ಮನಸು ಎಂಬುದು ನಮ್ಮೊಳಗಿನ ಭಾವಕೇಂದ್ರ. ಅದೊಂದು ವಿಶಿಷ್ಟ ವಿಶ್ವ. ಜಗತ್ತಿನಲ್ಲಿ ಅತ್ಯಂತ ಅದ್ಭುತ ಎಂದರೆ ಮನಸ್ಸು. ಅದು ಎಲ್ಲಿ, ಹೇಗೆ ತನ್ನ ಅಸ್ತಿತ್ವವನ್ನು ಪ್ರದರ್ಶಿಸುತ್ತದೆ, ಯಾವ ಕ್ಷಣದಲ್ಲಿ ಎಲ್ಲಿ ಓಡುತ್ತದೆ. ಎಂಬುದನ್ನು ಯಾರೂ ಊಹಿಸಲಾರರು. ಪರಿಸ್ಥಿತಿಗೆ ತಕ್ಕಂತೆ ತನ್ನನ್ನು ತಾನು ಬದಲಾಯಿಸಿಕೊಳ್ಳುತ್ತ, ಪ್ರತಿಕ್ರಿಯಿಸುತ್ತಾ ನಡೆಯುತ್ತದೆ. ಅದಕ್ಕೇ ತಿಳಿದವರು ಮನಸ್ಸನ್ನು ’ಮರ್ಕಟ’ ಎನ್ನುತ್ತಾರೆ. ಕ್ಷಣಮಾತ್ರದಲ್ಲಿ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಜಿಗಿಯುವ ಮನಸ್ಸನ್ನು ನಿಯಂತ್ರಿಸುವುದೇ ಮನುಷ್ಯನ ಮುಂದಿರುವ ಸವಾಲು. ಹೀಗೆ ಮರ್ಕಟದಂತಿರುವ ಮನವನ್ನು ತಹಬದಿಗೆ ತರುವುದಾದರೂ ಹೇಗೆ? ಇದೇ ನಮ್ಮ ಮುಂದಿರುವ ಪ್ರಶ್ನೆ. ಹಣದಿಂದ, ಅಧಿಕಾರದಿಂದ, ಅಂತಸ್ತಿನಿಂದ ನೆಮ್ಮದಿ, ಆತ್ಮಶಾಂತಿಗಳನ್ನು ಖರೀದಿಸುವುದು ಅಸಾಧ್ಯ.
“ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ” ಎನ್ನುವ ಅಡಿಗರ ಮಾತಿನಂತೆ ಕೈಲಿ ಇರುವ ಹಕ್ಕಿಯ ಬಿಟ್ಟು ಪೊದೆಯಲ್ಲಿರುವ ಹಕ್ಕಿಗೆ ಕಣ್ಣು, ಕೈ ಹಾಕಿ ತಾರಮ್ಮಯ್ಯ ಆಡಿಸುವಾಗಲೇ ನಮಗೆ ಮಾಡಿದ ತಪ್ಪಿನ ಅರಿವಾಗುವುದು. ’ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ” ಎನುವ ಹಾಗೆ ಕಾಣದ ಬಣ್ಣಬಣ್ಣದ ಭ್ರಮಾಲೋಕದೊಳಗೆ ವಿಹರಿಸುತ್ತ, ಇರುವ ಸಂತಸದ ಕ್ಷಣಗಳನ್ನು ಜಾರಬಿಡುತ್ತೇವೆ. ಕಾಣದ ಕಡಲಿಗೆ ಹಂಬಲಿಸುವ ಮನವು ಅಂಗೈಲಿರುವ ಅಮ್ರುತವನ್ನು ಸವಿಯುವ ಹಾಗೆ ಮಾಡುವ ಅವಶ್ಯಕತೆ, ಅನಿವಾರ್ಯತೆ ಇದೆ.
ಆರೋಗ್ಯ ಎಂದರೇನು ಎಂದು ಮೊದಲು ತಿಳಿದುಕೊಳ್ಳೋಣ. ರೋಗರಹಿತವಾದದ್ದೇ ಆರೋಗ್ಯವಲ್ಲ. ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ದೈಹಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ, ಸಾಮಾಜಿಕ ಸುಸ್ಥಿತಿಯೇ ಆರೋಗ್ಯ.
ಸೌಂಡ್ ಮೈಂಡ್ ಇನ್ ಸೌಂಡ್ ಬಾಡಿ ಎನ್ನುವಂತೆ ದೈಹಿಕವಾಗಿ ಸುಸ್ಥಿರವಾಗಿದ್ದಾಗ ಮಾನಸಿಕ ಸುಸ್ಥಿರತೆಯೂ ಸಾಧ್ಯ. ಮತ್ತು ವೈಸ್ ವರ್ಸಾ.. ಮಾನಸಿಕ ಅಸ್ಥಿರತೆ ದೈಹಿಕವಾಗಿ ನಮ್ಮನ್ನು ದುರ್ಬಲರನ್ನಾಗಿಸುತ್ತದೆ. ಹಾಗಾಗಿ ಇಂದಿನ ಎಲ್ಲ ಖಾಯಿಲೆಗಳಿಗೆ ಮೂಲ ಕಾರಣವಾದ ಮಾನಸಿಕ ಅಸಮತೋಲನವನ್ನು ನಿವಾರಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಾಗಿದೆ.
ಆತ್ಮ ತ್ರುಪ್ತಿ, ಆತ್ಮಸ್ಥೈರ್ಯಗಳನ್ನು ವ್ರುದ್ಧಿಸಿಕೊಳ್ಳುವ ಮೂಲಕ ನಾವು ಬೆಳೆಯಬೇಕಿದೆ. ಸದಭಿರುಚಿಗಳಿಂದ ನಾವು ಅದನ್ನು ರೂಢಿಸಿಕೊಳ್ಳಬಹುದು. ಉತ್ತಮ ಸಂಗೀತವನ್ನು ಕೇಳಿದಾಗ ಮನಸ್ಸು ಅರಳುತ್ತದೆ.. ಸುಂದರ ಪ್ರಕೃತಿಯನ್ನು ಆಸ್ವಾದಿಸಿದಾಗ ಮನಸ್ಸು ಹಗುರವಾಗುತ್ತದೆ., ಹಸಿದವರಿಗೆ ಉಣಲಿಟ್ಟಾಗ ತ್ರುಪ್ತಿ ಸಿಗುತ್ತದೆ. ಒಳ್ಳೆಯತನ, ಮಾನವೀಯ ನಡವಳಿಕೆಗಳೇ ಆತ್ಮಸಂತೋಷದ ಮೂಲ.
ಮನಸ್ಸು ಚಂಚಲ. ಅದು ಸ್ಠಿರವಾಗಿರುವುದು ಸಾಧ್ಯವೇ ಇಲ್ಲ. ನಿರ್ಯೋಚನೆ ಅಷ್ಟು ಸುಲಭಸಾಧ್ಯವಲ್ಲ. ಬರುವ ಯೋಚನೆಗಳನ್ನು ನಯವಾಗಿ ತಿರಸ್ಕರಿಸಿ, ಅದಕ್ಕೆ ಅಂಟಿಕೊಳ್ಳದಂತೆ ನಿಭಾಯಿಸುವುದೇ ಸವಾಲು. ಯೋಗಾಭ್ಯಾಸ, ವೇದಾಭ್ಯಾಸ, ಮಂತ್ರಪಠಣ, ಧ್ಯಾನ, ಪ್ರಾಣಾಯಾಮಗಳೇ ಮೊದಲಾದ ಮನೋದೈಹಿಕ ಕಸರತ್ತುಗಳು ನಮ್ಮ ದೇಹ ಮತ್ತು ಮನಸ್ಸುಗಳ ಸಮ್ಮಿಲನಕ್ಕೆ ವೇದಿಕೆಯಾಗುತ್ತವೆ. ಎಲ್ಲ ಆತಂಕಗಳನ್ನು ಹೊರಹಾಕಲು ಧ್ಯಾನ, ಪ್ರಾಣಾಯಾಮ, ಆಧ್ಯಾತ್ಮಿಕ ವಿಚಾರಗಳು ಪ್ರೇರೇಪಿಸುತ್ತವೆ. ಹಾಗೆ ಮಾಡುವಾಗ ನಮ್ಮನ್ನು ನಾವು ಪ್ರಕ್ರುತಿಯ ಜೊತೆ ನಿರಂತರ ಸಂಪರ್ಕಕ್ಕೆ ಒಳಪಡಿಸಿಕೊಳ್ಳುವತ್ತ ನಡೆಯುತ್ತೇವೆ, ಅದರಿಂದ ನೆಮ್ಮದಿ ಉಂಟಾಗುತ್ತದೆ. ಮನಸ್ಸು ನಿರಾತಂಕವಾದಾಗ ನಮ್ಮ ಮೇಲೆ ನಮಗೆ ನಂಬಿಕೆ ಮೂಡುತ್ತದೆ. ನಮ್ಮ ಆಂತರಿಕ ಶಕ್ತಿ ನಮಗೆ ಗೋಚರಿಸುತ್ತದೆ. ಪ್ರತಿಬಾರಿ ಉಸಿರನ್ನು ಎಳೆದುಕೊಳ್ಳುವಾಗ ಪಾಸಿಟಿವ್ ಎನರ್ಜಿಯನ್ನು ಒಳಗೂ, ಉಸಿರನ್ನು ಹೊರಹಾಕುವಾಗ ನೆಗೆಟಿವ್ ಎನರ್ಜಿಯನ್ನು ಹೊರಗೂ ಹಾಕುವ ಭಾವವನ್ನು ಹೊಂದಿದರೆ, ನಿರಂತರವಾಗಿ ನಾವು ಪಾಸಿಟಿವ್ ಆಗಿರುವತ್ತ ಹೆಜ್ಜೆ ಇಟ್ಟಂತೆ…
ನಮ್ಮ ಮನದ ಭಾವಕೋಶ ಹೇಗಿರುತ್ತದೆಯೋ ನಮ್ಮ ಬಾಳೂ ಹಾಗೆಯೇ ಇರುತ್ತದೆ. ಮನಸ್ಸು ’ಸಣ್ಣತನ”ದ ಕಾಯಿಲೆಯಿಂದ ನರಳದಂತೆ ಮಾಡಬೇಕಾದರೆ ನಾವು ಮೊದಲು ಸದಭಿರುಚಿಗಳನ್ನು ಬೆಳೆಸಿಕೊಳ್ಳಬೇಕು. ಮನಸ್ಸನ್ನು ಪಾಸಿಟಿವ್ ದಾರಿಗೆ ಎಳೆದು ತರಬೇಕು. ಅದಕ್ಕೆ ಇಚ್ಛಾಶಕ್ತಿ ಇರಬೇಕಷ್ಟೇ. ನಮ್ಮನ್ನು ನಾವು ರೂಪಿಸಿಕೊಳ್ಳಲು ಏನು ಬೇಕಾದರೂ ಮಾಡಬಹುದು. ಅದು ನಮ್ಮಿಂದ ಖಂಡಿತ ಸಾಧ್ಯ.
ನಮ್ಮ ನೋವಿಗೆ, ನಮ್ಮ ನಲಿವಿಗೆ ಬೇರಾರೂ ಕಾರಣರಲ್ಲ; ನಾವೇ ಕಾರಣ. ನಮಗೆ ಟೈಮೇ ಇಲ್ಲ ಎನ್ನುವ ರಾಂಗ್ ಸ್ಟೇಟ್ ಮೆಂಟ್ ನಿಲ್ಲಿಸಬೇಕು. ಮದುವೆಗೆ ಹೋಗಲು, ಸೀರಿಯಲ್ ನೋಡಲು, ಶಾಪಿಂಗ್ ಗೆ ಹೋಗಲು ನಮಗೆ ಸಮಯವಿದೆ. ನಮ್ಮೊಳಗನ್ನು ನೋಡಿಕೊಳ್ಳಲು ನಮಗೆ ಸಮಯವಿಲ್ಲ. ನಮ್ಮ ಆತ್ಮವನ್ನು ಕಾಪಾಡುತ್ತಿರುವ ಈ ದೇಹವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳಲು ನಮಗೆ ಸಮಯ ಬೇಡವೇ? “ವೇರ್ ದೆರ್ ಈಸ್ ಎ ವಿಲ್, ದೇರ್ ಈಸ್ ಎ ವೇ”
ಮನೋದೈಹಿಕ ಸಾಮರ್ಥವನ್ನು ಹೆಚ್ಚಿಸಿಕೊಂಡು ನೆಮ್ಮದಿಯ, ಶಾಂತಿಯುತ ಜೀವನ ನಡೆಸುವ.. ನಮ್ಮ ತುಟಿಯಂಚಿನ ನಗುವನ್ನು ಯಾರೂ ಕಿತ್ತುಕೊಳ್ಳದಂತೆ ಕಾಪಾಡಿಕೊಳ್ಳುವ ಜವಾಬ್ದಾರಿಯೂ ನಮ್ಮದೇ…
ನೋವು, ಭಯ ಅಥವಾ ಕೀಳರಿಮೆ ಇದ್ದರೆ ಮೊದಲು ಅದರಿಂದ ಹೊರಬರೋಣ. ಬದುಕಿನಲ್ಲಿ ಸಂಭವಿಸಿದ ಸಂತೋಷ, ಸಂಭ್ರಮದ ಘಳಿಗೆಯನ್ನು ನೆನೆಯುತ್ತ, ಮತ್ತೆ ಅವು ಸಂಭವಿಸುವುದೆಂಬ ಭರವಸೆಯೊಂದಿಗೆ ಬದುಕೋಣ.
ಜಿ.ಎಸ್.ಶಿವರುದ್ರಪ್ಪನವರು ಹೇಳುವಂತೆ “ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ” ... ಅಹಮಿಕೆಯ ಮೊಟ್ಟೆಯೊಡೆದು ಪ್ರೀತಿಯ ಹಕ್ಕಿ ಹೊರಬರದಿದ್ದರೆ ನಮ್ಮ ನಮ್ಮ ಕೋಟೆಯಲಿ ನಾವೇ ಬಂಧಿ, ನಾವು ಒಂಟಿ.
ಆದರ್ಶ, ಮೌಲ್ಯಯುತ ಬದುಕನ್ನು ನಮ್ಮದಾಗಿಸಿಕೊಳ್ಳೋಣ. ಪಡೆದ ಸೌಲಭ್ಯಕ್ಕೆ ಧನ್ಯವಾದ ಹೇಳಿ, ತಪ್ಪಿಗೆ ಮನಸಾರೆ ಸಾರಿ ಹೇಳಿ. ಮಾನಸಿಕ ಸ್ಥಿಮಿತತೆಯನ್ನು ಸಾಧಿಸುವುದು ನಮ್ಮ ಕೈಲೇ ಇದೆ. ಲೋಭ, ಮೋಹ, ಮದ, ಮಾತ್ಸರ್ಯಗಳಿಂದ ಒಂದೊಂದೇ ಇಂಚು ದೂರ ಸರಿಯೋಣ. “ಗುಣಕ್ಕೆ ಮತ್ಸರ ಬೇಡ” ಇತರರ ಸಂತೋಷದಲ್ಲಿ ನಮ್ಮ ಸಂತೋಷ ಕಾಣುವ ವಿಶಾಲ ಹ್ರುದಯ ನಮ್ಮದಾಗಬೇಕಷ್ಟೇ.
ಆಸೆ ಮಿತವಾಗಿ ಮನಸು ಹಿತವಾಗಿ ಇದ್ದರೆ ಇಹಲೋಕದಲ್ಲೇ ಸ್ವರ್ಗವನ್ನು ಕಾಣಬಹುದು..
More Stories
ಮಳೆ ನಿಂತರೂ ಮರದ ಹನಿ ನಿಲ್ಲದು
ತಾಯ್ತನ ಮತ್ತು ಗಟ್ಟಿತನ
ನಮ್ಮ ಸಮೃದ್ಧ ಚಾಮರಾಜನಗರದ ಮಹದೇಶ್ವರ ಮಲೆಯ ಸುತ್ತಾಮುತ್ತಾ