May 20, 2022

Newsnap Kannada

The World at your finger tips!

deepa1

Picture Credits: MihirAkash

ಕೋವಿಡ್ ಎಂಬ ವೈರಸ್ ಸಹ ಪಕ್ಷಪಾತ ಮಾಡುತ್ತಿದೆಯೇ……

Spread the love

ಇನ್ಫೋಸಿಸ್ ನಿವ್ವಳ ಲಾಭ ಶೇ 11.8 ರಷ್ಟು ಹೆಚ್ಚಳ,

ಟಿಸಿಎಸ್ ಲಾಭ ಶೇ 12 ರಷ್ಟು ಹೆಚ್ಚಳ,

ಎಚ್ ಡಿ ಎಫ್ ಸಿ ಬ್ಯಾಂಕ್ ಲಾಭ ಶೇ 18 ರಷ್ಟು ಹೆಚ್ಚಳ,

ವಿಪ್ರೋ ಲಾಭ ಸಹ‌ ಹೆಚ್ಚಳ,

ರಿಲಯನ್ಸ್ ಕಂಪನಿಯ ಮುಖೇಶ್ ಅಂಬಾನಿ ಶ್ರೀಮಂತಿಕೆ ಮತ್ತಷ್ಟು ಹೆಚ್ಚಳ,

ಗೌತಮ್ ಅದಾನಿ ಲಾಭ ನಾಗಾಲೋಟದಲ್ಲಿ,

ಇನ್ನೂ ಇನ್ನೂ ಅನೇಕ ಈ ರೀತಿಯ ಕಂಪನಿಗಳ ಲಾಭ ಹೆಚ್ಚಾಗುತ್ತಲೇ ಇವೆ…..

ಸಂತೋಷ – ಭಾರತದ ಅಭಿವೃದ್ಧಿಯ ಬಗ್ಗೆ ಹೆಮ್ಮೆ ಇದೆ…….

ಹಾಗೆಯೇ ಮೇಕೆದಾಟು ನೀರಾವರಿ ಯೋಜನೆಯ ಬಗ್ಗೆ ಎರಡು ರಾಜಕೀಯ ಪಕ್ಷಗಳು ಲಕ್ಷಾಂತರ ಹಣ ಖರ್ಚು ಮಾಡಿ ಜಾಹೀರಾತು ನೀಡಿ ತಮ್ಮ ಸಾಚಾತನ ಪ್ರದರ್ಶಿಸುತ್ತಿವೆ. ಅವುಗಳ ಬಳಿ ಹಣಕ್ಕೇನು ಕೊರತೆ ಇಲ್ಲ…

ರಾಮನಗರದಲ್ಲಿ ರಾಜ್ಯದ ಮಂತ್ರಿ ಮತ್ತು ಸಂಸದರು ಬಹಿರಂಗವಾಗಿ ತಮ್ಮ ಗಂಡಸ್ತನದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಅವರ ಅಹಂಕಾರಕ್ಕೂ ಯಾವುದೇ ಮಿತಿ ಇಲ್ಲ…..

ಮಾಧ್ಯಮಗಳು ಪಾದಯಾತ್ರೆಯ ವಿಷಯದಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷದ ತಾಖತ್ತಿನ ಬಗ್ಗೆ ಪ್ರಶ್ನಿಸುತ್ತಾ ಬೆಂಕಿ ಹಚ್ಚುವ ಕೆಲಸವನ್ನು ಸಹ ನಿಷ್ಠೆಯಿಂದ ಮಾಡಿದರು ಮತ್ತು ಕೊರೋನಾ ಅಲೆಯಲ್ಲಿ – ಬ್ರೇಕಿಂಗ್ ನ್ಯೂಸ್ ಅಬ್ಬರದಲ್ಲಿ ಸಮೃದ್ಧವಾಗಿ ಬೆಳೆಯುತ್ತಿದ್ದಾರೆ….

ಮತ್ತೊಂದು ಕಡೆ…..

ಚಿಲ್ಲರೆ ಹಣದುಬ್ಬರ ದರವು ಆರು ತಿಂಗಳ ಗರಿಷ್ಠ 5.59 ಹೆಚ್ವಿದೆ.

ಕೈಗಾರಿಕಾ ಉತ್ಪಾದನೆ 9 ತಿಂಗಳ ಕನಿಷ್ಠ ಶೇ 1.4 ಕ್ಕೆ ಇಳಿಕೆ…

ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ,

ಸಾಮಾನ್ಯ ಜನ ಕೊರೋನಾ ಅಲೆಗೆ ತತ್ತರಿಸುತ್ತಿದ್ದಾರೆ………

ಕೆಲವರು ಮಾತ್ರ ಲಾಕ್ ಡೌನ್ ಭೀತಿಯಲ್ಲಿ ಗೊಣಗುತ್ತಾ ಸಂಕ್ರಾಂತಿ – ವೈಕುಂಠ ಏಕಾದಶಿ ಹಬ್ಬ ಆಚರಿಸುತ್ತಿದ್ದಾರೆ……

ಒಂದು ಕಡೆ ಶ್ರೀಮಂತಿಕೆಯ ಹೆಚ್ಚಳ. ಮತ್ತೊಂದು ಕಡೆ ಬಡವರ ಮಾರಣ ಹೋಮ…..

ಕೊರೋನಾ ಸಮಯದ ಸುಮಾರು ಎರಡು ವರ್ಷಗಳಲ್ಲಿ ಕೆಲವು ಉದ್ಯಮಿಗಳು ಮತ್ತು ಸಾಕಷ್ಟು ರಾಜಕಾರಣಿಗಳು ಅತ್ಯಂತ ಶ್ರೀಮಂತರಾಗುತ್ತಿದ್ದಾರೆ ಮತ್ತು ಅದೇ ಸಮಯದಲ್ಲಿ ಬಹಳಷ್ಟು ಮಧ್ಯಮ ವರ್ಗದವರು ಕೆಳಕ್ಕೆ ಕುಸಿದಿದ್ದಾರೆ. ಇದನ್ನು ಹೇಗೆ ಅರ್ಥೈಸುವುದು !

ಕೊರೋನಾ ಪಕ್ಷಪಾತವೇ ?
ವ್ಯವಸ್ಥೆಯ ವೈಫಲ್ಯವೇ ?
ದುಷ್ಟ ಶಕ್ತಿಗಳ ಮೇಲುಗೈ ಆಗಿದೆಯೇ ?
ಸಾಮಾನ್ಯ ಜನರ ದೌರ್ಬಲ್ಯವೇ ?

ಆಧುನಿಕ ಸಮಾಜದ ಅತ್ಯಂತ ಪ್ರಮುಖ ಅವಶ್ಯಕತೆಗಳಾದ ಶಿಕ್ಷಣ ಆರೋಗ್ಯ ಸಾರಿಗೆ ಉಡುಗೆ ತೊಡುಗೆ ಮನೆ ಬಾಡಿಗೆಗಳ ಬೆಲೆಯನ್ನು ಗಗನಕ್ಕೇರಿಸಿ, ದೇವರು ಧರ್ಮ ಭಕ್ತಿ ನಂಬಿಕೆಗಳಲ್ಲಿ ಜನರನ್ನು ಬಂಧಿಸಿ ಅವರ ಚಿಂತನಾ ಶಕ್ತಿಯನ್ನೇ ಕೊಲೆ ಮಾಡಿ ಬದುಕಿನ ಗುರಿಯನ್ನೇ ಹಣದತ್ತ ತಿರುಗಿಸಲಾಗಿದೆ.

” Success at any cost ” ಸಿದ್ದಾಂತದ ಅಡಿಯಲ್ಲಿ ಎಲ್ಲರಲ್ಲೂ ಹೇಗಾದರೂ ಮಾಡಿ ಹಣ ಮಾಡುವ ಮನೋಭಾವ ಹುಟ್ಟುಹಾಕಿ ಅವರೆಲ್ಲಾ ಹಣವೆಂಬ ಮರೀಚಿಕೆಯ ಹಿಂದೆ ಬಿದ್ದು ಒದ್ದಾಡುತ್ತಾ ತಮ್ಮ ಬಳಿ ಇರುವ ಹಣ ಜಮೀನುಗಳನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವಾಗ ಅಮೆಜಾನ್ ಸೇರಿ ದೊಡ್ಡ ಕಂಪನಿಗಳು ಅಭಿವೃದ್ಧಿ ಆಧುನಿಕತೆ ಸುಲಭ ಸರಳ ಕಡಿಮೆ ಎಂಬ ಹೆಸರಿನಲ್ಲಿ ಪರೋಕ್ಷವಾಗಿ ಮಧ್ಯಮ ವರ್ಗದ ಜನರ ಹಣವನ್ನು ದೋಚುತ್ತಿದ್ದಾರೆ. ಇದನ್ನು ಅರಿಯದ ಜನರು ಹಿತಾನುಭವದಲ್ಲಿ ತೇಲುತ್ತಿದ್ದಾರೆ.

ಲಾಕ್ ಡೌನ್ ಮಾಸ್ಕ್ ಸ್ಯಾನಿಟೈಸ್ ಫಿಸಿಕಲ್ ಡಿಸ್ಟೆನ್ಸ್ ನೈಟ್‌ ಕರ್ಪ್ಯೂ ವ್ಯಾಕ್ಸಿನೇಷನ್‌ ಬೂಸ್ಟರ್ ಡೋಸ್ ಎಲ್ಲಾ ತುಂಬಾ ಶಿಸ್ತು ಬದ್ಧವಾಗಿ ಮಾಡುವ ಆಡಳಿತ ವ್ಯವಸ್ಥೆ, ಶಿಕ್ಷಣ ಆರೋಗ್ಯ ಸಾರಿಗೆ ಬಾಡಿಗೆ ಬೆಲೆಗಳನ್ನು ನಿಯಂತ್ರಿಸುವ ಯೋಚನೆಯನ್ನು ಸಹ ಮಾಡುತ್ತಿಲ್ಲ.

ಜನರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗಾಳಿ ನೀರು ಆಹಾರಗಳ ಮಲಿನತೆ ತಡೆದು ಅದರ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಯಾವುದೇ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ.

ಸಾರ್ವಜನಿಕರೇ, ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಭವಿಷ್ಯ ಇನ್ನಷ್ಟು ಹದಗೆಡುವುದು ನಿಶ್ಚಿತ.

ದೇಹ ದಂಡಿಸದೆ, ಸಿಕ್ಕಿದ್ದನ್ನು ತಿಂದು ಬೇಗ ಅನಾರೋಗ್ಯಕ್ಕೆ ತುತ್ತಾಗುವ ಹಾಗೆ ಸಮಾಜದ ಸ್ವಾಸ್ಥ್ಯ ಹದಗೆಡುತ್ತಿರುವಾಗ ಅದನ್ನು ನಿರ್ಲಕ್ಷಿಸಿ ನಮ್ಮ ಪಾಡಿಗೆ ನಾವು ಮೌನವಾಗಿದ್ದರೆ ಮುಂದೆ ಪಶ್ಚಾತ್ತಾಪ ಪಡಬೇಕಾದವರು ನಾವೇ……

ಜನ ಪ್ರತಿನಿಧಿಗಳ ದುರಾಸೆಗೆ ಕಡಿವಾಣ ಹಾಕದಿದ್ದರೆ ನಮ್ಮ ಅವಸಾನದ ದಿನಗಳು ಹತ್ತಿರವಾದಂತೆ ಎಂಬುದನ್ನು ಮರೆಯದಿರಿ….

ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ –
ಬದಲಾವಣೆಯ ಸಮಯ ಬಂದಿದೆ……

ರಾಜಕಾರಣಿಗಳ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕಿ ಅವರನ್ನು ನಿಜವಾದ ‌ಸಾರ್ವಜನಿಕ ಸೇವೆಗೆ ತೊಡಗಿಸಿಕೊಳ್ಳುವಂತೆ ಮಾಡುವ ಸಾಧ್ಯತೆಗಳನ್ನು ಹುಡುಕುತ್ತಾ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ,


ವಿವೇಕಾನಂದ ಹೆಚ್ ಕೆ

error: Content is protected !!