May 20, 2022

Newsnap Kannada

The World at your finger tips!

WhatsApp Image 2022 04 01 at 12.19.11 AM

ಕನ್ನಡ ಕವಿಕಣ್ಣಿನ ಯುಗಾದಿ

Spread the love

“ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ”
ಎಷ್ಟು ಕೇಳಿದರೂ ಮತ್ತೆ ಮತ್ತೆ ಗುನುಗುನಿಸುವ ಬೇಂದ್ರೆ ಅವರ ಯುಗಾದಿ ಗೀತೆಯೂ ಯುಗಾದಿಯೆಂತೆಯೇ ವರುಷ ವರುಷವೂ ಹೊಸ ಹರುಷದ ಭರವಸೆಯನ್ನು ಬಾಳಿನಲ್ಲಿ ತುಂಬುತ್ತದೆ.

IMG 20180306 WA0008 1 edited
ಡಾ.ಶುಭಶ್ರೀಪ್ರಸಾದ್
9844498432
[email protected]

ಚೈತ್ರಮಾಸದ ಮೊದಲ ದಿನ ಅಂದರೆ ಚೈತ್ರ ಶುದ್ಧ ಪಾಡ್ಯದಂದು ಯುಗಾದಿ ಹಬ್ಬ. ಭಾರತೀಯ ಸಂಸ್ಕೃತಿಯಲ್ಲಿ ಯುಗಾದಿಗೆ ಮಹತ್ವದ ಸ್ಥಾನವಿದೆ. ಪಾಶ್ಚಾತ್ಯರ ಹೊಸವರ್ಷದಂದು ನಮ್ಮಲ್ಲಿನ್ನೂ ಶಿಶಿರ ಋತುವೇ ಇರುತ್ತದೆ. ಮೈಯ ಕಸುವ ಕಳೆದುಕೊಂಡಂತೆ ಎಲೆಗಳೆಲ್ಲ ಉದುರಿ ಗಿಡಮರಗಳು ಬೋಳಾಗಿರುತ್ತದೆ. ಆದರೆ ನಮ್ಮ ನೆಲದ ಹೊಸವರುಷದಲ್ಲಿ ಇಡೀ ಪ್ರಕೃತಿ ತನ್ನ ಮೈಯಲ್ಲೆಲ್ಲ ಹೊಸತನವನ್ನು ತುಂಬಿಕೊಂಡು ಕಂಗೊಳಿಸುತ್ತಿರುತ್ತದೆ. ಯುಗದ ಆದಿ ಯುಗಾದಿ. ಹೊಸ ಸಂವತ್ಸರವನ್ನು ಬರಮಾಡಿಕೊಳ್ಳುವ ಸಡಗರ ಎಲ್ಲೆಲ್ಲೂ ತುಂಬಿ ತುಳುಕುತ್ತಿರುತ್ತದೆ.
ನಮಗೆ ಯುಗಾದಿ ಕೇವಲ ಪಂಚಾಂಗದ ಲೆಕ್ಕಾಚಾರದ ದಿನವಷ್ಟೇ ಅಲ್ಲ. ಅಂತರಂಗದೊಳಗೆ ಆಧ್ಯಾತ್ಮಿಕತೆಯನ್ನೂ, ಹೊಸ ಹುರುಪನ್ನೂ ಬಿತ್ತುವ ಕಾಲಮಾನ. ಕೆಂದಳಿರ ಹೊಸ ಉಡುಗೆ ಉಟ್ಟ ನಿಸರ್ಗದೇವತೆ ನಮ್ಮೊಳಗಿನ ಹಳೆಯ ಕಹಿಯನ್ನು ಕಳಚಿ ಹೊಸ ಸವಿಯನ್ನು ತೊಡುವಂತೆ ಪ್ರೇರೇಪಿಸುತ್ತಾಳೆ. ಮಾವಿನ ಚಿಗುರನುಂಡು ಮೆಲುದನಿಯಲ್ಲಿ ಇನಿದಾಗಿ ಹಾಡುವ ಕೋಕಿಲಗಳ ಕಲರವ ಎದೆಯಲ್ಲಿ ಹೊಸ ಭಾಷ್ಯವನ್ನೇ ಬರೆಯುತ್ತದೆ.
ಈ ಹೊಸ ವರ್ಷ ಶುಭಕೃತ್ ನಾಮ ಸಂವತ್ಸರದಿಂದ ಆರಂಭವಾಗುತ್ತದೆ. ಪ್ಲವ, ವಿಪ್ಲವಗಳ ಬೇಗೆಯನ್ನುಂಡಿದ್ದ ನಮಗೆ ಶುಭಕೃತ್ ಎಂಬ ಹೆಸರೇ ಹೊಸ ಭರವಸೆಯನ್ನು ಮೂಡಿಸಿದೆ. ಕಳೆದ ಎರಡು ವರ್ಷಗಳ ಯುಗಾದಿಗೂ ಕೊರೋನದ ಕರಿನೆರಳು ಚಾಚಿಕೊಂಡಿತ್ತು. ಆದರೆ ಈ ವರ್ಷದ ಯುಗಾದಿ ಆ ಕರಿನೆರಳ ಗ್ರಹಣದಿಂದ ಮುಕ್ತವಾಗಿ ಸ್ವಚ್ಛವಾಗಿ ಕಾಲಿಡುತ್ತಿದೆ. ಎಲ್ಲ ಜೀವರಾಶಿಯ ಪಪ್ಪುಸದೊಳಗೂ ಶುದ್ಧ ಗಾಳಿ ಹರಿದಾಡಲೆಂಬುದೇ ಈ ನವ ಸಂವತ್ಸರದ ಆಶಯ.
ಉಕ್ರೇನ್ ರಷ್ಯಾದ ಯುದ್ಧ ಜಗತ್ತಿನ ಮೇಲೆ ಬೀರುತ್ತಿರುವ ಪರಿಣಾಮವನ್ನು ನೋಡಿದರೆ ಒಮ್ಮೆ ಮೈ ನಡುಗುತ್ತದೆ. ಇಂಥ ಹೊತ್ತಿನಲ್ಲಿ
“ಸಂಶಯ ದ್ವೇಷಾಸೂಯೆಯ ದಬ್ಬು;
ಸುಖಶ್ರದ್ಧಾ ಧೈರ್ಯಗಳನು ತಬ್ಬು,
ತೊಲಗಲಿ ದುಃಖ, ತೊಲಗಲಿ ಮತ್ಸರ,
ಪ್ರೇಮಕೆ ಮೀಸಲು ನವ ಸಂವತ್ಸರ!
ನಮ್ಮೆದೆಯಲ್ಲಿದೆ ಸುಖನಿಧಿ ಎಂದು
ಹೊಸ ಹೂಣಿಕೆಯನು ತೊಡಗಿಂದು!” ಎನ್ನುವ ಕುವೆಂಪು ಅವರ ಸಾಲುಗಳು ಬಹಳ ಪ್ರಸ್ತುತವೆನಿಸುತ್ತದೆ.
ಹಿಂದೂ ಧರ್ಮದಲ್ಲಿ ಚಾಂದ್ರಮಾನ ಯುಗಾದಿ, ಸೌರಮಾನ ಯುಗಾದಿ ಎಂಬ ಎರಡು ಯುಗಾದಿಗಳನ್ನು ಆಚರಿಸಲಾಗುತ್ತದೆ. ಚಂದ್ರನ ಚಲನೆಯನ್ನಾಧರಿಸಿ ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗು ಸೂರ್ಯನ ನಡಿಗೆಯನ್ನು ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತೇವೆ.
ಭಾರತ ಬಹುಸಂಸ್ಕೃತಿಗಳ ತವರು, ಅನೇಕ ಹಬ್ಬಗಳ ತೊಟ್ಟಿಲು. ನವೋಲ್ಲಾಸ ತರುವ ಯುಗಾದಿಯೆಂದರೆ ಭಾರತೀಯರಿಗೆ ಹುರುಪು ಮೈಗೆದರುತ್ತದೆ. ಪ್ರಕೃತಿಯಲ್ಲಿ ಹೊಸ ಹುಟ್ಟು ಕಂಡಾಗ ಹೊಸವರುಷವನ್ನು ಸಂಭ್ರಮಿಸುತ್ತೇವೆ. ಇಡೀ ಪ್ರಕೃತಿ ನವವಧುವಿನಂತೆ ಸಿಂಗರಗೊಳ್ಳುತ್ತಾಳೆ. ಅವಳ ಲಜ್ಜೆತುಂಬಿದ ಮುಖವನ್ನು ನೋಡುವುದರಿಂದಲೇ ನಾವು ಸಡಗರಗೊಂಡು ಹಬ್ಬವನ್ನಾಚರಿಸುವುದು.
ಕರ್ನಾಟಕ ಆಂಧ್ರ ಮತ್ತು ತೆಲಂಗಾಣಗಳಲ್ಲಿ ಚಾಂದ್ರಮಾನ ಯುಗಾದಿಯನ್ನೂ, ಕೇರಳ ತಮಿಳುನಾಡುಗಳಲ್ಲಿ ಸೌರಮಾನ ಯುಗಾದಿಯನ್ನೂ ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಗುಡಿಪಡ್ವಾ, ಗುಡಿಪಾಡ್ಯ ಎಂಬ ಹೆಸರಿನಲ್ಲಿ ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ಬೈಸಾಖಿ ಎನ್ನುವ ಹೆಸರಿನಲ್ಲಿ ಆಚರಿಸಲಾಗುತ್ತದೆ. ಸೂರ್ಯ ಚಂದ್ರ ಲಾಂದ್ರ ಹಣತೆ ಅವುಗಳ ಹಿಂದೆ ಮಾತ್ರ ಒಂದೇ ಘನತೆ ಎಂಬ ಕವಿಸಾಲಿನಂತೆ ಹೆಸರು ಯಾವುದಾದರೂ ಸಂಭ್ರಮವೊಂದೇ.
“ಹೊಂಗೆಹೂವ ತೊಂಗಲಲ್ಲಿ
ಭೃಂಗದ ಸಂಗೀತಕೇಲಿ
ಮತ್ತೆ ಕೇಳಿಬರುತಿದೆ.
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ” ಎನುವ ಬೇಂದ್ರೆಯವರ ಸಾಲುಗಳು ಚಿಗುರಿನ ನರುಗಂಪು ಬೇವಿನ ಕಹಿಯನ್ನು ಮರೆಸುವಷ್ಟು ಸಶಕ್ತವಾಗಿದೆ; ಮತ್ತು ಹೊಸತನದ ಆಶಾಭಾವನೆಯನ್ನು ತುಂಬುತ್ತದೆ.
ಹೊಸ ವರ್ಷದಾದಿಯ ಪಲ್ಲವ ಯುಗಾದಿ ಹಬ್ಬ. ಅಂದು ಸೂರ್ಯ ನಮಸ್ಕಾರ, ದೇವತಾ ಪೂಜಾ ಕಾರ್ಯ, ಪಂಚಾಂಗದ ಪೂಜೆ ಪಠಣ ಸರ್ವೇ ಸಾಮಾನ್ಯ. ಯುಗಾದಿ ಹಬ್ಬವು ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷತೆಗಳ ದಿನವಾಗಿದೆ. ಇದು ಬ್ರಹ್ಮದೇವನ ಸೃಷ್ಟಿಯ ದಿನವೆಂದು ಪುರಾಣಗಳಲ್ಲಿ ಉಲ್ಲೇಖವಿದೆ. ಮಹಾಭಾರತದಲ್ಲಿ ಬರುವ ಚೀದಿರಾಜ್ಯದ ಅರಸು ವಸುವಿನ ಉಗ್ರ ತಪಸ್ಸಿಗೆ ಮೆಚ್ಚಿದ ಇಂದ್ರನು ವೈಜಯಂತಿ ಮಾಲೆಯನ್ನು ಅವನಿಗೆ ಕೊಟ್ಟು, ಚಿನ್ನದ ಕಲಶವುಳ್ಳ ಚಕ್ರಾಧಿಪತ್ಯದ ಧ್ವಜವನ್ನು ರಾಜನ ತಲೆಯ ಮೇಲೆ ಇಟ್ಟಿರುವ ದಿನವೆಂದೂ, ಶ್ರೀರಾಮನು ರಾವಣನನ್ನು ಸಂಹರಿಸಿ ಬಂದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪಟ್ಟಾಬಿಷೇೀಕವಾದ ದಿನವೆಂದೂ ಹಿಂದೂ ಧಾರ್ಮಿಕರು ನಂಬುತ್ತಾರೆ. ಅಲ್ಲದೆ ಐತಿಹಾಸಿಕವಾಗಿಯೂ ಇದು ಅನ್ವರ್ಥ ನಾಮವೇ ಆಗಿದೆ. ವರಾಹಮಿಹಿರ ಆಚಾರ್ಯನು ಚೈತ್ರ ಮಾಸವೇ ವರ್ಷಾರಂಭವೆಂದು ಹೇಳಿರುವನು. ದಕ್ಷಿಣ ಭಾರತವನ್ನು ಆಳಿದ ಶಾಲಿವಾಹನನು ಚೈತ್ರಶುದ್ಧ ಪಾಡ್ಯಮಿಯಂದು ಶಾಲಿವಾಹನ ರಾಜ ಸಿಂಹಾಸನಾರೂಢನಾದನೆಂದೂ, ಆಗಿನಿಂದ ಶಾಲಿವಾಹನ ಶಕೆ ಆರಂಭವಾಯಿತೆಂದೂ ಹೇಳಲಾಗುತ್ತದೆ . ಇಷ್ಟೆಲ್ಲ ಪುರಾಣೇತಿಹಾಸಗಳು ದಾಖಲಾದದ್ದು ಪ್ರಕೃತಿಯಲ್ಲಿನ ಬದಲಾವಣೆಯನ್ನು ನೋಡಿಯೇ.. ನಿಜಕ್ಕೂ ನನಗೊಂದು ಅಚ್ಚರಿ. ಹೇಳಿಕೊಟ್ಟಂತೆ ಚೈತ್ರಕ್ಕೇ ಹೇಗೆ ಪ್ರಕೃತಿಗೆ ಚಿಗುರಬೇಕೆಂದು ತಿಳಿಯುತ್ತದೆ?
“ಯಾರು ಹೇಳಿಕೊಟ್ಟರೇ ನಿನಗೆ
ಶಿಶಿರದಲಿ ನಿರ್ಮೋಹಿಯಂತೆ
ಎಲೆಗಳ ಉದುರಿಸಿ ಕಣ್ಣೀರಿಡರೆ ನಿಲ್ಲುವುದನು?
ಯಾರು ಹೇಳಿಕೊಟ್ಟರೇ ನಿನಗೆ
ವರುಷ ವರುಷವೂ ಇದೇ ಋತುವಲಿ
ಗರ್ಭಧರಿಸಿ ಮಕ್ಕಳ ಹಡೆಯಲು?
ಯಾರು ಹೇಳಿಕೊಟ್ಟರೇ ನಿನಗೆ
ಚಿರಯೌವ್ವನೆಯಂತೆ ಉತ್ಸಾಹದಿಂ
ಇದೇ ಕಾಲದಲಿ ಚಿಗುರಿ ನಲಿಯಲು?”
ಪ್ರಕೃತಿಯ ವಿಸ್ಮಯವದೇ. ಪ್ರಾಣಿ ಪಕ್ಷಿ ಗಿಡ ಮರಗಳು ಪ್ರಕೃತಿಯೊಂದಿಗೆ ತಮ್ಮನ್ನು ಸಮಾನವಾಗಿ ಸಮೀಕರಿಸಿಕೊಂಡು ಜೀವನ ನಡೆಸುತ್ತವೆ. ಆದರೆ ಬುದ್ಧಿವಂತ ಪ್ರಾಣಿ ಮಾನವ ಮಾತ್ರ ಅದಕ್ಕೆ ವಿರುದ್ಧವಾಗಿ ಪ್ರಕೃತಿಯ ಗತಿಯನ್ನರಿಯದೆ ತನ್ನದೇ ಹಾದಿ ಹಿಡಿದು, ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ವಿರೂಪಗೊಳಿಸಿರುವುದರಿಂದಲೇ ಪರಿಸರ ಮಾಲಿನ್ಯ- ಹವಾಮಾನ ವೈಪರಿತ್ಯಕ್ಕೆ, ಜಾಗತಿಕ ತಾಪಮಾನ ಏರಿಕೆಗೆ ಕಾರಣನಾಗಿರುವುದು ಹಾಗು ಹೊಸ ಹೊಸ ಅನಾರೋಗ್ಯಗಳಿಗೆ ತುತ್ತಾಗುತ್ತಿರುವುದು. ಪ್ರಕೃತಿಯನ್ನು ಗಮನಿಸುವ ಮತ್ತು ಅದಕ್ಕೆ ಪೂರಕವಾಗಿ ನಡೆಯುವ ಸೂಕ್ಷ್ಮತೆಯನ್ನು ಬೆಳೆಸಿಕೊಳ್ಳುವುದೊಂದೇ ಇದಕ್ಕೆ ಪರಿಹಾರ.
ಮಲ್ಲಿಗೆಯ ಕವಿ ಕೆ.ಎಸ್.ನರಸಿಂಹಸ್ವಾಮಿಯವರು
“ಮಾವು ನಾವು, ಬೇವು ನಾವು;
ನೋವು ನಲಿವು ನಮ್ಮವು.
ಹೂವು ನಾವು, ಹಸಿರು ನಾವು,
ಬೇವು ಬೆಲ್ಲ ನಮ್ಮವು.
ಹೆಜ್ಜೆಗೊಂದು ಹೊಸ ಯುಗಾದಿ-
ಚೆಲುವು ನಮ್ಮ ಜೀವನ!
ನಮ್ಮ ಹಾದಿಯೋ ಅನಾದಿ,
ಪಯಣವೆಲ್ಲ ಪಾವನ” ಎಂದು ಯುಗಾದಿ ತರುವ ಹೊಸ ಚೆಲುವಿನ ಕನಸ ಬೀಜವನ್ನು ಬಿತ್ತುತ್ತಾರೆ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಸಮಾನ ಮನಸ್ಕತೆಯನ್ನು ಬೆಳೆಸಿಕೊಳ್ಳಬೇಕೆಂಬ ಪಾಠವನ್ನು ಶಿಶಿರ ಮತ್ತು ವಸಂತ ನಮಗೆ ಕಲಿಸುತ್ತಾರೆ. ಕಲಿಯಲು ತೆರೆದ ಮನಸ್ಸಿರಬೇಕಷ್ಟೇ.
ಯಾವುದೇ ಹಬ್ಬವೆಂದರೂ ಹೆಣ್ಣುಮಕ್ಕಳದ್ದೇ ಸಡಗರ ಸಂಭ್ರಮ. ಮುಂಜಾನೆಯೆದ್ದು ಅಭ್ಯಂಜನ ಮಾಡಿ ಮನೆಯ ಮುಂದೆ ಬಣ್ಣ ಬಣ್ಣದ ರಂಗವಲ್ಲಿ ಇಟ್ಟು, ಬಾಗಿಲಿಗೆ ತಳಿರಿನ ತೋರಣವನ್ನು ಕಟ್ಟಿ, ಮನೆಯನ್ನು ಸಿಂಗರಿಸಿ, ಹೊಸ ಬಟ್ಟೆಗಳನ್ನುಟ್ಟು, ದೇವರ ಕೋಣೆಯನ್ನು ಶುಚಿಗೊಳಿಸಿ, ಕಳೆದ ವರ್ಷದ ಕಹಿಯನ್ನು ಮರೆಸಿ, ಹೊಸ್ತಿಲಿಗೆ ಕಾಲಿಟ್ಟಿರುವ ಹೊಸ ವರ್ಷವು ಸಿಹಿಯನ್ನು ತರಲಿ ಎಂದು ದೇವರನ್ನು ಪೂಜಿಸಿವುದು ವಾಡಿಕೆ.
ಚೈತ್ರದಲ್ಲಿ ಪ್ರಕೃತಿ ತನಗೆ ತಾನೇ ತಳಿರಿನ ತೋರಣವನ್ನು ಹೊದ್ದುಕೊಳ್ಳುತ್ತಾಳೆ. ಯಾವುದೋ ಜಂಜಡದಲ್ಲಿ ಮೈಮರೆತು ಜಡವಾಗಿ ತೂಕಡಿಸುತ್ತಿದ್ದ ಪ್ರಕೃತಿ ಒಮ್ಮೆಲೇ ಏನೋ ನೆನಪಾದಂತೆ ಮೈಕೊಡವಿಕೊಂದೆದ್ದು ಚಿಗುರುತ್ತಾಳಲ್ಲಾ ಆ ವಿಸ್ಮಯಕ್ಕೆ ಎಣೆಯೇ?
ಮಾವು ಬೇವಿನ ತಳಿರ ತೋರಣ ಕಟ್ಟುವ ಹಿಂದೆ ಒಂದು ಪುರಾಣದ ಕತೆಯಿದೆ ಮತ್ತು ಆರೋಗ್ಯದ ಹಿನ್ನೆಲೆ ಇದೆ: ಶಿವನ ಮಕ್ಕಳಾದ ಕಾರ್ತಿಕೇಯ ಹಾಗೂ ಗಣೇಶರಿಬ್ಬರಿಗೂ ಮಾವಿನ ಹಣ್ಣುಗಳೆಂದರೆ ಇಷ್ಟ. ಕಾರ್ತಿಕೇಯನು ಜನರಿಗೆ ಯುಗಾದಿ ದಿನ ಮನೆಯನ್ನು ಮಾವಿನೆಲೆಗಳಿಂದ ಸಿಂಗರಿಸಿದರೆ ಅದರಿಂದ ಉತ್ತಮ ಇಳುವರಿಯನ್ನೂ, ಸಮೃದ್ಧಿಯನ್ನೂ ಪಡೆಯಬಹುದಾಗಿ ಹೇಳಿದ ಎನ್ನಲಾಗುತ್ತದೆ. ಆದರೆ ಹಬ್ಬ ಹರಿದಿನಗಳಲ್ಲಿ ಬರುಹೋಗುವವರು ಹೆಚ್ಚಾದ್ದರಿಂದ ಇಂಫೆಕ್ಶನ್ ಮನೆಯೊಳಗೆ ಅಡಿಯಿಡಬಾರದೆಂದು ಮನೆಯ ಮುಂಬಾಗಿಲಿಗೆ ಬ್ಯಾಕ್ಟೀರಿಯಾಗಳನ್ನು ಹೀರುವ ಶಕ್ತಿಯಿರುವ ಬೇವು ಮಾವಿನ ತೋರಣವನ್ನು ಕಟ್ಟುವುದು. ಫಂಗಸ್ ಇನ್ಫೆಕ್ಷನ್ ಆಗಬಾರದೆಂದು ಮನೆಯ ಮುಂದೆ ರಂಗೋಲಿ ಇಡುವುದು. ನಮ್ಮ ಸಂಸ್ಕೃತಿಯಲ್ಲಿನ ಎಲ್ಲ ಆಚರಣೆಗಳೂ, ಆಹಾರಗಳೂ ನಮ್ಮ ದೈಹಿಕ ಮಾನಸಿಕ ಆರೋಗ್ಯಕ್ಕಾಗಿಯೇ ರೂಪಿತವಾಗಿರುವುದು.
ಹಬ್ಬವೆಂದ ಮೇಲೆ ಆಹಾರದಲ್ಲೂ ವಿಶೇಷತೆ ಇರಬೇಕಲ್ಲವೇ? ಬೇಳೆ ಅಥವಾ ತೆಂಗಿನಕಾಯಿಯ ಹೂರಣದಿಂದ ಮಾಡಿದ ಒಬ್ಬಟ್ಟು ಈ ಹಬ್ಬದ ಸೊಗಸು. ಕಡಲೇಬೇಳೆಯಿಂದ ಅಥವಾ ತೊಗರೀ ಬೇಳೆಯಿಂದ ಮಾಡುವ ಹೋಳಿಗೆಯೆಂದರೆ ಮೈಯ್ಯೆಲ್ಲ ನಾಲಿಗೆಯಾಗಿ ತಿನ್ನುತ್ತಿದ್ದ ಕಾಲ ಈಗ ಬದಲಾಗಿದೆ. ಜಂಕ್ ಆಹಾರಗಳಿಗೇ ತಮ್ಮ ಜಿಹ್ವೆಯನ್ನು ಸೀಮಿತ ಮಾಡಿಕೊಂಡಿರುವ ಯುವ ಜನತೆ ಮತ್ತು ಸಿಹಿಖಾಯಿಲೆಯಿಂದ ಬಳಲುವ ಹಿರಿಜೀವಗಳಿಗೆ ಹೋಳಿಗೆ ನೆಪಕ್ಕಷ್ಟೇ ಆಗಿದೆ. ಮರಾಠಿಯಲ್ಲಿ ಇದನ್ನೇ ಪೂರಣ ಪೆÇೀಳಿ ಎಂದು ಕರೆಯುತ್ತಾರೆ. ಹೋಳಿಗೆಯ ಜೊತೆಗೆ ಎರಡು ಬಗೆಯ ಕೋಸಂಬರಿ, ಎರಡು ಬಗೆಯ ಪಲ್ಯಗಳು, ಕಲಸನ್ನ, ಸಾರು, ಮಜ್ಜಿಗೆಹುಳಿ ಬೋಂಡ ಹೀಗೆ ತರಹಾವರಿ ಭಕ್ಷ್ಯ ಭೋಜ್ಯಗಳು ಬಾಳೆಯೆಲೆಯನ್ನು ಅಲಂಕರಿಸುತ್ತವೆ. ಅದಕ್ಕೇ ಉಂಡು ಉಗಾದಿ, ಮಿಂದು ದೀಪಾವಳಿ ಎಂದು ಜನಜನಿತ. ನಮ್ಮ ಬದುಕೆಂಬ ಕಣಕಕ್ಕೆ ವಿಶ್ವಚೈತನ್ಯವೆಂಬ ಹೂರಣ ತುಂಬಿ ಸಿಹಿಯಾಗಿಸಿಕೊಳ್ಳಲು ಚೈತ್ರದ ಯುಗಾದಿ ನಾಂದಿ ಬರೆಯುತ್ತದೆ.
ಕರಾವಳಿಯ ಸೌರಮಾನ ಯುಗಾದಿಯ ವಿಶೇಷತೆ ಖಣಿ ಇಡುವುದು. ಬಾಳೆ ಎಲೆ, ತಟ್ಟೆಯಲಿ ಅಕ್ಕಿ ಹಾಕಿ ಅದರ ಮೇಲೆ ತೆಂಗಿನಕಾಯಿ, ಸೌತೇಕಾಯಿ, ರವಿಕೆ ಕಣ, ಹೊಸ ಬಟ್ಟೆ, ಚಿನ್ನ, ಬತ್ತದ ತೆನೆ, ಹಣ್ಣು, ದೇವರ ಪ್ರತಿಮೆ ಅದರ ಮುಂದೆ ಒಂದು ಕನ್ನಡಿ ಇಟ್ಟು ಆ ಕನ್ನಡಿಯಲಿ ದೇವರ ಪ್ರತಿಮೆ ಹಾಗೂ ತಟ್ಟೆಯಲ್ಲಿ ಇಟ್ಟಂತಹ ವಸ್ತುಗಳನ್ನು ಕಾಣುವ ಹಾಗೆ ಇಡುತ್ತಾರೆ. ಇವನ್ನು ದೇವರ ಮುಂದೆ ಹಿಂದಿನ ರಾತ್ರಿ ಮಲಗುವ ಮುನ್ನ ಇಡುತ್ತಾರೆ. ಯುಗಾದಿ ಹಬ್ಬದಂದು ಬೆಳಿಗ್ಗೆ ಬೇಗ ಎದ್ದು ದೇವರ ದೀಪ ಹಚ್ಚಿ ಖಣಿಯಲ್ಲಿನ ಕನ್ನಡಿಯಲಿ ದೇವ ದರ್ಶನ ಪಡೆಯುವುದು ಅಂದಿನ ವಿಶೇಷ. ನಂತರ ಸ್ನಾನ, ಹೋಳಿಗೆ ಊಟ, ದೇಗುಲ ಭೇಟಿ, ಹಿರಿಯರ ಭೇಟಿ ಹಾಗು ಪಂಚಾಂಗ ಶ್ರವಣ.
ಪಂಚಾಂಗ ಶ್ರವಣ ಈ ಹಬ್ಬದ ಮತ್ತೊಂದು ವಿಶೇಷ. ಪಂಚಾಂಗ ದಿನಸೂಚಿಯಷ್ಟೆ ಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲಗಳನ್ನು ಓದಿ ಈ ವರ್ಷದ ಮುಖ್ಯಾಂಶಗಳೇನು ಎನ್ನುವುದನ್ನು ಹಿಂದೆಲ್ಲ ದೇವಸ್ಥಾನದಲ್ಲೋ, ಅರಳೀ ಬೇವಿನ ಕಟ್ಟೆಯಲ್ಲೋ ಕುಳಿತು ಓದುತ್ತಿದ್ದರು. ಇಡೀ ಹಳ್ಳಿಯ ಜನ ಸೇರಿ ವರ್ಷದ ಭವಿಷ್ಯವನ್ನು ಮೈಯ್ಯೆಲ್ಲಾ ಕಣ್ಣಾಗಿ ಕೇಳುತ್ತಿದ್ದರು. ಮೊಬೈಲ್ ಕಂಪ್ಯೂಟರ್ ಯುಗದಲ್ಲಿ ಈಗೆಲ್ಲ ಅಂಥ ತಾಳ್ಮೆ ಸಹನೆಯಾಗಲೀ, ಆಸಕ್ತಿಯಾಗಲೀ ಯಾರಲ್ಲಿಯೂ ಕಾಣುತ್ತಿಲ್ಲ.
ಮತಮತಗಳ ನಡುವೆ ಏರ್ಪಡುತ್ತಿರುವ ಹೊಸ ಸಂಘರ್ಷವು ಸಹೃದಯರನ್ನು ಕಂಗೆಡಿಸುತ್ತಿದೆ. ಆದರೆ ನಿಸರ್ಗದ ನಿಯಮ ಜಾತ್ಯಾತೀತ ಮತ್ತು ಧರ್ಮಾತೀತವಾದುದು. ಪ್ರಕೃತಿಗೆ ತನ್ನ ಎಲ್ಲ ಮಕ್ಕಳೂ ಒಂದೇ. ಭೇದ ಕಲ್ಪಿಸಿಕೊಂಡಿರುವುದು ನಾವೇ. ಗಾಳಿ ನೀರು ನೆರಳು ಹೂ ಹಣ್ಣುಗಳು ಯಾವಾಗ ತಾನೇ ತಾನು ಈ ಜಾತಿಗೆ, ಈ ಧರ್ಮಕ್ಕೆ ಸೇರಿದ್ದೆಂದು ಅಥವಾ ಇಂಥವರಿಗೆ ಮಾತ್ರ ನೀಡುವೆನೆಂದು ಹೇಳಿದೆ? ಹೀಗೆ ತಾನು ಸರ್ವರನ್ನೂ ಸಮಾನವಾಗಿ ಕಾಣುವವಳು ಎಂದು ಹೇಳುವ ಪ್ರಕೃತಿಯಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ. ಈ ಸಮಯದಲ್ಲಿ ಗೋಪಾಲಕೃಷ್ಣ ಅಡಿಗರ
“ಯುಗಯುಗಾದಿಯ ತೆರೆಗಳೇಳುತಿವೆ, ಬೀಳುತಿವೆ
ಹೊಸಹೊಸವು ಪ್ರತಿ ವರುಷವು;
ಒಳಗೆ ಅದೋ ಕಾಣುತಿದೆ ಚೆಲುವಿರದ ನಲವಿರದ
ಕೊಳೆಯ ಬೆಳೆ;- ರಂಗಮಂದಿರವು! “ ಎನ್ನುವ ಈ ಕವನ ಚಿತ್ತಪಟಲದಲ್ಲೇಕೋ ಹಾದುಹೋಗುತ್ತದೆ. ಅಂಥ ಕೊಳೆಯನ್ನು ತೊಡೆದುಕೊಂಡು ಹೊಸ ರಂಗನ್ನು ತುಂಬುವುದೇ ಯುಗಾದಿಯ ವೈಶಿಷ್ಟ್ಯ.

ಯುಗಾದಿಯು ಬೇಸಿಗೆಯ ಆರಂಭದಲ್ಲಿ ಬರುವುದರಿಂದ ಬೇಸಿಗೆಯಲ್ಲಿ ಬರುವ ಅನೇಕ ಸಾಂಕ್ರಾಮಿಕ ರೋಗಗಳಿಗೂ ಕಾರಣವಾಗುತ್ತದೆಯೆಂದೇ ದೇಹಾರೋಗ್ಯದ ಜತನಕ್ಕಾಗಿ ಆರೋಗ್ಯಪ್ರದಾಯಕ ಬೇವನ್ನೂ ಬೆಲ್ಲವನ್ನೂ ಒಟ್ಟಿಗೆ ಬೆರೆಸಿ ಪ್ರಸಾದವೆಂದು ಕೊಡಲಾಗುತ್ತದೆ. ಈ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸ್ವೀಕರಿಸುತ್ತಾರೆ. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ. ನಮ್ಮ ಭಾರತೀಯ ಆಹಾರ ಪದ್ಧತಿ ಆರೋಗ್ಯ ತತ್ವದ ಮೇಲೆಯೇ ನಿರ್ಧಾರಿತವಾಗಿರುತ್ತದೆ. ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ ಎಂದು ಹೇಳಿ ಬೇವು ಬೆಲ್ಲವನ್ನು ತಿನ್ನುವುದು ರೂಢಿ. ಅಂದರೆ ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲಾರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ ಎಂದು ವರ್ಷದ ಮೊದಲ ದಿನದಂದು ಶುಭ ಸಂಕಲ್ಪ ಮಾಡುವುದು. ಬೇವು ಬೆಲ್ಲದಂತೆಯೇ ಬಾಳಿನಲ್ಲಿ ಬರುವ ಸಿಹಿ ಕಹಿಗಳನ್ನು ಸಮಾನವಾಗಿ ಸ್ವೀಕರಿಸುತ್ತೇನೆಂಬ ದೃಢ ನಿರ್ಧಾರ ಮಾಡುವುದು. ಸುಖೇ ದುಃಖೇ ಸಮೇಕೃತ್ವಾ ಲಾಭಾ ಲಾಭೌ ಜಯಾ ಜಯಃ ಎನ್ನುವ ಶ್ರೀಕೃಷ್ಣನ ಮಾತೂ ಇದಕ್ಕೆ ಇಂಬುಕೊಟ್ಟಂತೆಯೇ ಇದೆ.
ಬೇವು ಬೆಲ್ಲ ತಿಂದು, ಹೋಳಿಗೆಯ ಊಟ ಮಾಡಿ ಇಡೀ ವರ್ಷದ ಬದುಕಿಗೆ ಕನಸುಗಳ ತೋರಣ ಕಟ್ಟುವ ಶುಭಮುಹೂರ್ತ ಯುಗಾದಿ .
“ಹೊಸ ಮರದಲಿ ಹೂ ತುಂಬಿದೆ ನೋಡು!
ಆಲಿಸು! ಜೇನಿನ ಹಬ್ಬದ ಹಾಡು!
ಜೀವನವೆಂಬುದು ಹೂವಿನ ಬೀಡು;
ಕವಿಯೆದೆ ಹೆಜ್ಜೇನಿನ ಗೂಡು!” ಎನ್ನುತ್ತಾರೆ ರಸಋಷಿ ಕುವೆಂಪು ಅವರು.
ಹೊಸಚಿಗುರಿನಲ್ಲಿನ ಕಂಪನ್ನು ಹೀರುತ್ತ ಮಧುವ ಬಾಚಿಕೊಳ್ಳಲು ಬರುವ ಭ್ರಮರದ ನಿನಾದವೋ ಕರ್ಣಗಳಿಗೆ ಬಲು ಸೊಗಸು.
ಯುಗಾದಿ ಕೇವಲ ಸಂಭ್ರಮಾಚರಣೆಗಷ್ಟೇ ಸೀಮಿತವಲ್ಲ. ಬದುಕನ್ನು ಹೊಸ ದೃಷ್ಟಿಕೋನದಿಂದ ನೋಡುವ ಬಗೆಯನ್ನು ತೆರೆಯುವ ಒಂದು ಹಬ್ಬವೂ. ಕೆ.ಎಸ್.ನಿಸಾರ್ ಆಹಮದ್ ಅವರು
“ಪ್ರತಿ ಯುಗಾದಿ ವಿಜಯದೊಸಗೆ
ಸತ್ವ ರಜೋಗುಣದ ಬೆಸುಗೆ
ಅಸುರ ವಧೆಯ ವೀರಗಾಥೆ” ಎಂದು ಹೇಳುವಂತೆ ಸತ್ವ ಮತ್ತು ರಜೋಗುಣದ ಬೆಸುಗೆಯಾಗಿಯೂ ಯಾವ ಗುಣ ಯಾವಾಗ ಮೇಲುಗೈ ಸಾಧಿಸಬೇಕೆಂಬುದನ್ನು ನಮಗೆ ನಾವೇ ನಿರ್ಧರಿಸಿಕೊಳ್ಳಬೇಕಾದ ಪರ್ವಕಾಲವಿದು.

ಪು.ತಿ.ನರಸಿಂಹಚಾರ್ ಅವರ ‘ಹೊಸ ವರುಷ ಬಹುದೆಂದಿಗೆ’ ಕವಿತೆಯಲ್ಲಿ
“ಹೊಸ ವರುಷವು ಬಹುದೆಂದಿಗೆ?
ಮಹಾಪುರುಷ ತರುವಂದಿಗೆ
ಅಲ್ಪಾಹಂಕಾರಗಳ ನುಂಗುತಲಿ
ಮಹಾಹಂಕಾರದೊಂದಿಗೆ-
ಜಾಣ ಜಿತೇಂದ್ರಿಯ ಧಿರನಾವನೋ
ಚಾಣಿಕ್ಯನ ತೆರ ನಲ್ ಕೇಣದ ನೆಲೆಮತಿ
ಅಂಥವ ತರಬಲ್ಲನು ಹೊಸ ವರುಷ
ಅಂಥಿಂಥವರಿಂ ಬರಿ ಕಲುಷ” ಎಂದು ಹೊಸ ಕಲ್ಪನೆಯನ್ನು ತುಂಬುತ್ತಾರೆ.

ಹಳತು ಮುಗಿದು ಹೊಸತು ಆರಂಭವಾದುದೆಂದರೆ ಏನೋ ಹೊಸ ಸುಖ, ಹೊಸ ಕನಸು, ಹೊಸ ಆಸೆ ಆವರಿಸುತ್ತದೆ. ಹೊಸತೆಂಬುದು ಸದಾ ಖುಷಿಕೊಡುವ ಸಂಗತಿಯೇ. ಸದಾ ಸಂಶಯ, ಅನುಮಾನ, ಭಯದ ನೆರಳಲ್ಲಿ ಬದುಕುವಂತಾಗಿರುವ ಮನಕ್ಕೆ ಶಾಂತಿ ನೀಡುವ ಸಂಗತಿಯೆಂದರೆ ಮುಡಿ ತುಂಬ ಹೂಮುಡಿದು ನಲಿವ ಪ್ರಕೃತಿಯ ಚೈತ್ರದ ನಗು.
ಎಚ್.ಎಸ್.ವೆಂಕಟೇಶಮೂರ್ತಿ ಅವರು ಹೇಳುವಂತೆ
“ಮಂಜು ಆವರಿಸಿರುವ ಮುಂದಿರುವ ದಾರಿಯಲಿ
ನಡೆದವರೆ ಇಲ್ಲ!
ಇನ್ನು ನಡೆ-ನಡೆದಂತೆ ಹೆಜ್ಜೆ-ಹೆಜ್ಜೆಯ ಗುರುತು
ಹೂವಾಗಿ ಅರಳಬೇಕು!
ಅಥವಾ-
ಹಾವಾಗಿ ಹೊರಳಬೇಕು!
ಅದಕಾಗಿಯೇ ನೀವು, ನಾವು ಅವರೂ ಕೂಡ
ಮುಂದೆ ಸಿಗಬಹುದಾದ ಮೈಲುಗಲ್ಲಿನವರೆಗೆ
ನಡೆಯಬೇಕು!”
ಹಾಗೆ ಮೈಲುಗಲ್ಲಿನವರೆಗೆ ನಡೆವ ಶಕ್ತಿಯನ್ನೂ, ಆಸಕ್ತಿಯನ್ನೂ, ಉತ್ಸಾಹವನ್ನೂ ನೀಡುವುದೇ ನಿಸರ್ಗದ ಮೈದುಂಬಿದ ಚೆಲುವು, ಒಲವು.
ವರ್ಷದ ಚಕ್ರ ಉರುಳಿ ಇಡಿಯ ವರ್ಷದ ಚಿತ್ರವನ್ನೊಮ್ಮೆ ತಿರುಗಿಸಿ ನೋಡಿ, ನಡೆದ ತಪ್ಪು ಒಪ್ಪುಗಳಾವುದು, ಹೊಸ ವರ್ಷದಲಿ ಕೈಗೊಳ್ಳಬೇಕಾದ ಹೊಸ ನಿರ್ಧಾರಗಳೇನು? ಎಂಬುದನ್ನು ನಮ್ಮೊಳಗೆ ನಾವೇ ನೋಡಿಕೊಳ್ಳುವ ಕೈಗನ್ನಡಿ ಈ ಯುಗಾದಿ.
“ಇದ್ದುದೆಲ್ಲವು ಬಿದ್ದುಹೋದರು
ಎದ್ದು ಬಂದಿದೆ ಸಂಭ್ರಮ.
ಕಿತ್ತುಕೊಂಡರು ಕೊಟ್ಟು ಸುಖಿಸುವ
ಸೋಲನರಿಯದ ಸಂಗಮ.
ಒಳಿತು ಕೆಡುಕೋ ಏನು ಬಂದರು
ಇರಲಿ ಎಲ್ಲಕು ಸ್ವಾಗತ
ಸ್ಪರ್ಧೆಯಿಲ್ಲದ ಶ್ರದ್ಧೆಯೊಂದೇ
ಸ್ಫೂರ್ತಿಯಾಗಲಿ ಸಂತತ.” ಜಿ.ಎಸ್.ಎಸ್ ಅವರು ಹೇಳುವ ಈ ಕವನಕ್ಕಿಂತ ಬೇರೊಂದು ಭಾಷ್ಯಬೇಕೆ ಸಾಮರಸ್ಯದ ಬದುಕ ಕಟ್ಟಿಕೊಳ್ಳಲು? ಸ್ಪರ್ಧೆಯಿಲ್ಲದ ಶ್ರದ್ಧೆಯೊಂದೇ ಸ್ಪೂರ್ತಿಯಾಗಲಿ ಎನ್ನುವ ಸಾಲು ಬಹಳ ಕಾಲ ಸಹೃದಯರನ್ನು ಕಾಡುತ್ತದೆ. ಮನಸ್ಸು, ಭಾವನೆ, ಬುದ್ಧಿಗಳ ನಡುವಿನ ತಾಕಲಾಟಕ್ಕೆ ಯುಗಾದಿಯೊಂದು ಉತ್ತರ. ಆಗಾಗ ಜಡವಾಗುವ ದೇಹ ಮನಸು ಭಾವ ಬುದ್ಧಿಗಳು ಹೊಸತನಕ್ಕೇಕೆ ಒಡ್ಡಿಕೊಳ್ಳಬೇಕು, ಹೊಸತನಕ್ಕೇಕೆ ತೆರೆದುಕೊಳ್ಳಬೇಕು ಎಂಬುಕ್ಕೆ ಚೈತ್ರದ ಚಿಗುರು ಉತ್ತರ ಹೇಳುತ್ತದೆ.
ತನ್ನದು – ತನ್ನವರನ್ನೆಲ್ಲ ಕಳೆದುಕೊಂಡಂತೆ ಕಂಡರೂ ಧೃತಿಗೆಡದೆ ಮತ್ತೆ ಹೋರಾಡಿ ಚಿಗುರುವ ಚೈತನ್ಯದೊಂದಿಗೆ ಮರುಹುಟ್ಟು ಪಡೆವ ಪ್ರಕ್ರಿಯೆಯನ್ನು ಚೈತ್ರದಿಂದ ನಾವೆಲ್ಲರೂ ಕಲಿಯಬೇಕಿದೆ.
ಮತಾಂಧತೆ, ಧರ್ಮಾಂಧತೆಗಳು ನಮ್ಮ ಎದೆಯನ್ನು ಆವರಿಸಿ ಹೊಗೆಯಾಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಚೈತ್ರದ ಹೊಸ ಪಲ್ಲವವು ತಂಪನೆರೆದು ಹೊಸಗಾಳಿಯು ಎಲ್ಲೆಡೆ ತುಂಬಿ ಸಕಲ ಜೀವರಾಶಿಗಳನೂ ನಗಿಸಲಿ ಎಂಬುದೇ ಈ ಶುಭಕೃತ್ ನಾಮ ಸಂವತ್ಸರದ ಯುಗಾದಿಯಲ್ಲಿ ನಮ್ಮೆಲ್ಲರ ಆಶಯ.

error: Content is protected !!