ಪರ್ಸೆಂಟೇಜ್ ಕೊಡದಿದ್ದರೆ ಶಾಸಕರು ಗುದ್ದಲಿ ಪೂಜೆನೇ ಮಾಡಲ್ಲ – ಸಿದ್ದಣ್ಣ ಶೇಗಜಿ

Team Newsnap
1 Min Read

ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷದ ಶಾಸಕರೂ ಪರ್ಸೆಂಟೇಜ್‌ಗೆ ಇಳಿದಿದ್ದಾರೆ. ಅವರಿಗೆ ಪರ್ಸೆಂಟೇಜ್ ಕೊಡದೇ ಇದ್ದರೆ ಗುದ್ದಲಿ ಪೂಜೆನೂ ಮಾಡೋದಿಲ್ಲ ಎಂದು ಗುತ್ತಿಗೆದಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಣ್ಣ ಶೇಗಜಿ ನೇರವಾಗಿ ಆರೋಪಿಸಿದರು.

ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಿದ್ದಣ್ಣ ಅವರು, ಬಿಜೆಪಿ ಶಾಸಕರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಗೆ ಕಳಂಕ ತರುತ್ತಿದ್ದಾರೆ. ರಾಜ್ಯದಲ್ಲಿ 22 ಸಾವಿರ ಕೋಟಿ ರೂ. ಗುತ್ತಿಗೆದಾರರ ಬಿಲ್ ಬಾಕಿಯಿತ್ತು. ಬಜೆಟ್ ಅನುದಾನದಲ್ಲಿ 6 ಸಾವಿರ ಕೋಟಿ ರೂ. ಮಾತ್ರ ನೀಡಿದ್ದಾರೆ. ಇನ್ನೂ 18 ಸಾವಿರ ಕೋಟಿ ರೂ. ಬಿಲ್ ಬಾಕಿಯಿದೆ. ಆದರೂ ಟೆಂಡರ್ ಕರೆಯುತ್ತಲೇ ಇರುವುದೇಕೆ? ಮೊದಲು ಅನುದಾನ ಕೊಡಲಿ ಎಂದು ನಾವು ಎಷ್ಟೇ ಮನವಿ ಮಾಡಿದರೂ ಮುಖ್ಯಮಂತ್ರಿಗಳೂ ಮಾನ್ಯತೆ ಕೊಡುತ್ತಿಲ್ಲ. ಆದ್ದರಿಂದ ಗುತ್ತಿಗೆದಾರರು ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ಯಾವುದೇ ಗುತ್ತಿಗೆ ಪಡೆದರೂ ಶಾಸಕರಿಗೆ ಶೇ 10 ರಷ್ಟು ಪರ್ಸೆಂಟ್ ಕಮಿಷನ್ ಕೊಡಬೇಕಾಗಿದೆ. ಮುಖ್ಯ ಎಂಜಿನಿಯರ್, ಶಾಸಕರು, ಸಚಿವರು, ಕಡತಕ್ಕೆ ಅನುಮೋದನೆ ಕೊಡಿಸುವ ಅಧಿಕಾರಿಗಳು ಹೀಗೆ ಎಲ್ಲ ಹಂತದ ಅಧಿಕಾರಿಗಳವರೆಗೆ 30 ರಿಂದ 40 ಪರ್ಸೆಂಟ್ ಕಮಿಷನ್ ಕೊಡಬೇಕಾಗಿದೆ. ಡಾಂಬರು, ಸೀಮೆಂಟ್ ಸೇರಿದಂತೆ ಇತರ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿರುವಾಗ ಕಮಿಷನ್ ಕೊಟ್ಟು ಗುಣಮಟ್ಟದ ಕಾಮಗಾರಿ ಮಾಡುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ರಾಜ್ಯದ ಶೇ.80ರಷ್ಟು ಶಾಸಕರು 10 ಪರ್ಸೆಂಟ್ ಕಮಿಷನ್ ಇಲ್ಲದೆ, ಗುದ್ದಲಿ ಪೂಜೆನೂ ಮಾಡಲ್ಲ. ಹೀಗಾಗಿ ಅನೇಕ ಕಾಮಗಾರಿಗಳು ಸುಮಾರು 8 ತಿಂಗಳಿನಿಂದ ಬಾಕಿ ಉಳಿದಿವೆ. ಇವರೊಂದಿಗೆ ಕರ್ನಾಟಕದ ಖಜಾನೆ ನುಂಗುವ ಕಳ್ಳ ಅಧಿಕಾರಿಗಳನ್ನು ನಾವು ಹಿಡಿದಿದ್ದೇವೆ. ಹಿಡಿದುಕೊಟ್ಟರೂ ಮುಖ್ಯಮಂತ್ರಿಗಳು ಏಕೆ ಶಿಕ್ಷೆ ವಿಧಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

Share This Article
Leave a comment