December 25, 2024

Newsnap Kannada

The World at your finger tips!

deepa1

ಸಾವು ನೋವುಗಳ ಆತಂಕ ಸೃಷ್ಟಿಸುವ ಹಾಸ್ಯ- ವಿಷಾದದ ಕ್ರಿಯಾತ್ಮಕತೆ……

Spread the love

ಇದು ಮನುಷ್ಯರಲ್ಲಿ ಯಾವ ಸಮಯದಲ್ಲಿ ತೀವ್ರವಾಗಿ ಹೊರಬರುತ್ತದೆ ಎಂದು ಯೋಚಿಸತೊಡಗಿದಾಗ…..

ಈ ಭಾವನೆಗಳು ಸಾಮಾನ್ಯವಾಗಿ ಅಭಿವ್ಯಕ್ತಿ ಗೊಳ್ಳುವುದು ಸಾಹಿತ್ಯ ಸಂಗೀತ ಸಿನಿಮಾ ಚಿತ್ರಕಲೆ ಮುಂತಾದ ಲಲಿತಕಲಾ ಮಾಧ್ಯಮಗಳ ಮುಖಾಂತರ, ಅದನ್ನೇ ಮಾನದಂಡವಾಗಿ ಇಟ್ಟುಕೊಂಡು …….

ಬದುಕು ಆತಂಕ, ಅನಿಶ್ಚಿತತೆಯ, ಸಾವಿನ ಭಯದ, ಶೋಷಣೆ, ಅಸಹಾಯಕತೆಯ ಸಮಯದಲ್ಲಿ ಈ ಎರಡೂ ಪ್ರಜ್ಞೆಗಳು ಹೆಚ್ಚು ಜಾಗೃತವಾಗುತ್ತವೆ.

ಇದು ಈಗ ನೆನಪಾಗಲು ಕಾರಣ ಕೊರೋನಾ ಮತ್ತು ಓಮಿಕ್ರಾನ್ ವೈರಸ್ ಹಾಗು ಅನಿರೀಕ್ಷಿತ ಅಪಘಾತ ಮತ್ತು ಹೃದಯಾಘಾತ ನಿರ್ಮಿಸಿರುವ ಈ ಭಯದ ವಾತಾವರಣದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗುತ್ತಿರುವ ಅತ್ಯಂತ ಹಾಸ್ಯ ಪ್ರಜ್ಞೆಯ ನಕ್ಕು ನಗಿಸುವ ಕೆಲವು ಗಾದೆ ಚುಟುಕು ಜೋಕ್ ಗಳು ಮತ್ತು ಅದರೊಳಗೆ ಕಾಣುತ್ತಿರುವ ಸಾವಿನ ಭಯ…..

ಇದು ಕೇವಲ ಭಾರತಕ್ಕೆ ಅಥವಾ ಈಗಿನ ವಾತಾವರಣಕ್ಕೆ ಮಾತ್ರ ಸೀಮಿತವಲ್ಲ, ವಿಶ್ವದ ಎಲ್ಲಾ ನಾಗರಿಕತೆಗಳ ಎಲ್ಲಾ ದೇಶಗಳ ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ……

ಮಧ್ಯಕಾಲೀನ ಯೂರೋಪಿಯನ್ ದೇಶಗಳಲ್ಲಿ ನಡೆಯುತ್ತಿದ್ದ ರಕ್ತಪಾತದ ಸಂದರ್ಭದಲ್ಲಿ ಸೃಷ್ಟಿಯಾದ ಚಿತ್ರಕಲೆ – ಸಾಹಿತ್ಯ ಮಾನವ ಪ್ರಾಣಿಯ ನೋವನ್ನು ಅಂತಿಮ ಹಂತಕ್ಕೆ ಕೊಂಡೊಯ್ಯುತ್ತದೆ. ಮನುಷ್ಯ ಜೀವವೊಂದು ಎದುರಿಸಬಹುದಾದ ಎಲ್ಲಾ ತವಕ ತಲ್ಲಣಗಳು ಅಷ್ಟೊಂದು ಆಳವಾಗಿ ಹಿಡಿದಿಡುತ್ತವೆ. ನೋವು ಮರೆಯಲು ನಲಿವು ಆ ನಲಿವಿನಲ್ಲಿ ನೋವಿನದೇ ಅಥವಾ ಸಾವಿನದೇ ಛಾಯೆ .

ಚಾರ್ಲೀ ಚಾಪ್ಲಿನ್ ಅವರ ಸಿನಿಮಾಗಳು ಹಾಸ್ಯ ಮತ್ತು ನೋವಿನ ಎರಡು ಮುಖಗಳನ್ನು ಮನಮುಟ್ಟುವಂತೆ ಚಿತ್ರಿಸುತ್ತವೆ. ಅವೆರಡೂ ಅವರ ಚಿತ್ರಗಳಲ್ಲಿ ಜೊತೆಯಾಗುವುದು ಈ ಕ್ಷಣಕ್ಕೂ ಹಾಸ್ಯದೊಂದಿಗೆ ವಿಷಾದ ಮೂಡಿಸುತ್ತದೆ. ಚಾಪ್ಲಿನ್ ಹೇಳಿದರು ಎನ್ನಲಾದ ” ಮಳೆಯಲ್ಲಿ ನೆನೆಯುತ್ತಾ ನಡೆಯುವುದು ನನಗೆ ಹೆಚ್ಚು ಖುಷಿ ಮತ್ತು ಸ್ವಾತಂತ್ರ್ಯ ನೀಡುತ್ತದೆ. ಏಕೆಂದರೆ ಮಳೆಯ ಹನಿಗಳ ನಡುವೆ ನನ್ನ ಕಣ್ಣೀರು ಯಾರಿಗೂ ಕಾಣುವುದಿಲ್ಲ ” ನೋವನ್ನು ವರ್ಣಿಸಲು ಎಷ್ಟೊಂದು ಅರ್ಥಪೂರ್ಣ ಮಾತುಗಳು. ಹಾಗೆಯೇ ವಾಲೆಂಟೈನ್ ತನ್ನ ಸೆರೆವಾಸದಲ್ಲಿ ಪ್ರಿಯಕರನಿಗಾಗಿ ಬರೆದ ಆ ಪ್ರೇಮ ಪತ್ರಗಳು ಇಂದಿಗೂ ಯುವ ಪ್ರೇಮಿಗಳ ಎದೆಯಲ್ಲಿ ಕಿಚ್ಚು ಹಚ್ಚುತ್ತದೆ.

ಆಫ್ರಿಕಾದ ಕಡು ಬಡತನ ಹಸಿವು ಅಜ್ಞಾನ ವರ್ಣಬೇಧ ತಾರತಮ್ಯ ಅಲ್ಲಿನ ಶ್ರೇಷ್ಠ ಸಾಹಿತ್ಯ ರಚನೆಯ ಮೂಲ ಕಾರಣವಾಗಿದೆ. ಕ್ರಿಶ್ಚಿಯನ್ ಮಿಷನರಿಗಳು ಅಲ್ಲಿಗೆ ದಾಳಿ ಇಟ್ಟು ಮತಾಂತರ ಮಾಡಿ ಜನರಲ್ಲಿ ಬಿತ್ತಿದ ದೈವಿಕ ಪ್ರಜ್ಞೆ ಮತ್ತು ಅದು ಉಂಟುಮಾಡಿದ ಸಾಮಾಜಿಕ ಆರ್ಥಿಕ ವೈಪರೀತ್ಯಗಳು ಒಬ್ಬ ವೈಚಾರಿಕ ಚಿಂತಕರ ಮಾತಿನಲ್ಲಿ ಮೂಡಿದ ವ್ಯಂಗ್ಯ ಎಷ್ಟೊಂದು ಅದ್ಬುತ ಗಮನಿಸಿ. ಬ್ರಿಟೀಷರನ್ನು ಕುರಿತು ” ನೀವು ಆಫ್ರಿಕಾ ನೆಲದಲ್ಲಿ ಕಾಲಿಟ್ಟಾಗ ನಿಮ್ಮ ಬಳಿ ಬೈಬಲ್ ಇತ್ತು. ನಮ್ಮ ಬಳಿ ಜಮೀನಿತ್ತು. ಈಗ ನಮ್ಮ ಬಳಿ ಬೈಬಲ್ ಇದೆ. ನಮ್ಮ ಜಮೀನು ನಿಮ್ಮ ಬಳಿ ಇದೆ ” ಎಂತಹ ಅದ್ಭುತ ಹಾಸ್ಯ ಮತ್ತು ವ್ಯಂಗ್ಯ. ಆದರೆ ಅದರ ಆಳದಲ್ಲಿ ಇರುವುದು ವಿಷಾದನೀಯ ನೋವು.

ಫ್ರೆಂಚ್ ಕ್ರಾಂತಿಯ ಆಸುಪಾಸು, ರಷ್ಯನ್ ಕ್ರಾಂತಿ, ಎರಡು ವಿಶ್ವ ಮಹಾಯುದ್ಧದ ‌ನಂತರದಲ್ಲಿ, ಜಪಾನ್ ಮೇಲಿನ ಅಣು ಬಾಂಬಿನ ದಾಳಿಯ ನಂತರ ಈ ರೀತಿಯ ಮನಕಲಕುವ ಕಲಾಭಿವ್ಯಕ್ತಿ ಹೆಚ್ಚು ಹೆಚ್ಚು ರಚಿಸಲ್ಪಟ್ಟಿದೆ. ಮನುಷ್ಯ ಸಂಬಂಧಗಳು, ಬದುಕಿನ ನಶ್ವರತೆ ವಿವರಿಸುವಾಗ ತನಗಿವಿಲ್ಲದೆ ಮೂಡುವ ಭಾವನೆಗಳ ವ್ಯಕ್ತಪಡಿಸುವಿಕೆ ಮನೋಜ್ಞವಾಗಿರುತ್ತದೆ. ತನ್ನ ಅರಿವಿನ ಆಳದಲ್ಲಿ ನಡೆಯುವ ಹಿಂಸೆಯ ರೂಪ ಮನುಷ್ಯರಲ್ಲಿ ಅಚ್ಚಳಿಯದೆ ಉಳಿದು ವಿವಿಧ ರೂಪದಲ್ಲಿ ಪ್ರಕಟವಾಗುತ್ತದೆ.

ಮಧ್ಯಪ್ರಾಚ್ಯದ ರಕ್ತ ಸಿಕ್ತ ಯುದ್ಧಗಳ ಸನ್ನಿವೇಶದಲ್ಲಿ ಗಿಬ್ರಾನ್, ರೂಮಿ, ಗಾಲಿಬ್ ಗಳಂತ ತತ್ವಜ್ಞಾನಿಗಳು ಜನ್ಮ ತಾಳುತ್ತಾರೆ. ಪ್ರೀತಿ ಪ್ರೇಮ ವಿರಹ ಸೇರಿ ಬದುಕಿನ ಅಂತಃ ಸತ್ವವನ್ನೇ ತೆರದಿಡುತ್ತಾರೆ. ಗಾಡ ವಿಷಾದದ ಛಾಯೆ ಅವರ ಪ್ರತಿ ಅಕ್ಷರಗಳಲ್ಲೂ ಕಾಣಬಹುದು. ಹಾಗೆಯೇ ಅತ್ಯಂತ ಸಾಂಪ್ರದಾಯಿಕ ಇಸ್ಲಾಮಿಕ್ ದೇಶ ಇರಾನಿನಲ್ಲಿ ಮಾನವ ಪ್ರೀತಿಯ ಅಮೋಘ ಸಿನಿಮಾಗಳು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಣಬಹುದು.

ಬ್ರಿಟನ್ನಿನ ಕೈಗಾರಿಕೀಕರಣದ ಸಂದರ್ಭದಲ್ಲಿ ಕಾರ್ಮಿಕರ ಭೀಕರ ಶೋಷಣಾ ವ್ಯವಸ್ಥೆಯ ವಿರುದ್ಧ ಕಾರ್ಲ್ ಮಾರ್ಕ್ಸ್ ತರದವರು ಒಂದು ಸಿದ್ದಾಂತವನ್ನೇ ಮಂಡಿಸುತ್ತಾರೆ.

ವಿಯೆಟ್ನಾಂ ಯುದ್ಧ, ಚೀನಾದ ದೌರ್ಜನ್ಯ ಕಾರಿ ವಾತಾವರಣದಲ್ಲಿ ಸಹ ಭಾವನೆಗಳು
ಮುಕ್ತವಾಗಿ ತೆರೆದುಕೊಳ್ಳುತ್ತವೆ. ಬಹಳ ಹಿಂದೆ ಚೀನಾದ ನೆಲದಲ್ಲಿ ಕನ್ಫ್ಯೂಷಿಯಸ್ ಲಾವೋತ್ಸೆ ಮುಂತಾದ ತತ್ವಜ್ಞಾನಿಗಳು ಬದುಕಿನ ಸಾರವನ್ನು ತೆರೆದಿಡುತ್ತಾರೆ.
.
ಭಾರತದಲ್ಲಿ ಕ್ರಿಸ್ತ ಪೂರ್ವದ ಕಾಲದಲ್ಲಿ ಗೌತಮ ಬುದ್ದರು ದೇಹ ಮತ್ತು ಮನಸ್ಸಿನ ದಂಡನೆಯಿಂದ ಮನುಷ್ಯನನ್ನು ದಿನನಿತ್ಯ ಕಾಡುವ ಸಾವು ನೋವು ಬದುಕಿನ ತಳಮಳಕ್ಕೆ ಜ್ಞಾನೋದಯ ರೂಪದ ಉತ್ತರವೂ, ಮಹಾವೀರರ ಅಹಿಂಸೆಯ ತತ್ವವೂ, ಬಸವಣ್ಣನವರ ಅಸಮಾನತೆಯ ವಿರುದ್ದದ ಪ್ರತಿಭಟನೆಯೂ, ಅಂಬೇಡ್ಕರ್ ಅವರ ಶೋಷಣೆಯ ವಿರುದ್ಧ ಹೋರಾಟವೂ ಆಗಿನ ಸಾಮಾಜಿಕ ಅಭದ್ರತೆಯ ಸಂದರ್ಭಗಳಲ್ಲಿ ಮೂಡುವ ಗಾಡ ಪ್ರಭಾವಕ್ಕೆ ಸಾಕ್ಷಿಯಾಗಿದೆ‌.

ಈಗ ನೋಡಿ ಕೊರೋನಾ ಮನೆ ಬಾಗಿಲಿಗೆ ಬಂದು ಹೆದರಿಸಿರುವಾಗ ಏನು ಹಾಸ್ಯ, ಏನು ಸಾಹಿತ್ಯ, ಏನು ಚುಟುಕು ಗಾದೆ ಕವಿತಾ ರೂಪದಲ್ಲಿ ನಕ್ಕು ನಲಿಯುವಷ್ಟು ಸೃಷ್ಟಿಯಾಗುತ್ತಿದೆ.

” ಮನೆ ಒಳಗಿದ್ದರೆ ಯುಗಾದಿ, ಹೊರಗಿದ್ದರೆ ಸಮಾಧಿ “
” ಮನೆಯೊಳಗಿದ್ದರೆ ಹೋಳಿಗೆ ತುಪ್ಪ,
ಮನೆ ಹೊರಗಿದ್ದರೆ ಹಾಲು ತುಪ್ಪ “
” ಈಗ ಪೋಲಿಸರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ ಹುಷಾರು “
ಹೀಗೆ ಹಲವಾರು ಹಾಸ್ಯ ರೂಪದಲ್ಲಿ ಪ್ರಕಟವಾಗುತ್ತಿದೆ ಆದರೆ ಅದರಲ್ಲಿ ಮುಖ್ಯವಾಗಿ ಕಾಣುವುದು ಸಾವಿನ‌ ಆತಂಕ.

ಅದರಲ್ಲೂ ಜಾಗತೀಕರಣದ ನಂತರ ಹುಟ್ಟಿದ ಯುವ ಸಮುದಾಯ ಆಧುನಿಕ, ಸ್ಪರ್ಧಾತ್ಮಕ, ವೇಗದ ಜೀವನಶೈಲಿಯಿಂದ ತನ್ನ ಇರುವಿಕೆಯನ್ನೇ ಮರೆತಂತಾಗಿತ್ತು. ಕೊಳ್ಳುಬಾಕ ಸಂಸ್ಕೃತಿ ಸೃಷ್ಟಿಸಿದ ಹಣದ ದಾಹದಿಂದ ಹಗಲು ರಾತ್ರಿಗಳ ವ್ಯತ್ಯಾಸವೇ ಮರೆತು ಹೋಗಿತ್ತು. ವಿದೇಶ ಮತ್ತು ನಗರಗಳು ಅವರನ್ನು ಸಂಪೂರ್ಣ ಆಕರ್ಷಣೆಗೆ ಒಳಪಡಿಸಿದ್ದವು. ಬದುಕೆಂದರೆ ಹಣ ಮಾತ್ರ ಎಂಬ ಭ್ರಮೆಗೆ ತಳ್ಳಿದ್ದವು.

ಇದೀಗ ದಿಢೀರನೆ ಎಲ್ಲವೂ ಸ್ತಬ್ಧ. ಜೊತೆಗೆ ಸಾವಿನ ಭಯ. ಇರಲಿ ಬಿಡಿ ಇದರೊಂದಿಗೆ ಬದುಕಿನ ಅನುಭವಗಳ ಬುತ್ತಿ, ಬದುಕನ್ನು ಎದುರಿಸುವ ಸಾಮರ್ಥ್ಯ, ಮಾನವೀಯ ಮೌಲ್ಯಗಳ ಪುನರುಜ್ಜೀವನ, ನಮ್ಮ ಆತ್ಮಾವಲೋಕನ ಸಾಧ್ಯವಾಗುತ್ತದೆ.

ಇದು ನನ್ನ ಗ್ರಹಿಕೆಗೆ ನಿಲುಕಿದ ಸಣ್ಣ ಸರಳ ಅಭಿಪ್ರಾಯ…..

  • ವಿವೇಕಾನಂದ ಹೆಚ್ ಕೆ
Copyright © All rights reserved Newsnap | Newsever by AF themes.
error: Content is protected !!