ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳು ಒಂದೇ ಸೂರಿನಡಿ ಏಕೀಕರಣಗೊಂಡು ಇಂದಿಗೆ ಬರೋಬ್ಬರಿ ಅರವತ್ತೇಳು ವರ್ಷಗಳು ಸಂದವು. ನಮ್ಮ ರಾಜ್ಯಕ್ಕಿದ್ದ ಮೈಸೂರು ಎಂಬ ಹೆಸರನ್ನು ಕರ್ನಾಟಕ ಎಂದು ನಾಮಕರಣ ಮಾಡಿ ಸರಿಯಾಗಿ ಐವತ್ತು ವರ್ಷಗಳಾಗಿ ಅದರ ಸುವರ್ಣ ಸಂಭ್ರಮವನ್ನು ಇಂದು ಸಡಗರದಿಂದ ಆಚರಿಸುತ್ತಿದ್ದೇವೆ.
ಇಂತಹ ಒಂದು ಐತಿಹಾಸಿಕ ಸಂಧರ್ಭದಲ್ಲಿ ಕರ್ನಾಟಕದ ಏಕೀಕರಣದ ಮಹತ್ತರ ಇತಿಹಾಸ, ಹಲವು ಮಹನೀಯರ ತ್ಯಾಗ, ಬಲಿದಾನ, ನಿಸ್ವಾರ್ಥ ಹೋರಾಟ, ಪರಂಪರೆ ಬಿಂಬಿಸುವ ಗತವೈಭವ ಹಾಗೂ ಕನ್ನಡ ಭಾಷೆಯ ಪ್ರಾಚೀನತೆ, ಸಂಸ್ಕೃತಿ, ಹಿರಿಮೆ, ಗರಿಮೆ ಇವೇ ಮೊದಲಾದವುಗಳ ಬಗೆಗೆ ಬೆಳಕು ಚೆಲ್ಲಿ ಇಂದಿನವರಲ್ಲಿ ಕನ್ನಡಾಭಿಮಾನ ಬಿತ್ತುವ ಅನೇಕಾನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ “ಹುಟ್ಟಿದರೇ ಕನ್ನಡನಾಡಿನಲ್ಲಿ ಹುಟ್ಟಬೇಕೆಂಬ” ಉಕ್ತಿಗೆ ಉಸಿರು ತುಂಬುವ ಕೆಲಸ ಮಾಡುವುದು ಪ್ರತಿಯೊಬ್ಬ ಕನ್ನಡಿಗನ ಆಶಯವಾಗಬೇಕಿತ್ತು, ಆಲೋಚನೆಯಾಗಬೇಕಿತ್ತು ಹಾಗೂ ಆದ್ಯ ಕರ್ತವ್ಯವಾಗಬೇಕಿತ್ತು, ಅದಾಗದಿದ್ದರೂ ಪರವಾಗಿಲ್ಲ, ಕೊನೇಪಕ್ಷ ಕರುನಾಡಿನ ಇತಿಹಾಸಕ್ಕೆ ಅಪಚಾರವಾಗದ ರೀತಿಯಲ್ಲಿ ಜಾಗ್ರತೆಯಿಂದ ವರ್ತಿಸುವ ಹೊಣೆಗಾರಿಕೆ ಕನ್ನಡ ನೆಲದ ಋಣದಲ್ಲಿರುವ ಪ್ರತಿಯೊಬ್ಬರಲ್ಲಿ ಅದರಲ್ಲೂ ಮುಖ್ಯವಾಗಿ ಜನಪ್ರತಿನಿಧಿಗಳಲ್ಲಿ ಇರಬೇಕಿತ್ತು.
ಆದರೆ ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಮ್ಮೆಯಿಂದ ಎದೆಯುಬ್ಬಿಸಿ ಸಾರಬೇಕಾದ ಇಂತಹಾ ಸುಮೂಹೂರ್ತ ಸಮಯದಲ್ಲಿ ರಾಜ್ಯಕ್ಕಿರುವ ಕರ್ನಾಟಕದ ಹೆಸರನ್ನೇ ಬದಲಾಯಿಸುವ ಅತ್ಯಂತ ಅಸೂಕ್ಷ್ಮ, ಅಪ್ರಬುದ್ಧ ಹಾಗೂ ಅವಿವೇಕದ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿರುವುದು ನಿಜಕ್ಕೂ ನೋವಿನ ಸಂಗತಿ. ಅಷ್ಟೇ ಅಲ್ಲ, ಇಂತಹಾ ಸಂವೇದನಾರಹಿತ ಅತಿರೇಕಗಳು ಜರುಗುವುದು ಕೇವಲ ಕರ್ನಾಟಕದಲ್ಲಿ ಮಾತ್ರವೇನೋ ಎನ್ನುವಂತಾಗಿವೆ.
ಇಂತಹ ಅರೆಬೆಂದ ಅಥವಾ ಬೇಯಲು ಲಾಯಕ್ಕಿಲ್ಲದ ಆಲೋಚನೆಗಳನ್ನು ತೇಲಿಬಿಡುವ ಮೊದಲು ಎಲ್ಲರೂ ತಮ್ಮತಮ್ಮಲ್ಲಿಯೇ ಕೇಳಿ ಕೊಳ್ಳಬೇಕಾದ ಅತ್ಯಂತ ಮೂಲಭೂತವಾದ ಪ್ರಶ್ನೆಯೆಂದರೆ ಪ್ರಸ್ತುತ ಕರ್ನಾಟಕದ ಹೆಸರನ್ನು ಬದಲಾಯಿಸುವಂತಹ ಅನಿವಾರ್ಯತೆ, ಅಸಹನೆ ಅಥವಾ ಘನ ಉದ್ದೇಶದ ಜರೂರತ್ತಾದರೂ ಏನು ಎಂಬುದು ! ನೆನಪಿಡಿ, ಯಾವುದೇ ಒಂದು ದೇಶ, ರಾಜ್ಯ, ಜಿಲ್ಲೆ ಅಥವಾ ಪ್ರದೇಶದ ಹೆಸರನ್ನು ಬದಲಾಯಿಸುವ ಮುನ್ನ ಅದರ ಅಗತ್ಯತೆ ಹಾಗೂ ಅನಿವಾರ್ಯತೆಯನ್ನು ಅವುಗಳ ಹಿನ್ನೆಲೆಯೊಂದಿಗೆ ತಾಳೆ ಹಾಕಿ , ಸೂಕ್ಷ್ಮ ವಾಗಿ ಎಲ್ಲಾ ಆಯಾಮಗಳಿಂದಲೂ ಅವಲೋಕಿಸಿ ಕೊನೆಗೆ ಜನಾಭಿಪ್ರಾಯ ಸಂಗ್ರಹಿಸಿ ಎಲ್ಲರಿಗೂ ಸಮ್ಮತವಾಗುವಂತೆ ಮುಂದಡಿ ಇಡುವುದು ಪಾರಂಪರಿಕ ಪದ್ದತಿ. ಆದರೆ ಇದಾವುದರ ಲವಲೇಶ ಎಳೆಯೂ ಇಲ್ಲದೇ ಜವಾಬ್ದಾರಿ ಸ್ಥಾನದಲ್ಲಿರುವ ಕೆಲವರು ತಮ್ಮ ನಾಲಿಗೆಯನ್ನು ಸಡಿಲಬಿಟ್ಟು ರಾಜ್ಯದ ಹೆಸರಿನ ಬದಲಾವಣೆ ಬಗೆಗೆ ಏನೋ ಒಂದು ಹಗುರ ಹೇಳಿಕೆ ನೀಡಿ ವಿವಾದದ ಕಿಡಿಯನ್ನು ಎಬ್ಬಿಸಿ ಸಾಮಾಜಿಕ ಅಶಾಂತಿಗೆ, ಕನ್ನಡಿಗರ ಅಸಹನೆಗೆ ಕಾರಣರಾಗುವುದಿದೆಯಲ್ಲಾ, ಇದನ್ನೇ ದುರ್ದೈವ ಎನ್ನುವುದು .
ಈ ನಿಟ್ಟಿನಲ್ಲಿ, ಕರ್ನಾಟಕದ ಸಚಿವರೊಬ್ಬರು ಕರ್ನಾಟಕದ ಹೆಸರನ್ನು “ಬಸವನಾಡು” ಅಥವಾ “ಬಸವೇಶ್ವರರ ನಾಡು” ಎಂದು ಬದಲಿಸಿದರೆ ತಮ್ಮ ಅಭ್ಯಂತರವಿಲ್ಲವೆಂದು ಹೇಳುವ ಮೂಲಕ ಈ ವಿವಾದಕ್ಕೆ ಚಾಲನೆ ನೀಡಿದರೆ, ಅದನ್ನು ನಾಡಿನ ಪ್ರಮುಖ ಸಾಹಿತಿಯೂ ಬೆಂಬಲಿಸಿರುವುದು ಅಚ್ಚರಿಯಾಗಿದೆ. ಇನ್ನೊಬ್ಬ ಶಾಸಕರು ಕರ್ನಾಟಕದ ಬದಲು ” ಅಂಬೇಡ್ಕರ್ ನಾಡು” ಎಂದು ಹೆಸರಿಡುವುದು ಸೂಕ್ತ ಎಂದಿದ್ದಾರೆ. ಇದೇ ಸಾಲಿಗೆ ಮತ್ತೇ ಹಲವರು ಅವರವರ ಇಷ್ಟಾನುಸಾರ ಒಬ್ಬೊಬ್ಬ ವ್ಯಕ್ತಿಯ ಹೆಸರನ್ನು ತೇಲಿ ಬಿಡುತ್ತಲೇ ಹೋದರೆ, ಅಲ್ಲಿಗೆ ಕರ್ನಾಟಕ, ಕನ್ನಡ ಹಾಗೂ ಕನ್ನಡಿಗರ ಅಸ್ಮಿತೆಯೆಂಬುದನ್ನು ನಾಶ ಮಾಡಿ ಅದರ ಶವಪೆಟ್ಟಿಗೆಗೆ ಒಬ್ಬೊಬ್ಬರೂ ಒಂದೊಂದು ಮೊಳೆ ಹೊಡೆಯಲು ಸಿದ್ದರಾದಂತೆಯೇ ಸರಿ !
ಬಹುಶಃ ಹೀಗೆ ಹೇಳಿಕೆ ಕೊಡುವವರಲ್ಲಿ ಒಂದೋ ಕರ್ನಾಟಕ ಎಂಬ ಹೆಸರಿನ ಐತಿಹಾಸಿಕ ಹಿನ್ನೆಲೆಯ ಮಹತ್ವವೇನೆಂಬುದರ ಮಾಹಿತಿಯ ಕೊರತೆ ಇರಬಹುದು ಇಲ್ಲವೇ ರಾಜ್ಯದ ಹೆಸರಿಗಾಗಿ ತಾವು ತೇಲಿಬಿಡುವ ವ್ಯಕ್ತಿಗಳ ಹೆಸರುಗಳು ತಂದು ಕೊಡುವ ಮತಶಕ್ತಿಯ ರಾಜಕೀಯ ಲೆಕ್ಕಾಚಾರವೂ ಇರಬಹುದು. ಇವೆರಡೂ ಅಲ್ಲದಿದ್ದರೆ, ಸುಖಾಸುಮ್ಮನೆ ವಿವಾದಾತ್ಮಕ ಹೇಳಿಕೆ ನೀಡಿ ಪ್ರಚಾರದಲ್ಲಿರುವ ಉಮೇದೂ ಆಗಿರಬಹುದು. ಇವುಗಳಲ್ಲಿ ಯಾವುದೇ ಆಗಿದ್ದರೂ ಅದು ಅಕ್ಷಮ್ಯ !!
ಒಮ್ಮೆ ಕರ್ನಾಟಕದ ಹೆಸರನ್ನು ನಿಮ್ಮ ಉಸಿರಿನೊಂದಿಗೆ ಸಮೀಕರಿಸಿ ನೆನಪು ಮಾಡಿಕೊಳ್ಳಿ.
ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ. ಹಾಗೆಯೇ ಕರ್ನಾಟಕವೆಂದರೆ ಕೇವಲ ನಾಡು ಮಾತ್ರವಲ್ಲ, ಇದು ಇಲ್ಲಿನ ನೆಲದ ಪ್ರತೀ ಕಣ, ಜಲದ ಪ್ರತೀ ಹನಿ, ಭಾಷೆಯ ಪ್ರತೀ ಸೊಗಡಿನ ಅಖಂಡ ಅಸ್ಮಿತೆಯೂ ಹೌದು. ಎಲ್ಲೆಡೆ ಹರಡಿಕೊಂಡಿದ್ದ ಪ್ರಾಂತ್ಯಗಳನ್ನು ಒಂದುಗೂಡಿಸಿ ಮೈಸೂರನ್ನಾಗಿಸಲು , ಮೈಸೂರನ್ನು ಇನ್ನಷ್ಟು ವಿಶಾಲವಾಗಿಸಿ ಹೆಮ್ಮೆಯ ಕರುನಾಡನ್ನಾಗಿಸಲು ಪಣ ತೊಟ್ಟವರೆಷ್ಟೋ, ಜೀವಗಳನ್ನು ತ್ಯಾಗ ಮಾಡಿದವರೆಷ್ಟೋ, ತಮ್ಮ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದವರೆಷ್ಟೋ ? ಅವರೆಲ್ಲರ ಬೆವರಿನ ಹನಿಗಳು ಮುತ್ತಾಗಿ, ಆ ಮುತ್ತುಗಳು ಕರ್ನಾಟಕವಾಗಿ ನಮ್ಮೆಲ್ಲರನ್ನು ಕಾಪಾಡುತ್ತಿವೆ.
ಇತಿಹಾಸವನ್ನು ಬಲ್ಲವನು ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ ! ಹೀಗಾಗಿ ಕನ್ನಡದ ಉಜ್ವಲ ಪರಂಪರೆ, ಅನನ್ಯ ಸಂಸ್ಕ್ರತಿ, ಅವಿರತವಾದ ಸಾಧನೆ , ಅವಿಚ್ಛಿನ್ನ ಅಸ್ಮಿತೆ , ಸಾಲು ಸಾಲು ಸವಾಲುಗಳು, ಸಮಸ್ಯೆಗಳು, ಅಡೆ ತಡೆಗಳ ಬಗ್ಗೆ ಮಾತನಾಡುವಾಗ ಕನ್ನಡ ,ಕರ್ನಾಟಕ ಮತ್ತು ಕನ್ನಡಿಗರ ಬಗೆಗಿನ ಅದಮ್ಯ ಹೆಮ್ಮೆಯಿರಬೇಕು! ಪರಂಪರೆಯ ಬಗ್ಗೆ ಭವ್ಯ ಒಲವಿರಬೇಕು ಹಾಗೂ ಕನ್ನಡ ನನ್ನದೆನ್ನುವ , ಕನ್ನಡಿಗ ನಾನೆನ್ನುವಂತಹಾ, ಕರ್ನಾಟಕ ನಮ್ಮೆಲ್ಲರದ್ದೆನ್ನುವ ಎದೆಯ ತುಂಬಾ ಪ್ರಾಮಾಣಿಕ ಅಭಿಮಾನವೂ ಇರಲೇಬೇಕು. ಆಗ ಮಾತ್ರ ಕರುನಾಡ ತಾಯಿ ಜನ್ಮಭೂಮಿಯಾಗಿ ಕರ್ನಾಟಕವೆಂಬುದು ಪುಣ್ಯಭೂಮಿಯಾಗಿ ಕಂಗೊಳಿಸಲು ಸಾಧ್ಯ !
ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಇವರೆಲ್ಲಾ ಶ್ರೇಷ್ಠಾತಿಶ್ರೇಷ್ಠ ಶತಮಾನಪುರುಷರು. ದೇಶಕ್ಕೆ, ಸಮಾಜಕ್ಕೆ, ಮಾನವಕುಲದ ಕಲ್ಯಾಣಕ್ಕೆ ಇವರು ನೀಡಿದ ಕೊಡುಗೆಯಿಂದಾಗಿ ಪ್ರಾತಃ ಸ್ಮರಣೀಯರೂ ಆಗಿದ್ದಾರೆ. ಅವರ ಬಗೆಗೆ ಕನ್ನಡಿಗರೆಲ್ಲರಿಗೂ ಅಪಾರ ಗೌರವವಿದೆ. ಅದರಲ್ಲೂ ಹನ್ನೆರಡನೆಯ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣನವರು ಹಾಗೂ ಇಪ್ಪತ್ತನೆಯ ಶತಮಾನದಲ್ಲಿ ಸಮಾನತೆಯ ಕ್ರಾಂತಿಯನ್ನುಂಟು ಮಾಡಿದ ಡಾ. ಬಾಬಾ ಸಾಹೇಬರು ಮನುಕುಲಕ್ಕೆ ಬೆಳಕನ್ನು ತೋರಿದ ದಿವ್ಯ ಜ್ಯೋತಿಗಳಿದ್ದಂತೆ.
ಹಾಗಂತ ಕನ್ನಡಿಗರೆಲ್ಲರನ್ನೂ ಒಂದುಗೂಡಿಸಿ ಅರ್ಥಪೂರ್ಣವಾಗಿ , ಮಾತೃಪೂರ್ಣವಾಗಿ ಸಂಕೇತಿಸುವ “ಕರ್ನಾಟಕ” ಎಂಬ ಹೆಸರನ್ನು ಬದಲಾಯಿಸಿ ಮತ್ತಾವುದೇ ಮಹನೀಯರ ಹೆಸರನ್ನು ಪ್ರತಿಷ್ಟಾಪಿಸುವ ಯಾವುದೇ ಆಲೋಚನೆಯೆಂಬುದು ಕನ್ನಡಿಗರ ಭಾವನೆಗಳಿಗೆ ವಿರುದ್ಧವಾದದ್ದು. ಅಷ್ಟೇ ಅಲ್ಲ, ಒಂದೊಮ್ಮೆ ಬಸವಣ್ಣ ಅಥವಾ ಬಾಬಾ ಸಾಹೇಬರು ಬದುಕಿದ್ದು ಅವರೆದುರಿಗೆ ಈ ಪ್ರಸ್ತಾಪ ಇಟ್ಟಿದ್ದರೂ ಅವರು ಅದನ್ನು ಯಾವ ಕಾರಣಕ್ಕೂ ಒಪ್ಪುತ್ತಿರಲಿಲ್ಲ !
ಯಾರೋ ಒಂದಿಬ್ಬರು ಹೇಳಿದ ಮಾತ್ರಕ್ಕೆ ಹೆಸರು ಬದಲಾವಣೆಯಂತಹ ಕಾರ್ಯ ಅಷ್ಟು ಸುಲಭವಲ್ಲ
ವೆಂದು ಕೆಲವರು ಉದಾಸೀನ ಮಾಡಬಹುದು. ಆದರೆ ಬೆಂಕಿ ಹತ್ತಿ ಉರಿಯುವ ಮುನ್ನ ಸಣ್ಣ ಕಿಡಿ ಮಾತ್ರವೇ ಸಿಡಿಯುವಂತೆ ಕೆಲವರು ಅನೌಪಚಾರಿಕವಾಗಿ ಆಡಿರಬಹುದಾದ ಮಾತುಗಳೂ ಸಹ ಮುಂದೊಂದು ದಿನ ಗಂಭೀರ ಸ್ವರೂಪ ಪಡೆಯಲಾರದೆಂಬುದಕ್ಕೆ ಏನು ಗ್ಯಾರಂಟಿ ? ಹೀಗಾಗಿ ಇಂತಹಾ ದಿಕ್ಕೆಟ್ಟ ಆಲೋಚನೆಗಳನ್ನು ಮತ್ತೆ ತಲೆ ಎತ್ತದಂತೆ ಮೂಲದಲ್ಲೇ ಚಿವುಟಿ ಹಾಕುವುದೇ ಈ ರಾಜ್ಯೋತ್ಸವದ ಸಂಧರ್ಭದಲ್ಲಿ ಪ್ರತಿಯೊಬ್ಬ ಕನ್ನಡಿಗನೂ ತೊಡಬಹುದಾದ ನೈಜ ಪ್ರತಿಜ್ಞೆ.
ಬದಲಾಯಿಸಬೇಕು ನಿಜ….ಯಾವುದನ್ನು ? ಬದಲಾಯಿಸಬೇಕಾಗಿರುವುದು ರಾಜ್ಯದ ಹೆಸರನ್ನಲ್ಲ ; ಬದಲಿಗೆ ಕೆಲವು ಕನ್ನಡಿಗರ ಮನದೊಳಗೆ ಹುದುಗಿರಬಹುದಾದ ನಿರಭಿಮಾನದ ಕೆಸರು ಹಾಗೂ ಕನ್ನಡಪರವಲ್ಲದ ಒಣ ಚಿಂತನೆಗಳನ್ನು..!
- ಮರೆಯುವ ಮುನ್ನ *
ಯಾವುದೋ ಒಂದು ಸೈದ್ಧಾಂತಿಕ, ವೈಚಾರಿಕ ಕಾರಣಕ್ಕಾಗಿ, ರಾಜಕೀಯ ಕಾರಣಕ್ಕಾಗಿ ಅಥವಾ ಒಬ್ಬರನ್ನು ಓಲೈಸುವ ಇಲ್ಲವೇ ವಿರೋಧಿಸುವ ಕಾರಣಕ್ಕಾಗಿ ವಾದ ವಿವಾದ , ಪರ -ವಿರೋಧದ ಚರ್ಚೆಗಳನ್ನು ಹುಟ್ಟು ಹಾಕುವುದು ಈ ದೇಶದಲ್ಲಿ ಹೊಸತೇನಲ್ಲ. ಇದರ ಫಲವಾಗಿಯೇ ದೇವರು, ಧರ್ಮ, ಜಾತಿ, ವರ್ಗ ಇವೆಲ್ಲವೂ ಹೆಚ್ಚು ಹೆಚ್ಚು ಜೀವಂತಿಕೆಯಿಂದ ಚರ್ಚಾಸ್ಪದ ವಸ್ತುಗಳಾಗಿ ಅನುಕ್ಷಣವೂ ಉಸಿರಾಡುತ್ತಿರುವುದು. ಇಂತಹಾ ವಿಷಯಗಳಲ್ಲಿ ಯಾರು ಏನು ಬೇಕಾದರೂ ರಾಜಕೀಯ ಲಾಭ ಮಾಡಿಕೊಳ್ಳಲಿ ಬಿಡಲಿ. ಆದರೆ ನಮ್ಮ ರಾಜ್ಯದ ಅಥವಾ ದೇಶದ ಅಸ್ಮಿತೆಯನ್ನಾಗಿ ಗುರುತಿಸಿ ಕೊಂಡಿರುವ ಹೆಸರುಗಳನ್ನು ವಿನಾಕಾರಣ ಅಥವಾ ರಾಜಕೀಯ ಕಾರಣ ಹಿಂದಿಟ್ಟುಕೊಂಡು ಬದಲಾಯಿಸುವ ಅನಗತ್ಯ ಚರ್ಚೆಗಳನ್ನುಹುಟ್ಟುಹಾಕುವುದಿದೆಯಲ್ಲಾ , ಅದನ್ನು ಈ ನಾಡಿನ ಪ್ರಜೆ ಎಂದೂ ಕ್ಷಮಿಸಲಾರ .
ಒಂದೊಮ್ಮೆ ಇಂತಹದೇ ಅನಪೇಕ್ಷಿತ ಸನ್ನಿವೇಶಗಳನ್ನು ಬಲವಂತವಾಗಿ ತಂದೊಡ್ಡಿದಲ್ಲಿ ಅವನು ತನ್ನೊಳಗಿನ ಆಕ್ರೋಷವನ್ನು ಹೊರಹಾಕಿ, ಸಂವಿಧಾನ ಅವನ ಕೈಗಿತ್ತಿರುವ ಮತವೆಂಬ ಆಯುಧದಿಂದ ತಕ್ಕ ಸಮಯದಲ್ಲಿ ಪಾಠ ಕಲಿಸದೇ ಇರಲಾರ. ಇದು ಐತಿಹಾಸಿಕ ಸತ್ಯ .
ನಮ್ಮ ರಾಜ್ಯವನ್ನು , ದೇಶವನ್ನು ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳ ಮೂಲಕ ವೇಗವಾಗಿ ಬೆಳೆಯುತ್ತಿರುವ ಪ್ರಪಂಚದ ಜೊತೆ ಹೆಜ್ಜೆ ಹಾಕುವಂತೆ ಬದಲಿಸಿ, ಭಯೋತ್ಪಾದನೆ, ನಿರುದ್ಯೋಗ, ಹಸಿವು, ಬಡತನ, ಅನಾರೋಗ್ಯ, ಅನಕ್ಷರತೆ, ಮೌಢ್ಯ, ದಾರಿದ್ರ್ಯಗಳಿಂದ ಮುಕ್ತವನಾಗಿಸಿ ಬದಲಿಸಿ, ನಮ್ಮ ಇತಿಹಾಸ, ಸಂಸ್ಜೃತಿ ಪರಂಪರೆಗಳ ಶ್ರೇಷ್ಥತೆಯನ್ನು ಇಂದಿನ ಜನಾಂಗಕ್ಕೆ ತಿಳಿಸುವಂತೆ ಬದಲಿಸಿ, ಪ್ರತಿಯೊಬ್ಬ ಕನ್ನಡಿಗನೂ, ಪ್ರತಿಯೊಬ್ಬ ಭಾರತೀಯನೂ ಎದೆಯುಬ್ಬಿಸಿ ಹೆಮ್ಮೆಪಡುವಂತಹಾ ವಾತವಾರಣವನ್ನು ಸೃಷ್ಟಿಸಲು ಬದಲಿಸಿ…. ಆಗ ಮಾತ್ರ ಬದಲಾವಣೆಯ ನೈಜಾರ್ಥ ಕಂಡೀತು…..!
ಕನ್ನಡವನ್ನು ಕರ್ನಾಟಕವನ್ನು ಪ್ರೀತಿಸುವ ಎಲ್ಲ ಕನ್ನಡದ ಮನಸುಗಳಿಗೆ ಅರವತ್ತೆಂಟನೆಯ ಕನ್ನಡ ರಾಜ್ಯೋತ್ಸವದ ಹಾಗೂ ಸುವರ್ಣ ಕರ್ನಾಟಕ ಸಂಭ್ರಮದ ಹಾರ್ದಿಕ ಶುಭಾಶಯಗಳು.
ಕನ್ನಡವೇ ನಿತ್ಯ…. ಕರ್ನಾಟಕವೇ ಸತ್ಯ.
- ನವೆಂಬರ್ 11ರಿಂದ ಉಪ ಚುನಾವಣಾ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ನಿಷೇಧ
- ಮಂಡ್ಯ : ಹಿಂದೂ ಸ್ಮಶಾನವನ್ನು ವಕ್ಫ್ ಆಸ್ತಿಯೆಂದು ಘೋಷಿಸಿದ ಪ್ರಕರಣ
- MUDA ಹಗರಣ: ನಾಳೆ ಬೆಳಿಗ್ಗೆ 10 ಗಂಟೆಗೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗಲು ಸಿಎಂ ಸಿದ್ದರಾಮಯ್ಯ ನಿರ್ಧಾರ
- HDK – ನಿಖಿಲ್ ವಿರುದ್ಧ ಎಡಿಜಿಪಿ ಚಂದ್ರಶೇಖರ್ ದೂರು ದಾಖಲು
- ಚನ್ನಪಟ್ಟಣ ಉಪಚುನಾವಣೆ: ನಿಖಿಲ್ ಕುಮಾರಸ್ವಾಮಿ ಪರ ಪತ್ನಿ ರೇವತಿ ಪ್ರಚಾರದಲ್ಲಿ ಸಕ್ರಿಯ
More Stories
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!
ಹೆಂಗರುಳೇ ಕಲ್ಲಾದರೆ ನುಡಿವುದೇನು(ಬ್ಯಾಂಕರ್ಸ್ ಡೈರಿ)