November 27, 2021

Newsnap Kannada

The World at your finger tips!

ಕನ್ನಡ ಚಿತ್ರ ಚರಿತ್ರೆ ಭಾಗ-೨

Spread the love

ಮಾತನಾಡಿದ ಕನ್ನಡದ ಮೊದಲ ಚಲನಚಿತ್ರ ಸತಿ ಸುಲೋಚನ

ಅ.ನಾ.ಪ್ರಹ್ಲಾದರಾವ್

ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಮುಂಭಾಗದಲ್ಲಿ ಕಲಾಸಿಪಾಳ್ಯ ಪ್ರದೇಶದಲ್ಲಿದ್ದ ಪ್ಯಾರಾಮೌಂಟ್ ಚಿತ್ರಮಂದಿರದಲ್ಲಿ ಕನ್ನಡದ ಮೊದಲ ಚಲನಚಿತ್ರ ಸತಿ ಸುಲೋಚನ ೧೯೩೪ರ ಮಾರ್ಚ್ ೩ರಂದು ಬಿಡುಗಡೆಗೊಂಡಿತು. ಈ ಚಿತ್ರ ಪ್ರದರ್ಶಿಸಿದ ಚಿತ್ರಮಂದಿರ ಬೆಂಗಳೂರಿನಲ್ಲಿ ಈಗಿಲ್ಲವಾದರೂ, ಪ್ಯಾರಾಮೌಂಟ್ ಚಿತ್ರಮಂದಿರವಿದ್ದ ಸ್ಥಳದಲ್ಲಿ ಪರಿಮಳ, ಪ್ರದೀಪ್ ಎಂಬ ಅವಳಿ ಚಿತ್ರಮಂದಿರಗಳು ನಿರ್ಮಾಣವಾಗಿವೆ. ಕನ್ನಡದ ಮೊದಲ ಚಲನಚಿತ್ರವನ್ನು ನಿರ್ಮಿಸಿದವರು ಕನ್ನಡೇತರರು. ವ್ಯಾಪಾರಿಗಳಾದ ಚಮನ್‌ಲಾಲ್ ಡುಂಗಾಜಿ ಹಾಗೂ ಷಾ ಭೂರ್‌ಮಲ್ ಚಮನ್‌ಮಲ್‌ಜಿ ಅವರು ಸತಿ ಸುಲೋಚನ ಚಿತ್ರ ನಿರ್ಮಿಸಿದರು. ಸುಮಾರು ಮೂರು ದಶಕಗಳ ಕಾಲ ಬೆಂಗಳೂರಿನಲ್ಲಿ ನೆಲೆಸಿ ಕನ್ನಡಿಗರೇ ಆಗಿದ್ದ, ಡುಂಗಾಜಿ ಹಾಗೂ ಮಗ ಇಬ್ಬರೂ ಕೂಡಿ ಕನ್ನಡದ ಮೊದಲ ಚಲನಚಿತ್ರ ತಯಾರಿಸುವ ಸಾಹಸಕ್ಕೆ ಕೈ ಹಾಕಿದರು.

ಆಗ ರಂಗಭೂಮಿಯಲ್ಲಿ ಪ್ರಖ್ಯಾತರಾಗಿದ್ದ ಸುಬ್ಬಯ್ಯನಾಯ್ಡು ಹಾಗೂ ಆರ್.ನಾಗೇಂದ್ರರಾವ್ ಅವರಲ್ಲಿ ಚರ್ಚಿಸಿ, ತೆಲುಗಿನವರಾದ ವೈ.ವಿ.ರಾವ್ ಅವರ ನಿರ್ದೇಶನದಲ್ಲಿ ಕನ್ನಡ ಚಲನಚಿತ್ರ ತಯಾರಿಸುವ ಸಂಕಲ್ಪ ಮಾಡಿದರು. ಗುಬ್ಬಿ ವೀರಣ್ಣನವರ ನಾಟಕ ಕಂಪೆನಿಗೆ ನಾಟಕಗಳನ್ನು ಬರೆದುಕೊಡುತ್ತಿದ್ದ ಬೆಳ್ಳಾವೆ ನರಹರಿಶಾಸ್ತಿçಗಳು ರಾಮಾಯಾಣದ ಎಳೆಯೊಂದನ್ನು ಆಧರಿಸಿ ಕಥೆಯೊಂದನ್ನು ಮಾತ್ರವಲ್ಲದೆ, ಸಂಭಾಷಣೆ ಹಾಗೂ ಹಾಡುಗಳನ್ನು ರಚಿಸಿ ಸತಿ ಸುಲೋಚನ ಎಂಬ ಹೆಸರನ್ನು ನೀಡಿದರು. ಕಲಾವಿದರನ್ನು ನಿಷ್ಕರ್ಷೆ ಮಾಡಿ, ಬೆಂಗಳೂರಿನಲ್ಲಿ ಹಲವು ತಿಂಗಳುಗಳ ಕಾಲ ತಾಲೀಮು ನಡೆಸಿದರು.

ಮುಂದೆ ನಟರಾಗಿ, ನಿರ್ಮಾಪಕರಾಗಿ ಖ್ಯಾತರಾದ ಅಂದಿನ ರಂಗಭೂಮಿ ಕಲಾವಿದ ಆರ್.ನಾಗೇಂದ್ರರಾವ್ ಈ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಅಭಿನಯಿಸುವುದರೊಂದಿಗೆ ಎಚ್.ಆರ್.ಪದ್ಮನಾಭಶಾಸ್ತಿçಗಳ ಜೊತೆ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿ ಪ್ರಥಮ ಸಂಗೀತ ನಿರ್ದೇಶಕರೆಂಬ ಹೆಗ್ಗಳಿಕೆಗೆ ಪಾತ್ರರಾದರು. ನಟ ಲೋಕೇಶ್ ಅವರ ತಂದೆ ಖ್ಯಾತ ರಂಗಭೂಮಿ ನಟ ಎಂ.ವಿ.ಸುಬ್ಬಯ್ಯನಾಯ್ಡು ಈ ಚಿತ್ರದ ನಾಯಕ ನಟ. ಇವರು ಇಂದ್ರಜಿತು ಪಾತ್ರ ನಿರ್ವಹಿಸಿದರು. ನಾಯಕಿ ಸುಲೋಚನಾ ಪಾತ್ರವನ್ನು ತ್ರಿಪುರಾಂಬ ಹಾಗೂ ಮಂಡೋದರಿ ಪಾತ್ರವನ್ನು ಲಕ್ಷಿö್ಮಬಾಯಿ ನಿರ್ವಹಿಸಿದರು. ಸಿ.ವಿ.ಶೇಷಾಚಲಂ ನಾರದರಾಗಿ, ಡಿ.ವಿ.ಮೂರ್ತಿರಾವ್ ಶ್ರೀರಾಮಚಂದ್ರನ ಪಾತ್ರದಲ್ಲಿ ನಟಿಸಿದರು. ಎಸ್.ಕೆ.ಪದ್ಮಾವತಿ ಸಖಿ ಪಾತ್ರ ನಿರ್ವಹಿಸಿದರು. ನಿರ್ದೇಶಕ ವೈ.ವಿ.ರಾವ್ ಲಕ್ಷö್ಮಣನ ಪಾತ್ರವನ್ನೂ ನಿರ್ವಹಿಸಿದರು. ಪಾತ್ರಧಾರಿಗಳೆಲ್ಲರೂ ರಂಗಭೂಮಿ ಕಲಾವಿದರೇ ಆಗಿದ್ದರು.

ಸತಿ ಸುಲೋಚನ ಮಹಾರಾಷ್ಟçದ ಕೊಲ್ಲಾಪುರದ ಸ್ಟುಡಿಯೋದಲ್ಲಿ ಮೂರು ತಿಂಗಳ ಅವಧಿಯಲ್ಲಿ ಚಿತ್ರೀಕರಣ ಮುಗಿಸಿತು. ಚಿತ್ರೀಕರಣ ವೀಕ್ಷಿಸಲು ಬಂದ ಎರಡು ಸಾವಿರಕ್ಕ್ಕೂ ಹೆಚ್ಚು ಗ್ರಾಮೀಣ ಜನರನ್ನೇ ಯುದ್ಧ ದೃಶ್ಯಗಳಲ್ಲಿ ಬಳಸಿಕೊಳ್ಳÀಲಾಯಿತು. ಯುದ್ಧ ದೃಶ್ಯಗಳನ್ನು ಚಿತ್ರೀಕರಿಸಲು ಮೂರು ಕ್ಯಾಮರಾಗಳನ್ನು ಬಳಸಿಕೊಳ್ಳಲಾಯಿತು. ಸಾವಿರಾರು ಗೋಣಿಚೀಲಗಳನ್ನು ತಂದು ರಾಕ್ಷಸರ ಉಡುಪಾಗಿ ಬಳಸಲಾಯಿತು. ಚಿತ್ರದಲ್ಲಿ ೧೫ ಹಾಡುಗಳನ್ನು ಅಳವಡಿಸಲಾಗಿತ್ತು. ಎಲ್ಲ ಹಾಡುಗಳನ್ನು ಆಯಾಯ ಪಾತ್ರಧಾರಿಗಳೇ ಹಾಡಿದರು. ಚಿತ್ರಕ್ಕಾಗಿ ನಿರ್ಮಾಪಕರು ೪೦,೦೦೦ ರೂ.ಗಳನ್ನು ತೊಡಗಿಸಿದರು.

ಆಗ ಬ್ರಿಟಿಷ್ ಸೆನ್ಸಾರ್ ಬೋರ್ಡ್ ಪ್ರತಿ ಜಿಲ್ಲೆಯಲ್ಲಿಯೂ ಚಲನಚಿತ್ರ ವೀಕ್ಷಿಸಿ, ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುತ್ತಿತ್ತು. ಬೆಂಗಳೂರಿನಲ್ಲಿ ಸೌತ್ ಇಂಡಿಯಾ ಮೂವಿಟೋನ್ ಅವರಿಗಾಗಿ ಸೆನ್ಸಾರ್ ಮಂಡಲಿ ಈ ಚಿತ್ರ ವೀಕ್ಷಿಸಿ ಅನುಮತಿ ನೀಡಿತು. ೧೭೩ ನಿಮಿಷಗಳ ಅವಧಿಯ ಈ ಚಿತ್ರ ೧೯೩೪ರ ಫೆಬ್ರವರಿ ೨೮ರಂದು ಸೆನ್ಸಾರ್ ಆಯಿತು.

ಚಿತ್ರಕಥೆ: ಸುಲೋಚನಾ ಇಂದ್ರಜಿತುವಿನ ಪತ್ನಿ, ರಾವಣನ ಸೊಸೆ. ಈಕೆ ಮಹಾ ಪತಿವ್ರತೆ. ಸುಲೋಚನಾ ಯುದ್ಧವನ್ನು ವಿರೋಧಿಸಿದರೂ ತನ್ನ ಗಂಡನ ಗೆಲುವಿಗಾಗಿ ಭಕ್ತಿ-ಭಾವಗಳಿಂದ ಜಗನ್ಮಾತೆಯನ್ನು ಭಜಿಸುತ್ತಾಳೆೆ. ಮಾನಸಿಕವಾಗಿ ಪತಿಗೆ ಒತ್ತಾಸೆಯಾಗಿ ನಿಲ್ಲುತ್ತಾಳೆ. ರಾಮ-ರಾವಣರ ಯುದ್ಧದಲ್ಲಿ ಇಂದ್ರಜಿತು ಪ್ರವೇಶವಾದಾಗ ಅತಿಮಾನುಷ ಶಕ್ತಿಗಳಿಂದಾಗಿ ಆತ ರಣರಂಗದಲ್ಲಿ ವಿಜೃಂಬಿಸುತ್ತಾನೆ. ಲಕ್ಷö್ಮಣ ಇಂದ್ರಜಿತುವಿನ ದಾಳಿಗೆ ತತ್ತರಿಸಿ ಸೋಲು ಅನುಭವಿಸುತ್ತಾನೆ. ಕೊನೆಗೆ ರಾಮನ ಪ್ರವೇಶವಾಗುತ್ತದೆ. ಇಂದ್ರಜಿತು ಹಾಗೂ ರಾವಣರಿಬ್ಬರೂ ರಾಮನಿಗೆ ಬಲಿಯಾಗುತ್ತಾರೆ. ಸುಲೋಚನಾ ಕೊನೆಗೂ ತನ್ನ ಗಂಡನನ್ನು ಕಳೆದುಕೊಳ್ಳುತ್ತಾಳೆ. ಸುಲೋಚನ ಗಂಡನ ದೇಹದೊಂದಿಗೆ ತಾನೂ ಅಗ್ನಿಗೆ ಆಹುತಿಯಾಗಿ ಸತಿಯಾಗುತ್ತಾಳೆ. ಇದು ಈ ಚಿತ್ರದ ಕಥಾ ಸಾರ.

ಕನ್ನಡ ಮೊದಲ ಚಿತ್ರದ ನಿರ್ದೇಶಕ ವೈ.ವಿ.ರಾವ್:

ಚಿತ್ರದ ನಿರ್ದೇಶಕರಾದ ಯರಗುಡಿಪತಿ ವರದರಾವ್ (೧೯೦೩-೧೯೭೦) ಆಂದ್ರಪ್ರದೇಶದ ನೆಲ್ಲೂರಿನವರು. ಮುಂಬೈ ಹಾಗೂ ಕೊಲ್ಲಾಪುರದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಮೂಕಿ ಚಲನಚಿತ್ರಗಳಲ್ಲಿ ೧೯೨೦ರ ಆರಂಭದಲ್ಲಿ ವೈ.ವಿ.ರಾವ್ ಅವರಿಗೆ ಬಹಳಷ್ಟು ಅವಕಾಶಗಳು ದೊರೆತವು. ನಂತರ ಮದರಾಸಿಗೆ ಬಂದ ರಾವ್ ಪ್ರಕಾಶಂ ಅವರ ಗರುಡ ಗರ್ವಭಂಗ ಗಜೇಂದ್ರ ಮೋಕ್ಷಂ ರೋಸ್ ಆಫ್ ರಾಜಾಸ್ಥಾನ್ ಮುಂತಾದ ಮೂಕಿ ಚಿತ್ರಗಳಲ್ಲಿ ನಾಯಕ ಪಾತ್ರಗಳನ್ನು ನಿರ್ವಹಿಸಿದರು. ೧೯೩೦ರ ವೇಳೆಗೆ ರಾವ್ ಚಲನಚಿತ್ರ ನಿರ್ದೇಶನದತ್ತ ಆಕರ್ಷಿತರಾಗಿ, ಪಾಂಡವ ನಿರ್ವಾಣಂ ಪಾಂಡವ ಅಜ್ಞಾತವಾಸಂ ಹರಿಮಾಯ (೧೯೩೨) ಮೂಕಿಚಿತ್ರಗಳನ್ನು ನಿರ್ದೇಶಿಸಿದರು. ಖ್ಯಾತ ಅಭಿನೇತ್ರಿ ಲಕ್ಷಿö್ಮ ಅವರು ರಾವ್ ಅವರ ಪುತ್ರಿ.

ಕನ್ನಡ ಮೊದಲ ಚಿತ್ರದ ನಾಯಕ ನಟ ಸುಬ್ಬಯ್ಯನಾಯ್ಡು

ಕನ್ನಡದ ಮೊದಲ ಚಲನಚಿತ್ರ ಸತಿ ಸುಲೋಚನದಲ್ಲಿ ಅಭಿನಯಿಸುವುದರೊಂದಿಗೆ ಕನ್ನಡದ ಪ್ರಪ್ರಥಮ ನಾಯಕನಟರೆಂಬ ಅಭಿದಾನಕ್ಕೆ ಪಾತ್ರರಾಗಿರುವ ಸುಬ್ಬಯ್ಯನಾಯ್ಡು ಖ್ಯಾತ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರು. ಮೈಸೂರು ಜಿಲ್ಲೆಯ ಮಾದಲಾಪುರದಲ್ಲಿ ೧೯೦೯ರಲ್ಲಿ ಜನಿಸಿದ ನಾಯ್ಡು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡು ತುಂಬಾ ಬಡತನದಲ್ಲಿ ಬಾಲ್ಯವನ್ನು ಎದುರಿಸಿದರು.

ಕನ್ನಡ ಮೊದಲ ಚಿತ್ರದ ಸಂಗೀತ ನಿರ್ದೇಶಕ ಆರ್.ನಾಗೇಂದ್ರರಾವ್

ಆರ್. ನಾಗೇಂದ್ರರಾವ್ ನಟ-ನಿರ್ದೇಶಕರಾಗಿ ಕನ್ನಡ ಚಿತ್ರರಂಗದ ಏಳಿಗೆಗೆ ಕೊಟ್ಟ ಕೊಡುಗೆ ಅಪಾರವಾದದ್ದು, ಕನ್ನಡದ ಮೊಟ್ಟ ಮೊದಲ ಮಾತನಾಡುವ ಚಲನಚಿತ್ರ `ಸತಿಸುಲೋಚನ`ಕ್ಕಾಗಿ ಹೆಚ್.ಆರ್. ಪದ್ಮನಾಭಶಾಸ್ತಿç ಅವರೊಂದಿಗೆ ಸಂಗೀತ ನೀಡುವ ಮೂಲಕ ಕನ್ನಡದ ಮೊಟ್ಟಮೊದಲ ಸಂಗೀತ ನಿರ್ದೇಶಕರೆಂಬ ಹೆಗ್ಗಳಿಕೆಗೂ ಇವರು ಪಾತ್ರರಾದರು.

ನಾಗೇಂದ್ರರಾಯರು ಚಿತ್ರದುರ್ಗ ಜಿಲ್ಲೆಯ ಹೊಳಲೈರೆ ತಾಲ್ಲೂಕಿನ ರಟ್ಟೇಹಳ್ಳಿಯಲ್ಲಿ ೧೮೯೬ರಲ್ಲಿ ಜನಿಸಿದರು. ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ತಂದೆಯನ್ನು ಕಳೆದುಕೊಂಡು ಪ್ರೌಢಶಾಲೆಗೆ ಬಂದಾಗ ಓದಿಗೆ ತಿಲಾಂಜಲಿ ನೀಡಿ ಶಿರಹಟ್ಟಿ ವೆಂಕೋಬರಾಯರ ನಾಟಕ ಮಂಡಲಿ ಸೇರಿಕೊಂಡರು. ರಾಯರು ಚಲನಚಿತ್ರಗಳಲ್ಲಿ ಅವಕಾಶ ಅರಸಿ ಮುಂಬೈಗೆ ತೆರಳಿದರು. ರಾಜಾಸ್ಯಾಂಡೋ ನೆರವಿನಿಂದ `ಪಾರಿಜಾತ ಪುಷ್ಪ ಹರಣಂ` ತಮಿಳು ಚಿತ್ರದಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಂಡರು. ಮುಂಬೈಯಿAದ ಹಿಂದಿರುಗಿ ಬಂದ ರಾಯರು ನಟ ಸುಬ್ಬಯ್ಯನಾಯ್ಡು ಅವರೊಂದಿಗೆ ಕೂಡಿಕೊಂಡು ೧೯೩೨ರಲ್ಲಿ `ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿ` ರೂಪಿಸಿದರು. ರಗಸಜ್ಜಿಕೆ, ಬೆಳಕಿನ ಸಂಯೋಜನೆ, ತಾಂತ್ರಿಕ ಸಲಕರಣೆಗಳನ್ನು ವಿನೂತನವಾಗಿ ಬಳಸಿಕೊಂಡು `ಭೂಕೈಲಾಸ` ನಾಟಕ ನಿರ್ದೇಶಿಸಿದರು. ನಾಟಕವನ್ನು ತಮಿಳು ಭಾಷೆಗೂ ಭಾಷಾಂತರಿಸಿ ತಾವೇ ನಿರ್ದೇಶಿಸಿ ಯಶಸ್ವಿಯಾದರು.

೧೯೫೩ರಲ್ಲಿ ರಾಯರು ತಮ್ಮದೇ ಆದ ಆರೆನ್ನಾರ್ ಪಿಕ್ರ‍್ಸ್ ಸಂಸ್ಥೆಯನ್ನು ಹುಟ್ಟುಹಾಕಿದರು. ಈ ಸಂಸ್ಥೆಯ ಮೂಲಕ ಜಾತಕಫಲ (೧೯೫೩), ಪ್ರೇಮದಪುತ್ರಿ (೧೯೫೭), ವಿಜಯನಗರದ ವೀರಪುತ್ರ (೧೯೬೧), ಆನಂದಭಾಷ್ಪ (೧೯೬೩), ಪತೀಯೇದೈವ (೧೯೬೪) ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದರು. ಪ್ರೇಮಕ್ಕೂ ಪರ್ಮಿಟ್ಟೆ, ನಮ್ಮಮಕ್ಕಳು, ನಾಡಿನಭಾಗ್ಯ ಚಿತ್ರಗಳನ್ನು ನಿರ್ದೇಶಿಸಿದರು. ರಾಯರು ನಿರ್ಮಿಸಿ, ನಿರ್ದೇಶಿಸಿದ `ಪ್ರೇಮದಪುತ್ರಿ` ರಾಷ್ಟçಪತಿಗಳ ಪದಕ ಪಡೆದುಕೊಂಡಿತು. ಹಣ್ಣೆಲೆ ಚಿಗುರಿದಾಗ (೧೯೬೮) ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಾಳಿಗೋಪುರ (೧೯೬೨) ಚಿತ್ರದಲ್ಲಿನ ಉತ್ತಮ ಅಭಿನಯವನ್ನು ಪರಿಗಣಿಸಿ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ನೀಡತು. ದಕ್ಷಿಣ ಭಾರತ ಕಲಾವಿದ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಬೆಂಗಳೂರಿನಲ್ಲಿ ಆದರ್ಶ ಫಿಲಂ ಇನ್ಸಿಟ್ಯೂಟ್ ಆರಂಭಿಸಿ ಅದರ ಪ್ರಿನ್ಸಿಪಾಲರಾಗಿ ಕಾರ್ಯ ನಿರ್ವಹಿಸಿದರು. ಛಾಯಾಗ್ರಾಹಕ ನಿರ್ದೇಶಕ ಆರ್.ಎನ್.ಕೃಷ್ಷಪ್ರಸಾದ್, ಸಾಹಿತಿ, ನಟ, ನಿರ್ದೇಶಕ ಆರ್.ಎನ್.ಜಯಗೋಪಾಲ್ ಹಾಗೂ ನಟ, ಗಾಯಕ ಆರ್.ಎನ್.ಸುದರ್ಶನ್ ಇವರ ಮಕ್ಕಳು `ಇದು ನನ್ನ ಕಥೆ` ಶೀರ್ಷಿಕೆಯಡಿ ರಾಯರು ತಮ್ಮ ಆತ್ಮ ವೃತ್ತಾಂತವನ್ನು ಪ್ರಕಟಿಸಿದ್ದಾರೆ. ರಾಯರು ೧೯೭೭ ಫೆಬ್ರವರಿ ೯ರಂದು ಅಗಲಿದರು.

error: Content is protected !!