ಸರ್ಕಾರದ ಮಾರ್ಗದರ್ಶಕ ಬಿ.ಎಸ್. ಯಡಿಯೂರಪ್ಪ : ಮುಖ್ಯಮಂತ್ರಿ

Team Newsnap
1 Min Read
BJP Parva begins in Old Mysore Province - CM Bommai ಹಳೇ ಮೈಸೂರು ಪ್ರಾಂತದಲ್ಲಿ ಬಿಜೆಪಿ ಪರ್ವ ಆರಂಭ - ಸಿಎಂ ಬೊಮ್ಮಾಯಿ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಹೊಗಳುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದ್ಯಕ್ಕೆ ನಿಲ್ಲಿಸುವಂತೆ ಕಾಣಿಸುತ್ತಿಲ್ಲ. ಅವಕಾಶ ದೊರೆತಾಗಲೆಲ್ಲ ತಮ್ಮ ರಾಜಕೀಯ ಗುರುವಿನ ಸ್ಮರಣೆ ಮಾಡದೇ ಇರುವುದಿಲ್ಲ. ಅದು ಭಾನುವಾರವೂ ಮುಂದುವರಿಯಿತು.


ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ನಡೆದ “ಮುಖ್ಯಮಂತ್ರಿಗಳ ರೈತ ವಿದ್ಯಾ ನಿಧಿ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ ತಮ್ಮ ಭಾಷಣದ ಮಧ್ಯೆ, ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಸರ್ಕಾರದ ಮಾರ್ಗದರ್ಶ ಎಂದು ಬಣ್ಣಿಸಿದರು.


ನಮ್ಮ ಸರ್ಕಾರದ ಮಾರ್ಗದರ್ಶಕರಾದ ಯಡಿಯೂರಪ್ಪ ಅವರು ಹಲವು ರೈತ ಪರ ಯೋಜನೆಗಳನ್ನು ಜಾರಿಗೊಳಿಸಿದ್ದರು ಎಂದು ಸ್ಮರಿಸಿದರು.
ರಾಜ್ಯದಲ್ಲಿರುವ 17 ಲಕ್ಷ ರೈತ ಕುಟುಂಬಗಳಿಗೆ ಆರ್ಥಿಕ ಶಕ್ತಿ ಕೊಡುವುದು ತಮ್ಮ ಸರ್ಕಾರದ ಗುರಿಯಾಗಿದೆ. ರೈತ ಮಕ್ಕಳಿಗೂ ಒಳ್ಳೆಯ ಶಿಕ್ಷಣ ಸಿಗಬೇಕು ಎಂಬ ಆಶಯದೊಂದಿಗೆ ರೈತ ವಿದ್ಯಾ ನಿಧಿ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.


ಸಾಂಕೇತಿಕವಾಗಿ ನಾಲ್ಕು ವಿದ್ಯಾರ್ಥಿಗಳಿಗೆ ರೈತ ವಿದ್ಯಾರ್ಥಿ ನಿಧಿ ಚೆಕ್ ವಿತರಿಸಲಾಯಿತು. ನೇರ ನಗದು ವರ್ಗಾವಣೆ ಮೂಲಕ ಉಳಿದವರಿಗೆ ವಿದ್ಯಾರ್ಥಿ ವೇತನ ಪಾವತಿಸಲಾಗುವುದು ಎಂದು ಬಸವರಾಜ ಬೊಮ್ಮಾಯಿ ಇದೇ ಸಂದರ್ಭದಲ್ಲಿ ಹೇಳಿದರು.


ಕೇಂದ್ರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ದುಡಿಯುವ ಜನರ ಸಂಖ್ಯೆ ಇಳಿಕೆಯಾಗದಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು.


ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದರು. ರಾಜ್ಯದ ಕೃಷಿ ಸಚಿವ ಬಿ.ಸಿ.ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್, ತೋಟಗಾರಿಕಾ ಸಚಿವ ಮುನಿರತ್ನ, ರಾಜ್ಯ ಸಾವಯವ ಕೃಷಿ ಮಿಷನ್ ಅಧ್ಯಕ್ಷ ಎ.ಎಸ್. ಆನಂದ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Share This Article
Leave a comment