November 16, 2024

Newsnap Kannada

The World at your finger tips!

deepa1

ಬದುಕನ್ನು ಈಗಿರುವ ಹಂತದಿಂದ ಇನ್ನೊಂದು ಹಂತಕ್ಕೆ ಮೇಲ್ದರ್ಜೆಗೆ ಏರಿಸುವುದು ಹೇಗೆ ?

Spread the love

ಸಾಮಾನ್ಯ ವರ್ಗದ ಬಹಳಷ್ಟು ಜನರ ಜೀವನ ಒಂದೇ ಹಂತದಲ್ಲಿ ನಿಂತ ನೀರಂತಾಗಿರುತ್ತದೆ. ಮನಸ್ಸಿನಲ್ಲಿ ಸಾವಿರ ಸಾವಿರ ಕನಸುಗಳು – ಆಸೆ ಆಕಾಂಕ್ಷೆಗಳು ತುಂಬಿದ್ದರೂ, ಪರಿಸ್ಥಿತಿಯ ಒತ್ತಡದಿಂದ ಏನೂ ಮಾಡಲಾಗದೆ ಕೊರಗುತ್ತಲೇ ಇರುತ್ತಾರೆ. ಯೌವ್ವನದ ದಿನಗಳಲ್ಲಿ ಸಿಕ್ಕಿದ – ತಪ್ಪಿದ ಅವಕಾಶಕ್ಕಾಗಿ ಪರಿತಪ್ಪಿಸುತ್ತಿರುತ್ತಾರೆ.

ಮಾಧ್ಯಮಗಳಲ್ಲಿ ನೋಡುವ ಕಲೆ ಸಾಹಿತ್ಯ ಸಂಗೀತ ವಿಜ್ಞಾನ ಕ್ರೀಡೆ ರಾಜಕೀಯ ಸಮಾಜ ಸೇವೆ ವ್ಯಾಪಾರ ವ್ಯವಹಾರ ಮುಂತಾದ ಕ್ಷೇತ್ರಗಳಲ್ಲಿ ಬೇರೆಯವರ ಸಾಧನೆ ಜನಪ್ರಿಯತೆ ನೋಡಿದಾಗ ನಾನು ಹಾಗೆ ಆಗಬೇಕಿತ್ತು ಎಂದು ಮರುಗುತ್ತಿರುತ್ತಾರೆ.

ಆದರೆ,
ಅದರಿಂದ ಹೊರಬರಲಾಗದೆ ಹಗಲುಗನಸುಗಳಲ್ಲಿಯೇ ಕಾಲ ಸರಿಯುತ್ತಿರುತ್ತದೆ.
ಅಂತಹವರಿಗೆ ಇನ್ನೊಂದು ಅವಕಾಶ ಇದೆಯೇ ?……….

ಖಂಡಿತ ಇದೆ.
ನೀವು ಈ ಕ್ಷಣ ಬದುಕಿನ ಯಾವ ಹಂತದಲ್ಲೇ ಇರಿ, ಆಧುನಿಕ – ಜಾಗತೀಕರಣದ ಈ ವೇಗದ ಸಮಾಜದಲ್ಲಿ ಅವಕಾಶದ ದಾರಿಗಳು ಇದ್ದೇ ಇರುತ್ತದೆ. ಅದನ್ನು ಹುಡುಕುವ ಸಹನೆ ಮತ್ತು ಉತ್ಸಾಹ ಮಾತ್ರ ನಾವು ಹೊಂದಿರಬೇಕು.

ಇತಿಹಾಸದ ನೆನಪಿನಲ್ಲಿ , ನಿರಾಸೆಯ ಕಾರ್ಮೋಡದಲ್ಲಿ,
ಚಿಂತಿಸುತ್ತಾ ಕಾಲ ಕಳೆಯದೆ, ಈಗಿನ ಪರಿಸ್ಥಿತಿಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡು ಕೆಲಸ ಪ್ರಾರಂಭಿಸಬೇಕು. ಹಿಂದಿನ ನೆನಪಿನ ಘಟನೆಗಳು ಎಷ್ಟೇ ಭಾರವಾಗಿದ್ದರೂ – ಹಗುರವಾಗಿದ್ದರೂ ಈ ಕ್ಷಣದ ಕೆಲಸಗಳನ್ನು ಹೊಸದಾಗಿ ಪ್ರಾರಂಭಿಸಿದಂತಯೇ ಭಾವಿಸಬೇಕು. ಅನುಭವವನ್ನು ಮಾತ್ರ ನಮ್ಮೊಂದಿಗೆ ಕೊಂಡೊಯ್ಯಬೇಕು.

ಅಂದಿನ ನಮ್ಮ ವಿಫಲತೆಗೆ ಕಾರಣವಾಗಿದ್ದ ಜನರಿಂದ ಆದಷ್ಟೂ ಅಂತರ ಕಾಯ್ದುಕೊಂಡು, ಅವರ ಮೇಲಿನ ಸೇಡಿನ ಭಾವವನ್ನು ಮರೆತು, ದಿವ್ಯ ನಿರ್ಲಕ್ಷ್ಯದಿಂದ, ಹೆಚ್ಚಿನ ನಿರೀಕ್ಷೆ ಹೊಂದದೆ ಕೆಲಸ ಪ್ರಾರಂಭಿಸಬೇಕು. ಮನಸ್ಸನ್ನು ತುಂಬಾ ವಿಶಾಲಗೊಳಿಸಿಕೊಳ್ಳಬೇಕು.
ಸಂಕುಚಿತ ಮನೋಭಾವ ನಮ್ಮಲ್ಲಿ ಸುಳಿಯದಂತೆ ನೋಡಿಕೊಳ್ಳಬೇಕು.

ಮೊದಲಿಗಿಂತ ಈಗಿನ ಹಾದಿ ತುಂಬಾ ಕಠಿಣ ಮತ್ತು ಅಡೆತಡೆಗಳು ಜಾಸ್ತಿ ಇರುತ್ತದೆ. ಅದೇ ಸಮಯದಲ್ಲಿ ಇದನ್ನು ನಿವಾರಿಸುವ ಅನುಭವಗಳು ಮತ್ತು ಅವಕಾಶಗಳೆಂಬ ಅಸ್ತ್ರಗಳು ನಮ್ಮ ಜೊತೆಯಲ್ಲಿರುತ್ತವೆ. ಒಂದು ಹಂತದವರೆಗೂ ಬದುಕನ್ನು ಸವಿದ ಸಣ್ಣ ಮಟ್ಟದ ತೃಪ್ತಿಯೂ ಇರುತ್ತದೆ. ಇತ್ತೀಚಿನ ಸಮೂಹ ಸಂಪರ್ಕ ಮಾಧ್ಯಮದ ಬೆಂಬಲವೂ ಇರುತ್ತದೆ. ಅದರಿಂದ ನಮಗೆ ಬೇಕಾದ ಮಾಹಿತಿ ಸಿಗಲು ಸಹಾಯವಾಗುತ್ತದೆ.

ಬದುಕೊಂದು ದೀರ್ಘ ಪಯಣ. ಅವಕಾಶಗಳ ಕಣಜ. ಕೊನೆ ಎಂಬುದು ಇಲ್ಲವೇ ಇಲ್ಲ ಎಂದು ಭಾವಿಸೋಣ. ಕೊನೆ ಬಂದಾಗ ಅದು ನಮ್ಮ ಅರಿವಿಗೆ ಬರುವುದೇ ಇಲ್ಲ. ಏಕೆಂದರೆ ಅದು ಬಂದಾಗ ನಾವು ಇರುವುದಿಲ್ಲ. ಇತರರ ಪ್ರತಿಕ್ರಿಯೆ ನಮಗೆ ಕೇಳಿಸುವುದೇ ಇಲ್ಲ.

ಆದ್ದರಿಂದ, ತಪ್ಪಿದ ಹಿಂದಿನ ಅವಕಾಶ, ನಡೆದು ಹೋದ ಒಳ್ಳೆಯ – ಕೆಟ್ಟ ಘಟನೆಗಳನ್ನು ತಲೆಯ ಮೇಲಿನಿಂದ ಇಳಿಸಿ ಕಾಲ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಲು ಪ್ರಾರಂಭಿಸೋಣ.
ಈ ಕ್ಷಣದಿಂದಲೇ………

ಹೌದು, ಅದು ಹೇಳಿದಷ್ಟು ಸುಲಭವಲ್ಲ. ಚಕ್ರವ್ಯೂಹದಲ್ಲಿ ಸಿಲುಕಿದ್ದೇವೆ ನಿಜ, ಆದರೆ ಸೋಲು ಒಪ್ಪಿಕೊಂಡು ಅಲ್ಲಿಯೇ ನಿರಾಸೆಯಿಂದ ಕೊನೆಯಾಗುವ ಬದಲು, ಹೋರಾಡುತ್ತಾ ಇನ್ನೊಂದು ಅವಕಾಶದ ಹುಡುಕಾಟ ನಡೆಸೋಣ. ಹೆಚ್ಚಿನ ಶ್ರಮ ತಾಳ್ಮೆ ಮತ್ತು ನಿರಂತರತೆ ಕಾಪಾಡಿಕೊಂಡರೆ ಯಶಸ್ಸು ನಮ್ಮದಾಗಬಹುದು.
ಕನಿಷ್ಠ ಹೋರಾಡುತ್ತಾ ಅದರಲ್ಲೇ ತೃಪ್ತಿ ಹೊಂದಬಹುದು.

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!