ಕನ್ನಡದ ಕಟ್ಟಾಳು ನಾಡೋಜ ಡಾ.ದೇಜಗೌ
ಬಡತನ, ಹಸಿವು ಮತ್ತು ಅನಕ್ಷರತೆ ಇರುವ ಕಡೆಯಲ್ಲಿ ಅದಮ್ಯ ಸೃಜನಶೀಲತೆಯ ಸೆಲೆಯೊಂದು ಕುಡಿಯೊಡೆದು, ಅಪ್ರತಿಮವಾದ ಸಾಧನೆಯ ಶಿಖರವಾಗಿ ಬೆಳೆದು ನಿಲ್ಲುತ್ತದೆ ಎಂಬುದಕ್ಕೆ ಕನ್ನಡದ ಕುಲಾಧಿಪತಿ, ಕನ್ನಡದ ಭೀಷ್ಮ, ಕನ್ನಡದ ಕಟ್ಟಾಳು, ಕನ್ನಡದ ದಿಟ್ಟ ಹೋರಾಟಗಾರ, ಗದ್ಯ ಶಿಲ್ಪಿ, ಗದ್ಯ ಬ್ರಹ್ಮ ಎಂಬೆಲ್ಲ ವಿಶೇಷಣಗಳ ಗೌರವಕ್ಕೆ ಪ್ರಾತ್ರರಾದವರು ನಾಡೋಜ ಡಾ. ದೇಜಗೌ.
ಇವರ ಹುಟ್ಟೂರು ಚಕ್ಕರೆ. ಇದೊಂದು ಕುಗ್ರಾಮ. ಇಂದಿನ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿದೆ. ಬಡ ಕೃಷಿಕ ಕುಟುಂಬದ ದೇವೇಗೌಡ ಮತ್ತು ಚೆನ್ನಮ್ಮ ಎಂಬ ಅನಕ್ಷರಸ್ಥ ದಂಪತಿಗಳ ಸುಪುತ್ರರಾಗಿ ದೇ. ಜವರೇಗೌಡರು ೧೯೧೮ ಜುಲೈ ೬ ರಂದು ಜನಿಸಿದವರು. ದಟ್ಟ ದ್ರಾರಿದ್ಯ, ಕಷ್ಟ ಕಾರ್ಪಣ್ಯ, ಕಡು ಸಂಕಟಗಳ ನಡುವೆ ಮೇಕೆಗಳ ಕಾಯುತ್ತಲೇ ಬೆಳೆದ ಇವರೇ, ಮುಂದೆ ಕನ್ನಡ ಪ್ರಜ್ಞೆಯ ಮೈದುಂಬಿಕೊಂಡು, ‘ದೇಜಗೌ’ ಎಂಬ ತ್ರ್ಯಕ್ಷರ ಕಾವ್ಯನಾಮದ ಮೂಲಕ ತಮ್ಮ ಗುರು ಕುವೆಂಪು ಅವರಂತೆಯೇ ಕನ್ನಡ ಸಾರಸ್ವತ ಲೋಕದಲ್ಲಿ ಖ್ಯಾತರಾದವರು. ಪ್ರಜ್ವಲಮಾನವಾದ ‘ಕನ್ನಡ ದೀವಟಿಗೆ’ಯಾಗಿ ನುಡಿಗುಡಿಯ ಬೆಳಗಿದ ‘ದೇಜಗೌ’ ಎಂಬ ಈ ಬೆಳಕಿನದ್ದು ಮಾತ್ರ ಅಪ್ಪಟ ಹೋರಾಟದ ಬದುಕು.
ಬಾಲ್ಯ ಮತ್ತು ಶಿಕ್ಷಣ
ಬಾಲ್ಯದಲ್ಲಿ ಕಿತ್ತು ತಿನ್ನುವ ಬಡತನದ ಕಾರಣ ದೇಜಗೌ ಅವರಿಗೆ ಶಾಲೆ ದೂರದ ಮಾತಾಯಿತು. ಕೃಷಿ ಕಾರ್ಯ ಮಾಡುವಾಗ ಅವರ ತಂದೆಗೆ ಉಂಟಾದ ಶಾಶ್ವತ ಕುರುಡತನವೂ ಇದಕ್ಕೆ ಕಾರಣ ಕೂಡ. ಇದರಿಂದಾಗಿ ಬಾಲಕ ದೇಜಗೌ ತಂದೆಗೆ ಕೃಷಿಯಲ್ಲಿ ನೆರವಾಗುತ್ತ ಆಡುಗಳ ಕಾಯಬೇಕಾಯಿತು. ‘ಶಾಲೆಗೆ ಹೋಗಬೇಕು, ಕಲಿಯಬೇಕು’ ಎಂಬ ಆಸೆ ಎದೆಯಲ್ಲಿ ಬಲವಾಗಿತ್ತು. ಆಡುಗಳ ಮೇಯಲು ಬಿಟ್ಟು ಶಾಲೆಗೆ ಹೋಗಿ ತರಗತಿಯಲ್ಲಿ ಪಾಠ ಕೇಳಲು ಕೂತು ಬಿಡುತ್ತಿದ್ದರು. ಆಡುಗಳು ಯಾರದೋ ತೋಟಕ್ಕೆ ನುಗ್ಗಿ ಬೆಳೆ ಹಾನಿ ಮಾಡಿದ ಕಾರಣ, ತಂದೆ ದೇವೇಗೌಡರ ಬೆತ್ತದ ರುಚಿ ನೋಡುವಂತಾಯಿತು. ಇದನ್ನು ಕಂಡು ಮರುಗಿದ ಶಿಕ್ಷಕರಾದ ವೆಂಕಟರಾವ್ ಅಯ್ಯಂಗರ್ ಮತ್ತು ಮುಖ್ಯ ಶಿಕ್ಷಕ ಎಚ್.ಕೆ. ವೀರಣ್ಣಗೌಡರು, ಬಾಲಕ ದೇಜಗೌ ಅವರ ಕಲಿಕಾಸಕ್ತಿಗೆ ಒತ್ತಾಸೆಯಾಗಿ ನಿಂತು ಓದಿಗೆ ನೆರವಾದರು.
ಚಕ್ಕರೆಯಲ್ಲಿ ಪ್ರಾಥಮಿಕ ಶಿಕ್ಷಣ, ಚನ್ನಪಟ್ಟಣದಲ್ಲಿ ಪ್ರೌಢಶಿಕ್ಷಣ ಮಾಡಿ, ಬೆಂಗಳೂರಿನಲ್ಲಿ ಇಂಟರ್ ಮೀಡಿಯೆಟ್ ಮುಗಿಸಿದರು. ಬಳಿಕ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಬಿ.ಎ. ಆನರ್ಸ್ ಮತ್ತು ಕನ್ನಡ ಸ್ನಾತಕೋತ್ತರ ಪದವಿ ಪಡೆದರು. ಕುವೆಂಪು, ಬಿ.ಎಂ.ಶ್ರೀ., ತ.ಸು. ಶಾಮರಾಯ, ಟಿ.ಎಸ್. ವೆಂಕಣ್ಣಯ್ಯ, ತೀ.ನಂ. ಶ್ರೀ. , ಎ.ಆರ್. ಕೃಷ್ಣಶಾಸ್ತ್ರಿ, ಡಿ.ಎಲ್. ನರಸಿಂಹಾಚಾರ್ ಅವರಂತಹ ಮಹಾಮೇಧಾವಿ ಗುರುಗಳ ಪಾಠ ಕೇಳುತ್ತ, ಅವರ ಗಾಢ ಪ್ರಭಾವಕ್ಕೆ ಒಳಗಾಗಿ ತಮ್ಮ ಉನ್ನತ ವಿದ್ಯಾಭ್ಯಾಸ ಮುಗಿಸಿದರು.
ವೃತ್ತಿ ಜೀವನ
೧೯೪೩ ರಲ್ಲಿ ಬೆಂಗಳೂರಿನ ಸಚಿವಾಲಯದಲ್ಲಿ ದೇಜಗೌ ಗುಮಾಸ್ತರಾಗಿ ನೌಕರಿಗೆ ಸೇರಿದರು. ಈ ನೌಕರಿಯ ಏಕತಾನತೆ ಮತ್ತು ಯಾಂತ್ರಿಕತೆ ಅವರ ಜೀವನೋತ್ಸಾಹ ಕುಗ್ಗಿಸಿತು. ಮೂರು ವರ್ಷಗಳ ಕಾಲ ಕೆಲಸ ಮಾಡಿದ ಬಳಿಕ ಹೊಸ ಹುದ್ದೆಗಾಗಿ ಮನ ಹಂಬಲಿಸಿತು. ಆಗ ಅವರ ಅದೃಷ್ಟಕ್ಕೆ ಎರಡು ಹುದ್ದೆಗಳ ಅವಕಾಶ ಒದಗಿ ಬಂತು. ಅವೇ ಕನ್ನಡ ಅಧ್ಯಾಪಕ ಮತ್ತು ಸಬ್ ರಿಜಿಸ್ಟ್ರಾರ್ ಹುದ್ದೆಗಳು. ಆಗ ದೇಜಗೌ ತಾವು ಸಬ್ ರಿಜಿಸ್ಟ್ರಾರ್ ಹುದ್ದೆಗೆ ಹೋದರೆ, ನಂಬಿದ ಮೌಲ್ಯಗಳ ಗಾಳಿಗೆ ತೂರಿ ಅಧಿಕಾರ ಸ್ಥಾನದ ಕಾರಣದಿಂದ ಲಂಚಕೋರನಾಗಬೇಕಾಗುತ್ತದೆ ಎಂದರಿತು, ಕನ್ನಡ ಅಧ್ಯಾಪಕ ಹುದ್ದೆ ಆಯ್ಕೆ ಮಾಡಿಕೊಂಡರು.
ಮುಂದೆ ೧೯೪೬ ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ದೇಜಗೌ ಅವರ ವೃತ್ತಿ ಬದುಕು ಶುರುವಾಯಿತು. ಅದಾಗಲೇ ಕುವೆಂಪು ಅವರ ಪಾಠ, ಸಾಹಿತ್ಯ, ಭಾಷಣದ ಅಗಾಧ ಪ್ರಭಾವಕ್ಕೆ ಒಳಗಾಗಿದ್ದ ಅವರು, ಮುಂದೆ ಕುವೆಂಪು ಅವರ ಆಹ್ವಾನದ ಮೇರೆಗೆ ಮೈಸೂರಿನ ಮಹಾರಾಜ ಕಾಲೇಜಿಗೆ ವರ್ಗವಾಗಿ ಬಂದರು. ಕುವೆಂಪು ಅವರ ಆಶೀರ್ವಾದದಿಂದ ೧೯೫೫ರಲ್ಲಿ ಉಪ ಪ್ರಾಧ್ಯಾಪಕ ಕೆಲಸದ ಜೊತೆಗೆ, ಪ್ರಕಟಣ ಶಾಖೆಯ ಒಪ್ಪೊತ್ತಿನ ಕಾರ್ಯದರ್ಶಿಯಾಗಿ ಮುಂದುವರಿದರು. ಈ ಪ್ರಕಟಣೆಯ ವಿಭಾಗವೇ ಮುಂದೆ ಕುವೆಂಪು ಅವರಿಂದ ‘ಪ್ರಸಾರಾಂಗ’ ಎಂದು ನಾಮಕರಣಗೊಂಡಿತು.
ಕಸಾಪದ ಕನ್ನಡ ನಿಘಂಟು ಯೋಜನೆ ಮತ್ತು ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಖಾಸಗಿ ಸಿಬ್ಬಂದಿ ಆಗುವ ಪ್ರಭಾವಶಾಲಿ ಹುದ್ದೆಯ ಆಹ್ವಾನ ಬಂದಾಗ, ತಮ್ಮ ಗುರು ಕುವೆಂಪು ಅವರು “ನನ್ನನು ಬಿಟ್ಟು ಹೋಗುವೆಯಾ…?” ಎಂದು ಕೇಳಿದಾಗ, ಭಾವುಕರಾದ ದೇಜಗೌ ಈ ಎರಡೂ ಆಹ್ವಾನಗಳ ವಿನಯಪೂರ್ವಕಗಿ ನಿರಾಕರಿಸಿ, ಕೊನೆಗೆ ಕುವೆಂಪು ಅವರ ಜೊತೆಗೆ ಉಳಿಯುತ್ತಾರೆ. ಇದು ಅವರ ಗುರು-ಶಿಷ್ಯ ಪರಂಪರೆಯ ಘನತೆಗೆ ಸಾಕ್ಷಿ.
ಕುವೆಂಪು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಮೇಲೆ ಆಡಳಿತ ಯಂತ್ರ ರಚನಾತ್ಮಕಗೊಳಿಸುವ ಭಾಗವಾಗಿ, ೨೯೫೬ ರಲ್ಲಿ ದೇಜಗೌ ಅವರನ್ನು ವಿವಿಯ ಪರೀಕ್ಷಾಧಿಕಾರಿಯಾಗಿ ನೇಮಿಸಿದರು. ತುಂಬ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಣೆ ಮಾಡಿ, ಪರೀಕ್ಷಾ ಸುಧಾರಣೆಗಳ ಜೊತೆಗೆ ಪರೀಕ್ಷಾ ಗೌಪ್ಯತೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತಂದರು. ಇದರಿಂದಾಗಿ ಪರೀಕ್ಷೆಗಳಲ್ಲಿ ಪಾರದರ್ಶಕತೆ ಸಾಧ್ಯವಾಯಿತು. ಮುದ್ರಣ ಮತ್ತು ಸ್ಟೇಷನರಿ ವಿಭಾಗವನ್ನೂ ತೆರೆದರು. ಈ ಮಧ್ಯೆ ನಡೆದ ಕೆಲವು ಪೂರ್ವಾಗ್ರಹ ಪೀಡಿತ ಮನಸ್ಸುಗಳಿಂದ ಅಹಿತಕರ ಘಟನೆಗಳು ನಡೆದ ಕಾರಣ, ೧೯೬೦ ರಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರಾಗಿ ತೆರಳಿದರು.
ವಿವಿಯಲ್ಲಿ ಬಲವಾಗಿ ಕನ್ನಡ ವಿಭಾಗ ಕಟ್ಟುವ ಭಾಗವಾಗಿ ದೇಜಗೌ ಅವರು ಪ್ರಾಚ್ಯ ಸಂಶೋಧನಾ ವಿಭಾಗದಲ್ಲಿನ ಸಂಪಾದನಾ ವಿಭಾಗ ಮತ್ತು ಕನ್ನಡ ಹಸ್ತಪ್ರತಿಗಳನ್ನು ಕನ್ನಡ ಅಧ್ಯಯನ ಸಂಸ್ಥೆಗೆ ತಂದರು. ಸಂಸ್ಥೆಯಲ್ಲಿ ಪಠ್ಯಪುಸ್ತಕ ನಿರ್ಮಾಣ ಮತ್ತು ಭಾಷಾಂತರ ವಿಭಾಗ, ಭಾಷಾಶಾಸ್ತ್ರ ಮತ್ತು ಜಾನಪದ ವಿಭಾಗಗಳನ್ನು ತೆರೆದರು. ತಮಗೆ ಬಂದ ಪ್ರಶಸ್ತಿಯ ಹಣದಿಂದ ’ಜಾನಪದ ವಸ್ತು ಸಂಗ್ರಹಾಲಯ’ ಸ್ಥಾಪಿಸಿ, ತಮ್ಮ ಶ್ರೀಮತಿಯವರ ಅಪರೂಪದ ಒಡವೆಗಳು ಮತ್ತು ಮನೆಯಲ್ಲಿನ ಅಮೂಲ್ಯವಾದ ವಸ್ತುಗಳನ್ನು ಈ ಸಂಗ್ರಹಾಲಯಕ್ಕೆ ನೀಡಿದ ದೇಜಗೌ ಉದಾರ ಹೃದಯವಂತಿಕೆಗೆ ಎಣೆಯಿಲ್ಲ. ಇದಕ್ಕೆ ಡಾ. ಜೀಶಂಪ ಹೆಗಲೆಣಿಯಾಗಿ ನಿಂತರು.
ಕುವೆಂಪು ಅವರು ಕಲಪತಿಯಾಗಿದ್ದ ಅವಧಿಯಲ್ಲಿ ಬೌದ್ಧಿಕವಾಗಿ ಬೆಳೆದಿದ್ದ ಮೈಸೂರು ವಿವಿ, ದೇಜಗೌ ಅವಧಿಯಲ್ಲಿ ಸರ್ವ ರೀತಿಯಲ್ಲೂ ಬೌದ್ಧಿಕ ಮತ್ತು ಭೌತಿಕ ಸಂಪನ್ನತೆಯಿಂದ ಬೆಳೆದು ದೇಶದ ಶ್ರೇಷ್ಠ ವಿಶ್ವವಿದ್ಯಾನಿಲಯವಾಯಿತು. ದೇಜಗೌ ಅವರಲ್ಲಿ ಅಖಂಡ ಕನ್ನಡ ಪ್ರೇಮಿ, ದಕ್ಷ ಆಡಳಿತಗಾರ, ಶಿಕ್ಷಣ ತಜ್ಞ, ಪಾಂಡಿತ್ಯಪೂರ್ಣ ಘನ ವಿದ್ವಾಂಸ, ಸೃಜನಶೀಲ ಸಾಹಿತಿ ಹುದುಗಿದ್ದ ಪರಿಣಾಮವಾಗಿ ವಿವಿಯ ಪ್ರಗತಿ ಔನ್ನತ್ಯ ಸಾಧಿಸಿತು. ಆಡಳಿತದಲ್ಲಿ ದಕ್ಷತೆ, ಪಾರದರ್ಶಕತೆ, ಕ್ರಿಯಾಶೀಲತೆ ತಂದರು. ವಿವಿಯ ಆಡಳಿತದಲ್ಲಿ ‘ಕನ್ನಡಮಯ’ ವಾಯಿತು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಮಸ್ಯೆ ಬಗೆಹರಿಸಿದರು. ತೋಟಗಾರಿಕಾ ಇಲಾಖೆಯ ಕಾರ್ಯಕ್ಷಮತೆಯ ಚುರುಕುಗೊಳಿಸಿ ಗಂಗೋತ್ರಿಯ ‘ಹಸಿರೀಕರಣ’ಗೊಳಿಸಿದರು. ಲಲಿತಾ ಕಲಾ ಕಾಲೇಜು ತೆರೆದರು. ಬೃಹತ್ ಮುದ್ರಾಣಾಲಯ ಆರಂಭಿಸಿದರು.
.ಸಾಹಿತ್ಯ ಕೃಷಿ
ಕನ್ನಡ ಸಾರಸ್ವತ ಲೋಕದ ದೈತ್ಯ ಪ್ರತಿಭಾಶಾಲಿ ಘನ ವಿದ್ವಾಂಸರು ದೇಜಗೌ. ‘ಗದ್ಯ ಶಿಲ್ಪಿ’ ಮತ್ತು ‘ಗದ್ಯಬ್ರಹ್ಮ’ ಎಂದೇ ಖ್ಯಾತರಾದ ಇವರ ವಿಚಾರಶೀಲ ಸೊಗಸಾದ ಗದ್ಯ ಬರಹ ಶೈಲಿ ಅನನ್ಯ. ಸಹೃದಯರ ಮನಸೆಳೆದು ಓದಿಸಿಕೊಳ್ಳುವ ಗುಣ ಅವರ ಅನುಭವ ಜನ್ಯವಾದ ಬರವಣಿಗೆಗೆ ಒಲಿದಿದೆ. ಸಾಹಿತ್ಯದ ಬಹುಮುಖಿ ಪ್ರಕಾರದಲ್ಲಿಯೂ ಕೃಷಿ ಮಾಡಿರುವ ದೇಜಗೌ ಅವರ ಕೃತಿಗಳು ಮುನ್ನೂರಕ್ಕೂ ಅಧಿಕ.
‘ನೆನಪು ಕಹಿಯಲ್ಲ’ ಅವರ ಮೊದಲ ಕೃತಿ. ಯುದ್ಧ ಮತ್ತು ಶಾಂತಿ, ಹಮ್ಮು-ಬಿಮ್ಮು, ಅನ್ನಾಕರೆನಿನಾ, ರಾಮಾಯಣ ದರ್ಶನಂ ವಚನ ಚಂದ್ರಿಕೆ, ಬಸವ ಬೆಳಕು, ಸಾಹಿತಿಗಳ ಸಂಗದಲ್ಲಿ, ಇಣುಕು ನೋಟ, ಕುವೆಂಪು ದರ್ಶನ ಮತ್ತು ಸಂದೇಶ, ಕುವೆಂಪು ಸಾಹಿತ್ಯ – ಕೆಲವು ಅಧ್ಯಯನಗಳು, ಕುವೆಂಪು ಅವರ ಕೊನೆಯ ದಿನಗಳು, ಯುಗದ ಕವಿಗೆ ನಮನ, ವಚನಗಳಲ್ಲಿ ವೈಚಾರಿಕತೆ, ಶರಣ ಪಥ, ತೆನೆ- ಕೆನೆ, ಬೆರೆಕೆ ಸೊಪ್ಪು, ಚಿಂತನ ತರಂಗ, ಕುವೆಂಪು ಮತ್ತು ವಿಭೂತಿ ಪುರುಷರು, ಲೋಕದರ್ಪಣ, ಕ್ರಾಂತಿಕಾರಿ ಡಾ.ಬಿ.ಆರ್. ಅಂಬೇಡ್ಕರ್, ಕಡುಗಲಿ ಕುಮಾರ ರಾಮ, ಪ್ರವಾಸಿಯ ದಿನಚರಿ, ಯೇಸು ವಿಭೀಷಣರ ನಾಡಿನಲ್ಲಿ, ಆಫ್ರಿಕಾ ಯಾತ್ರೆ, ತಿರುಗೇಟು, ವಿಷವೃಕ್ಷ, ಜಾನಪದ ಸೌಂದರ್ಯ, ಜಾನಪದ ವಾಹಿನಿ, ಜಾನಪದ ಗೀತಾಂಜಲಿ, ಜಾನಪದ ಅಧ್ಯಯನ, ಕನ್ನಡಕ್ಕಾಗಿ ಕೈಯೆತ್ತು, ಕನ್ನಡಿಗರೆ ಎಚ್ಚರಗೊಳ್ಳಿ, ಬೆಂಗಳೂರು ಕೆಂಪೇಗೌಡ, ‘ಮುನ್ನುಡಿ’ಗಳ ಮೂರು ಬೃಹತ್ ಸಂಪುಟ, ಸಾಹಿತ್ಯ ಮಾರ್ಗ, ಕುಲಪತಿಯ ದಿನಚರಿ, ಸುತ್ತೂರ ಬೆಳದಿಂಗಳು, ಸಾಹಿತ್ಯ ಯಾತ್ರೆ, ಸತ್ಯವಂತರಿಗಿದು ಕಾಲವಲ್ಲ, ಅಮೆರಿಕ ಗಾಂಧಿ, ಲೋಕನಾಯಕ, ವಿಚಾರವಾದಿ ಪೆರಿಯಾರ್, ಮಕ್ಕಳ ಏಕಲವ್ಯ, ಮಕ್ಕಳ ಶೂದ್ರ ತಪಸ್ವಿ, ನಮ್ಮ ನೆಹರು ಇತ್ಯಾದಿ ಕೃತಿರತ್ನಗಳು ದೇಜಗೌ ಅವರ ಲೇಖನಿಯಿಂದ ರೂಪುಗೊಂಡಿವೆ. ‘ಹೋರಾಟದ ಬದುಕು’ ಇವರ ಮಹತ್ವದ ಆತ್ಮಕಥೆ.
ನಾಡು-ನುಡಿ ಉಳಿವಿಗಾಗಿ ಹೋರಾಟ
ದೇಜಗೌ ಒಬ್ಬ ಅಪ್ರತಿಮ ಕೆಚ್ಚೆದೆಯ ಕನ್ನಡ ಅತ್ಯುಗ್ರ ಹೋರಾಟಗಾರರು. “ಕನ್ನಡಕ್ಕೆ ಕೈಯೆತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ” ಎಂಬ ಕುವೆಂಪು ಅವರ ಮಾತಿಗೆ ಕಟಿಬದ್ಧರಾಗಿ ನಾಡು ಮತ್ತು ನುಡಿಗಾಗಿ ಹೋರಾಟ ಮಾಡಿದ ದೇಜಗೌ ಎಂದೂ ಸ್ಥಾವರ ಸಾಹಿತಿಯಾಗಷ್ಟೇ ಉಳಿಯಲಿಲ್ಲ. ಪ್ರಖರ ಜಂಗಮಶೀಲ ಸಾಹಿತಿ ಮತ್ತು ಕನ್ನಡ ಸೇನಾನಿಯಾಗಿ ವಿರಮಿಸದೆ ಸಮಗ್ರವಾಗಿ ಕನ್ನಡ ಕಟ್ಟಿದರು. ಕನ್ನಡವನ್ನೇ ಅನುಗಾಲವೂ ಉಸಿರಾಡುತ್ತಿದ್ದ ಅವರದ್ದು ಉಗ್ರ ಹೋರಾಟದ ಸ್ವರೂಪ. ಗುರಿ ತಲುಪುವ ವರೆಗೂ ರಾಜೀಯ ಪ್ರಶ್ನೆಯೇ ಇಲ್ಲ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನ ದೊರಕಿಸಿಕೊಡಲು ಇಳಿವಯಸ್ಸಿನಲ್ಲಿ ಐದು ಬಾರಿ ಉಪವಾಸ ಸತ್ಯಾಗ್ರಹ ಮಾಡಿದ ಕನ್ನಡ ಕಟ್ಟಾಳು. ಆಡಳಿತದಲ್ಲಿ ಕನ್ನಡ ಕಡ್ಡಾಯ ಜಾರಿಯಾಗಲು ಶ್ರಮಿಸಿದವರು. “ಶಿಕ್ಷಣ ಮಾಧ್ಯಮ ಕನ್ನಡವೇ ಆಗಬೇಕು” ಎಂದು ಪ್ರತಿಪಾದಿಸಿ ನಿರಂತರ ಹೋರಾಟ ಮಾಡಿದ ‘ಕನ್ನಡ ಭೀಷ್ಮ’ ದೇಜಗೌ.
ಗೌರವ ಸಮ್ಮಾನಗಳು
ನೇರ, ನಿಷ್ಠುರ, ದಿಟ್ಟ ನಡೆ ಮತ್ತು ನುಡಿಯ ‘ಕನ್ನಡ ಕಾಯಕ ಯೋಗಿ’ ದೇಜಗೌ ಅವರ ಅದ್ವೀತಿಯ ಸೇವೆ ಮತ್ತು ಸಾಧನೆಗಾಗಿ ಸಂದಾಯವಾದ ಪ್ರಶಸ್ತಿಗಳು ಅಪಾರ. ಭಾರತ ಸರ್ಕಾರದ ಪ್ರತಿಷ್ಠಿತ ‘ಪದ್ಮಶ್ರೀ ಪ್ರಶಸ್ತಿ’, ಕರ್ನಾಟಕ ಸರ್ಕಾರದ ಶ್ರೇಷ್ಠ ಪ್ರಶಸ್ತಿಯಾದ ‘ಕರ್ನಾಟಕ ರತ್ನ ಪ್ರಶಸ್ತಿ’, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕುವೆಂಪು ಭಾಷಾ ಪ್ರಾಧಿಕಾರದ ಗೌರವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಬಸವ ರಾಷ್ಟ್ರೀಯ ಪುರಸ್ಕಾರ, ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ ಸೇರಿದಂತೆ ‘ಕನ್ನಡದ ಜ್ಞಾನಪೀಠ ಪ್ರಶಸ್ತಿ’ ಎಂದೇ ಕರೆಯಲ್ಪಡುವ ಕನ್ನಡ ಸಾಹಿತ್ಯ ಪರಿಷತ್ತಿನ ಅಗ್ರ ಪ್ರಶಸ್ತಿಯಾದ ಮೊಟ್ಟಮೊದಲ ‘ನೃಪತುಂಗ ಪ್ರಶಸ್ತಿ’ ದೇಜಗೌ ಅವರಿಗೆ ಲಭಿಸಿವೆ. ಮೈಸೂರು ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿವೆ. ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ‘ನಾಡೋಜ’ ಗೌರವ ಕೂಡ ದೇಜಗೌ ಅವರ ಮುಡಿಗೇರಿದೆ.
ಕನ್ನಡದಲ್ಲಿ ಈವರೆಗೆ ಯಾವ ಸಾಹಿತಿಗೂ ಅರ್ಪಣೆಯಾಗದಷ್ಟು ‘ಅಭಿನಂದನ ಗ್ರಂಥಗಳು’ ದೇಜಗೌ ಅವರಿಗೆ ಅರ್ಪಣೆಯಾಗಿರುವುದು ವಿಶೇಷ.
ಕನ್ನಡ ನಾಡು ಕಂಡ ಇಂತಹ ಸಾಹಿತ್ಯ ಮತ್ತು ಸಾಂಸ್ಕೃತಿಕ ದಿಗ್ಗಜರೂ ಅಸೀಮಾ ದೈತ್ಯ ಪ್ರತಿಭಾಸಂಪನ್ನಶೀಲರೂ ಮಹಾಮೇಧಾವಿ ವಿದ್ವಾಂಸರೂ ಆದಂತಹ ನಾಡೋಜ ಡಾ. ದೇಜಗೌ ಅವರ ಹುಟ್ಟೂರಿನಲ್ಲಿ ಜನಿಸಿರುವುದು ನನ್ನ ಪುಣ್ಯ. ನನ್ನ ಜೀವನ, ವೃತ್ತಿ , ಸಾಹಿತ್ಯ ಮತ್ತು ಸಂಘಟನೆಯ ಮೇಲೆ ಅವರ ಪ್ರಭಾವ ವರ್ಣನಾತೀತ. ನನ್ನ ‘ಮಾನಸಿಕ ಗುರು’ ದೇಜಗೌ. ಕನ್ನಡ ಕಟ್ಟುವ ನನ್ನ ಬದ್ದತೆಗೆ ಅವರೇ ಮಹಾಮಾರ್ಗ.
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ