December 22, 2024

Newsnap Kannada

The World at your finger tips!

karnataka flag

ಕನ್ನಡ ಸಾಹಿತ್ಯ – ಪರಂಪರೆ: ಭಾಗ- 13

Spread the love

ತಮಿಳು ಕನ್ನಡದ ಮಧುರ ಸೇತುವೆ ಪಾ.ಶ. ಶ್ರೀನಿವಾಸ

IMG 20190915 WA0000
ಪಾ.ಶ. ಶ್ರೀನಿವಾಸ

​“ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ಕುವೆಂಪು ರವರ ಕವಿವಾಣಿಯನ್ನು ನಿಜವಾಗಿಸಿದವರು ಕನ್ನಡ ಸಾಹಿತ್ಯ ಹಾಗೂ ವಿದ್ವತ್ ಲೋಕದಲ್ಲಿ ಖ್ಯಾತರಾಗಿದ್ದ ಪಾ.ಶ. ಶ್ರೀನಿವಾಸರು, ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ್ದರೂ ಬಾಲ್ಯ ಹಾಗೂ ವಿದ್ಯಾಭ್ಯಾಸವನ್ನು ನಡೆಸಿದ್ದು ಸಕ್ಕರೆ ನಾಡಾದ ಮಂಡ್ಯದಲ್ಲಿ. ಆದರೆ ಕಾಯಕದ ಕ್ಷೇತ್ರವಾಗಿ ಇವರಿಗೆ ಒಲಿದು ಬಂದದ್ದು ತಮಿಳರ ಸಾಂಸ್ಕೃತಿಕ ನಗರಿಯಾದ ಮಧುರೈ. ಐದು ದಶಕಗಳ ಕಾಲ ತಮಿಳುನಾಡಿನಲ್ಲಿ ನೆಲೆ ನಿಂತು ಹೊರನಾಡಿನಲ್ಲಿ ಕನ್ನಡ ಕಟ್ಟಬೇಕೆಂಬ ಮನಸ್ಸುಳ್ಳವರಿಗೆ ಇವರು ಮಾದರಿಯಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಅದರಲ್ಲೂ ಅನುವಾದ ಸಾಹಿತ್ಯಕ್ಕೆ ಇವರು ನೀಡಿದ ಕೊಡುಗೆ ಅನನ್ಯ. ಅವರ ಈಚಿನ ಅಗಲಿಕೆಯಿಂದ ತಮಿಳು ಕನ್ನಡ ಸಾಹಿತ್ಯ ಕೊಂಡಿಯೊಂದು ಕಳಚಿದಂತಾಗಿದೆ.

​ಪಾ.ಶ. ಶ್ರೀನಿವಾಸರು ತಮ್ಮ ಎಳೆಯ ವಿದ್ಯಾರ್ಥಿ ಜೀವನದಲ್ಲೇ ಮಂಡ್ಯದ ‘ಕಿರಣ ಸಾಹಿತ್ಯ ಸಂಘ’ ದ ಸಕ್ರಿಯ ಸದಸ್ಯರಾಗಿದ್ದು, ‘ಜನ್ಮಭೂಮಿ’ ಎಂಬ ಹಸ್ತಪತ್ರಿಕೆಯ ಸಂಪಾದಕರಾಗಿದ್ದರು. ಮೈಸೂರಿನ ಮಾನಸಗಂಗೋತ್ರಿಯ ಕನ್ನಡ ಎಂ.ಎ. ತರಗತಿಗಳಲ್ಲಿರುವಾಗಲೇ ವಿದ್ವತ್‍ಪೂರ್ಣ ಲೇಖನಗಳನ್ನು ಬರೆದು ಅಂದಿನ ಹಿರಿಯ ಸಾಹಿತಿಗಳ ವೆಚ್ಚುಗೆ ಪಡೆದಿದ್ದರು. ಅ.ರಾ. ಮಿತ್ರ, ಹಂಪನಾಗರಾಜಯ್ಯ, ಎಂ.ಎಚ್. ಕೃಷ್ಣಯ್ಯ, ಲಕ್ಷ್ಮಿನಾರಾಯಣ ಭಟ್ಟಿ, ಕಮಲಾ ಹಂಪನಾ ಮುಂತಾದವರು ಇವರ ಸಹಪಾಠಿಗಳಾಗಿದ್ದರು. ಅರವತ್ತು ವರ್ಷಗಳ ಹಿಂದೆ ವೃತ್ತಿ ಬದುಕಿಗಾಗಿ ಮದ್ರಾಸ್ ಸೇರಿ ಅಲ್ಲಿನ ‘ದಕ್ಷಿಣ ಭಾಷಾ ಪುಸ್ತಕ ಸಂಸ್ಥೆ’ಯ ಸಂಪಾದಕರಾಗಿ ಐದು ವರ್ಷ ಕಾರ್ಯನಿರ್ವಹಿಸಿದರು. ಇದರಿಂದ ಸೋದರ ಭಾಷೆಗಳ ಸಂಪರ್ಕ ಲಭಿಸಿ ತೌಲನಿಕ ಅಧ್ಯಯನಕ್ಕೆ ಒಗ್ಗಿ ಹೋದರು. 1964 ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕಾರಾಗಿ ಆಯ್ಕೆಯಾಗಿ 8 ವರ್ಷಗಳ ಕಾಲ ಮದ್ರಾಸ್‍ನ ಕನ್ನಡ ಪರ ಚಟುಪಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು. ಶರಣ ಹಾಗೂ ದಾಸ ಸಾಹಿತ್ಯದ ತೌಲನಿಕ ಅಧ್ಯಯನವನ್ನು ಇಂಗ್ಲೀಷ್‍ನಲ್ಲಿ ಬರೆದು ಪಿ.ಹೆಚ್.ಡಿ ಮದ್ರಾಸ್ ವಿಶ್ವವಿದ್ಯಾಲಯದ ಪದವಿಗಳಿಸಿದರು.

​1972ರಲ್ಲಿ ಮಧುರೈ ಕಾಮರಾಜ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗ ಪ್ರಾರಂಭವಾದಾಗ ಅದರ ಮುಖ್ಯಸ್ಥರಾಗಿ ನೇಮಕಗೊಂಡ ಶ್ರೀನಿವಾಸರು 3 ದಶಕಗಳ ಕಾಲ ಮಧುರೈಯಲ್ಲಿ ನೆಲೆಸಿ ಕನ್ನಡ ಹಾಗೂ ತಮಿಳು ಸಾಹಿತ್ಯ ಸೇತುವೆಯಾಗಿ ನಿರಂತರವಾಗಿ ಸಾಹಿತ್ಯ ಸೇವೆ ನಡೆಸಿದರು. ಪಾ.ಶ. ಶ್ರೀನಿವಾಸರ ಕಾರ್ಯನಿಷ್ಠೆ, ಅಧ್ಯಯನಾಸಕ್ತಿ, ಹೊರನಾಡಿನಲ್ಲಿ ಕನ್ನಡವನ್ನು ಬೆಳೆಸಬೇಕೆಂಬ ಸಂಕಲ್ಪ, ಬೇರೆ ಭಾಷೆಯ ವಿದ್ವಾಂಸರೊಂದಿಗಿನ ಸುಮಧುರ ಸಂಬಂಧ ಮುಂತಾದವುಗಳಿಂದಾಗಿ ಮಧುರೈ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಸದೃಢವಾಗಿ ಬೆಳೆಯಿತು. ತಮಿಳುನಾಡಿನ ಶ್ರೇಷ್ಠ ವಿದ್ವಾಂಸರುಗಳಾದ ಡಾ.ಮೀನಾಕ್ಷಿಸುಂದರಂ, ಡಾ. ಟಿ.ಬಿ. ಸಿದ್ದಲಿಂಗಯ್ಯ ಮುದಮಾರಿ ಜಗನ್ನಾಥರಾಜು, ಸುಂದರಮೂರ್ತಿ, ಟಿ. ಕೋದಂಡರಾಮಯ್ಯ ಮುಂತಾದವರು ಇವರ ಒಡನಾಡಿಗಳಾಗಿದ್ದು ತೌಲನಿಕ ಅಧ್ಯಯನ ಹಾಗೂ ಅನುವಾದ ಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳಾದವು. ಇವರು ಮಾಡಿದ “ತಿರು ಕುರುಳ್”ನ ಸಮಗ್ರ ಅನುವಾದವು ಕನ್ನಡ ಭಾಷಾಂತರ ಕ್ಷೇತ್ರದಲ್ಲಿ ಅದ್ವೀತಿಯವಾದದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಈ ಕೃತಿಗೆ ಲಭಿಸಿದೆ. ಹೊರನಾಡಿನ ವಿಶ್ವವಿದ್ಯಾಲಯವೊಂದು ಈ ಕನ್ನಡ ಕೃತಿಯನ್ನು ಪ್ರಕಟಿಸಿರುವುದು ಈ ಪುಸ್ತಕದ ಹೆಚ್ಚುಗಾರಿಕೆಯಾಗಿದೆ. ಇವತ್ತಿಗೂ ತಮಿಳರು ಶ್ರೀನಿವಾಸರ ಈ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಾರೆ. ತಮಿಳರ ಪಾಲಿಗೆ “ತಿರುವಳ್ಳುವರ್” ಎಂದರೆ ದೇವರ ಸಮಾನ ಪಾ.ಶ. ಶ್ರೀನಿವಾಸರು ಕನ್ನಡದಲ್ಲಿ ಅವರ ಬಗ್ಗೆ ಕೃತಿಯನ್ನು ರಚಿಸಿದ್ದಾರೆ. ಅಸಂಖ್ಯ ಶಿಷ್ಯರಿಗೆ ಮಾರ್ಗದರ್ಶಕರಾಗಿ ಕನ್ನಡದಲ್ಲಿ ಉತ್ತಮ ಪ್ರೌಢ ಪ್ರಬಂಧಗಳು ರಚನೆಯಾಗಲು ಕಾರಣರಾಗಿದ್ದಾರೆ. ಇವರ “ಸಾಹಿತ್ಯ ಕಾವೇರಿ” ಕನ್ನಡ ತಮಿಳು ಸಾಹಿತ್ಯ ಸಂಬಂಧದ ಕುರಿತಾದ ವಿದ್ವತ್‍ಪೂರ್ಣ ಲೇಖನಗಳ ಸಂಕಲನವಾಗಿದ್ದು ಪೌಢ ಅಧ್ಯಯಶೀಲ ಕೃತಿಯಾಗಿದೆ.

​ಡಾ.ಪಾ.ಶ. ಶ್ರೀನಿವಾಸರ ಇನ್ನೊಂದು ಸಾಧನೆಯೆಂದರೆ ಮಧುರೈಯಲ್ಲಿ ‘ಕರ್ನಾಟಕ ಸಂಘ’ ವನ್ನು ಬೆಳೆಸಿದ್ದು ‘ಸಾಕಷ್ಟು ಕಾಲ ಆ ಸಂಘಕ್ಕೆ ಇವರೇ ಅಧ್ಯಕ್ಷರಾಗಿದ್ದರು. ಡಾ. ಶಿವರಾಮಕಾರಂತ, ಡಾ.ಜಿ.ಎಸ್. ಶಿವರುದ್ರಪ್ಪ, ಡಾ. ಚಿದಾನಂದ ಮೂರ್ತಿ, ಡಾ. ಹಂಪನಾ, ಡಾ.ಕೆ.ಎಂ.ಕೃಷ್ಣರಾವ್ ಮುಂತಾದ ಶ್ರೇಷ್ಠ ಕನ್ನಡ ಸಾಹಿತಿಗಳನ್ನು, ವಿದ್ವಾಂಸರನ್ನು ಮಧುರೈಗೆ ಕರೆಸಿ ಅಲ್ಲಿನವರಿಗೆ ಕನ್ನಡ ಸಂಸ್ಕೃತಿಯ ಸವಿಯನ್ನು ಪರಿಚಯಿಸಿದರು. 1986ರಲ್ಲಿ ಕರ್ನಾಟಕ ಸಂಘದ ಬೆಳ್ಳಿ ಹಬ್ಬವನ್ನು ಮೂರು ದಿನಗಳ ಕಾಲ ಆಚರಿಸಿ ತಮಿಳು ಕನ್ನಡ ಬಾಂಧವ್ಯಗಳಿಗೆ ಸಂಬಂಧಿಸಿದ ಗೋಷ್ಠಿಗಳನ್ನು ಏರ್ಪಡಿಸಿದರು. ನಿವೃತ್ತಿಯ ನಂತರವೂ ತಮಿಳುನಾಡಿನಲ್ಲೇ ಇದ್ದು ಕನ್ನಡ-ತಮಿಳು ದ್ವಿಭಾಷಾ ನಿಘಂಟನ್ನು ರಚಿಸುವಲ್ಲಿ ಸಕ್ರಿಯರಾದರು. ಇದರಲ್ಲಿ 40000 ಕ್ಕೂ ಹೆಚ್ಚು ಪದಸಂಗ್ರಹವಿದ್ದು ತಮಿಳು ಕನ್ನಡ ಅನುವಾದಕರಿಗೆ ಇದೊಂದು ಮಾದರಿಯ ಉತ್ಕøಷ್ಟ ಆಧಾರ ಗ್ರಂಥವಾಗಿದೆ. ಆದ್ದರಿಂದಿಲೇ ತಮಿಳು ಶಾಸ್ತ್ರೀಯ ಭಾಷಾ ಪ್ರಾಧಿಕಾರದ ಯೋಜನೆಯಾದ “ಸಂಗಂ ಸಾಹಿತ್ಯ”ದ ಕನ್ನಡ ಅನುವಾದ ಕಾರ್ಯಗಳಿಗೆ ಇವರು ಮಾರ್ಗದರ್ಶಕರಾಗುವಂತಾದರು. ‘ಕಾವ್ಯಾನುಶೀಲನ’ ಎಂಬ ವಿಮರ್ಶಾ ಕೃತಿ” ‘ಹೆಜ್ಜೆ ಗುರುತು’ ಎಂಬ ಲೇಖನಗಳ ಸಂಕಲನ, ‘ಚಿತ್ತಾರ’ ಎಂಬ ಸಣ್ಣಕತೆಗಳ ಸಂಗ್ರಹ “ಸಾರೂಪ್ಯ” ಎಂಬ ಅಧ್ಯಯನಪೂರ್ಣ ಪ್ರಬಂಧಗಳ ಸಂಕಲನ, ಅನೇಕ ತಮಿಳು ಅನುವಾದ ಕೃತಿಗಳು ಹೇಗೆ ಒಟ್ಟು 27ಕ್ಕೂ ಹೆಚ್ಚು ಕೃತಿಗಳನ್ನು ಡಾ. ಪಾ.ಶ. ಶ್ರೀನಿವಾಸರು ರಚಿಸಿದ್ದು ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ.

​ಡಾ. ಪಾ.ಶ. ಶ್ರೀನಿವಾಸ ಹಾಗೂ ಶ್ರೀಮತಿ ಸುಶೀಲ ದಂಪತಿಗಳದ್ದು ಅನುರೂಪದಾಂಪತ್ಯ ಅತಿಥಿ ಸತ್ಕಾರಕ್ಕೆ ಹೇಳಿ ಮಾಡಿಸಿದ ಕುಟುಂಬ. ಕನ್ನಡದ ಹಿರಿಯ ಸಾಹಿತಿಗಳು, ಕನ್ನಡ ವಿದ್ಯಾರ್ಥಿಗಳು ಚೆನೈ ಹಾಗೂ ಮಧುರೈಗೆ ಬರುವ ಕರ್ನಾಟಕದ ಅತಿಥಿಗಳು ಅವರ ಆಪ್ತ ಹಾಗೂ ಪ್ರೀತಿಯ ಸತ್ಕಾರವನ್ನು ಸವಿದಿದ್ದಾರೆ.

01
ಡಾ.ಆನಂದರಾಮಉಪಾಧ್ಯ
ಆವಲಹಳ್ಳಿ ಬೆಂಗಳೂರು
Copyright © All rights reserved Newsnap | Newsever by AF themes.
error: Content is protected !!