ಕನ್ನಡ ಸಾಹಿತ್ಯ – ಪರಂಪರೆ: ಭಾಗ- 26

Team Newsnap
7 Min Read

ದೇವುಡು ನರಸಿಂಹ ಶಾಸ್ತ್ರಿ

Devudu Narasimha Sastri

ಅದು 1952 ನೇ ಇಸವಿ. ಉಡುಪಿಯಲ್ಲಿ ಭಗವದ್ಗೀತೆಯ ಬಗೆಗೆ ಉಪನ್ಯಾಸ ಏರ್ಪಾಡಾಗಿತ್ತು. ಬೆಂಗಳೂರಿನಿಂದ ಆಗಮಿಸಿದ್ದ ಉಪನ್ಯಾಸಕರು ಇನ್ನೇನು ವೇದಿಕೆ ಏರಬೇಕೆನ್ನುವಷ್ಟರಲ್ಲಿ ಅವರಿಗೆ ಒಂದು ಟೆಲಿಗ್ರಾಮ್ ಸಂದೇಶ ಬಂದಿತು. ಅವರ ಮುಖದಲ್ಲಿ ಆತಂಕದ ಛಾಯೆ ಹಾದು ಹೋದರೂ ಯಾವುದನ್ನೂ ತೋರಗೊಡದೆ ಅವರು ಕಾರ್ಯಕ್ರಮ ನಡೆಸಿಕೊಟ್ಟರು. ಮತ್ತು ಅವರ ಅಂದಿನ ಭಗವದ್ಗೀತೆಯ ವ್ಯಾಖ್ಯಾನ ಅದ್ಭುತವಾಗಿ ಮೂಡಿಬಂದಿತ್ತು. ಮಗನ ಸಾವಿನ ಸುದ್ದಿ ಪಡೆದ ನಂತರವೂ ಧೈರ್ಯ ತಳೆದು ಒಂದು ಯಶಸ್ವೀ ಕಾರ್ಯಕ್ರಮ ನಡೆಸಿಕೊಡುವುದೆಂದರೆ ದೇವುಡು ನರಸಿಂಹಶಾಸ್ತ್ರಿಗಳಂತಹ ಧೀಮಂತ ವ್ಯಕ್ತಿತ್ವ ಇರುವವರಿಗೆ ಮಾತ್ರ ಸಾಧ್ಯವೇನೋ. ಆ ಘಟನೆಯ ಕುರಿತು ಮೆಲುಕು ಹಾಕುವಾಗಲೆಲ್ಲ ಶಾಸ್ತ್ರಿಗಳು ಹೇಳುತ್ತಿದ್ದುದು “ಅಂದು ನನಗೆ ನಾನೇ ಗೀತೋಪದೇಶ ಮಾಡಿಕೊಂಡೆ” ಎಂದು.


ಹೌದು. ದೇವುಡು ನರಸಿಂಹ ಶಾಸ್ತ್ರಿಯವರದು ಬಹಳ ಅಪರೂಪದ ವ್ಯಕ್ತಿತ್ವ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನವನ್ನು ಸಂಪಾದಿಸಿಕೊಂಡಿರುವ ಅವರು ಅಸಾಮಾನ್ಯ ವಾಗ್ಮಿ. ಪ್ರವಚನಕಾರ, ಪಾಂಡಿತ್ಯನಿಧಿ, ಪ್ರತಿಭಾಶಾಲಿ ಲೇಖಕ. ಅವರದು ಬಹುಮುಖ ಸಾಹಿತ್ಯ ಕೃಷಿ. ಸಾಹಿತ್ಯ ಕ್ಷೇತ್ರವಷ್ಟೇ ಅಲ್ಲದೇ, ಸಾರ್ವಜನಿಕ ಜೀವನದಲ್ಲಿಯೂ ಅಷ್ಟೇ ಉತ್ಸಾಹಿ. ಕರ್ನಾಟಕ ಏಕೀಕರಣ, ಮಕ್ಕಳ ಸಾಹಿತ್ಯ, ರಂಗಭೂಮಿ, ಪತ್ರಿಕೋದ್ಯಮ, ಅಕ್ಷರ ಪ್ರಚಾರ, ವಿದ್ಯಾಭ್ಯಾಸ, ಸ್ವಾತಂತ್ರ್ಯ ಹೋರಾಟ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿರುವ ಅಪೂರ್ವ ವ್ಯಕ್ತಿತ್ವ ಅವರದು. ಇತಿಹಾಸ, ಪುರಾಣ, ವೇದ ವಾಂಗ್ಮಯದ ವಿಚಾರಗಳನ್ನೆಲ್ಲ ಒಟ್ಟುಗೂಡಿಸಿ, ಆಗಿನ ಸಮಾಜ ವನ್ನು ಸಮಕಾಲೀನ ಭಾಷೆಯಲ್ಲಿ ಸರಳವಾಗಿ ನಿರೂಪಿಸುವ ಪ್ರಯತ್ನ ಅವರ ಸಾಹಿತ್ಯದಲ್ಲಿ ಕಂಡುಬರುತ್ತದೆ. ಆದ ಕಾರಣದಿಂದಲೇ, ಅವರ ಕೃತಿಗಳು ಪ್ರಸ್ತುತ ಕಾಲಘಟ್ಟದಲ್ಲಿ ವಿಶಿಷ್ಟವಾಗಿ ನಿಲ್ಲುತ್ತವೆ.


ದೇವುಡು ನರಸಿಂಹ ಶಾಸ್ತ್ರಿಗಳು 29 ಡಿಸೆಂಬರ್ 1896 ರಂದು ಮೈಸೂರಿನಲ್ಲಿ ಜನಿಸಿದರು. ಅವರ ತಾಯಿ ಸುಬ್ಬಮ್ಮ. ತಂದೆ ವೇದಶಾಸ್ತ್ರ ಪಾರಂಗತ ಕೃಷ್ಣ ಶಾಸ್ತ್ರಿ. ದೇವುಡು 05 ವರ್ಷದವರಿದ್ದಾಗಲೇ ಅವರಿಗೆ ಪಿತೃ ವಿಯೋಗವಾಗುತ್ತದೆ. ಆದರೆ ಆ ವಯಸ್ಸಿಗೆ ತಕ್ಕಷ್ಟು ಸಂಸ್ಕೃತ ಪಾಠ ಅದಾಗಲೇ ಮನೆಯಲ್ಲಿಯೇ ಆಗಿರುತ್ತದೆ. ಬಾಲ್ಯದಿಂದಲೇ ಬಹಳ ಚುರುಕು ವ್ಯಕ್ತಿತ್ವ ಅವರದು. ಒಮ್ಮೆ ಯಾರೋ ಭಾರತೀಯತೆಯ ಬಗ್ಗೆ ಅಣಕಿಸುತ್ತಾ “ಕೃಷ್ಣ ಕೊಳಲನ್ನೂದಿದಾಗ ಗಿಡ ಮರಗಳೆಲ್ಲ ಚಿಗುರಿದರೆ, ಅವನ ಕೈಯಲ್ಲಿಯ ಕೊಳಲೇಕೆ ಚಿಗುರಲಿಲ್ಲ?” ಎಂದು ವ್ಯಂಗ್ಯವಾಗಿ ಕೇಳಿದಾಗ, “ಚಿಗುರಿದರೆ ತನ್ನನ್ನೂ ಕೃಷ್ಣ ಎಲ್ಲಿ ಎಸೆದುಬಿಡುವನೋ ಎಂದು ಹೆದರಿ ಚಿಗುರಲಿಲ್ಲ.” ಎಂಬ ಸೂಕ್ತ ಉತ್ತರವನ್ನು ತಕ್ಷಣವೇ ನೀಡಿದ ನಿಶಿತಮತಿ ಬಾಲಕ ಆತ. ಸಂಸ್ಕೃತ ಮೀಮಾಂಸಾ ಶಾಸ್ತ್ರವನ್ನು ಮಹಾಮಹೋಪಾಧ್ಯಾಯ ವೈದ್ಯನಾಥ ಶಾಸ್ತ್ರಿಗಳ ಬಳಿ ಅಧ್ಯಯನ ನಡೆಸಿ, ಸಂಸ್ಕೃತದಲ್ಲಿ ಒಳ್ಳೆಯ ಹಿಡಿತವನ್ನು ಪಡೆದಿದ್ದರು.


ಅದರ ಹೊರತಾಗಿ ಪ್ರಾಥಮಿಕ ಹಂತದಿಂದ ಹಿಡಿದು, ಕಾಲೇಜು ಶಿಕ್ಷಣದವರೆಗೂ ಅವರ ವಿದ್ಯಾಭ್ಯಾಸ ನಡೆದದ್ದು ಮೈಸೂರಿನಲ್ಲಿಯೇ. ವಿದ್ಯಾರ್ಥಿಯಾಗಿರುವಾಗಲೇ, ತಮ್ಮ 16 ನೇ ವಯಸ್ಸಿನಲ್ಲಿ, ಅಂದರೆ 1912ನೇ ಇಸವಿಯಲ್ಲಿ ತಮ್ಮ ಪ್ರಥಮ ಕೃತಿ, “ಸಾಹಸ ವರ್ಮ” ಎಂಬ ಪತ್ತೇದಾರಿ ಕಾದಂಬರಿ ರಚನೆ ಮಾಡಿದರು. ಇದೇ ವರ್ಷದಲ್ಲಿಯೇ ಶ್ರೀಯುತರ ವಿವಾಹವೂ ಸಹ ನೆರವೇರಿತು. ಪತ್ನಿಯ ಹೆಸರು ಗೌರಮ್ಮ. ನಂತರ 1917 ರಿಂದ 1922 ರವರೆಗೆ ಮೈಸೂರಿನ ಮಹಾರಾಜಾ ಕಾಲೇಜು ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿ ಸಂಸ್ಕೃತ ಮತ್ತು ದರ್ಶನ ಶಾಸ್ತ್ರದಲ್ಲಿ ಎಂ.ಎ ಪದವಿಯನ್ನು ಪಡೆದರು. ಈ ಹಂತದಲ್ಲಿಯೇ ಕಾಳಿದಾಸನ ಮೇಘದೂತ ಕಾವ್ಯದ ಮೊದಲರ್ಧ – ಪೂರ್ವಮೇಘಕ್ಕೆ ವಿಸ್ತೃತವಾದ ವ್ಯಾಖ್ಯಾವನ್ನೂ ಬರೆದರು. ಉತ್ತಮ ವಿದ್ಯಾಭ್ಯಾಸ, ಆಳವಾದ ಪಾಂಡಿತ್ಯ ಎಲ್ಲವೂ ಇದ್ದರೂ ಸಹ, ಇವರ ಅರ್ಹತೆಗೆ ತಕ್ಕಂತಹ ಒಳ್ಳೆಯ ಉದ್ಯೋಗ, ಒಳ್ಳೆಯ ಸ್ಥಾನಮಾನ, ಸಂಬಳ, ಸವಲತ್ತುಗಳನ್ನು ಕಾಣದೇ, ಬಡತನ, ಕಾರ್ಪಣ್ಯಗಳಲ್ಲಿಯೇ ದಿನದೂಡಿದರೆಂದು ಇವರನ್ನು ಸಮೀಪದಿಂದ ಬಲ್ಲವರು ದಾಖಲಿಸುತ್ತಾರೆ.

ತಮ್ಮ ಔದ್ಯೋಗಿಕ ಜೀವನವನ್ನು ಇವರು ಮೈಸೂರಿನ ಸದ್ವಿದ್ಯಾ ಪಾಠಶಾಲೆಯ ಮುಖ್ಯೋಪಾಧ್ಯಾಯರಾಗಿ ಪ್ರಾರಂಭಿಸಿದರು. ನಂತರ ಕೆಲಕಾಲ ಶೃಂಗೇರಿಯ ಶಂಕರಮಠದಲ್ಲಿ ಕಾರ್ಯ ನಿರ್ವಹಿಸಿ, ನಂತರ ಜೀವನೋಪಾಯಕ್ಕಾಗಿ ಬೆಂಗಳೂರು ಸೇರಿದರು. ಬೆಂಗಳೂರಿನ ಆರ್ಯ ವಿದ್ಯಾಶಾಲೆಗೆ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ, ನಂತರ ಕೆಲಕಾಲ ತಾವೇ ಸ್ವತಃ “ಗಾಂಧಿ ನಗರ ಪ್ರೌಢಶಾಲೆ” ಎಂಬ ಶಾಲೆಯನ್ನು ಸ್ಥಾಪಿಸಿ ನಡೆಸಿದರು. ಈ ಹಂತದಲ್ಲಿಯೇ ಪತ್ರಿಕೋದ್ಯಮದಲ್ಲೂ ತೊಡಗಿಸಿಕೊಂಡಿದ್ದ ಇವರು ನವಜೀವನ, ರಂಗಭೂಮಿ ಎಂಬ ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. 1936 ನೇ ಇಸವಿಯ ವೇಳೆಗೆ “ನಮ್ಮ ಪುಸ್ತಕ” ಎಂಬ ಮಕ್ಕಳ ಪತ್ರಿಕೆಯನ್ನು ಸ್ವತಂತ್ರವಾಗಿ ಪ್ರಾರಂಭಿಸಿ, ಸತತ 21 ವರ್ಷಗಳ ಕಾಲ ಆ ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸಿದರು.
ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವವನ್ನೊಳಗೊಂಡಿದ್ದ ದೇವುಡು, ಸಾಹಿತ್ಯ, ವಿದ್ಯಾಭ್ಯಾಸ ಪತ್ರಿಕೋದ್ಯಮದ ಜೊತೆಜೊತೆಗೇ ರಂಗಭೂಮಿಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಅನೇಕ ನಾಟಕಗಳ ರಚನೆ ಮಾಡಿರುವುದಲ್ಲದೇ, ಚಾಮುಂಡೇಶ್ವರಿ ಕಂಪನಿ, ಅಮೆಚೂರ್ ಕಂಪನಿ ಎಂಬ ನಾಟಕ ಕಂಪೆನಿಗಳಲ್ಲಿ ನಟರಾಗಿ ಅನೇಕ ಪಾತ್ರಗಳನ್ನೂ ನಿರ್ವಹಿಸಿದ್ದರು. 1928 ನೇ ಸಾಲಿನಲ್ಲಿ ಕರ್ನಾಟಕ ಫಿಲಂ ಕಾರ್ಪೊರೇಷನ್ ಎಂಬ ಸಂಸ್ಥೆ ಸ್ಥಾಪಿಸಿದರು. 1934-36 ರಲ್ಲಿ ಭಕ್ತ ಧ್ರುವ, ಚಿರಂಜೀವಿ ಎಂಬ ಚಲನಚಿತ್ರಗಳಿಗೆ ಸಾಹಿತ್ಯ ರಚನೆ ಮಾಡಿದ್ದಷ್ಟೇ ಅಲ್ಲದೇ, ಚಿರಂಜೀವಿ ಚಿತ್ರದಲ್ಲಿ ಮೃಕಂಡು ಮಹರ್ಷಿಯ ಪಾತ್ರವನ್ನೂ ನಿರ್ವಹಿಸಿದ್ದರು.


ಈ ಎಲ್ಲ ಪ್ರವೃತ್ತಿಗಳ ಜೊತೆಗೇ, ಸಾಮಾಜಿಕವಾಗಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವ್ಯಕ್ತಿತ್ವ ಅವರದು. 1930 ರಲ್ಲಿ ಮೈಸೂರಿನಲ್ಲಿ ಸ್ಥಾಪನೆಯಾದ ಹಿಂದಿ ಪ್ರಚಾರಕ ಸಭೆಯ ಸ್ಥಾಪಕ ಸದಸ್ಯರಲ್ಲಿ ದೇವುಡು ಸಹ ಒಬ್ಬರು. ಅಂತೆಯೇ 1937 ರಲ್ಲಿ ಕನ್ನಡ ಸಾಹಿತ್ಯ ಸಮಾಜವನ್ನು ಸ್ಥಾಪಿಸಿದರು. 1939-42 ರ ಅವಧಿಯಲ್ಲಿ ಮೈಸೂರು ಸಂಸ್ಥಾನದಲ್ಲಿ ನಡೆದ ಅಕ್ಷರ ಪ್ರಚಾರ ಯೋಜನೆ ಹಾಗೂ ವಯಸ್ಕರ ಅಕ್ಷರ ಪ್ರಚಾರ ಯೋಜನೆಗಳಲ್ಲಿ ಭಾಗಿಯಾಗಿದ್ದರು. 1943-45 ರಲ್ಲಿ ಮೈಸೂರು ಪ್ರಜಾ ಪ್ರತಿನಿಧಿ ಸಭೆಯ ಸದಸ್ಯರಾಗಿ ನೇಮಕವಾಗಿದ್ದರು. 1946 ರಲ್ಲಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕಿನ ಡೈರೆಕ್ಟರ್ ಹಾಗೂ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿದ್ದರು. 1948 ರಲ್ಲಿ ಬೆಂಗಳೂರು ಸಿಟಿ ಕಾರ್ಪೊರೇಷನ್ ಸದಸ್ಯರಾಗಿ ಚುನಾಯಿತರಾದರು. ಕರ್ನಾಟಕ ಏಕೀಕರಣ ಹೋರಾಟದಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡಿದ್ದ ಇವರು, ಬೆಂಗಳೂರಿನ ಶಂಕರಪುರದಲ್ಲಿ ಗೀರ್ವಾಣ ವಿದ್ಯಾಪೀಠವನ್ನು ಸ್ಥಾಪಿಸಿದರು. 1956 ರಿಂದ 59 ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಅಷ್ಟೇ ಅಲ್ಲ, 1953 ರಲ್ಲಿ ಆಗಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರಿಗೆ ಕನ್ನಡ ಸಂಸ್ಕೃತಿ ಅಭಿವೃದ್ಧಿ ಇಲಾಖೆಯನ್ನು ಪ್ರಾರಂಭಿಸಲು ಸಲಹೆ ಸೂಚನೆಗಳನ್ನು ನೀಡಿದ್ದೂ ದೇವುಡುರವರೇ.


ಸಾಹಿತ್ಯಿಕವಾಗಿ ದೇವುಡುರವರು ಅನೇಕ ಕಥೆ, ಕಾದಂಬರಿ, ನಾಟಕಗಳ ರಚನೆಯೊಂದಿಗೆ, ಭಾರತೀಯ ಪ್ರಾಚೀನ ಕಾವ್ಯಗಳ ಸಂಗ್ರಹ, ಅನುವಾದ, ಮೀಮಾಂಸಾ ಶಾಸ್ತ್ರದ ಕುರಿತು ವಿಸ್ತೃತವಾದ ಅನೇಕ ಗ್ರಂಥಗಳ ರಚನೆ ಮಾಡಿದ್ದಾರೆ. ನಟಸಾರ್ವಭೌಮ ಡಾ. ರಾಜಕುಮಾರ್ ರವರ ಯಶಸ್ವೀ ಚಲನಚಿತ್ರ ಮಯೂರ ದೇವುಡುರವರ “ಮಯೂರ” ಕಾದಂಬರಿಯನ್ನಾಧರಿಸಿದುದು. ಆದರೆ ಇವೆಲ್ಲವನ್ನೂ ಮೀರಿ, ಕನ್ನಡ ಸಾಹಿತ್ಯದಲ್ಲಿ ದೇವುಡು ಎಂದಾಕ್ಷಣ ನೆನಪಿಗೆ ಬರುವುದು, ಮಹಾ ಕ್ಷತ್ರಿಯ, ಮಹಾಬ್ರಾಹ್ಮಣ ಹಾಗೂ ಮಹಾ ದರ್ಶನ ಎಂಬ ಮೇರು ಕೃತಿಗಳು.


ಮಹಾಕ್ಷತ್ರಿಯದಲ್ಲಿ ನಹುಷ ತನ್ನ ದೌರ್ಬಲ್ಯಗಳಿಂದ ಶಾಪಗ್ರಸ್ತನಾಗುತ್ತಾನೆ. ಆದರೆ ದೇವುಡು ಅವರ ನಹುಷ ಎಲ್ಲ ದೌರ್ಬಲ್ಯಗಳನ್ನೂ ಕಳೆದುಕೊಂಡ ಮಹೋನ್ನತ ವ್ಯಕ್ತಿ. ಆತನ ಧಾರ್ಮಿಕತೆ, ರಾಜ್ಯಭಾರ ವಿಚಕ್ಷಣತೆಗೆ ಮನಸೋತು, ದೇವತೆಗಳೇ ಇವನಲ್ಲಿಗೆ ಬಂದು ಇಂದ್ರ ಪದವಿಯನ್ನು ಅಲಂಕರಿಸಬೇಕೆಂದು ಆಹ್ವಾನಿಸುತ್ತಾರೆ. ಇಂದ್ರನಾಗಿ ಅವನು ನಡೆದುಕೊಂಡ ರೀತಿಯನ್ನು ಕಂಡು ಇವನನ್ನು ಅತೀಂದ್ರನೆಂದು ಶ್ಲಾಘಿಸುತ್ತಾರೆ. ಇಲ್ಲಿ ದೇವುಡು ಒಬ್ಬ ಆದರ್ಶ ಮಾನವನನ್ನು ರೂಪಿಸಿದ್ದಾರೆ. ಕಲ್ಪನೆಯ ಮೂಸೆಯಲ್ಲಿ ಪುಟವಿಟ್ಟು, ಪ್ರತಿಭಾಪೂರ್ಣ ಲೇಖನಿಯಿಂದ ಹೊರಬಂದಿರುವ ಪೌರಾಣಿಕ ಕಾದಂಬರಿ. ಇನ್ನು ಪುರುಷ ಪ್ರಯತ್ನದ ಪರಾಕಾಷ್ಠೆ ಅಹಂಭಾವದ ತ್ಯಾಜ್ಯದಿಂದಲೇ ಸಾಧ್ಯ ಎಂಬುದನ್ನು ಪರಿಣಾಮಕಾರಿಯಾಗಿ ಧ್ವನಿಸುವ “ಮಹಾ ಬ್ರಾಹ್ಮಣ”, ವಿಶ್ವಾಮಿತ್ರನ ಜೀವನದ ವಿವರಗಳನ್ನೊಳಗೊಂಡಿದೆ. ಸಂಕಲ್ಪ ಸಿದ್ಧಿ, ಮೇಧಾ ಶಕ್ತಿ, ಸೃಜನ ಶಕ್ತಿಗಳು ಇಲ್ಲಿ ಬೆರೆತಿವೆ. ಇನ್ನು ದೇವುಡು ರವರ ಕಡೆಯ ಕಾದಂಬರಿ ಮಹಾ ದರ್ಶನ, ಒಂದು ವೇದ, ಒಂದು ಬ್ರಾಹ್ಮಣ, ಒಂದು ಉಪನಿಷತ್ತು ತಂದುಕೊಟ್ಟು ಇನ್ನೊಂದು ಉಪನಿಷತ್ತಿಗೆ ಕಾರಣರಾದ ಬ್ರಹ್ಮರ್ಷಿ ಯಾಜ್ಞವಲ್ಕ್ಯರ ಮಹತ್ ಸಾಧನೆಯ ಹೃದಯಂಗಮ ನಿರೂಪಣೆ.


ಹೀಗೆ ಸಾಂಸ್ಕೃತಿಕವಾಗಿ ಎಷ್ಟೇ ಸಂಪನ್ನರಾಗಿದ್ದರೂ ದೇವುಡು ಬಡತನದಲ್ಲಿಯೇ ಬಾಳಿದರು. ಮೂವರು ಗಂಡು ಹಾಗೂ ಆರು ಹೆಣ್ಣು ಮಕ್ಕಳ ತುಂಬು ಕುಟುಂಬ ಅವರದು. ಇವರು ಬರಿಗಾಲಿನಲ್ಲಿ ಓಡಾಡುತ್ತಾರೆಂದು ನೊಂದ ಶಿಷ್ಯನೊಬ್ಬ ಕೊಡಿಸಿದ ಮೆಟ್ಟುಗಳಿಂದ ಕಾಲಿಗೆ ಗಾಯವಾಗಿ, ಮಧುಮೇಹದ ಕಾರಣ ಗಾಯ ಬಲಿತು 1959 ರಲ್ಲಿ ಒಂದು ಕಾಲನ್ನೇ ತೆಗೆಯಬೇಕಾಯಿತು. ಕೊನೆಗೆ 1962 ರ ಅಕ್ಟೊಬರ್ 27 ರಂದು ದೇವುಡು ಕೊನೆಯುಸಿರೆಳೆದರು. ಆ ವರ್ಷದಲ್ಲಿಯೇ ಅವರ ಮಹೋನ್ನತ ಕೃತಿ “ಮಹಾ ಕ್ಷತ್ರಿಯ” ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಗೌರವ ಸಂದಿತಾದರೂ, ಅದನ್ನು ಸಂಭ್ರಮಿಸಲು ಅವರಿರಲಿಲ್ಲ ಎಂಬುದೇ ವಿಪರ್ಯಾಸ.

6c86faa22ee35c50876d211bb895652a

ಪುರಸ್ಕಾರ
•1938ರಲ್ಲಿ “ಮೀಮಾಂಸಾ ದರ್ಪಣ”ಕ್ಕೆ ಶ್ರೀಮನ್ಮಹಾರಾಜರಿಂದ ವಿಶೇಷ ಪ್ರಶಸ್ತಿ
•1952ರಲ್ಲಿ ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದರಿಂದ ಕಾಶಿಯಲ್ಲಿ ಗೌರವ; ಕನ್ನಡ ಕಾದಂಬರಿಕಾರರ ಸಮ್ಮೇಳನದ ಅಧ್ಯಕ್ಷತೆ
•1962ರಲ್ಲಿ “ಮಹಾಕ್ಷತ್ರಿಯ” ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಮರಣೋತ್ತರವಾಗಿ ದೊರಕಿತು.

ದೇವುಡು ರವರ ಪ್ರಮುಖ ಕೃತಿಗಳು ಕಾದಂಬರಿ, ಸಾಹಸವರ್ಮ
ಕಳ್ಳರ ಕೂಟ
ಒಡೆದ ಮುತ್ತು ಅಂತರಂಗ
ಮಯೂರಚಿನ್ನಾ(ಅವಳ ಕತೆ)
ಮಹಾಬ್ರಾಹ್ಮಣ
ಮಲ್ಲಿ
ಮುಂದೇನು
ಗೆದ್ದವರು ಯಾರು
ಎರಡನೇ ಜನ್ಮ
ಡಾ. ವೀಣಾ
ಮಹಾಕ್ಷತ್ರಿಯ
ಮಹಾದರ್ಶನ

ಕಥೆ
ಸೋಲೋ ಗೆಲುವೋ
ಘಾಟಿ ಮುದುಕ ಮತ್ತು ಇತರ ಕಥೆಗಳು
ಮೂರು ಕನಸು
ದೇವುಡು ಅವರ ಆಯ್ದ ಕಥೆಗಳು

ನಾಟಕ

  1. ಸಾವಿತ್ರಿ
  2. ವಿಚಾರಣೆ (ಮೂಲ : ಜಾನ್ ಮೇಸ್ಫೀಲ್ಡ್)
  3. ವಿಚಿತ್ರ ಶಿಕ್ಷೆ
  4. ದುರ್ಮಂತ್ರಿ
  5. ಮಯೂರ
  6. ಯಾಜ್ಞವಲ್ಕ್ಯ

ಪ್ರಾಚೀನ ಕಾವ್ಯ ಸಂಗ್ರಹ/ಅನುವಾದ

  1. ಸುರಭಿ
  2. ವಿಕ್ರಮೋರ್ವಶೀಯ
  3. ರಾಮಾಯಣದ ಮಹಾಪುರುಷರು
  4. ಕಾಳಿದಾಸನ ಕೃತಿಗಳು
  5. ಪುರುಷೋತ್ತಮ
  6. ಭಾರತದ ಮಹಾಪುರುಷರು
  7. ಸಂಗ್ರಹ ರಾಮಾಯಣ
  8. ಸಂಗ್ರಹ ಭಾಗವತ
  9. ಮಹಾಭಾರತ ಸಂಗ್ರಹ (೧,೨,೩)

ಇತರ

  1. ಮೀಮಾಂಸಾ ದರ್ಪಣ
  2. ದಿವ್ಯವಾಣಿ
  3. ಅಂತರ್ಮುಖಿ
  4. ಯೋಗವಾಸಿಷ್ಠ (೧,೨,೩,೪ ,೧೦,೧೪,೧೫,೧೬,೧೭,೧೮,೧೯,೨೦,೨೧)
  5. ಕನ್ನಡ ಭಗವದ್ಗೀತೆ
  6. ಅಮೆರಿಕದ ಕಥೆ
  7. ಕರ್ನಾಟಕ ಸಂಸ್ಕೃತಿ
  8. ಮೂಲ ಸಂಸ್ಕೃತ
  9. ಮೈಸೂರು ಟ್ರಾನ್ಸಲೇಶನ್ ಸೀರೀಸ್ (೧,೨,೩)
  10. ರಾಮಾಯಣವೂ ಭಗವದ್ಗೀತೆಯೂ
  11. ಭೇರುಂಡೇಶ್ವರ
  12. ಮೈಸೂರು ಅಕ್ಷರ ಪ್ರಚಾರ ಪದ್ಧತಿ
  13. ಹೊಸಗನ್ನಡ ಪಂಚತಂತ್ರ

ಮಕ್ಕಳ ಸಾಹಿತ್ಯ

  1. ವಾಲ್ಡನ್
  2. ಉಪನಿಷತ್ತು
  3. ಕಥಾಸರಿತ್ಸಾಗರ
  4. ವೇದಾಂತ (ಉಪನಿಷತ್ತಿನ ಕಥೆಗಳು)
  5. ಹೊಸಗನ್ನಡ ಪಂಚತಂತ್ರ
  6. ಮಕ್ಕಳ ಸಾಹಿತ್ಯ
  7. ಯವನ ಪುರಾಣ
  8. ದೇವುಡು ಅವರ ನಾಲ್ಕು ಮಕ್ಕಳ ಕಥೆಗಳು
  9. ದೇವುಡು ವಿಚಾರಧಾರಾ ಶತಕ
photo 2020 11 25 20 39 28
ವಾಸಂತಿ ಎಮ್. ರಾವ್
Share This Article
Leave a comment