December 23, 2024

Newsnap Kannada

The World at your finger tips!

Holi , festival , india

ಹೋಳಿ ಹುಣ್ಣಿಮೆ(Holi)ಕಾಮನ ಹಬ್ಬ

Spread the love

ಪಾಲ್ಗುಣ ಮಾಸದ ಶುದ್ಧ ಹುಣ್ಣಿಮೆ ಅಂದರೆ ಚಾಂದ್ರಮಾನ ಪಂಚಾಂಗದ ಪ್ರಕಾರ ವರ್ಷದ ಕೊನೆಯ ಹುಣ್ಣಿಮೆ. ಇದನ್ನು ಹೋಳಿ ಹುಣ್ಣಿಮೆ ಎಂದು ಕರೆಯಲಾಗುತ್ತದೆ.ಪಾಲ್ಗುಣ ಹುಣ್ಣಿಮೆಯ ವೇಳೆಗೆ ಗಿಡಮರಗಳು ಚಿಗುರಿ ಹೂಗೊಂಚಲು ಮೂಡಿ ಹಸಿರಿನಿಂದ ಕಂಗೊಳಿಸುತ್ತಿರುತ್ತವೆ. ಇದು ವಸಂತನನ್ನು ಸ್ವಾಗತಿಸುವ ಮುನ್ಸೂಚನೆ ಕೂಡ.

ಈ ಹಬ್ಬವು ವಸಂತ ಮಾಸವನ್ನು ಸ್ವಾಗತಿಸುವುದಷ್ಟೇ ಅಲ್ಲ ಏಕತೆಯನ್ನು ಬಿಂಬಿಸಿ ಹೊಸದನ್ನು ಸ್ವಾಗತಿಸುವ ಹಬ್ಬ. ಬಣ್ಣಗಳನ್ನು ಎರೆಚಾಡಿ ಸಂಭ್ರಮಿಸುವುದಕ್ಕಷ್ಟೇ ಈ ಹಬ್ಬವು ಸೀಮಿತವಾಗಿಲ್ಲ. ಬಡವ-ಬಲ್ಲಿದ, ಜಾತಿ ಧರ್ಮದ ಎಲ್ಲೆಯನ್ನು ಮೀರಿ ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ತಾತ್ವಿಕ ನಿಲುವನ್ನು ಆಚರಣೆಗೆ ತರುವುದೇ ಈ ಹೋಳಿ ಹುಣ್ಣಿಮೆ.

ಇದನ್ನು ವಸಂತೋತ್ಸವ, ರಂಗಪಂಚಮಿ, ಫಗ್ವಾ, ಡೋಲ್ ಯಾತ್ರಾ ಎಂಬ ಹೆಸರುಗಳಿಂದ ದೇಶದೆಲ್ಲೆಡೆ ಆಚರಿಸುತ್ತಾರೆ. ಇತಿಹಾಸ ಕಾಲದಲ್ಲಿಯೂ ಹೋಳಿ ಹಬ್ಬ ಆಚರಣೆಯ ಬಗ್ಗೆ ಐತಿಹ್ಯಗಳು ದೊರೆತಿವೆ. ವಿಜಯನಗರದ ಅರಸರ ಕಾಲದಲ್ಲಿ ಹಾಗೂ ಭಾಗವತ ಪುರಾಣ ಮತ್ತು ವಿಷ್ಣು ಪುರಾಣದಲ್ಲಿಯೂ ಈ ಕುರಿತ ಮಾಹಿತಿ ಉಲ್ಲೇಖವಿದೆ.

ನಮ್ಮ ಅಂತರಂಗ ಬಹಿರಂಗ ಶುದ್ಧಿಯಿಂದ ಕಾಮವನ್ನು ನಿಗ್ರಹಿಸಿ ಪ್ರೇಮವನ್ನು ಸಾಕ್ಷಾತ್ಕರಿಸಿಕೊಳ್ಳುವ ಮೂಲಕ ಬದುಕನ್ನು ಕಂಡುಕೊಳ್ಳುವ ಪರಿಯೇ ಕಾಮ ದಹನದ ಹೋಳಿ ಹಬ್ಬ.

ಬಣ್ಣಗಳ ಹಬ್ಬ

ಹೋಳಿ ಹಬ್ಬವನ್ನು ಬಣ್ಣಗಳ ಹಬ್ಬವೆಂದು ಹೇಳಲಾಗುತ್ತದೆ ,ಒಬ್ಬರು ಮತ್ತೊಬ್ಬರಿಗೆ ವಿವಿಧ ಬಣ್ಣಗಳಿಂದ ಸ್ನೇಹಿತರಿಗೆ, ಬಂಧುಗಳಿಗೆ ಹಚ್ಚಿ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ,ಅದರಲ್ಲೂ ಉತ್ತರ ಭಾರತದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.

ನೈಸರ್ಗಿಕ ಬಣ್ಣಗಳು

ಚಳಿಗಾಲ ಮುಗಿದು ಬೇಸಿಗೆ ಆರಂಭದಲ್ಲಿ ಕಾಮನ ಹಬ್ಬ ಆಚರಿಸಲಾಗುತ್ತದೆ. ಸೂರ್ಯನ ಕಿರಣಗಳು ಚರ್ಮದ ಮೇಲೆ ನೇರವಾಗಿ ಬೀಳುತ್ತವೆ,ಇದರಿಂದ ಶರೀರದಲ್ಲಿ ಉಷ್ಣಾಂಶ ಏರುಪೇರಾಗುತ್ತದೆ,ಕೆಲವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ.ಇದರಿಂದ ರಕ್ಷಿಸಲ್ಪಡುವುದಕ್ಕೆ ನೈಸರ್ಗಿಕವಾದ ಬಣ್ಣ ತಯಾರಿಸುತ್ತಿದ್ದರು.

ಮುತ್ತುಗದ ಮರ

ಮುತ್ತುಗದ ಪುಷ್ಪಗಳನ್ನು ನೀರಲ್ಲಿ ನೆನಸಿ ಬಣ್ಣ ತಯಾರಿಸುತ್ತಿದ್ದರು,ಮುತ್ತುಗದ ಪುಷ್ಪಗಳ ಬಣ್ಣ ಕಫ ನಿವಾರಕ ,ಮುತ್ತುಗದ ಎಲೆ ಅಥವಾ ಎಲೆಯಿಂದ ಮಾಡಿದ ತಟ್ಟೆಯಲ್ಲಿ ಊಟ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು,ಆದ್ದರಿಂದ ಮುತ್ತುಗದ ಮರದ ಹೂಗಳಿಂದ ತಯಾರಿಸಲ್ಪಟ್ಟ ಬಣ್ಣ ಎರಚುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ ಆರೋಗ್ಯ ರಕ್ಷಣೆಯಾಗುತ್ತದೆ.

leaf plate
ಮುತ್ತುಗದ ಹೂ

ಕಾಮನ ಕಟ್ಟೆ

ರತಿ ಮನ್ಮಥರ ಈ ಸಡಗರದ ಹಬ್ಬಕ್ಕೆ ಧಾರವಾಡ ಜಿಲ್ಲೆಯಾದ್ಯಂತ ತಯಾರಿ ನಡೆಸಲಾಗುತ್ತಿದೆ. ಅದರಲ್ಲೂ ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದ ಕಾಮದೇವ ಹಾಗೂ ನವಲಗುಂದ ತಾಲೂಕಿನ ಕಾಮದೇವ ಬಹಳಷ್ಟು ಪ್ರಸಿದ್ಧಿ ಪಡೆದಿವೆ.

ಕಾಮದೇವನನ್ನು ಓಣಿ ಓಣಿಯಲ್ಲಿ ಪ್ರತಿಷ್ಠಾಪನೆ ಮಾಡಿ ಎಲ್ಲ ಜನರು ಸೇರಿಕೊಂಡು ಕಾಮದೇವನಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಓಕುಳಿ ಆಡುತ್ತಾರೆ. ಅದರಂತೆ ಮನೆಯಲ್ಲಿ ಹಬ್ಬದ ಅಡುಗೆ ಜೊತೆಯಲ್ಲಿ ಸಕ್ಕರೆ ಗುಂಡುಗಳಿಂದ ಸರ ಮಾಡಿ ಮಕ್ಕಳಿಗೆ ಹಾಕುತ್ತಾರೆ ನೋಡುವುದಕ್ಕೆ ಚಂದವಾಗಿರುತ್ತದೆ.

ಕಾಮನ ಪ್ರತಿಷ್ಟಾಪನೆ ಗ್ರಾಮೀಣ ಪ್ರದೇಶದಲ್ಲಿ ಬಹಳ ವಿಜೃಂಭಣೆಯಿಂದ ಜರುಗುತ್ತದೆ. ಊರಿನ ಪ್ರತಿ ಓಣಿ(ಗಲ್ಲಿಗಳಲ್ಲಿ)ಗಳಲ್ಲಿ ಒಂದೊಂದು ನಿಗದಿತ ಸ್ಥಳದಲ್ಲಿ ಕಾಮನ ಕಟ್ಟೆಯೆಂಬ ಸ್ಥಳದಲ್ಲಿ ರತಿಮನ್ಮಥರ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡುವರು. ಈ ಸಂದರ್ಭ ವಯಸ್ಸಿನ ಬೇಧವಿಲ್ಲದೇ ಹಲಗೆ ಬಾರಿಸುತ್ತ
“ಕಾಮಣ್ಣನ ಕಟ್ಟುವ ಕರಿಬಿದರ ಸವರುತ್ತ,
ಕಾಮಣ್ಣಗ ಬಾಸಿಂಗ ಕಟ್ಟುವ ನಮ್ಮ ಕಾಮ
ಇನ್ನೆರಡ ದಿವಸ ಇರಲಿಲ್ಲೋ.” ಎಂದು ಲಬೋ ಲಬೋ ಲಬೋ ಎಂದು ಹೊಯ್ಯುಕೊಳ್ಳುವ ಈ ಆಚರಣೆ ನಿಜಕ್ಕೂ ವಿಶಿಷ್ಟವಾದುದು.

ಹೋಳಿ ಹಬ್ಬ ಕುರಿತಂತೆ ಎರಡು ದೃಷ್ಟಾಂತಗಳು

ಶಿವರಾತ್ರಿ ಅಮವಾಸೆಯಿಂದ ಹೋಳಿ ಹುಣ್ಣಿಮೆಗೆ ಹದಿನೈದರಿಂದ ಇಪ್ಪತ್ತು ದಿನಗಳ ಅಂತರ ಪರಮಾತ್ಮನು ತುಂಗಭದ್ರಾ ನದಿಯ ದಡದಲ್ಲಿರುವ ಹೇಮಗಿರಿ ಪರ್ವತದ ಶಿಖರದಲ್ಲಿ ತಪಸ್ಸು ಮಾಡುವಾಗ ಅವನ ತಪಸ್ಸನ್ನು ಭಂಗ ಮಾಡಿ ಮದುವೆಯಾಗಲು ಪಾರ್ವತಿಯು ಕಾಮದೇವನಲ್ಲಿ ಮೊರೆ ಹೋಗುತ್ತಾಳೆ. ಆಗ ವಿಷ್ಣುವಿನ ಅಪ್ಪಣೆಯಂತೆ ಕಾಮದೇವನು ತನ್ನ ಸೈನ್ಯ ಸಮೇತ ಶಿವನಿದ್ದ ಸ್ಥಳಕ್ಕೆ ಬಂದು ತನ್ನ ಬಾಣಗಳಿಂದ ತಫೋಭಂಗಗೊಳಿಸುತ್ತಾನೆ, ಇದರಿಂದ ಕೋಪಗೊಂಡ ಶಿವನು ತನ್ನ ಉರಿಗಣ್ಣಿನಿಂದ ಕಾಮನನ್ನು ಸುಟ್ಟು ಭಸ್ಮ ಮಾಡುತ್ತಾನೆ. ಗಂಡನನ್ನು ಕಳೆದುಕೊಂಡ ರತಿಯನ್ನು ಸಮಾಧಾನಪಡಿಸುವುದು ಪಾರ್ವತಿಗೆ ಕಷ್ಟವಾಗುತ್ತದೆ. ಆಗ ಪಾರ್ವತಿಯು ಕೂಡ ಘೋರ ತಪಸ್ಸನ್ನಾಚರಿಸಿ ಪರಶಿವನನ್ನು ಒಲಿಸಿಕೊಂಡಳಲ್ಲದೇ ಕಾಮನಿಗೆ ಮರುಜನ್ಮ ಕೊಡಿಸುವಳು. ತನ್ನಿಮಿತ್ತ ಹೋಳಿ ಆಚರಣೆ ಬಂದಿದೆ ಎಂಬುದು ಪ್ರತೀತಿ.

holi

ಹಿರಣ್ಯಕಶ್ಯಪನ ತಂಗಿ ಹೋಲಿಕಾ ತನಗೆ ಬೆಂಕಿಯಿಂದ ಮರಣ ಬರಬಾರದೆಂದು ವರ ಪಡೆದಿದ್ದಳು. ಇದನ್ನು ಹಿರಣ್ಯಕಶಿಪು ತನ್ನ ಮಗ ಪ್ರಹ್ಲಾದನನ್ನು ಪರಿವರ್ತಿಸಲು ಎಲ್ಲ ಪ್ರಯತ್ನಗಳನ್ನು ಮಾಡಿ ಸೋತಾಗ ತನ್ನ ತಂಗಿಯ ತೊಡೆಯ ಮೇಲೆ ಕುಳ್ಳಿರಿಸಿ ಸುತ್ತಲೂ ಅಗ್ನಿಯನ್ನು ಉರಿಸಲು ಆ ಅಗ್ನಿಯಲ್ಲಿ ಹೋಲಿಕಾ ತನ್ನ ರಾಕ್ಷಸೀ ಪ್ರವೃತ್ತಿಯಿಂದ ಆಹುತಿಯಾಗುತ್ತಾಳೆ. ತನ್ನ ಭಕ್ತಿಯಿಂದ ಪ್ರಹ್ಲಾದ ಭಗವಂತನಿಂದ ರಕ್ಷಿಸಲ್ಪಡುವನು. ಅವಳ ನೆನಪಿಗೆ ಹೋಲಿ ಹಬ್ಬ ಆಚರಣೆ ಬಂತೆಂದು ಹೇಳುವರು.

ರಾವಣನ ಮೂರ್ತಿಯ ದಹನ, ಕಾಮನ ದಹನ

ದೆಹಲಿಯಲ್ಲಿ ಈ ದಿನದಂದು ಹತ್ತು ತಲೆಯ ರಾವಣನ ಮೂರ್ತಿಯನ್ನು ಬಿದಿರಿನಿಂದ ತಯಾರಿಸಿ, ಅದಕ್ಕೆ ಹಳೇ ಬಟ್ಟೆಗಳನ್ನೆಲ್ಲಾ ಧರಿಸಿ ಗಣ್ಯರನ್ನು ಕರೆದು, ಅವರ ಸಮ್ಮುಖದಲ್ಲಿ ಲಂಕೇಶನನ್ನು ಸುಡುವುದು ವಾಡಿಕೆ.

ಕಾಮನ ದಹನಕ್ಕೆ ಕಟ್ಟಿಗೆ ಸಂಗ್ರಹಿಸುವುದು ಪ್ರತೀ ವರ್ಷದ ವಾಡಿಕೆ. ಹಾಗೆ ಪ್ರತಿ ಮನೆ ಮನೆಗೂ ಸಂಗ್ರಹಿಸಲು ಹೋಗುವಾಗ ಬರೀ ಸುಮ್ಮನೆ ಶಾಂತಿ ರೀತಿಯಿಂದ ಹೋಗದೆ,

fire holi

ಕಾಮಣ್ಣನ ಮಕ್ಕಳು, ಕಳ್ಳ ಸುಳ್ಳ, ಸೂ.. ಮಕ್ಕಳು. ಅಡಿಕೆ ಗೋಟು ಪೊರಕೆ ಏಟು,
ಕಾಮಣ್ಣ ಮಕ್ಕಳು, ಕಳ್ಳ ನನ್ನ ಮಕ್ಕಳು, ಏನೇನು ಕದ್ದರು? ಸೌದೆ ಬೆರಣಿ ಕದ್ದರು,
ಯಾತಕ್ಕೆ ಕದ್ದರು? ಕಾಮಣ್ಣನ ಸುಡೋಕೆ ಕದ್ದರು.

ಎಂದು ಜೋರಾಗಿ ಹೇಳುತ್ತಾ , ಕೊನೆಗೆ ಗುಂಪಿನಲ್ಲಿ ಇದ್ದವರೆಲ್ಲರೂ ಲಬೊ… ಲಬೊ… ಲಬೊ… ಎಂದು ಬಾಯಿ ಬಾಯಿ ಬಡಿದು ಕೊಳ್ಳುತ್ತಾ ಕಾಮನ ದಹನ ಮಾಡುತ್ತಾರೆ.


Copyright © All rights reserved Newsnap | Newsever by AF themes.
error: Content is protected !!