ನನ್ನ ಮಾನವನಾಗಿ ಮಾಡಿದೆಡರೂ ತೊಡರೆ
ದುಃಖ ದುಮ್ಮಾನಗಳೆ ನಿಮಗೆ ಶರಣು..!
ಕಾಡೆದೆಯ ಕಲ್ಲೊಳಗೆ ಮನುಜತೆಯ ಶಿಲ್ಪವನು
ಕಟೆದರಳಿಸಿದ ಕಷ್ಟದುಳಿಯೆ ಶರಣು..!
ದಿನವೊಂದು ಹೆದರಿಕೆಯ ಮೆಟ್ಟಿಹಾಕಲು ಕಲಿಸಿ
ಬದುಕ ಪಾಠವನೊರೆದ ಹಸಿವೆ ಶರಣು..!
ಸಂಘರ್ಷಗಳ ಸತತ ಜೀವನದಿ ತಂದಿರಿಸಿ
ತುಕ್ಕಿಸದೆ ಸವೆಸಿರುವ ವಿಧಿಯೆ ಶರಣು..!
ಕೈದೀಪವಾದೆನಗೆ ಬೆಲೆ ತಂದ ಕಾರಿರುಳೆ
ತಾರೆಗಳ ತೋರಿರುವ ನಿನಗೆ ಶರಣು..!
ಪರಮಾತ್ಮಗೂ ಮೊದಲು ಪಕ್ಕದಾತ್ಮನ ಬಳಿಗೆ
ಸಾಗೆಂದು ಸೂಚಿಸಿದ ಒಳಿತೆ ಶರಣು..!
ಆತ್ಮಶೋಧನೆಯಲ್ಲಿ ಅಡಿಗಲ್ಲಿನೊಲು ಸಂದ
ಸಂಕಟದ ಸಮಯವೇ ನಿನಗೆ ಶರಣು..!
ಪೀಡಿಸುವರಿರದಿರಲು ಹಾರ ಮರೆವುದು ಹಕ್ಕಿ
ಮುಗಿಲೇರಿಸಿದ ಹಗೆಗೆ ನಿರುತ ಶರಣು..!
ಅವಮಾನ ಸಂದೇಹ ಸೋಲು ಖಿನ್ನತೆ ಕೊಳೆಯ
ಕೊಡವಿ ತೊಳೆದ ಶ್ರಮದ ಬೆವರೆ ಶರಣು..!
ವೇದನೆಯ ಹಾದಿಯಲಿ ಸಾಧನೆಯ ಕಲ್ ನೆಡುವ
ಕನಸಿತ್ತು; ಕಾಣದಿಹ ಕೈಯೆ ಶರಣು..!
ನನ್ನ ನಗೆಯನು ನಿನ್ನ ತುಟಿಗಿರಿಸಿ ನಿನ್ನಾಳ
ಕಂಬನಿಯ ನನಗಿಟ್ಟ ಜಗವೆ ಶರಣು..!
ಕುಗ್ಗುವಿಕೆಯೇ ಮರಣ; ಹಿಗ್ಗುವಿಕೆಯೇ ಜನನ
ಎಂದುಸಿರಿದರಿವ ಗುರು ಹರವೆ ಶರಣು..!
More Stories
“ಸ್ತ್ರೀ ಶಕ್ತಿ”
ಮನೆತನದ ಜೀವ ಮನುಜಕುಲದ ದೈವ
ಮಾನಿನಿಯ ಮನದ ಧ್ವನಿ