January 8, 2025

Newsnap Kannada

The World at your finger tips!

karnataka flag

ಕನ್ನಡ ಸಾಹಿತ್ಯ – ಪರಂಪರೆ: ಭಾಗ- 7

Spread the love

ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗರಿ ಭೈರಪ್ಪನವರ ಮುಕುಟಕ್ಕೆ

bairappa
ಎಸ್.ಎಲ್. ಭೈರಪ್ಪ

ಡಾ|| ಎಸ್.ಎಲ್. ಭೈರಪ್ಪ ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತಾದ್ಯಂತ ಸಾಹಿತ್ಯಾಸಕ್ತರಿಗೆ ಚಿರಪರಿಚಿತ ಹೆಸರು. ಕನ್ನಡ ಕಾದಂಬರಿ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವವನ್ನು ತಂದುಕೊಟ್ಟ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪನವರ ಕಾದಂಬರಿಗಳು ಭಾರತದ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿವೆ.

ಜ್ಞಾತಕಲಾವಿದರಾದ ಭೈರಪ್ಪನವರ ಕಾದಂಬರಿಗಳ ಕಥಾವಸ್ತು ಮಾನವಸಹಜಸಂವೇದನಗಳ ಸುತ್ತ ಹೊಸೆದುಕೊಂಡಿರುತ್ತವೆ. ತಮ್ಮ ತತ್ತ್ವಶಾಸ್ತ್ರ ಮತ್ತು ಸಂಸ್ಕೃತಿಯ ಆಳವಾದ ಅಧ್ಯಯನದೊಂದಿಗೆ, ಬಾಲ್ಯದ ಗ್ರಾಮೀಣಜೀವನ ಮತ್ತು ಮಹಾನಗರದ ಬದುಕನ್ನು ಅವರು ಹತ್ತಿರದಿಂದ ಕಂಡವರು. ಅಧ್ಯಯನ ಮತ್ತು ಜೀವನಾನುಭವ ಮಿಳಿತಗೊಂಡು ಸೃಷ್ಟಿಯಾಗುವ ಅವರ ಕಾದಂಬರಿಯ ಪಾತ್ರಗಳು ತಮ್ಮ ಬೇರುಗಳನ್ನು ಭಾರತೀಯ ನೆಲದಲ್ಲಿ ಕಂಡುಕೊಳ್ಳುತ್ತವೆ.

ಜನಪ್ರಿಯ ಕಾದಂಬರಿಕಾರ ಎಸ್.ಎಲ್. ಭೈರಪ್ಪ ಅವರು ಮೀಮಾಂಸಕರೂ ಹೌದು. ಹಾಸನ ಜಿಲ್ಲೆ ಚೆನ್ನರಾಯಪಟ್ಟಣದ ಸಂತೇಶಿವರ ಗ್ರಾಮದಲ್ಲಿ 1931ರ ಆಗಸ್ಟ್ 20ರಂದು ಜನಿಸಿದರು. ತಂದೆ ಲಿಂಗಣ್ಣಯ್ಯ- ತಾಯಿ ಗೌರಮ್ಮ. ತಮ್ಮ ಹುಟ್ಟೂರಿನ ಸುತ್ತಮುತ್ತಲ ಶಾಲೆಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ ಮೈಸೂರಿಗೆ ಬಂದು ಶಾರದಾವಿಲಾಸ ಪ್ರೌಢಶಾಲೆಯಲ್ಲಿ ಓದಿ, ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮಾಡಿ, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಗಳಿಸಿದರು.

ಅನಂತರ ಹುಬ್ಬಳ್ಳಿಯ ಕಾಡುಸಿದ್ಧೇಶ್ವರ ಕಾಲೇಜಿನಲ್ಲಿ ಅಧ್ಯಾಪಕ (1958-60), ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕ (1960-66), ದೆಹಲಿಯ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಶಿಕ್ಷಣ ಸಂಸ್ಥೆಯಲ್ಲಿ ಉಪಪ್ರಾಧ್ಯಾಪಕ (1967-1971) ರಾಗಿ ಸೇವೆ ಸಲ್ಲಿಸಿದ ಅವರು ಮೇಲೆ ಮೈಸೂರಿನಲ್ಲಿರುವ ಪ್ರಾದೇಶಿಕ ಶಿಕ್ಷಣ ಕಾಲೇಜಿಗೆ ವರ್ಗವಾಗಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ 1991ರಲ್ಲಿ ವೃತ್ತಿಯಿಂದ ನಿವೃತ್ತರಾದರು. ಭೈರಪ್ಪನವರ ಸಾಹಿತ್ಯ ಸಾಧನೆಗೆ ಅನೇಕ ಪ್ರಶಸ್ತಿ ಬಂದಿವೆ, ಸನ್ಮಾನಗಳು ಸಂದಿವೆ. ತಂತು ಕಾದಂಬರಿಗೆ ಭಾರತೀಯ
ಭಾಷಾ ಪರಿಷತ್ತಿನ ಪ್ರಶಸ್ತಿ ಲಭಿಸಿದೆ. ದಾಟು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ವಂಶವೃಕ್ಷ, ಸಾಕ್ಷಿ, ದಾಟು ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ದೊರೆತಿವೆ.

ಮಾಸ್ತಿ ಪ್ರಶಸ್ತಿ (1994), ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ (1985) ಇವರಿಗೆ ಲಭಿಸಿದೆ. ಕನಕಪುರದಲ್ಲಿ ನಡೆದ 67 ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನ (1999) ಅಧ್ಯಕ್ಷ ಸ್ಥಾನದ ಗೌರವ ಸಿಕ್ಕಿದೆ. ಸರಸ್ವತೀ ಸಮ್ಮಾನ್ ಪ್ರಶಸ್ತಿಯನ್ನು ಕನ್ನಡದಲ್ಲಿ ಪಡೆದವರಲ್ಲಿ ಮೊದಲಿಗರು ಇವರು. ಬರೆದ ಕಾದಂಬರಿಗಳೆಲ್ಲಾ ಜನಪ್ರಿಯವಾಗಿ ಹತ್ತಾರು ಮರುಮುದ್ರಣಗಳಾಗಿವೆ. ಮರಾಠಿ, ಇಂಗ್ಲಿಷ್, ಹಿಂದಿ ಮೊದಲಾದ ಭಾಷೆಗಳಿಗೆ ಅನುವಾದವಾಗಿವೆ.

bhyrappa

ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಮೊದಲಾದವು ಚಲನಚಿತ್ರಗಳಾಗಿವೆ. ಇವರು ಕಾದಂಬರಿಗಳನ್ನಷ್ಟೆ ಅಲ್ಲದೆ ಸೌಂದರ್ಯಮೀಮಾಂಸೆಯ ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ. ಸತ್ಯ ಮತ್ತು ಸೌಂದರ್ಯ ಇವರು ರಚಿಸಿದ ಪಿ ಎಚ್ ಡಿ ಗ್ರಂಥವಾಗಿದೆ. ಸಾಹಿತ್ಯ ಮತ್ತು ಪ್ರತೀಕ, ಕಥೆ ಮತ್ತು ಕಥಾವಸ್ತು ಗ್ರಂಥಗಳು ಸಾಹಿತ್ಯ ಮೀಮಾಂಸೆಗೆ ಸಂಬಂಧಿಸಿವೆ. ನಾನೇಕೆ ಬರೆಯುತ್ತೇನೆ. ಭಿತ್ತಿ ಆತ್ಮವೃತ್ತಾದ ಗ್ರಂಥವಾಗಿವೆ. ಆವರಣ, ಕವಲು ಅವರ ಈಚಿನ ಕಾದಂಬರಿಗಳಾಗಿವೆ. ವಂಶವೃಕ್ಷ, ದಾಟು, ತಂತು, ಅಂಚು, ಪರ್ವ, ಗೃಹಭಂಗ, ಅನ್ವೇಷಣ, ಮಂದ್ರ, ಸಾರ್ಥ, ನಾಯಿನೆರಳು, ಧರ್ಮಶ್ರೀ, ದೂರಸರಿದರು ಮತದಾನ ಮುಂತಾದವು ಅವರ ಕಾದಂಬರಿಗಳಾಗಿವೆ.

ಕರ್ನಾಟಕ ಆದಿಯಾಗಿ ಭಾರತ ಮತ್ತು ವಿದೇಶಗಳಲ್ಲೂ ಅವರ ಕಾದಂಬರಿಗಳ ಕುರಿತಾದ ವಿಚಾರಗೋಷ್ಠಿಗಳು ನಡೆದು, ಅವರ ಕಾದಂಬರಿಗಳ  ಅಧ್ಯಯನ ಗ್ರಂಥ ಸಂಪುಟಗಳು ಹೊರಬಂದಿವೆ. ಭೈರಪ್ಪನವರ ಕಾದಂಬರಿಗಳು ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳ  ಪಠ್ಯಗಳಾಗಿ ಸ್ಥಾನವನ್ನು ಪಡೆದಿರುವುದಲ್ಲೆದೆ, ೨೦ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳ ಅಧ್ಯಯನದ ವಿಷಯವೂ ಆಗಿವೆ. 

ಭೈರಪ್ಪನವರು ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತಾಸಕ್ತರಾಗಿರುವುದರೊಂದಿಗೆ ಚಿತ್ರ ಮತ್ತು ಶಿಲ್ಪಕಲೆಯಲ್ಲೂ ಅಭಿರುಚಿ ಹೊಂದಿದ್ದಾರೆ. ಬಾಲ್ಯದಿಂದಲೇ ಪ್ರವಾಸದ ಗೀಳು ಹತ್ತಿಸಿಕೊಂಡಿದ್ದ ಇವರು, ಉತ್ತರ ಮತ್ತು ದಕ್ಷಿಣ ದೃವಗಳೂ ಒಳಗೊಂಡಂತೆ ವಿಶ್ವದ ಏಳೂ ಭೂಖಂಡಗಳಲ್ಲಿ ಪ್ರವಾಸ ಮಾಡಿದ್ದಾರೆ.

supreetha 1
ಸುಪ್ರೀತಾ ಚಕ್ಕರೆ
Copyright © All rights reserved Newsnap | Newsever by AF themes.
error: Content is protected !!