ಸರ್ವಾಧಿಕಾರಿ ಆಡಳಿತ ಧೋರಣೆಯನ್ನು ಪತ್ರಿಕೋದ್ಯಮ ಖಂಡಿಸಬೇಕು : ಸಚಿವ ಡಾ ಮಹದೇವಪ್ಪ

Team Newsnap
2 Min Read

ಮೈಸೂರು : ಪ್ರಜಾಪ್ರಭುತ್ವ ವಿರೋಧಿ, ಸರ್ವಾಧಿಕಾರಿ ಆಡಳಿತ ಧೋರಣೆಯನ್ನು ಪತ್ರಿಕೋದ್ಯಮ ಯಾವತ್ತೂ ಸಹಿಸಬಾರದು. ಜನ ವಿರೋಧಿ ಮತ್ತು ಜ‌ನಪರವಲ್ಲದ‌ ಎಮ್ಮೆ ಚರ್ಮದ ಜನಪ್ರತಿನಿಧಿಗಳನ್ನು ಆಗಾಗ್ಗೆ ಚುಚ್ಚಿ ಎಚ್ಚರಿಸುವ ಕೆಲಸ ಮಾಡುವಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭಾನುವಾರ ಪತ್ರಕರ್ತರಿಗೆ ಕರೆ ನೀಡಿದರು.

ಮಾನಸ ಗಂಗೋತ್ರಿಯ ರಾಣಿ ಬಾಹದ್ದೂರು ಸಭಾಂಗಣದಲ್ಲಿ ಜಿಲ್ಲಾ ಪತ್ರಕರ್ತರ ಸಂಘವು ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ, ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ ಮಹದೇವಪ್ಪ ಅವರು, ‘ದೇಶ ಅವಿರತ ಹೋರಾಟದಿಂದ ಗಳಿಸಿದ ಸ್ವಾತಂತ್ರ ಉಳಿಯಬೇಕಾದರೆ ಮಾಧ್ಯಮಗಳು ನಿರ್ಭೀತ,‌ ನಿಷ್ಪಕ್ಷಪಾತ ಹಾಗೂ ಧರ್ಮ ನಿರಪೇಕ್ಷ ನಿಲುವಿನಿಂದ ರಾಜೀ ಆಗದಂತೆ ನೋಡಿಕೊಳ್ಳಬೇಕು ಎಂದರು.

‘ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೆಗಳು ಸಮಾನತೆಯ ಆಶಯಕ್ಕೆ ಪೂರಕವಾಗಿರಬೇಕು. ಬದಲಿಗೆ ಉದ್ಯಮಿಗಳು ಹಾಗೂ ಬಲಾಢ್ಯರ ಪರವಾಗಿ ಮಾಧ್ಯಮ ನಿಂತರೆ ಅವರ ಪ್ರತಿಷ್ಠೆ ಹೆಚ್ಚಾಗುತ್ತದೆ.‌ ದಮನಿತರು, ಶೋಷಿತರು, ದನಿ‌ ಕಳೆದುಕೊಂಡವರ ಪರವಾಗಿ ಬರೆದರೆ ದೇಶದ ಪ್ರತಿಷ್ಠೆ ಹೆಚ್ಚಾಗುತ್ತದೆ ಎಂಬುದನ್ನು ಸದಾ ಗಮನದಲ್ಲಿರಿಸಿಕೊಳ್ಳಬೇಕು’ ಎಂದರು.

ಮಾಧ್ಯಮಗಳಿರುವುದು ಯಾರನ್ನೂ ಹೊಗಳಿಕೆ ಮಾಡುವುದಿಲ್ಲ. ಬದಲಿಗೆ ಸಮಸಮಾಜದ ನಿರ್ಮಾಣಕ್ಕೆ ಸಲಹೆಗಾರನಾಗಿರಬೇಕು’ ಎಂದು ಪ್ರತಿಪಾದಿಸಿದರು.

‘ಅಮೆರಿಕಾದ ಮೂರನೇ ಅಧ್ಯಕ್ಷರಾಗಿದ್ದ ಥಾಮಸ್ ಜೆಫರ್ಸನ್, ಸರ್ಕಾರ ಇಲ್ಲದೆ ಪ್ರಜಾಪ್ರಭುತ್ವ ನಡೆಯುತ್ತದೆ. ಆದರೆ ಮಾಧ್ಯಮ ಇಲ್ಲದೆ ನಡೆಯಲಾರದು ಎಂದಿದ್ದರು. ಹೀಗಾಗಿ ಮಾಧ್ಯಮಗಳ ಮೇಲಿನ ಜವಾಬ್ದಾರಿ‌ ದೊಡ್ಡದು’ ಎಂದು ಹೇಳಿದರು.

‘ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಶ್ರೇಷ್ಠ ಮಾದರಿಗಳು. ಪತ್ರಿಕೆ ಜನರ ಹಿತ ಕಾಯುವ ಸಲಹೆಗಾರನಾಗಿ ಕೆಲಸ ಮಾಡಬೇಕು ಎಂದು ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ್ದರು. ರಾಷ್ಟ್ರದ ಮನಸನ್ನು ಓದದಿದ್ದರೆ ನಿರ್ಭೀತವಾಗಿ, ನಿಷ್ಪಕ್ಷಪಾತವಾಗಿ ಬರೆಯಲು ಆಗದು ಎಂದಿದ್ದರು. ಸಾಮಾಜಿಕವಾಗಿ ಹಿತವಲ್ಲದ‌ ನಡವಳಿಕೆಯುಳ್ಳವರನ್ನು‌ ಅಂಬೇಡ್ಕರ್ ಸಹಿಸುತ್ತಿರಲಿಲ್ಲ ಎಂದರು

‘ಪತ್ರಕರ್ತರಿಗೆ‌ ನಿವೇಶನ ವಿತರಿಸುವ ಸಂಬಂಧ ಈಗಾಗಲೇ ಮುಡಾ ಆಯುಕ್ತರಿಗೆ‌ ಸೂಚನೆ ನೀಡಲಾಗಿದೆ’ ಎಂದರು.

ಮೇಯರ್ ಶಿವಕುಮಾರ್, ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು, ಜಿಎಸ್ಎಸ್ ಮಾಧ್ಯಮ ಸಂಸ್ಥೆಯ ಅಧ್ಯಕ್ಷ ಶ್ರೀಹರಿ‌ ದ್ವಾರಕಾನಾಥ್ ವೇದಿಕೆಯಲ್ಲಿದ್ದರು.‌ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಸಚಿವ ಆನಂದ್ ಸಿಂಗ್ ಕೂಡ ಕಾಂಗ್ರೆಸ್ ಗೆ ಸೇರ್ಪಡೆ ಸಿದ್ದತೆ ?

ಈ ಕಾರ್ಯಕ್ರಮದಲ್ಲಿ ಸಾಧಕ ಪತ್ರಕರ್ತರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

Share This Article
Leave a comment