ಕನ್ನಡ ಸಾಹಿತ್ಯ – ಪರಂಪರೆ: ಭಾಗ- 24

Team Newsnap
5 Min Read

ಕನ್ನಡದ ವಜ್ರ ಅನಕೃ

a na kru


ಅನಕೃ ಎಂಬ ಮೂರಕ್ಷರದ ಹೆಸರು ಕನ್ನಡ ಸಾಹಿತ್ಯಪ್ರಿಯರು ಮತ್ತುಕನ್ನಡ ಚಳವಳಿಗಾರರಲ್ಲಿ ವಿದ್ಯುತ್ ಸಂಚಾರ ಮೂಡಿಸುತ್ತದೆ. ಕನ್ನಡ ಭಾಷಾಭಿಮಾನ ಮುಗಿಲೆತ್ತರಕ್ಕೆ ಏರಲು ಕಾರಣೀಭೂತರಾದ ಪ್ರಮುಖರಲ್ಲಿ ಅನಕೃ ಮೊದಲ ಸಾಲಿನಲ್ಲಿ ವಿಜೃಂಭಿಸುತ್ತಾರೆ. ಮಾತೃ ಭಾಷೆಯ ಚಳವಳಿಗೆ ಒಂದು ರೂಪ ಕೊಟ್ಟ ಕನ್ನಡದ ಮಗ. ಕನ್ನಡ ಸಾಹಿತ್ಯದಲ್ಲೂ ಗಟ್ಟಿತನವಿದೆ. ಅದರಲ್ಲೂ ಮುಂದುವರಿಯಬೇಕೆಂದು ಹಲವರಿಗೆ ತಮ್ಮ ಬರವಣಿಗೆಯ ಮೂಲಕವೇ ಸ್ಫೂರ್ತಿ ನೀಡಿದವರು ‘ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅಂದರೆ ಅನಕೃ.


ಕಾದಂಬರಿ, ನಾಟಕ, ಪತ್ರಿಕೋದ್ಯಮ, ಸಣ್ಣಕಥೆ, ಕಾವ್ಯ ಹೀಗೆ ನಾನಾ ಪ್ರಕಾರಗಳಲ್ಲಿ ತಮ್ಮ ಛಾಪುಮೂಡಿಸಿದ ಅ.ನ.ಕೃಷ್ಣರಾವ್ 1908ರ ಮೇ 9ರಂದು ಕೋಲಾರದಲ್ಲಿ ಜನಿಸಿದರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. ಮೂಲತಃ ಹಾಸನ ಜಿಲ್ಲೆಯ ಅರಕಲಗೂಡಿನವರು. ಜೀವನಯಾತ್ರೆ ಅನಕೃ ಪ್ರಥಮ ಕಾದಂಬರಿ. 100ಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡಿಗರಿಗೆ ಅರ್ಪಿಸಿದ್ದು ಕಾದಂಬರಿ ಸಾರ್ವಭೌಮ ಎಂಬ ಪ್ರೀತಿಯ ಬಿರುದನ್ನು ಕನ್ನಡ ಓದುಗರಿಂದ ಪಡೆದುಕೊಂಡಿದ್ದಾರೆ. ಭಾಷಾಭಿಮಾನ ಎಂದರೇನು ಎಂಬುದನ್ನು ತಮ್ಮ ನಡೆ-ನುಡಿಯಲ್ಲಿ ತೋರಿಸಿದ ಮಹಾಪುರಷ ಅನಕೃ.


ಮಾನವೀಯತೆ ಮತ್ತು ಮನುಷತ್ವಕ್ಕೆ ಆದ್ಯತೆ ನೀಡಬೇಕೆಂದು ತಮ್ಮ ಬರವಣಿಗೆಯಲ್ಲಿ ಪ್ರತಿಪಾದಿಸಿದವರು. ಸಂಗೀತಗಾರನ ಜೀವನ ಕುರಿತ ಇವರ ಸಂಧ್ಯಾರಾಗ ಕಾದಂಬರಿ ಓದುಗರ ಮೇಲೆ ಪ್ರಭಾವಬೀರಿದ ಪರಿಯಂತೂ ಹುಬ್ಬೇರಿಸುವಂತಹದ್ದು. ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕ ಜೋಡಿ ದೊರೆ-ಭಗವಾನ್ ಅವರ ಪ್ರಯತ್ನದ ಫಲವಾಗಿ ಕನ್ನಡ ಚಿತ್ರರಂಗ ಒಂದು ಉತ್ತಮ ಸಂಗೀತಮಯ ಚಿತ್ರವನ್ನು ಕಂಡದ್ದು. ಡಾ. ರಾಜ್-ಭಾರತಿ ಅಭಿನಯ, ಡಾ. ಬಾಲಮುರಳಿಕೃಷ್ಣ- ಡಾ. ಭೀಮಸೇನ್ ಜೋಶಿ, ಜಿ.ಕೆ. ವೆಂಕಟೇಶ್ ಈ ತ್ರಿಮೂರ್ತಿಗಳು ಉಣಬಡಿಸಿದ ಸಂಗೀತದ ರಸಗವಳ, ಇದಕ್ಕೆಲ್ಲ ಮೂಲಕಾರಣ ಪುರುಷ ಅನಕೃ. 1930ರಿಂದ ತಮ್ಮ ಜೀವಿತದ ಕೊನೆತನಕ ಅಂದರೆ ಸುಮಾರು ನಾಲ್ಕು ದಶಕಗಳ ಕಾಲ ಕನ್ನಡದ ಸಾಹಿತ್ಯ ಲೋಕದ ಅನಭಿಷಕ್ತದೊರೆಯಂತೆ ಇದ್ದರು ಎಂದು ನೆನೆಯುತ್ತಾರೆ ಸಾಹಿತ್ಯ ಪ್ರಿಯರು ಹಾಗೂ ಕನ್ನಡಾಭಿಮಾನಿಗಳು. ಡಾ. ರಾಜ್‍ಕುಮಾರ್ ಮತ್ತು ಅನಕೃ ಕನ್ನಡಾಂಬೆಯ ಎರಡು ಕಣ್ಣುಗಳಂತೆ ಎಂದು ಹೆಮ್ಮೆಯಿಂದ ವರ್ಣಿಸಬಹುದಾಗಿದೆ.

a na kru1


ಅನಕೃ ಅವರ ಬರವಣಿಗೆಯಂತೆ ಮಾತುಗಳು ಬಡಿದೆಬ್ಬಿಸುವಂತಹದಾಗಿತ್ತು. ಕನ್ನಡಕ್ಕೆ, ಕನ್ನಡಿಗರಿಗೆ ಅನ್ಯಾಯವಾದರೆ ಸಿಡಿದೇಳುತ್ತಿದ್ದರು ಕೃಷ್ಣರಾಯರು. ಎಷ್ಟೇ ದೊಡ್ಡವರಾದರೂ ಸರಿ ಎದೆಗುಂದದೆ ತಿರುಗಿಬೀಳುತ್ತಿದ್ದ ಅಪ್ಪಟ ಕನ್ನಡಿಗ.
ಕನ್ನಡ ಭಾಷೆಯನ್ನು ಬಹುವಾಗಿ ಪ್ರೀತಿಸುತ್ತಿದ್ದ ರಂ.ರಾ.ದಿವಾಕರ ಅವರು ಬಳ್ಳಾರಿಯಲ್ಲಿ 1939ರಲ್ಲಿ ನಡೆದ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಧ್ಯಕ್ಷರಾಗಿದ್ದವರು. ಆದರೆ ಇಂಥವರು ಹಿಂದಿ ಭಾಷೆಯ ವಕ್ತಾರರಂತೆ ಪ್ರಚಾರಕ್ಕೆ ಮುಂದಾದರು. ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪತ್ರಿಕೆ ಕನ್ನಡ ನುಡಿಯ ಸಂಪಾದಕರಾಗಿದ್ದ ಅ.ನ.ಕೃಷ್ಣರಾಯರು ದಿವಾಕರರ ನಿಲುವನ್ನು ಖಂಡಿಸಿ ಅದರಲ್ಲಿ ಲೇಖನ ಬರೆದರು. ಆಗ ಪರಿಷತ್ತಿನ ಉಪಾಧ್ಯಕ್ಷರಾಗಿದ್ದವರು ಬಿ.ಎಂ.ಶ್ರೀಕಂಠಯ್ಯ. ದಿವಾಕರರ ಕ್ಷಮೆ ಕೇಳಿ ಕನ್ನಡನುಡಿಯಲ್ಲಿ ಪ್ರಕಟಿಸಬೇಕೆಂದು ಪಟ್ಟುಹಿಡಿದರು. 30 ವರ್ಷದ ಬಿಸಿರಕ್ತದ ತರುಣ ಅನಕೃ ಇದಕ್ಕೆ ಒಪ್ಪಲಿಲ್ಲ. ಬದಲಿಗೆ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಬಂದರು. ಇದು ಅವರ ಉತ್ಕಟ ಕನ್ನಡ ಪ್ರೇಮಕ್ಕೆ ಒಂದು ಉದಾಹರಣೆಯಾಗಿದೆ. ಈ ಘಟನೆಯ ನಂತರ ನಾನು ಕನ್ನಡದ ಹಿರಿಯರ ಕಣ್ಣಿಗೆ ಬಂಡಾಯಗಾರನಾಗಿ ಕಂಡುಬಂದೆ ಎಂದು, “ನನ್ನನ್ನು ನಾನೇ ಕಂಡೆ” ಎಂಬ ತಮ್ಮ ಗ್ರಂಥದಲ್ಲಿ ಅನಕೃ ಹೇಳಿಕೊಂಡಿದ್ದಾರೆ.


ಕನ್ನಡಕ್ಕೆ ಸರಿಯಾದ ಸ್ಥಾನಮಾನ ಸಿಗದಿದ್ದರೆ ಇವರೊಳಗಿನ ಕನ್ನಡಿಗ ಜಾಗೃತನಾಗುತ್ತಿದ್ದ ಎಂಬುದಕ್ಕೆ ಅವರ ಸಹೋದರರ ವಿರುದ್ಧವೇ ಸೆಟೆದುನಿಂತ ಸಂದರ್ಭವನ್ನು ಇಲ್ಲಿ ದಾಖಲಿಸುವುದು ಅರ್ಥಪೂರ್ಣವಾಗಿರುತ್ತೆ. ಬೆಂಗಳೂರಿನ ಕೋಟೆ ಮೈದಾನದಲ್ಲಿ ಪ್ರತಿವರ್ಷ ನಡೆಯುವ ಶ್ರೀರಾಮ ಸೇವಾ ಮಂಡಳಿಯ ರಾಮ ನವಮಿ ಸಂಗೀತೋತ್ಸವ ಈಗಲೂ ಹೆಸರುವಾಸಿಯೇ. ಅನಕೃ ಯುವಕರಾಗಿದ್ದ ಸಂದರ್ಭ. ಆಗ ಅಲ್ಲಿಗೆ ಹಾಡಲು ಬರುವ ಗಾಯಕರೆಲ್ಲ ಕನ್ನಡೇತರರು. ಜತೆಗೆ ಅವರೆಲ್ಲ ಹೆಚ್ಚಾಗಿ ಹಾಡುತ್ತಿದ್ದುದು ತಮಿಳು ಮತ್ತು ತೆಲುಗು ರಚನೆಗಳನ್ನೇ. ಇದು ಅನಕೃ ಅವರನ್ನು ಕೆರಳಿಸಿತು.

ಒಂದು ದಿನ ಕೋಟೆ ಮೈದಾನದಲ್ಲಿ ಖ್ಯಾತ ವಿದುಷಿ ಎಂ.ಎಸ್. ಸುಬ್ಬುಲಕ್ಷ್ಮೀ ಕಚೇರಿ. ಸೀದಾ ಕೋಟೆ ಮೈದಾನಕ್ಕೆ ಲಗ್ಗೆಇಟ್ಟ ಅನಕೃ ನೇತೃತ್ವದ ದಂಡು, ‘ಕರ್ನಾಟಕದ ಕಲಾವಿದರನ್ನೇ ಹೆಚ್ಚಾಗಿ ಕರೆಯಬೇಕು ಮತ್ತು ಕನ್ನಡ ಕೃತಿಗಳಿಗೇ ಪ್ರಾಶಸ್ತ್ಯ ಇರಬೇಕು’ ಎಂದು ಪಟ್ಟುಹಿಡಿಯಿತು. ಪರಿಸ್ಥಿತಿಯನ್ನು ಅರಿತುಕೊಂಡ ಮಂಡಳಿಯೂ ಇದಕ್ಕೆ ಸಮ್ಮತಿಸಿತು. ಈ ವೇಳೆ ಶ್ರೀರಾಮ ಸೇವಾ ಮಂಡಳಿಯ ಅಧ್ಯಕ್ಷರಾಗಿದ್ದವರು ಅನಕೃ ಅವರ ಅಣ್ಣ ಎ.ಎನ್.ರಾಮರಾವ್. ಯುದ್ಧದ ವೇಳೆ ಸಂಬಂಧಗಳು ಮುಖ್ಯವಾಗುವುದಿಲ್ಲ ಎಂಬ ಅರ್ಥದ ಮಾತೊಂದಿದೆ. ಭಾಷೆಯ ವಿಷಯದಲ್ಲೂ ಅದೇ ಎಂಬುದನ್ನು ನಿರೂಪಿಸಿದವರು ಅನಕೃ. ಇದೂ ಈಗಿನ ಕನ್ನಡ ಚಳವಳಿಗಾರರಿಗೂ ಮಾದರಿಯಾಗಿರುತ್ತದೆ ಎಂದು ಬಿಡಿಸಿಹೇಳಬೇಕಾಗಿಲ್ಲ.

09 anakru big1


ಸಾಹಿತ್ಯ ಮತ್ತು ಚಳವಳಿಯನ್ನು ಒಟ್ಟೊಟ್ಟಿಗೆ ಕೊಂಡೊಯ್ದ ಅಪರೂಪದ ವ್ಯಕ್ತಿಯಾಗಿದ್ದು ಅನಕೃ. ಹಾಗಾಗಿ ಇವರನ್ನು ಕನ್ನಡ ಚಳವಳಿಯ ಪಿತಾಮಹ ಎಂದು ಕರೆದರೆ ಅತಿಶಯೋಕ್ತಿಯಾಗಲಾರದರು. ಹೆತ್ತ ತಾಯಿಯನ್ನು ಪ್ರೀತಿಸುವವರು ಭಾಷೆಯನ್ನು ಅಷ್ಟೇ ಪ್ರೀತಿಸಬೇಕು ಎಂಬುದು ಅನಕೃ ಅವರ ನಿಲುವಾಗಿತ್ತು. ಅದಕ್ಕೆಂದೇ, ಕನ್ನಡದ ಆಸ್ತಿ ಎಂದು ಬಣ್ಣಿಸಲ್ಪಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಒಂದು ಕಡೆ ಹೇಳುತ್ತಾರೆ, ನಾನು ತಮಿಳು ಕನ್ನಡಿಗ, ಸರ್ ಮಿರ್ಜಾ ಇಸ್ಮಾಯಿಲ್ ಮುಸ್ಲಿಂ ಕನ್ನಡಿಗ, ಅನಕೃ ಅಪ್ಪಟ ಕನ್ನಡಿಗ ಎಂದು. ಆಹಾ ಇದು ಎಂಥ ಅಭಿಮಾನದ ಮಾತು ಅವರ ಬಾಯಿಯಿಂದ ಬಂದದ್ದು. ಕನ್ನಡ ಏಕೀಕರಣಕ್ಕೆ ದುಡಿದ ಮಹನೀಯರಲ್ಲಿ ಪ್ರಮುಖ ಹೆಸರು ಅನಕೃ. ಬರವಣಿಗೆ ಸಮಾಜದಲ್ಲಿ ಬದಲಾವಣೆಗೂ ಕಾರಣವಾಗುತ್ತದೆ ಎಂಬ ಮನೋಧರ್ಮದಿಂದ ಸಾಗಿದ ಅನಕೃ ಅವರನ್ನು ಪ್ರಗತಿಶೀಲ ಸಾಹಿತಿ ಎಂದು ಕರೆಯಲಾಗುತ್ತೆ.


ನಗ್ನ ಸತ್ಯ, ಶನಿಸಂತಾನ, ಸಂಜೆಗತ್ತಲು ಕಾದಂಬರಿ ಮಡಿವಂತರ ಕಣ್ಣುಕೆಂಪಾಗಿಸಿತು. ಇದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವಲ್ಲಿ ಅನಕೃ ಹಿಂದೆಬೀಳಲಿಲ್ಲ. ಇವರ ಮಹತ್ವದ ಕೃತಿ 750 ಪುಟಗಳನ್ನು ಹೊಂದಿರುವ ನಟಸಾರ್ವಭೌಮ. ಹೊಸಿಲುದಾಟಿದ ಹೆಣ್ಣು, ಕಳಂಕಿನಿ, ಮಾರ್ಜಾಲ ಸನ್ಯಾಸಿ, ತಾಯಿಯ ಕುರುಳು, ಉದಯರಾಗ, ಹೆಂಗರುಳು, ರಣವಿಕ್ರಮ, ರೂಪಶ್ರೀ, ಧರ್ಮಪತ್ನಿ, ಗರುಡಮಚ್ಚೆ ಹೀಗೆ ಸಾಕಷ್ಟು ಕಾದಂಬರಿಗಳು ರಚಿತವಾಗಿವೆ. ವಿಮರ್ಶೆ, ನಾಟಕಗಳು, ಜೀವನಚರಿತ್ರೆ, ಆತ್ಮಚರಿತ್ರೆ ಮಕ್ಕಳಪುಸ್ತಕಗಳು, ಸಣ್ಣಕಥೆಗಳು ಹೀಗೆ ನಾನಾ ಪ್ರಕಾರಗಳ ಬರವಣೆಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು ಅನಕೃ.
ಮಣಿಪಾಲದಲ್ಲಿ ನಡೆದ 43ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ್ದ ಅ.ನ.ಕೃಷ್ಣರಾವ್ ಅವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಾಹಿತ್ಯಕ್ಷೇತ್ರದ ಸಾಧನೆಗೆ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಲಭಿಸಿದೆ.


ಬೆಂಗಳೂರಿನ ವಿಶ್ವೇಶ್ವರಪುರಂನಲ್ಲಿರುವ ಅನ್ನಪೂರ್ಣ ಹೆಸರಿನ ಮನೆಯಲ್ಲಿ ತಮ್ಮ ಜೀವನ ಸಾಗಿಸಿದ ಕನ್ನಡದ ಕಂದ ಅನಕೃ 1971 ಜುಲೈ 8ರಂದು ರಾಜ್ಯ ರಾಜಧಾನಿಯಲ್ಲೇ ಕೊನೆಯುಸಿರೆಳೆದರು.ತಮ್ಮ ಬರವಣಿಗೆಯ ಮೂಲಕ ಸಾಮಾಜಿಕ ಪ್ರಜ್ಞೆ ಮೂಡಿಸಿದವರು. ಕನ್ನಡಿಗರಲ್ಲಿ ಅತೀವ ಭಾಷಾಪ್ರೇಮೆ ಹುಟ್ಟಿಸಿದವರು. ಕನ್ನಡ ರಾಜ್ಯೋತ್ಸವ ತಿಂಗಳಾದ ನವೆಂಬರ್ ಅನ್ನು ಅನಕೃ ಮಾಸ ಎನ್ನುವಂತಾದರೆ ಅವರಲ್ಲಿದ್ದ ಕನ್ನಡ ತುಡಿತಕ್ಕೆ ಕನ್ನಡಿಗರು ಕೊಡಬಹುದಾದ ಪ್ರೀತಿಯ ಕಾಣಿಕೆಯಾಗುತ್ತದೆ.

kcsp
ಕೆ.ಸಿ. ಸತ್ಯಪ್ರಕಾಶ್
ಹಿರಿಯ ಪತ್ರಕರ್ತರು

Share This Article
Leave a comment