December 22, 2024

Newsnap Kannada

The World at your finger tips!

vish

ಕನ್ನಡದ ಭಾಗ್ಯಶಿಲ್ಪಿ ಸರ್.ಎಂ.ವಿ.

Spread the love
hebri boii
ಡಾ.ಪ್ರದೀಪ್ ಕುಮಾರ್ ಹೆಬ್ರಿ

ಕನ್ನಡದ ಭಾಗ್ಯಶಿಲ್ಪಿ ಸರ್ ಎಂ.ವಿ. ಅವರ ನೂರಾ ಅರವತ್ತನೇ ಜನ್ಮ ದಿನಾಚರಣೆ ಇಂದು. 1861ರ ಸೆಪ್ಟಂಬರ್ 15 ರಂದು ಜಾತಕದ ಪ್ರಕಾರ (27.08.1861) ಈ ಧರೆಯಲ್ಲಿ ಬೆಳಗಿದ ಮಹಾಪ್ರಜೆ ಭಾರತದ ಉದ್ದಗಲಕ್ಕೂ ದಿವ್ಯಜ್ಯೋತಿಯಾಗಿ ಕಂಗೊಳಿಸಿತು. ನೆಲಜನವನ್ನು ಪಾವನಗೊಳಿಸಿತು.

ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್ ಹಾಗೂ ದಿವಾನರಾಗಿ ಆಳುವರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಚೈತನ್ಯ ಹಾಗೂ ಧೀಮಂತಿಕೆಗೆ ಸೂಕ್ತವಾಗಿ ಸ್ಪಂದಿಸಿ ಮೈಸೂರು ಸಂಸ್ಥಾನವನ್ನು ಮಾದರಿ ಸಂಸ್ಥಾನವನ್ನಾಗಿ ಮಾಡುವಲ್ಲಿ ಸರ್ ಎಂ.ವಿ ಅವರ ಕಾಣಿಕೆ ಹಾಗೂ ಕಾಣ್ಕೆ ಉಲ್ಲೇಖಾರ್ಹವಾದುದು.

ತಮ್ಮ 95ನೇ ವಯಸ್ಸಿನಲ್ಲಿ ಭಾರತರತ್ನ ಪ್ರಶಸ್ತಿಗೆ ಪುರಸ್ಕೃತರಾದ ಮಹಾತೇಜೋರೂಪಿ ಸರ್.ಎಂ.ವಿ ಅವರು ಇಂದು ವಿಶ್ವದ ಇಂಜಿನಿಯರ್. ಎಲ್ಲರ ಮನೆ – ಮನದೇವರಾಗಿದ್ದಾರೆ. ಪ್ರತಿಭಾವಂತ ಇಂಜನಿಯರ್ಸ್ ಎಲ್ಲರೂ ತಾವೂ ಸರ್ ಎಂ.ವಿ ಅವರಂತಾಗಬೇಕೆಂದು ಆಶಿಸುತ್ತಿದ್ದಾರೆ. ಇಂಜಿನಿಯರಿಂಗ್ ಕ್ಷೇತ್ರದ ಎಂದೂ ಮರೆಯಲಾಗದ ಮರೆಯಬಾರದ ಮಹಾಚೇತನ ಡಾ.ಸರ್.ಎಂ.ವಿ
ಸರ್. ಎಂ.ವಿ ಎಂದಾಕ್ಷಣ ಮೈಸೂರು ಸಂಸ್ಥಾನ ಕಣ್ಣೆದುರು ಬರುತ್ತದೆ. ಮಹಾತ್ಮ ಗಾಂಧಿಜೀಯವರ ‘ತನ್ನ ವೈಶಿಷ್ಟ್ಯಗಳಿಂದ ಜಗತ್ತಿನ ಅತಿ ದೊಡ್ಡ ಜಲಾಶಯಗಳಲ್ಲಿ ಒಂದೆನ್ನಬಹುದಾದ ಕೃಷ್ಣರಾಜಸಾಗರವೊಂದೇ ಸರ್ ಎಂ. ವಿ ಅವರ ಹೆಸರನ್ನು ಚಿರಸ್ಥಾಯಿ ಗೊಳಿಸಲು ಸಮರ್ಥವಾಗಿದೆ’ ಎಂಬ ಮಾತುಮನಪಟಲದಲ್ಲಿ ಹಾದು ಹೋಗುತ್ತದೆ.

ಮೈಸೂರರಸ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮೈಸೂರು ವಿಶ್ವವಿದ್ಯಾಲಯವು ಇರುವವರೆಗೂ ತನ್ನ ಇರುವಿಕೆಯನ್ನು ಸಾಧ್ಯಗೊಳಿಸಿದ ಸೃಷ್ಟಿಕರ್ತನೆಂಬುದಾಗಿ ಎಲ್ಲರಿಗಿಂತ ವಿಶ್ವೇಶ್ವರಯ್ಯನವರನ್ನು ಈ ವಿಶ್ವ ವಿದ್ಯಾಲಯವು ಕೃತಜ್ಞತೆಯಿಂದಲೇ ಸ್ಮರಿಸುತ್ತಲೇ ಇರುತ್ತದೆಂದು ನಾನು ಭಾವಿಸುತ್ತೇನೆ (19-10-1918) ಎಂಬ ಮಾತು ನೆನಪಿಗೆ ಬರುತ್ತದೆ.

ಹೆಬ್ಬಾಳದಲ್ಲಿ ಕೃಷಿ ಶಾಲೆ (1913) ಮೈಸೂರು ಬ್ಯಾಂಕ್ (1913) ಮಲೆನಾಡು ಸಂರಕ್ಷಣ ಯೋಜನೆ ಹಾಗೂ ಬೆಂಗಳೂರಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಶಾಲೆ (1914) ಮೈಸೂರು ವಿಶ್ವವಿದ್ಯಾಲಯ ()1919) ಕನ್ನಡ ಸಾಹಿತ್ಯ ಪರಿಷತ್ತು (1919) ಮೈಸೂರು ಕಬ್ಬಿಣ ಕಾರ್ಖಾನೆ (1918) ಕನ್ನಂಬಾಡಿ ಅಣೆಕಟ್ಟಿನ ಮೊದಲ ಹಂತದ ಕೆಲಸ, ರೇಷ್ಮೆ, ಸಾಬೂನು, ಗಂಧದೆಣ್ಣೆ, ಚರ್ಮದ ಉದ್ಯಮಗಳು, ಚೇಂಬರ್ ಆಫ್ ಕಾಮರ್ಸ್, ಸೆಂಚುರಿ ಕ್ಲಬ್, ಲೇಡೀಸ್ ಕ್ಲಬ್, ಬೆಂಗಳೂರು ಮುದ್ರಣಾಲಯ ಮೊದಲಾದವು ಪ್ರಾರಂಭವಾದದ್ದು ಎಂ.ವಿ ಅವರು ಮೈಸೂರು ದಿವಾನರಾಗಿದ್ದಾಗ.

ಹೈದ್ರಾಬಾದ್ ನಿಜಾಮ ಸಂಸ್ಥಾನದ ವಿಶೇಷ ಮುಖ್ಯ ಇಂಜಿನಿಯರ್, ಮುಂಬೈ ಸರಕಾರದ ಯಾಂತ್ರಿಕ ಔದ್ಯೋಗಿಕ ವಿದ್ಯಾಭ್ಯಾಸ ಸಮಿತಿ ಸದಸ್ಯ, ಹೊಸದೆಹಲಿ ನಿಮರ್ಾಣ ಸಮಿತಿ ಸದಸ್ಯ, ಭಾರತೀಯ ಆರ್ಥಿಕ ಸಮ್ಮೇಳನದ ಅಧ್ಯಕ್ಷತೆ, ಒರಿಸ್ಸಾ ಪ್ರಾಂತದ ಪ್ರವಾಹ ನಿಯಂತ್ರಣ ಯೋಜನೆ, ಟಾಟಾ ಇನ್ಸ್ಟಿಟ್ಯೂಟ್ನ ಗಣ್ಯ ಮಂಡಲಿಯ ಅಧ್ಯಕ್ಷ, ತುಂಗಭದ್ರಾ ಜಲಾಶಯ ನಿರ್ಮಾಣ ಹೀಗೆ ಸರ್ ಎಂ. ವಿ ಅವರ ಸಾಧನೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ತಮ್ಮ ತೊಂಭತ್ತೆರಡನೆಯ ವಯಸ್ಸಿನಲ್ಲಿ (1952) ಬಿಹಾರ ರಾಜ್ಯದಲ್ಲಿ ನಿನಿರ್ಮಾಣವಾಗಬೇಕಾಗಿದ್ದ ಗಂಗಾನದಿಯ ಸೇತುವೆ ನಿರ್ಮಾಣದ ಸ್ಥಳ ನಿರ್ಧಾರ ಮಾಡುವ ಸಮಿತಿ ಅಧ್ಯಕ್ಷರಾಗಿ ವ್ಯಾಪಕ ಪ್ರವಾಸಗೈದು ಸ್ಥಳ ನಿಶ್ಚಯಿಸಿದ್ದನ್ನು ಅರಿಯುವಾಗ ರೊಮಾಂಚನವಾಗುತ್ತದೆ.
102 ವರ್ಷಗಳ ತುಂಬು ಬಾಳನ್ನು ನಡೆಸಿದ (15.09.1861-14.4.1962) ಸರ್ ಎಂ.ವಿ ತನಗಾಗಿ ಏನೂ ಮಾಡದೆ ತನ್ನೆಲ್ಲವನ್ನೂ ಸಮಾಜಕ್ಕೆ ನೀಡಿದ ಅಪ್ಪಟ ದೇಶಪ್ರೇಮಿ. ಶಿಸ್ತಿನ ಸಿಪಾಯಿ. ವರಕವಿ ಡಾ.ದ.ರಾ.ಬೇಂದ್ರೆ ಅವರ ‘ವಿಶ್ವೇಶ್ವರಯ್ಯಾ ವಿಶ್ವಬಂಧು, ಬೆಳೆಸಿದನು ನಾಡು ಉದ್ಯೋಗತಂದು’ ಮಾತನ್ನು ನೆನೆಯುತ್ತ ಅವರ ಪರಿಶ್ರಮಪೂರ್ಣ ಕೆಲಸ. ಯೋಜಿತ ಶಿಸ್ತುಬದ್ದ ಕೆಲಸ, ದಕ್ಷತೆ, ಸೇವೆ ಮತ್ತು ಸೌಜನ್ಯಗಳನ್ನು ನಮ್ಮಲ್ಲು ಅಳವಡಿಸಿಕೊಂಡು ನಿತ್ಯ ನೆನೆಯುತ್ತಿರೋಣ.

Copyright © All rights reserved Newsnap | Newsever by AF themes.
error: Content is protected !!