December 24, 2024

Newsnap Kannada

The World at your finger tips!

deepa1

ಜನರನ್ನು ಉಪಯೋಗಿಸಿಕೊಂಡು ಎಲ್ಲವನ್ನೂ ಪಡೆದಿದ್ದೀರಿ ಈಗ ಕೊಡುವ ಸಮಯ

Spread the love

ಮತದಾರರನ್ನು ಉಪಯೋಗಿಸಿಕೊಂಡು ಎಂಎಲ್ಎ, ಮಂತ್ರಿಗಳಾದಿರಿ,
ಜನರ ಕಷ್ಟಕ್ಕೆ ಹೃದಯಪೂರ್ವಕವಾಗಿ ಸಹಾಯ ಮಾಡಿ. ಸ್ಟಂಟ್ ಮಾಡಬೇಡಿ.

ಭಕ್ತಾದಿಗಳನ್ನು ಉಪಯೋಗಿಸಿ ಕೊಂಡು ಮಠಾಧೀಶರಾದಿರಿ, ಹಣ, ಜಾತಿ, ವೈಭೋಗದ ಹಿಂದೆ ಹೋಗದೆ ತ್ಯಾಗ ಮನೋಭಾವದಿಂದ,‌ ಜನರ ಸೇವೆ ಮಾಡಿ, ರಾಜಕೀಯ ಮಾಡಬೇಡಿ.

ಓದುಗನನ್ನು ಉಪಯೋಗಿಸಿ ಕೊಂಡು ದೊಡ್ಡ ಸಾಹಿತಿ, ಲೇಖಕ ರಾದಿರಿ,‌ ಬಡತನ, ಶೊಷಣೆ, ಅಜ್ಞಾನವನ್ನು ವರ್ಣಿಸಿದಿರಿ, ದಯವಿಟ್ಟು ಈಗ ಅವರಿಗಾಗಿ ನಿಜದ ಧ್ವನಿ ಎತ್ತಿ, ಸ್ವಾರ್ಥಿಗಳಾಗ ಬೇಡಿ.

ಅಭಿಮಾನಿಗಳನ್ನು ಉಪಯೋಗಿಸಿ ಕೊಂಡು ಪ್ರಖ್ಯಾತ, ಶ್ರೀಮಂತ ನಟರಾದಿರಿ, ದಯವಿಟ್ಟು
ಅವರ ಕಷ್ಟ ಕಾರ್ಪಣ್ಯಗಳಿಗೆ ನೆರವಾಗಿ, ಕಪಟ ನಾಟಕ ಮಾಡಬೇಡಿ.

ಕೃಷಿ ಭೂಮಿಯನ್ನು ಉಪಯೋಗಿಸಿಕೊಂಡು ಕೋಟ್ಯಾಧಿಪತಿ DEVELOPER ಗಳಾದಿರಿ. ದಯವಿಟ್ಟು
ಈಗ ಅನ್ನಕ್ಕಾಗಿ ಪರಿತಪ್ಪಿಸುತ್ತಿರುವ ಮಕ್ಕಳಿಗೆ ಆಶ್ರಯದಾತರಾಗಿ, ದುರಹಂಕಾರಿಗಳಾಗಬೇಡಿ.

ವೀಕ್ಷಕರನ್ನು ಉಪಯೋಗಿಸಿಕೊಂಡು ಟಿಆರ್ಪಿ ಹೆಚ್ಚಿಸಿಕೊಂಡು ಅಧಿಕ ಜಾಹೀರಾತು ಗಳಿಸಿ ದುಡ್ಡು ಮಾಡಿಕೊಂಡಿರಿ. ದಯವಿಟ್ಟು
ವಿಕೃತ ಕಾರ್ಯಕ್ರಮ ಮಾಡದೆ ಒಳ್ಳೆಯ ವಾಸ್ತವಿಕ ಸುದ್ದಿ ಪ್ರಸಾರ ಮಾಡಿ.

ಕಾರ್ಮಿಕರ ಶ್ರಮ ಉಪಯೋಗಿಸಿಕೊಂಡು ಬೃಹತ್ ಉದ್ಯಮಿಗಳಾದಿರಿ. ದಯವಿಟ್ಟು
ಮದುವೆ, ಪಾರ್ಟಿಯಲ್ಲಿ ಶ್ರೀಮಂತಿಕೆ ಪ್ರದರ್ಶಿಸದೆ ಇಲ್ಲದವರಿಗೆ ದಾನಮಾಡಿ.ಕ್ರೂರಿಗಳಾಗಬೇಡಿ.

ಸಾರ್ವಜನಿಕರ ತೆರಿಗೆ ಹಣದಿಂದಲೇ ಸಂಬಳ ಪಡೆಯುವ ಅಧಿಕಾರಿಗಳಾದಿರಿ. ದಯವಿಟ್ಟು
ಅವರಿಗಾಗಿ ಬದುಕನ್ನು ಮುಡುಪಿಡಿ. ಜನರನ್ನು ಗೋಳಾಡಿಸುವ ಭ್ರಷ್ಟರಾಗಬೇಡಿ.

ರೈತರು, ಕಾರ್ಮಿಕರು, ಮಹಿಳೆಯರು, ದಲಿತರನ್ನು, ಉಪಯೋಗಿಸಿಕೊಂಡು ನಾಯಕರಾದಿರಿ. ದಯವಿಟ್ಟು,
ಈಗ ಅವರ ಕಣ್ಣೀರೊರೆಸುವ ಕೈಗಳಾಗಿ, ಅಮಾನವೀಯರಾಗಬೇಡಿ.

ಕೋಟ್ಯಾಂತರ ಜನ ಒಟ್ಟಿಗೇ ಬದಲಾಗುವುದು ಕಷ್ಟಸಾಧ್ಯ. ಆದರೆ,…,…..

ನಾಯಕರುಗಳು ಬದಲಾದರೆ, ಈ ಸಮಾಜದ ಬದಲಾವಣೆ ಸುಲಭವಾಗುತ್ತದೆ.

ಜನರ ಆಕ್ರೋಶ, ಅಸಮಾಧಾನ ಭುಗಿಲೇಳುವ ಮೊದಲು ಎಚ್ಚೆತ್ತುಕೊಳ್ಳಿ,

ಸರಳ, ಸುಂದರ, ಸಮ ಸಮಾಜ ನಮ್ಮದಾಗಿಸಿಕೊಳ್ಳೋಣ.

  • ವಿವೇಕಾನಂದ ಹೆಚ್ ಕೆ
Copyright © All rights reserved Newsnap | Newsever by AF themes.
error: Content is protected !!