January 5, 2025

Newsnap Kannada

The World at your finger tips!

deepa1

ನರಳುತ್ತಿದ್ದಾಳೆ ಭಾರತ ಮಾತೆ……

Spread the love

ಅಸಲಿಗಳು – ನಕಲಿಗಳು ಯಾರೆಂದು ತಿಳಿಯದೆ………..

ಸರಳ ವಿಷಯಗಳನ್ನು ಸೂಕ್ಷ್ಮವಾಗಿಸಿ,
ಸೂಕ್ಷ್ಮ ವಿಷಯಗಳನ್ನು ಆಕರ್ಷಕವಾಗಿಸಿ,
ಆಕರ್ಷಕ ವಿಷಯಗಳನ್ನು ಉಡಾಫೆಯಾಗಿಸಿ,
ಉಡಾಫೆಯನ್ನು ಬದುಕಾಗಿಸುವ – ಆಡಳಿತವಾಗಿಸುವ ಜೀವನ ಶೈಲಿಯನ್ನು ನಾವೀಗ ಕಾಣುತ್ತಿದ್ದೇವೆ……..

ಜನನಿಬಿಡ ಪ್ರದೇಶದಲ್ಲಿ ಸ್ವಯಂ ಚಾಲಿತ ಬಂದೂಕಿನಿಂದ ಯಾವುದೇ ಗೊತ್ತು ಗುರಿಯಿಲ್ಲದೆ ಜನಗಳನ್ನು ಶೂಟ್ ಮಾಡಿ ಎಷ್ಟು ಸಾಧ್ಯವೋ ಅಷ್ಟು ಜೀವಗಳನ್ನು ಬಲಿ ತೆಗೆದುಕೊಳ್ಳುವವರನ್ನು ರಾಕ್ಷಸ ಭಯೋತ್ಪಾದಕರು ಎನ್ನಲಾಗುತ್ತದೆ……………..

ಇದನ್ನು ತಡೆಯಲು ಬರುವ ಪೋಲೀಸ್ ಅಥವಾ ಸೈನಿಕರು ಅತ್ಯಂತ ಎಚ್ಚರಿಕೆಯಿಂದ ಯಾವ ಅಮಾಯಕ ಜನಗಳಿಗೂ ತೊಂದರೆಯಾಗದಂತೆ ಬಹಳ ಜವಾಬ್ದಾರಿಯಿಂದ ಮಾನವೀಯತೆಯಿಂದ ತಮಗೆ ಕಷ್ಟವಾದರೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿರ್ಧಿಷ್ಟ ಗುರಿಯೊಂದಿಗೆ ಹೋರಾಡಬೇಕಾಗುತ್ತದೆ…………..

ಇದಕ್ಕೆ ಸಂಪೂರ್ಣವಾಗಿ ಹೋಲಿಕೆಯಾಗುವುದು ನಕಲಿ ಬುದ್ಧಿಜೀವಿಗಳು ಮತ್ತು ನಕಲಿ ದೇಶಭಕ್ತರು ಹಾಗೂ ನಿಜವಾದ ದೇಶಪ್ರೇಮಿಗಳು ಮತ್ತು ನಿಜವಾದ ಪ್ರಗತಿಪರ ಚಿಂತನೆಯುಳ್ಳವರು……..

ಈ ನಕಲಿಗಳು ಬೇಜವಾಬ್ದಾರಿಯಿಂದ ಯಾವುದೇ ಗೊತ್ತುಗುರಿಯಿಲ್ಲದೆ ಭಯೋತ್ಪಾದಕರಂತೆ ತಮ್ಮ ಬಾಯಿಗೆ ಬಂದಂತೆ ಹೇಳುತ್ತಾ ಬರೆಯುತ್ತಾ ಜನರನ್ನು ಮೂರ್ಖರನ್ನಾಗಿಸಿ ದಾರಿ ತಪ್ಪಿಸುತ್ತಾರೆ. ಬಂದೂಕಿಗೆ ಪರ್ಯಾಯವಾಗಿ ತಮ್ಮ ನಾಲಿಗೆ ಅಥವಾ ಅಕ್ಷರಗಳನ್ನು ಹರಿಯಬಿಡುತ್ತಾರೆ………

ಅದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣಗಳು ಇವರಿಗೆ ವರವಾಗಿ ಪರಿಣಮಿಸಿದೆ. ಅಲ್ಪ ತಿಳಿವಳಿಕೆಯನ್ನು ನಿರೂಪಣೆಯಲ್ಲಿ ಮರೆಯಾಗಿಸಿ ಆಕರ್ಷಕವಾಗಿ ಒಂದೇ ದೃಷ್ಟಿಕೋನದಿಂದ ವಿಷಯಗಳನ್ನು ಜನರ ಮನಸ್ಸಿನಲ್ಲಿ ತುಂಬುತ್ತಾರೆ…..

ಆದರೆ ನಿಜವಾದ ದೇಶದ ಬಗ್ಗೆ ಕಾಳಜಿಯಿರುವ ವಿಚಾರವಾದಿಗಳು ಮತ್ತು ರಾಷ್ಟ್ರೀಯವಾದಿಗಳು ಅತ್ಯಂತ ಜವಾಬ್ದಾರಿಯಿಂದ ಮನುಷ್ಯ ಮತ್ತು ಈ ನೆಲದ ಹಿತದೃಷ್ಟಿಯಿಂದ ತುಂಬಾ ಗಂಭೀರವಾಗಿ ಮಾತನಾಡುತ್ತಾರೆ ಮತ್ತು ಬರೆಯುತ್ತಾರೆ. ತಾವು ಎಸಗಬಹುದಾದ ದುಡುಕಿನಿಂದ ದೇಶದ ಮೇಲಾಗುವ ಪರಿಣಾಮಗಳನ್ನು ಯೋಚಿಸಿ ಬಹಳ ತಾಳ್ಮೆಯಿಂದ ಪ್ರತಿಕ್ರಿಯಿಸುತ್ತಾರೆ……..

ಭಯೋತ್ಪಾದಕರ ಗುಂಡುಗಳು ಜನರ ಜೀವ ತೆಗೆದರೆ ಈ ನಕಲಿಗಳ ಬರಹಗಳು, ಭಾಷಣಗಳು ಸಮಾಜದ ಸ್ವಾಸ್ಥ್ಯವನ್ನೇ ಕುಲಗೆಡಿಸುತ್ತವೆ………….

ಅದನ್ನು ನಿಯಂತ್ರಿಸುವ ಮತ್ತು ಜನರಲ್ಲಿ ಸ್ವತಂತ್ರ ಮತ್ತು ವೈಚಾರಿಕ ಮನೋಭಾವ ಬೆಳೆಸುವ ಜವಾಬ್ದಾರಿ ಹೊರಬೇಕಿರುವುದು ಅಸಲಿಗಳ ಬಹುದೊಡ್ಡ ಕರ್ತವ್ಯ…………

ಅತ್ಯಂತ ತಾಳ್ಮೆಯಿಂದ ವಿವೇಚನೆಯಿಂದ ಕಷ್ಟ ನಷ್ಟ ನೋವುಗಳನ್ನು ಸಹಿಸಿಕೊಂಡು ಉದ್ರೇಕಕ್ಕೆ ಒಳಗಾಗದೆ ತಮ್ಮ ನಿಲುವುಗಳನ್ನು ದೀರ್ಘಕಾಲ ನಿರಂತರವಾಗಿ ಪೋಷಿಸಿಕೊಂಡು ರಾಷ್ಟ್ರ ನಿರ್ಮಾಣದಲ್ಲಿ ತಮ್ನ ಕೈಲಾದ ಸೇವೆ ಸಲ್ಲಿಸುವುದು ನಿಜವಾದ ಬುದ್ದಿಜೀವಿಗಳು ಮತ್ತು ನಿಜವಾದ ದೇಶಪ್ರೇಮಿಗಳ ಗುರುತರ ಜವಾಬ್ದಾರಿಯಾಗಿದೆ……….

ಈಗ ನಡೆದಿರುವ ಗಲಭೆಗಳಿಗೆ ಎರಡೂ ಕಡೆಯ ವಿದ್ವಂಸಕ ಮನೋಭಾವದ, ವಿವೇಚನೆ – ಅನುಭವ ಇಲ್ಲದ ನಕಲಿಗಳ ಹಾವಳಿಯೇ ಕಾರಣ. ಪ್ರಚೋದಿಸುವವರು – ಪ್ರಚೋದನೆಗೆ ಒಳಗಾಗುವವರು ಮತ್ತು ಇದರ ಒಳಸಂಚು ರೂಪಿಸುವವರು ಇದೇ ನಕಲಿಗಳು………

ಇದರಲ್ಲಿ ನಕಲಿಗಳ್ಯಾರು ಅಸಲಿಗಳ್ಯಾರು ಎಂದು ಗುರುತಿಸುವ ಸವಾಲು ‌ನಮ್ಮ ಮುಂದಿದೆ.

ವಿವೇಕಾನಂದ. ಹೆಚ್.ಕೆ.

Copyright © All rights reserved Newsnap | Newsever by AF themes.
error: Content is protected !!