ಕನ್ನಡ ಸಾಹಿತ್ಯ – ಪರಂಪರೆ: ಭಾಗ- 10

Team Newsnap
4 Min Read

ಕನ್ನಡ ಕಾದಂಬರಿಗಳ ಪಿತಾಮಹ

ಗಳಗನಾಥ(1869-1942). ಕಾವ್ಯನಾಮದ ವೆಂಕಟೇಶ ತಿರಕೊ ಕುಲಕರ್ಣಿಯವರು. ಗಳಗನಾಥರನ್ನು ಕನ್ನಡ ಕಾದಂಬರಿಗಳ ಪಿತಾಮಹ ಎಂದು ಕರೆಯಲಾಗುತ್ತದೆ. ಕನ್ನಡದ ಹೊಸ ಹುಟ್ಟಿನ ಕಾಲದ ಪ್ರಾರಂಭದಲ್ಲಿ ತಮ್ಮ ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು. ವೆಂಕಣ್ಣ, ವೆಂಕಟೇಶ ಎಂಬುದು ಮನೆಯ ಹೆಸರುಗಳು.
ಹುಟ್ಟಿದ್ದು ೧೮೬೯ ಜನೆವರಿಯಲ್ಲಿ,ಹಾವೇರಿ ತಾಲೂಕಿನ ಗಳಗನಾಥ ಎನ್ನುವ ಹಳ್ಳಿಯಲ್ಲಿ. ಮುಲ್ಕಿ ಪರೀಕ್ಷೆ ಹಾಗು ಶಿಕ್ಷಕರ ಟ್ರೇನಿಂಗ ಪರಿಕ್ಷೆ ಪಾಸು ಮಾಡಿದ ಬಳಿಕ ಇವರು ಶಿಕ್ಷಕರಾಗಿ ಕೆಲಸ ಮಾಡಿದರು. ೧೯೦೬ ರ ಸುಮಾರಿಗೆ ಗುತ್ತಲದಲ್ಲಿ ಕೆಲಸ ಮಾಡುತ್ತಿದ್ದಾಗ, ಸಮೀಪದ ಅಗಡಿಯಲ್ಲಿದ್ದ ಆನಂದವನದ ಶ್ರೀ ಶೇಷಾಚಲ ಸದ್ಗುರುಗಳಿಂದ ಪ್ರಭಾವಿತರಾದರು.ಅಲ್ಲಿಂದಲೇ ೧೯೦೮ನೆಯ ಇಸವಿಯಲ್ಲಿ “ ಸದ್ಬೋಧ ಚಂದ್ರಿಕೆ” ಎನ್ನುವ ಮಾಸಪತ್ರಿಕೆಯ ಪ್ರಾರಂಭಕ್ಕೆ ಕಾರಣರಾದರು ಹಾಗು ೧೯೧೮ ರವರೆಗೆ ಅದರ ಮುಖ್ಯ ಲೇಖಕರಾಗಿದ್ದರು.

5.1 Galaganath
ಗಳಗನಾಥರು

ಆಗ ಉತ್ತರ ಕರ್ನಾಟಕದಲ್ಲಿ ಟಿಳಕ ಹಾಗೂ ಆಪ್ಟೆಯವರ ಹೆಸರುಗಳು ಮನೆಮಾತಾಗಿದ್ದವು. ತಿಲಕರ ಕೇಸರಿ, ಆಪ್ಟೆಯವರ ಕರಮಣೂಕ ಪತ್ರಿಕೆಗಳು ಹೆಚ್ಚು ಪ್ರಚಾರದಲ್ಲಿದ್ದವು. ಕನ್ನಡ ಪತ್ರಿಕೆಗಳ ಅಭಾವದಿಂದಾಗಿ ಕನ್ನಡಿಗರು ಮರಾಠಿ ಪತ್ರಿಕೆ ಗಳನ್ನೇ ಓದುತ್ತಿದ್ದರು. ಇಷ್ಟೇ ಅಲ್ಲದೇ ಪೇಶ್ವೆ ಕಾಲದ ರಾಜಭಾಷೆಯಾದ ಮರಾಠಿ ತನ್ನ ರಾಜಕೀಯ ಮುದ್ರೆಯನ್ನೊತ್ತಿ ತನ್ನದೇ ಆದ ವಿಶಿಷ್ಟ ಪ್ರಭಾವವನ್ನು ಬೀರುತ್ತಿತ್ತು.
ಟ್ರೇನಿಂಗ್ ಕಾಲೇಜಿಗೆ ಬರುತ್ತಿದ್ದ ಈ ಎರಡು ಪತ್ರಿಕೆಗಳನ್ನು ಗಳಗನಾಥರು ತಪ್ಪದೆ ಓದುತ್ತಿದ್ದರಲ್ಲದೆ ತಮ್ಮ ಗೆಳೆಯರೊಂದಿಗೆ ಅಲ್ಲಿನ ವಿಷಯಗಳನ್ನು ಚರ್ಚಿಸುತ್ತಿದ್ದರು. ತಿಲಕರ ವಿಚಾರಧಾರೆ ಇವರ ಮನಸ್ಸನ್ನು ಸಂಪೂರ್ಣ ಆಕರ್ಷಿಸಿತ್ತು; ಅಷ್ಟೇ ಸತ್ತ್ವಶಾಲಿಯಾಗಿ ಆಪ್ಟೆಯವರ ಕಾದಂಬರಿಗಳಲ್ಲಿಯ ಕಲ್ಪನಾ ವೈಭವದ ವೈಖರಿ ಮನಸ್ಸನ್ನು ಬೆರಗುಗೊಳಿಸುತ್ತಿತ್ತು. ಆ ಭಾಗದ ಕನ್ನಡ ಜನತೆ ಮರಾಠಿ ವ್ಯಾಮೋಹದಲ್ಲಿದ್ದುದು ಇವರಿಗೆ ಕಂಡುಬಂದಿತು.
ತಿಲಕರ ವಿಚಾರಧಾರೆಯನ್ನೂ ಆಪ್ಟೆಯವರ ಕಾದಂಬರಿ ಕತೆಗಳನ್ನೂ ಕನ್ನಡದಲ್ಲಿಯೇ ಹೇಳಿ ಕನ್ನಡಿಗರ ವಾಚನಾಭಿರುಚಿಯನ್ನು ಬೆಳೆಸುವ ಉತ್ಕಟ ಆಸೆ ಇವರಲ್ಲಿ ಮೂಡಿತು. ಅದೇ ಕಾಲಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರು ಕನ್ನಡ ಗ್ರಂಥಕರ್ತರಿಗೆ ಬಹುಮಾನ ಕೊಡುವ ಪರಿಪಾಠವನ್ನು ಹಾಕಿದರು. ಆ ಸಂದರ್ಭದಲ್ಲಿ ಇವರು ಬರೆದ ಪ್ರಥಮ ಕಾದಂಬರಿ ಪ್ರಬುದ್ಧ ಪದ್ಮನಯನೆಗೆ ಬಹುಮಾನ ದೊರಕಿತು.
ಹೀಗೆ 1898ರಲ್ಲಿ ಆರಂಭವಾದ ಇವರ ಬರೆವಣಿಗೆ 1942ರ ವರೆಗೂ ಅವ್ಯಾಹತವಾಗಿ ಸಾಗಿತು. ನರೇಂದ್ರ, ಶಿರಗುಪ್ಪ, ಅಗಡಿ, ಹಾವೇರಿ ಇವು ಇವರು ನೆಲಸಿನಿಂತು ಕನ್ನಡಕ್ಕೆ ದುಡಿದ ಇತರ ಸ್ಥಳಗಳು. ಅಗಡಿಯ ಶ್ರೀ ಶೇಷಾಚಲ ಸ್ವಾಮಿಗಳು ಗಳಗನಾಥರ ಮೇಲೆ ವಿಶೇಷ ಪ್ರಭಾವವನ್ನು ಬೀರಿದರು. ಅಂತೆಯೇ ಸರ್ಕಾರಿ ಕೆಲಸದಲ್ಲಿ ಘರ್ಷಣೆ ಬಂದಾಗ ಕಾಲಕ್ಕೆ ಮೊದಲೆ ಪಿಂಚಣಿ ಪಡೆದು ಅಗಡಿಯ ಆನಂದವನದಲ್ಲಿ ನೆಲೆಸಿದರು.
ಅಲ್ಲಿನ ವಾತಾವರಣ ವಿಪರೀತವಾದಾಗ ಹಾವೇರಿಗೆ ಹೋಗಿ ರಾಮದೇವರ ಗುಡಿಯ ಆವಾರವನ್ನೆ ತಮ್ಮ ಆಶ್ರಮವನ್ನಾಗಿ ಮಾಡಿಕೊಂಡು ಸುತ್ತಣ ಜನತೆಯೊಂದಿಗೆ ಬೆರೆತು ಬಾಳಿದರು. ಆನಂದವನದಲ್ಲಿದ್ದಾಗ ಸದ್ಬೋಧ ಚಂದ್ರಿಕೆ ಎಂಬ ಪತ್ರಿಕೆಯ ಮೂಲಕ ಮತ್ತು ಹಾವೇರಿಯಲ್ಲಿ ಇರತೊಟ್ಟಂದಿನಿಂದ “ಸದ್ಗುರು” (1919) ಎಂಬ ಪತ್ರಿಕೆಯ ಮೂಲಕ ತಮ್ಮ ಬರೆವಣಿಗೆಯನ್ನು ಪ್ರಕಟಿಸಿದರು. ಸದ್ಬೋಧ ಚಂದ್ರಿಕೆಗೆ 7000ದಷ್ಟು ಚಂದಾದಾರರು ಇದ್ದರೆಂಬುದು ನಿಜವಾಗಿಯೂ ಅಚ್ಚರಿಯ ವಿಷಯ.
ಅಂದು ಹಾವೇರಿ ತಾಲೂಕಿನ ಗುತ್ತಲದಲ್ಲಿ ಬೀಕರ ಕ್ಷಾಮ. ಗುತ್ತಲದಲ್ಲಿಯೇ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಗಳಗನಾಥರು. ಶಾಲಾ ಮಕ್ಕಳೊಂದಿಗೆ ಶ್ರಮದಾನದ ಮೂಲಕ ಬಾವಿಯನ್ನು ತೋಡಿಸಿ ಗುತ್ತಲದ ನೀರಿನ ಬರವನ್ನು ನಿವಾರಸಿದ್ದರು. ಶ್ರಮದಾನದ ಮೂಲಕ ದೇಶದಲ್ಲಿಯೇ ಪ್ರಥಮ ಬಾವಿಯನ್ನು ತೋಡಿಸಿದ ಕೀರ್ತಿ ಅದು ಗಳಗನಾಥರಿಗೆ ಸಲ್ಲುತ್ತದೆ.
ಗುತ್ತಲದಲ್ಲಿನ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷ್ ಅಧಿಕಾರಿ ಶಾಲೆಗೆ ಬಂದು ಗಳಗನಾಥರನ್ನು ಕರೆಸಲು ಮಕ್ಕಳಿಗೆ ಪಾಠ ಮಾಡುತ್ತಿದ್ದ ಗಳಗನಾಥರು ಬ್ರೀಟಿಷ ಅಧಿಕಾರಿ ಆಜ್ಞೆಗೆ ಓಗೊಡದೇ ಪಾಠ ಮಾಡುವತ್ತ ತಲ್ಲೀನರಾಗಿ ಪಾಠ ಮುಗಿದ ತಕ್ಷಣ ಆ ಬ್ರಿಟಿಷ್ ಅಧಿಕಾರಿಯನ್ನು ಭೇಟಿ ಮಾಡಿದಾಗ ಆ ಅಧಿಕಾರಿ ಗಳಗನಾಥರ ಮೇಲೆ ಜೋರ ಧ್ವನಿಯಿಂದ ದರ್ಫವನ್ನು ತೋರುತ್ತಿದ್ದಾಗ “ನನಗೆ ನನ್ನ ಮಕ್ಕಳು ಹಾಗೂ ಕರ್ತವ್ಯ ಮುಖ್ಯ” ಎಂದು ಉತ್ತರಿಸಿದ ತಕ್ಷಣ ಆಗ ಬ್ರಿಟಿಷ್ ಅಧಿಕಾರಿ ಗಳಗನಾಥರ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ತನ್ನ ತಪ್ಪಿಗೆ ಕ್ಷಮೆ ಕೋರಿದನು.
ಗಳಗನಾಥರ ಕೃತಿಗಳು
ಪ್ರಬುದ್ಧ ಪದ್ಮನಯನೆ, ನಿಬಂಧ ಶಿಕ್ಷಣ, ಈಶ್ವರೀಸೂತ್ರ, ಮರಾಠರ ಅಭ್ಯುದಯ,ಛತ್ರಪತಿ, ಕಮಲಕುಮಾರಿ, ಶಿವಪ್ರಭುವಿನ ಪುಣ್ಯ, ಗೃಹಕಲಹ, ರಾಣಿ ಮೃಣಾಲಿನಿ,ಧಾರ್ಮಿಕತೇಜ, ಧರ್ಮರಹಸ್ಯ, ಕ್ಷಾತ್ರತೇಜ, ತಿಲೋತ್ತಮೆ ರಾಣಾರಾಜಸಿಂಹ,ವೈಭವ,ಸತ್ವಸಾರ,ಕುಮುದಿನಿ, ಸಂಸಾರಸುಖ, ಲಕ್ಷ್ಮೀಬಾಯಿ, ಸತಿ ಸಾಹಸ, ಅದ್ಭುತ ಶೌರ್ಯ, ಶುಕಸಂಜೀವನಿ, ಭಾಗವತಾಮೃತ, ಶೈವ ಸುಧಾರ್ಣವ, ತುಲಸೀ ರಾಮಾಯಣ, ಕನ್ನಡಿಗರ ಕರ್ಮಕಥೆ, ಆನಂದ ರಾಮಾಯಣ, ವೆಂಕಟೇಶಮಹಾತ್ಮ್ಯ, ದುರ್ಗದ ಬಿಚ್ಚುಗತ್ತಿ-ಭಾಗ ೧ ಮತ್ತು ೨, ಚಿದಂಬರ ಚರಿತ, ಉತ್ತರ ರಾಮಚರಿತ, ಗಿರಿಜಾ ಕಲ್ಯಾಣ,ಸತ್ವಾದರ್ಶ, ಭಕ್ತಿವಿಜಯ,
ಶ್ರೀಸುರೇಶ್ವರಾಚಾರ್ಯ ಚರಿತ್ರೆ, ದತ್ತ ಕಥಾಮೃತಸಾರ, ಸಾಧು ಸದಾಶಿವಲೀಲೆ,
ಫಕೀರೇಶ್ವರಪುರಾಣ,ಕುಟುಂಬ,ದಾಂಪತ್ಯ,ನಿರ್ಯಾಣಮಹೋತ್ಸವ,ಹಿಂದೂಸಮಾಜವ್ಯವಸ್ಥೆ,ವರ್ಣಾಶ್ರಮಧರ್ಮ,ಪುನರ್ಜನ್ಮ, ಮಾಧವ ಕರುಣಾವಿಲಾಸ,ಗೀತಾವಲೋಕನೆ, ಶ್ರೇಷ್ಠಸದುಪದೇಶ,ಬ್ರಾಹ್ಮಣಪ್ರಾಪ್ತಸಾಧನ,ಕಣ್ವಸಂಹಿತೆ,ಸುಂದರಲೇಖಸಮುಚ್ಚಯ,ಭಗವತಿ ಕಾತ್ಯಾಯಿನಿ,ಕಲಿಕುಠಾರ -ಭಾಗ ೧ ಮತ್ತು ೨,ನಳಚರಿತ್ರೆ,ರಹಸ್ಯಗಳು,ಮಹಾಭಾರತ – ೧೮ ಪರ್ವಗಳು,ನಿಬಂಧ ಲೇಖನ,ಆಧ್ಯಾತ್ಮ ರಾಮಾಯಣ.

ಕಾಲ ಕಳೆದಂತೆ ಗಳಗನಾಥರ ಆದಾಯ ಇಳಿಮುಖವಾಗಹತ್ತಿ ಸಾಲ ಬೆಳೆಯತೊಡಗಿತು. ಸಾಲ ತೀರಿಸುವುದಕ್ಕಾಗಿ ಗಳಗನಾಥರು ಪುಸ್ತಕಗಳನ್ನು ಬರೆದು ಊರಿಂದೂರಿಗೆ, ಓಣಿಯಿಂದ ಓಣಿಗೆ, ಮನೆಯಿಂದ ಮನೆಗೆ, ಮಳೆಗಾಳಿ ಚಳಿಬಿಸಿಲು ಒಂದನ್ನೂ ಗಮನಿಸದೆ ತಿರುಗಿ ತಿರುಗಿ ಸೋತು ಸುಣ್ಣವಾದರು. ಸಾಲದ ಶೂಲ ನಿತ್ಯ ತಿವಿದಿತಾಗಿ ಆರೋಗ್ಯ ತೀರ ಕೆಟ್ಟು ಕ್ಯಾನ್ಸರ್ ಮೊದಲಾಯಿತು. ಗಳಗನಾಥರು ಆ ಬೇನೆಯಿಂದ ತಮ್ಮ 74ನೆಯ ವಯಸ್ಸಿನಲ್ಲಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ 1942ರ ಏಪ್ರೀಲ್ 22ರಂದು ಕೊನೆಯುಸಿರೆಳೆದರು.

savithri
ಶ್ರೀಮತಿ ಮೈಲಾರ ಸಾವಿತ್ರಿಬಾಯಿ
ರಾಣೇಬೆನ್ನೂರು
Share This Article
1 Comment