ಗರಿಗೆದರಿದ ಸಂಪುಟ ವಿಸ್ತರಣೆ ಪ್ರಕ್ರಿಯೆ; ನಾಳೆ ದೆಹಲಿಗೆ ಸಿಎಂ

Team Newsnap
1 Min Read

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಅಂತೂ ಕಾಲ ಕೂಡಿ ಬಂದಂತೆ ಕಾಣುತ್ತಿದೆ. ನಾಳೆ 11. 30 ಕ್ಕೆ ಸಿಎಂ ಬಿ.ಎಸ್.‌ ಯಡಿಯೂರಪ್ಪ ದೆಹಲಿಗೆ ತೆರಳುತ್ತಿದ್ದಾರೆ. ಹೈಕಮಾಂಡ್‌ ಜೊತೆ ಚರ್ಚಿಸಿ ಸಂಪುಟ ವಿಸ್ತರಣೆಗೆ ಗ್ರೀನ್‌ ಸಿಗ್ನಲ್‌ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಆರ್‌ಆರ್‌ ನಗರ ಹಾಗೂ ಶಿರಾ ಉಪ ಚುನಾವಣೆ ಫಲಿತಾಂಶದ ಬೆನ್ನಲ್ಲಿಯೇ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಸಚಿವ ಸ್ಥಾನದ ಆಕಾಂಕ್ಷಿಗಳ ಲಾಬಿ ಜೋರಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ವಿಮಾನದ ಮೂಲಕ ನಾಳೆ ದೆಹಲಿಗೆ ತೆರಳಲಿರುವ ಸಿಎಂ ಯಡಿಯೂರಪ್ಪ, ಸಚಿವ ಸಂಪುಟ ವಿಸ್ತರಣೆ ಕುರಿತು ವರಿಷ್ಠರ ಜೊತೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಸಿಎಂ ದೆಹಲಿ ಪ್ರವಾಸದ ಹಿನ್ನೆಲೆ ನಾಳೆ ಬೆಳಗ್ಗೆ 11.30ಕ್ಕೆ ನಿಗದಿಯಾಗಿದ್ದ ಸಚಿವ ಸಂಪುಟ ಸಭೆಯನ್ನು 10.30ಕ್ಕೆ ಹಿಂದೂಡಿದ್ದು, 11 ಗಂಟೆಗೆ ದಿಲ್ಲಿ ಕಡೆ ಸಿಎಂ ಬಿಎಸ್‌ವೈ ಪ್ರಯಾಣಿಸಲಿದ್ದಾರೆ. ಬಿಹಾರದಲ್ಲಿ ಸರ್ಕಾರ ರಚನೆ ಮಾಡುವುದರಲ್ಲಿ ಕೇಂದ್ರ ನಾಯಕರು ಬ್ಯುಸಿಯಾಗಿದ್ದರು. ಈ ಹಿನ್ನೆಲೆ ಕೇಂದ್ರೀಯ ನಾಯಕರ ಭೇಟಿ ಸ್ವಲ್ಪ ತಡವಾಗಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಸಹಾಯ ಮಾಡಿದ್ದ ಪರಿಷತ್‌ ಸದಸ್ಯರಾದ ಎಂಟಿಬಿ ನಾಗರಾಜ್, ಎಚ್ ವಿಶ್ವನಾಥ್ ಹಾಗೂ ಆರ್. ಶಂಕರ್ ಅವರು ಸಚಿವ ಸ್ಥಾನದ ರೇಸ್ ನಲ್ಲಿದ್ದಾರೆ. ಹಾಗೆಯೇ ಆರ್‌ಆರ್ ನಗರ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮುನಿರತ್ನ ಅವರಿಗೂ ಸಚಿವ ಸ್ಥಾನ ನೀಡುವುದಾಗಿ ಸಿಎಂ ಬಿಎಸ್ ವೈ ಈಗಾಗಲೇ ಘೋಷಿಸಲಾಗಿದೆ. ಯಾರು ಇನ್‌..? ಯಾರು ಔಟ್‌ ಎಂಬುದು ಕುತೂಹಲ ಮೂಡಿಸಿದೆ.

ಈ ಬಾರಿ ದೊಡ್ಡ ಮಟ್ಟದ ಬದಲಾವಣೆಯ ಇಚ್ಛೆ ಇರುವುದಾಗಿ ಉಪ ಚುನಾವಣೆ ಫಲಿತಾಂಶದ ಬಳಿಕ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದರು. ಅಂದರೆ ಸಂಪುಟ ಪುನರ್‌ರಚನೆಗೆ ಬಿಎಸ್‌ವೈ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಚಾರದಲ್ಲಿ ವರಿಷ್ಠರ ಮನಸ್ಸಿನಲ್ಲಿ ಏನಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಹಾಗಾಗಿ ನಾಳೆ ಸಿಎಂ ಹೈಕಮಾಂಡ್‌ ಜೊತೆ ಚರ್ಚಿಸಿದ ಬಳಿಕವೇ ಸಂಪುಟ ವಿಸ್ತರಣೆಯೋ, ಪುನರ್‌ರಚನೆಯೋ ಎನ್ನುವುದು ಖಚಿತವಾಗಲಿದೆ.

TAGGED:
Share This Article
Leave a comment