November 21, 2024

Newsnap Kannada

The World at your finger tips!

B Venkatacharya2 2

ಕನ್ನಡ ಸಾಹಿತ್ಯ – ಪರಂಪರೆ: ಭಾಗ-2

Spread the love

ಕನ್ನಡ ಓದುಗರನ್ನು ಸೃಷ್ಟಿಸಿದ ಬಿ.ವೆಂಕಟಾಚಾರ್ಯರು

ಸಾಂಪ್ರದಾಯಿಕ ದೃಷ್ಟಿಯಲ್ಲಿ ಕನ್ನಡ ಸಾಹಿತ್ಯವೆಂದರೆ ಅದು ಕಾವ್ಯ ಮಾತ್ರ. ಸಂಪೂರ್ಣ ಗದ್ಯದ ಕೃತಿಗಳು ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. (ವಡ್ಡಾರಾಧನೆಯೊಂದು ಅಪವಾದ). ಹತ್ತೊಂಬತ್ತನೆಯ ಶತಮಾನದಲ್ಲಿ ಹೊಸ ಶಿಕ್ಷಣದಿಂದ ಆಧುನಿಕತೆಗೆ ತೆರೆದುಕೊಂಡವರು ಇಂಗ್ಲಿಷಿನ ಮೂಲಕ ಪ್ರಪಂಚ ಜ್ಞಾನ ಪಡೆದರು. ಸಾಹಿತ್ಯ ರಚನೆ ಪಂಡಿತರಿಗೆ ಮೀಸಲು ಎಂಬಂತಿದ್ದ ಅಂದಿನ ಪರಿಸ್ಥಿತಿಯಲ್ಲಿ ಇಂಗ್ಲಿಷ್ ಶಿಕ್ಷಣದ ನಿಮಿತ್ತ ಸರ್ಕಾರಿ ನೌಕರಿಗೆ ಸೇರಿಕೊಂಡ ದೇಶೀಯರಿಗೆ ಸ್ವಂತ ಭಾಷೆ ಸಾಹಿತ್ಯದ ಬಗ್ಗೆ ಇದ್ದ ಹಿಂಜರಿಕೆಯ ಅರಿವು ಮೂಡುತ್ತಿತ್ತು. ಅದನ್ನು ನಿವಾರಿಸಲು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಪ್ರಯತ್ನಗಳನ್ನು ಕೈಗೊಂಡವರಲ್ಲಿ ಮಂಡ್ಯ ಜಿಲ್ಲೆಯ ಬಿ.ವೆಂಕಟಾಚಾರ್ಯರು ಒಬ್ಬರು.


ಹೊಸಗನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಇಂದು ಹೆಚ್ಚು ಜನಪ್ರಿಯವಾಗಿರುವ ಕಾದಂಬರಿ ಪ್ರಕಾರಕ್ಕೆ ಹತ್ತೊಂಬತ್ತನೆಯ ಶತಮಾನದಲ್ಲಿಯೇ ಭದ್ರ ತಳಹದಿಯನ್ನು ಹಾಕಿದ ವೆಂಕಟಾಚಾರ್ಯರು ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆಯವರು. ವೆಂಕಟಾಚಾರ್ಯರು ಜನ್ಮ ತಾಳಿದ್ದು ಕ್ರಿ.ಶ. 1845ನೇ ವರ್ಷದಲ್ಲಿ. ಅವರದು ಶ್ರೀವೈಷ್ಣವ ಕುಟುಂಬ. ವೆಂಕಟಾಚಾರ್ಯರ ಪೂರ್ವಜರ ಸ್ಥಳ ಕೊಳ್ಳೇಗಾಲ. ತಂದೆ ಬಿ.ಸಿ.ಗರುಡಾಚಾರ್ಯರು. ಅವರು ಸಂಸ್ಕೃತ ಪಂಡಿತರು. ಅವರಿಗೆ ಆರು ಜನ ಗಂಡುಮಕ್ಕಳು. ಅವರಲ್ಲಿ ವೆಂಕಟಾಚಾರ್ಯರು ಎರಡನೆಯವರು.
ಗರುಡಾಚಾರ್ಯರು ಜೀವನ ನಿರ್ವಹಣೆಯ ನಿಮಿತ್ತ ಬಿಂಡಿಗನವಿಲೆಯನ್ನು ಬಿಟ್ಟು ಚಿತ್ರದುರ್ಗಕ್ಕೆ ಬಂದರು. ಆದ್ದರಿಂದ ವೆಂಕಟಾಚಾರ್ಯರ ಪ್ರಾರಂಭಿಕ ಶಿಕ್ಷಣವು ಮನೆಯಲ್ಲಿಯೇ ನಡೆಯಿತು. ಕೆಲವು ಕಾಲ ಚಿತ್ರದುರ್ಗದಲ್ಲಿ ಶಾಲೆಗೆ ಸೇರಿ ವಿದ್ಯಾಭ್ಯಾಸ ಮಾಡಿದರು. ಅನಂತರ ತುಮಕೂರಿನ ಇಂಗ್ಲಿಷ್ ಶಾಲೆಗೆ ಸೇರಿ, ನಾಲ್ಕು-ಆರು ವರ್ಷಗಳಲ್ಲಿ ಜೂನಿಯರ್- ಸೀನಿಯರ್ ಪರೀಕ್ಷೆಗಳನ್ನೂ ಮಾಡಿಕೊಂಡರು. ತುಂಬು ಕುಟುಂಬದ ಗರುಡಾಚಾರ್ಯರಿಗೆ ಹೆಚ್ಚಿನ ಓದಿಗಾಗಿ ಪರ ಊರಿಗೆ ವೆಂಕಟಾಚಾರ್ಯರನ್ನು ಕಳುಹಿಸುವಷ್ಟು ಆರ್ಥಿಕ ಅನುಕೂಲ ಇರಲಿಲ್ಲ. ಆದ್ದರಿಂದ ವೆಂಕಟಾಚಾರ್ಯರು ತಮ್ಮ ವಿದ್ಯಾಭ್ಯಾಸ ಸೀನಿಯರ್ ಹಂತ ಮುಟ್ಟಿದಾಗ 1862ರಲ್ಲಿ, ತಮ್ಮ 17ನೇ ವಯಸ್ಸಿನಲ್ಲಿ, ಸಂಸ್ಥಾನದ ಸರ್ಕಾರದಲ್ಲಿ ಗುಮಾಸ್ತೆ ಕೆಲಸಕ್ಕೆ ಸೇರಿಕೊಂಡರು.


ವೆಂಕಟಾಚಾರ್ಯರಲ್ಲಿ ಮೊದಲಿನಿಂದಲೂ ಮನೆಮಾಡಿದ್ದ ಕಾರ್ಯದಕ್ಷತೆ, ಶ್ರದ್ಧೆ, ಪರಿಶ್ರಮಗಳು ಅವರು ಸರ್ಕಾರಿ ಕೆಲಸದಲ್ಲಿದ್ದಾಗಲೂ ಮುಂದುವರಿದವು. ಗುಮಾಸ್ತೆ ಕೆಲಸಕ್ಕೆ ಸೇರಿದರೂ ಮುಂದಿನ ಎರಡುಮೂರು ವರ್ಷಗಳಲ್ಲೇ ಅಕೌಂಟೆಂಟರಾಗಿ ಬಡ್ತಿ ಹೊಂದಿ ವರ್ಗವಾಗಿ ಚಿತ್ರದುರ್ಗಕ್ಕೆ ಬಂದರು. ಅವರ ಕಾರ್ಯನಿಷ್ಠೆ ಮತ್ತು ಕಾರ್ಯದಕ್ಷತೆ ಮೇಲಿನ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದ್ದರಿಂದ ಬೇಗಬೇಗನೆ ಮೇಲಿನ ಹುದ್ದೆಗಳಿಗೆ ಬಡ್ತಿ ಪಡೆದರು. ಶಿವಮೊಗ್ಗೆಯಲ್ಲಿ ಡಿವಿಜನ್ ಹೆಡ್‍ಮುನ್ಷಿ ಕೆಲಸ, ಶಿವಮೊಗ್ಗದಿಂದ ಎಡೆಹಳ್ಳಿಗೆ ಅಂದರೆ, ಈಗಿನ ನರಸಿಂಹರಾಜಪುರಕ್ಕೆ, ಮುನ್ಸೀಫರಾಗಿ ನೇಮಕ. ಸ್ವಲ್ಪ ಕಾಲದ ನಂತರ ವೆಂಕಟಾಚಾರ್ಯರಿಗೆ ಚಿಕ್ಕಬಳ್ಳಾಪುರ, ಅಲ್ಲಿಂದ ಕೋಲಾರ, ಮುಂದೆ ಮೈಸೂರಿಗೆ ವರ್ಗ. ಆಮೇಲೆ ಡಿಸ್ಟ್ರಿಕ್ಟ್ ಕೋರ್ಟ್ ಶಿರಸ್ತೇದಾರ್ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಗಳನ್ನು ಪಡೆದರು. 1902 ನೆಯ ಇಸವಿ ಅಕ್ಟೋಬರ್ ತಿಂಗಳಲ್ಲಿ, ಒಂದನೇ ತರಗತಿ ಮುನ್ಸೀಫರಾಗಿದ್ದಾಗ, ಸರ್ಕಾರಿ ಕೆಲಸದಿಂದ ನಿವೃತ್ತರಾದರು. ನಿವೃತ್ತಿಯ ನಂತರ ತಮ್ಮ ವಿರಾಮಕಾಲವನ್ನೆಲ್ಲ ಕನ್ನಡಸಾಹಿತ್ಯ ಸೇವೆಗೆಂದೇ ಮೀಸಲಾಗಿಟ್ಟುಬಿಟ್ಟರು.


ಅವರು ಆರಂಭದಲ್ಲಿ ತಮಿಳಿನಿಂದ ಕೆಲವು ಸ್ತೋತ್ರಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಬಂಗಾಳಿ ಭಾಷೆಯನ್ನು ಕಲಿತು ಈಶ್ವರಚಂದ್ರ ವಿದ್ಯಾಸಾಗರರ `ಭ್ರಾಂತಿ ವಿಲಾಸ’ವನ್ನು ಅನುವಾದಿಸಿದ ಮೇಲೆ ಸಿಕ್ಕ ಉತ್ತೇಜನದಿಂದ ಅದೇ ಮಾರ್ಗದಲ್ಲಿ ಸಾಗಿದರು. ಮಧ್ಯಮವರ್ಗ ಇಲ್ಲವೆ ಜನಸಾಮಾನ್ಯ ಓದುಗನ ಹೃದಯ ಪರಿಷ್ಕರಣ ಮತ್ತು ಭಾವವಿಕಸನಗಳಿಗೆ ಗದ್ಯ ಪ್ರಕಾರದ ಸಾಹಿತ್ಯ ಅತ್ಯಂತ ಸಾರ್ಥಕ ಮಧ್ಯಮ ವರ್ಗ ಎಂಬುದನ್ನು ತಮ್ಮ ಅನುವಾದ ಕೃತಿಗಳಿಗೆ ಸಿಕ್ಕಿದ ಪ್ರೋತ್ಸಾಹದಿಂದ ವೆಂಕಟಾಚಾರ್ಯರು ಕಂಡುಕೊಂಡರು. ಅವರ ಕೃತಿಗಳನ್ನು ಅಂದಿನ ಓದುಗರು ನಿರೀಕ್ಷೆ ಮಾಡುತ್ತಿದ್ದರು. ಅವರ ವಾಚನಾಭಿರುಚಿಯನ್ನು ವೆಂಕಟಾಚಾರ್ಯರು ನಿರ್ವಿವಾದವಾಗಿ ಹೆಚ್ಚಿಸಿದರು. ಅವರ ಕೃತಿಗಳ ಸಂಖ್ಯೆ 81. ಇವುಗಳಲ್ಲಿ ಬೆರಳೆಣಿಕೆಯ ಕೃತಿಗಳು ಸ್ವತಂತ್ರವಾದವು. ಉಳಿದೆಲ್ಲವೂ ಬಂಗಾಳಿ ಮತ್ತು ಇಂಗ್ಲಿಷಿನಿಂದ ಅನುವಾದಗೊಂಡವು.

ಮೂಲ ಬಂಗಾಳಿಯಿಂದಲೇ ಕನ್ನಡಕ್ಕೆ ಅನುವಾದ ಮಾಡಿದ್ದು ವೆಂಕಟಾಚಾರ್ಯರ ಹೆಗ್ಗಳಿಕೆ. ಅವರ ಕೆಲವು ಕೃತಿಗಳು: ಅಡವಿಯ ಹುಡುಗಿ, ಅತ್ತಿಗೆ, ಅಮೃತಪುಲಿನ, ಅಹಲ್ಯಾಬಾಯಿ, ಅಂತಃಪುರದ ರಹಸ್ಯ, ಆನಂದಮಠ, ಆರ್ಯಶಾಸ್ತ್ರ ಪ್ರದೀಪ, ಇದೊಂದು ಚಿತ್ರ, ಇಂದಿರೆ, ಉನ್ನತಿ, ಉನ್ಮಾದಿನಿ, ಉಪವಾಸ, ಕಪಾಲ ಕುಂಡಲ, ಕಮಲಾಕಾಂತ, ಕರ್ಮಕ್ಕೆ ತಕ್ಕ ಫಲ, ಕೃಷ್ಣಕಾಂತನ ಉಯಿಲು, ಕ್ಷತ್ರಿಯ ರಮಣಿ, ಕಾಗೆ, ಕೋಹಿನೂರು, ಗ್ರಾಮ್ಯಕಥಾ, ಗೀತಾ, ಗೀತೋಕ್ತ ಧರ್ಮ, ಚಂದ್ರಶೇಖರ, ಚಿತ್ರವಿಚಿತ್ರಾವಳಿ, ಚಿದ್ರತ್ನ ನಾಟಕರತ್ನ, ದಾಡಿಯ ಹೇಳಿಕೆ, ದುರ್ಗೇಶ ನಂದಿನಿ, ದೇವಿ ಚೌಧುರಾಣಿ, ದೇಶಭಾಷೋನ್ನತಿಯ ಆವಶ್ಯಕತೆ, ನವಾಬ ನಂದಿನಿ, ನೀರದೆ ಇತ್ಯಾದಿ.


ವೆಂಕಟಾಚಾರ್ಯರು 1876ರಲ್ಲಿ ಬಂಗಾಳಿಯಿಂದ ತಮ್ಮ ಮೊದಲ ಅನುವಾದವನ್ನು ಪ್ರಕಟಿಸಿದರು. ಅವರು ನಾವೆಲ್ ಎಂಬ ಹೊಸ ಬಗೆಯ ಸಾಹಿತ್ಯ ಪ್ರಕಾರವನ್ನು ಬಂಗಾಳಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದರೆ, ಅವರ ಕೃತಿಗಳಿಂದ ಪ್ರಭಾವಿತರಾದ ಅಂದಿನ ಲೇಖಕರು ವೆಂಕಟಾಚಾರ್ಯರ ಕನ್ನಡ ಅನುವಾದಗಳನ್ನು ತೆಲುಗು ಮತ್ತಿತರ ದ್ರಾವಿಡ ಭಾಷೆಗಳಿಗೆ ಅನುವಾದಿಸಿದರು. ವೆಂಕಟಾಚಾರ್ಯರ ಅನುಮತಿಯನ್ನು ಪಡೆದು ಸಂಸ್ಕøತ ಮತ್ತು ಇಂಗ್ಲಿಷಿಗೆ ಕೂಡ ಕೆಲವು ಕೃತಿಗಳು ಅನುವಾದಗೊಂಡವು.
ಪ್ರಾಚೀನ ಪದ್ಧತಿಯ ಹಳಗನ್ನಡದ ಕಾವ್ಯಗಳ ಸಾಂಪ್ರದಾಯಿಕ ಶೈಲಿ ಮತ್ತು ರಚನೆಗಳಿಂದ ಬೇರೆಯಾಗಿ ನವನವೀನವಾದ ಆಧುನಿಕ ಗದ್ಯ ಸಾಹಿತ್ಯವನ್ನು ಕನ್ನಡಿಗರಿಗೆ ಕೊಡುವ ಮೂಲಕ ವೆಂಕಟಾಚಾರ್ಯರು ಹೊಸಗನ್ನಡದಲ್ಲಿ ಕಾದಂಬರಿ ಮಾರ್ಗ ತೋರಿಸಿಕೊಟ್ಟರು. ಅವರದೇ ಒಂದು ವಿಶಿಷ್ಟ ಮಾರ್ಗವಾಗಿ ಉಳಿಯಿತು. ತಮ್ಮ ಉದ್ಯೋಗದ ಕಾರ್ಯಗೌರವದಲ್ಲಿ ಬಿಡುವು ಮಾಡಿಕೊಂಡು ಬಂಗಾಳಿ ಕೃತಿಗಳನ್ನು ಕನ್ನಡಕ್ಕೆ ತಂದರು. ಬಂಕಿಮಚಂದ್ರರ ಕಾದಂಬರಿಗಳು ಬಂಗಾಳದಲ್ಲಿ ಮಾಡಿದ ಓದುಗ ಜಾಗ್ರತಿಯನ್ನು ವೆಂಕಟಾಚಾರ್ಯರ ಅನುವಾದ ಕೃತಿಗಳು ಕನ್ನಡನಾಡಿನಲ್ಲಿ ಮಾಡಿದವು.
ವೆಂಕಟಾಚಾರ್ಯರು ಗತಿಸಿ 2014ರ ಜೂನ್ 26ಕ್ಕೆ ನೂರು ವರ್ಷಗಳಾದವು. ಆಧುನಿಕ ಗದ್ಯ ಪ್ರಕಾರಕ್ಕೆ ತಮ್ಮ ಬಂಗಾಳಿ ಕೃತಿಗಳ ಭಾಷಾಂತರಗಳಿಂದ ಮೌಲಿಕ ಕೊಡುಗೆಯನ್ನು ಅವರು ನೀಡಿದ್ದರು. ಸಾಮಾನ್ಯ ಓದುಗರಲ್ಲಿ ಸಾಹಿತ್ಯದ ಅಭಿರುಚಿಯನ್ನು ಹೆಚ್ಚಿಸಿದರು. 1876ರಿಂದ ಆರಂಭವಾಗಿದ್ದ ಅವರ ಸಾಹಿತ್ಯ ವ್ಯವಸಾಯ ಅವರ ಕೊನೆಯವರೆಗೂ ಮುಂದುವರಿದಿತ್ತು. ಸುಮಾರು ನಾಲ್ಕು ದಶಕಗಳಿಂದ ನಿರಂತರವಾಗಿ ಬರವಣಿಗೆಯಲ್ಲಿ ತೊಡಗಿದ್ದರು. ಕನ್ನಡ ಜನ ಮುಗಿಬಿದ್ದು ಓದುವಂಥ ಅಪರೂಪದ ಸಾಹಿತ್ಯ ಕೃತಿಗಳನ್ನು ನೀಡಿದ್ದರು.


ಕಾದಂಬರಿ ಪ್ರಕಾರ ನಂತರದ ವರ್ಷಗಳಲ್ಲಿ ಎಷ್ಟೋ ಸುಧಾರಣೆಗಳನ್ನು ಕಂಡಿದ್ದರೂ ಅದಕ್ಕೆ ವೆಂಕಟಾಚಾರ್ಯರು ಹಾಕಿದ ಆರಂಭದ ಬುನಾದಿಯೂ ಕಾರಣವಾಗಿರುವುದನ್ನು ಮರೆಯಲಾಗದು. ಅಕ್ಷರ ಬಲ್ಲ ಸಾಮಾನ್ಯರು ಕೂಡ ಓದಿ ಆನಂದಿಸಬಲ್ಲ ಕಾದಂಬರಿಗಳಿಂದ ಸಹೃದಯ ಪೀಳಿಗೆಯನ್ನು ಹುಟ್ಟುಹಾಕಿದವರು ವೆಂಕಟಾಚಾರ್ಯರು. ಅವರು 80ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದರೂ ಅವುಗಳಲ್ಲಿ ಹೆಚ್ಚಿನವು ಈಗ ಲಭ್ಯವಿಲ್ಲ. ಅವರ ಕೆಲವಾದರೂ ಮಹತ್ವದ ಕೃತಿಗಳು ಮರುಮುದ್ರಣಗೊಂಡು ಈಗಿನ ಪೀಳಿಗೆಯವರಿಗೆ ಸಿಗುವಂತಾಗಬೇಕು.

Kodase pic for Blurb
ಲಕ್ಷ್ಮಣ ಕೊಡಸೆ

Copyright © All rights reserved Newsnap | Newsever by AF themes.
error: Content is protected !!