ಜೆಡಿಎಸ್‌ ಅಧಿಕಾರಕ್ಕೆ ತನ್ನಿ : ಎಲ್‌ಕೆಜಿಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣ: HDK ಘೋಷಣೆ

Team Newsnap
2 Min Read

ರಾಜ್ಯದಲ್ಲಿ 2023ಕ್ಕೆ ಜೆಡಿಎಸ್‌ ಪಕ್ಷವನ್ನು ಬಹುಮತದಿಂದ ಅಧಿಕಾರಕ್ಕೆ ತನ್ನಿ . ಪ್ರತಿ ಗ್ರಾಮ ಪಂಚಾಯಿತಿಯ ಕೇಂದ್ರದಲ್ಲಿ ಎಲ್‌ಕೆಜಿಯಿಂದ 12ನೇ ತರಗತಿಯವರೆಗೆ ಇಂಗ್ಲಿಷ್‌ ಮತ್ತು ಕನ್ನಡ ಎರಡೂ ಮಾಧ್ಯಮದಲ್ಲಿ ಹೈಟೆಕ್‌ ಶಾಲೆಗಳನ್ನು ತೆರೆದು ಉಚಿತವಾಗಿ ಶಿಕ್ಷಣ ಕೊಡುವ ಯೋಜನೆ ಹಾಕಿಕೊಂಡಿದ್ದೇನೆ.
ಎಂದು ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ತುಮಕೂರು ಜಿಲ್ಲೆಯ ಶಿರಾದಲ್ಲಿ ಘೋಷಣೆ ಮಾಡಿದರು

ಶಿರಾ ನಗರದಲ್ಲಿ ಜನತಾ ಜಲಧಾರೆ ರಥಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ HDK ಅವರು, ನಾನು ಮುಖ್ಯಮಂತ್ರಿ ಆಗಬೇಕೆಂದು ಜನತಾ ಜಲಧಾರೆ ಯಾತ್ರೆ ಹಮ್ಮಿಕೊಂಡಿಲ್ಲ. ಬಹುಮತ ಬರದಿದ್ದರೂ ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನಾನು ಮುಖ್ಯಮಂತ್ರಿ ಆಗಲು ಪಕ್ಷಕ್ಕೆ ಮತ ಕೇಳಲು ಬಂದಿಲ್ಲ. ರಾಜ್ಯದಲ್ಲಿ ಶಾಶ್ವತವಾದ ನೀರಾವರಿ ಯೋಜನೆ ಜಾರಿ ಮಾಡುವ ಉದ್ದೇಶವೇ ಜನತಾ ಜಲಧಾರೆ ರಥಯಾತ್ರೆ ಕಾರ್ಯಕ್ರಮದ ಉದ್ದೇಶ ಎಂದರು.

ರಾಜ್ಯದ ನದಿಗಳ ನೀರನ್ನು ಬಳಕೆ ಮಾಡಿಕೊಳ್ಳುವಲ್ಲಿ 75 ವರ್ಷ ನಮ್ಮನ್ನು ಆಳಿದ ಎರಡೂ ರಾಷ್ಟ್ರೀಯ ಪಕ್ಷಗಳು ಸಂಪೂರ್ಣವಾಗಿ ವಿಫಲವಾಗಿವೆ. ಮಾಜಿ ಪ್ರಧಾನಿ ದೇವೇಗೌಡ ಅವರ ಅನುಭವದ ಮಾರ್ಗದರ್ಶನದಲ್ಲಿ ರಾಜ್ಯದ ನದಿಗಳ ನೀರನ್ನು ಬಳಕೆ ಮಾಡಿಕೊಂಡು ರಾಜ್ಯದಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡುವ ಮೂಲಕ ರಾಜ್ಯದ ರೈತರ ಬದುಕು ಹಸನು ಮಾಡಬೇಕೆಂದು ಪಣ ತೊಟ್ಟಿದ್ದೇನೆ ಎಂದರು.

ಪ್ರತಿ ಗ್ರಾ. ಪಂ. ಕೇಂದ್ರದಲ್ಲಿ ಹೈಟೆಕ್‌ ಆಸ್ಪತ್ರೆ: ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗೆ ಉಚಿತ ಆರೋಗ್ಯ ಸೇವೆ ನೀಡಲು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಲ್ಲಾ ಸೌಲಭ್ಯ ಹೊಂದಿರುವ 30 ಹಾಸಿಗೆಯುಳ್ಳ ಆಸ್ಪತ್ರೆ ಸ್ಥಾಪಿಸುತ್ತೇನೆ. ಈ ಆಸ್ಪತ್ರೆಯಲ್ಲಿ 24 ಗಂಟೆ ಇಬ್ಬರು ವೈದ್ಯರು ಕರ್ತವ್ಯ ನಿರ್ವಹಿಸುತ್ತಾರೆ ಎಂದರು.

25,000 ಕೋಟಿಗೆ 10,000 ಕೋಟಿ ಕಮಿಷನ್‌: ರಾಜ್ಯ ಸರಕಾರ ಯೋಜನೆಗಳ ಹೆಸರಿನಲ್ಲಿ ಜನರ ತೆರಿಗೆ ಹಣ ಲೂಟಿ ಮಾಡುತ್ತಿದೆ. ಶೇ. 40 ಪರ್ಸೆಂಟ್‌ ಕಮಿಷನ್‌ ಪಡೆದು ಹಲವು ಕಾಮಗಾರಿಗಳನ್ನು ಮಾಡುತ್ತಿದೆ ಎಂದು ದೂರಿದ ಕುಮಾರಸ್ವಾಮಿ, ತುಮಕೂರು ಜಿಲ್ಲೆಗೂ ಹೇಮಾವತಿ ನೀರು ಹರಿದು ಬರಲು ದೇವೇಗೌಡ ಅವರೇ ಕಾರಣ. ಆದರೆ ಬಿಜೆಪಿ, ಕಾಂಗ್ರೆಸ್‌ ಪಕ್ಷದ ಮುಖಂಡರು ತುಮಕೂರಿಗೆ ಹೇಮಾವತಿ ನೀರು ಹರಿಯಲು ದೇವೇಗೌಡರು ಅಡ್ಡಿ ಪಡಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

Share This Article
Leave a comment