ರಾಜಕುಮಾರ್ ಅವರ ಅಪರೂಪದ ಘಟನೆಗಳನ್ನು ಮೆಲುಕು ಹಾಕಿದ ಚಿತ್ರ ಸಾಹಿತಿ ಅ.ನಾ.ಪ್ರಹ್ಲಾದರಾವ್ ರಾಜಕುಮಾರ್ ಪ್ರಪಂಚದ ಎಲ್ಲ ಸ್ತರದ ಜನರಿಗೆ ಮಾದರಿಯಾಗಿದ್ದಾರೆ ಎಂದರು.

ರಾಜಕುಮಾರ್ ಕೆನಡ ದೇಶಕ್ಕೆ ಭೇಟಿ ನೀಡಿದಾಗ ಸ್ವಾರಸ್ಯಕರ ಘಟನೆಯೊಂದನ್ನು ಸ್ಮರಿಸಿದರು, ಅಲ್ಲಿನ ಚರ್ಚ್ ಒಂದಕ್ಕೆ ಭೇಟಿ ನೀಡಿದ್ದ ರಾಜಕುಮಾರ್ ನಿವೇದನೆ ಪುಸ್ತಕದಲ್ಲಿ ‘ತಮಗೆ ಅಹಂಕಾರ ನೀಡಬೇಡ’ ಎಂದು ಬರೆದಿದ್ದರೆಂದು ಪ್ರಹ್ಲಾದರಾವ್ ಹೇಳಿದರು.

ಸರ್ಕಾರಿ ಕಲಾ ಕಾಲೇಜಿನ ಕನ್ನಡ ಅಧ್ಯಯನ ವಿಭಾಗದ ಸಂಯೋಜಕ ಡಾ. ಬಿ.ಸಿ.ನಾಗೇಂದ್ರಕುಮಾರ್ ರಾಜಕುಮಾರ್ ಚಿತ್ರಗಳಲ್ಲಿನ ಸಾಮಾಜಿಕ ಅನುಸಂಧಾನ ನೆಲೆಗಳ ಬಗ್ಗೆ ಮಾತನಾಡಿದರು.

ಕಲಾ ನಿಕಾಯದ ಮುಖ್ಯಸ್ಥರಾದ ಪ್ರೊ.ಎನ್.ನರಸಿಂಹಮೂರ್ತಿ ಸ್ವಾಗತ ಕೋರಿದರು. ರಾಜಕುಮಾರ್ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಪ್ರೊ.ಕೆ.ಸಿ.ಶಿವಾರೆಡ್ಡಿ ಕಾರ್ಯಕ್ರಮದ ಬಗ್ಗೆ ಆಶಯ ಭಾಷಣ ಮಾಡಿದರು.

Share This Article
Leave a comment