November 16, 2024

Newsnap Kannada

The World at your finger tips!

teachersdday1

ಹರ ಮುನಿದರೆ ಗುರು ಕಾಯುವನು – ಗುರು ಮುನಿದರೆ ಕಾಯುವವರಾರು

Spread the love
champaka
ಚಂಪಕ ರಾಘವೇಂದ್ರ

‘ಹರ ಮುನಿದರೆ ಗುರು ಕಾಯುವನು ಗುರು ಮುನಿದರೆ ಕಾಯುವವರಾರು’ ಎಂಬಂತೆ ಗುರುವೆಂದರೆ ಅಗಾದ ಶಕ್ತಿ,ಅಜ್ಞಾನದ ಕತ್ತಲೆಯಿಂದ ಸುಜ್ಞಾನದ ಬೆಳಕಿನೆಡೆಗೆ ಕರೆದುಕೊಂಡು ಹೋಗುವವನೇ ಗುರು,
ಶಿಕ್ಷಕರಾಗಿ ಉಪರಾಷ್ಟ್ರಪತಿಯಾಗಿ ರಾಷ್ಟ್ರಪತಿಯಾಗಿ ಸೇವೆಸಲ್ಲಿಸಿದ ಡಾ/ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಇಂದು ಶಿಕ್ಷಕರಿಗೆ ಉನ್ನತ ಗೌರವ ಸ್ಥಾನಮಾನ ತಂದುಕೊಟ್ಟ ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ.

ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದಾಗಿದೆ, ಶಿಕ್ಷಕರು ಕೇವಲ ಓದು ಬರಹವನ್ನು ಮಾತ್ರ ಕಲಿಸದೆ ಮಕ್ಕಳಲ್ಲಿ ಸಂಸ್ಕಾರ ಬಿತ್ತಿ ಬದುಕಿನ ಮೌಲ್ಯಗಳನ್ನು ಕಲಿಸುತ್ತಾರೆ,ನೀತಿ ಕಥೆಗಳನ್ನು ಹೇಳುತ್ತಾ ದೇಶಾಭಿಮಾನ ಭಾಷಾಭಿಮಾನವನ್ನು ಬೆಳೆಸುತ್ತಾರೆ, ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಾರೆ, ಮನೆಯೇ ಮೊದಲ ಪಾಠಶಾಲೆಯಾದರೂ ಮಕ್ಕಳು ಶಿಕ್ಷಕರ ಮಾತನ್ನೇ ಕೇಳುತ್ತಾರೆ, ಶಿಕ್ಷಕರೆಂದರೆ ಸರ್ವರಿಗೂ ಗೌರವ ಅಭಿಮಾನ ಅಕ್ಕರೆ , ನಮ್ಮ ಸಹಪಾಠಿಗಳ ಹೆಸರು ಮರೆತರು ಜೊತೆಯಲ್ಲಿಯೇ ಕೆಲಸ ಮಾಡಿದವರ ಹೆಸರನ್ನು ಮರೆತರು ಶಿಕ್ಷಕರ ಹೆಸರನ್ನು ಅವರೊಂದಿಗೆ ಕಳೆದ ಶಾಲಾ ದಿನದ ನೆನಪುಗಳನ್ನು ಎಂದಿಗೂ ಮರೆಯುವುದಿಲ್ಲ, ಎಷ್ಟೇ ಉನ್ನತ ಹುದ್ದೆಯಲ್ಲಿದ್ದರೂ ಕೂಡ ತಾವು ಕಲಿತ ಶಾಲೆ ಮತ್ತು ಶಿಕ್ಷರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ

ನನಗೆ ಎಲ್ಲಾ ಶಿಕ್ಷಕರು ಅಚ್ಚುಮೆಚ್ಚು, ಆದರೂ ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಯಶೋದಮ್ಮ ಎಂಬ ಶಿಕ್ಷಕಿಯೆಂದರೆ ತುಸು ಹೆಚ್ಚು ಪ್ರೀತಿ,ಅವರು ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿದ್ದರು,ಅವರು ಎಲ್ಲಾ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಕಾಣುತ್ತಿದ್ದರು, ಪ್ರತಿ ಶುಕ್ರವಾರ ಶಾರದಾಪೂಜೆ ಇರುತ್ತಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತಿದ್ದವು ನನಗೆ ಚಿಕ್ಕಂದಿನಿಂದಲೂ ನೃತ್ಯ ನಾಟಕಗಳೆಂದರೆ ಅಚ್ಚುಮೆಚ್ಚು, ಎಲ್ಲಾ ಕಾರ್ಯಕ್ರಮಗಳಲ್ಲೂ ಸ್ವಾಗತ ನೃತ್ಯ ನಾನು ಹಾಗೂ ನನ್ನ ಗೆಳತಿದಾಗಿರುತ್ತಿತ್ತು, ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದರು, ಗಣೇಶ ಹಬ್ಬ ಮತ್ತು ಶಾಲಾ ವಾರ್ಷಿಕೋತ್ಸವದಲ್ಲಿ ನಾಟಕಗಳಿರುತ್ತಿದ್ದವು, ಆ ದಿನಗಳಿಗಾಗಿಯೇ ಕಾಯುತ್ತಿದ್ದೆವು,

ಅವರಿಗೆ ಇಬ್ಬರು ಸಹೋದರಿಯರು ವಯಸ್ಸಾದ ತಂದೆಯಿದ್ದರು, ಅವರು ಇಬ್ಬರು ಸಹೋದರಿಯರಿಗೂ ತಾವೇ ದುಡಿದು ಮುಂದೆ ನಿಂತು ಮದುವೆ ಮಾಡಿದ್ದಲ್ಲದೇ ವಯಸ್ಸಾದ ತಂದೆಯನ್ನು ತಾವೇ ನೋಡಿಕೊಂಡು ಅವರು ಮಾತ್ರ ಮದುವೆಯಾಗದೆ ಹಾಗೆ ಉಳಿದಿದ್ದರು,ಕೆಲವು ವರ್ಷಗಳ ನಂತರ ಬೇರೆ ಊರಿಗೆ ವರ್ಗಾವಣೆಯಾಗಿ ಹೋಗಿದ್ದರು
ಅಂದು ಫೋನ್ ಸೌಲಭ್ಯವಿರದ ಕಾರಣ ನಂತರದ ದಿನಗಳಲ್ಲಿ ಅವರ ಕುರಿತು ಮಾಹಿತಿ ಇಲ್ಲವಾಯಿತು, ಆದರೂ ಶಿಕ್ಷಕರೆಂದೊಡನೆ ಮೊದಲಿಗೆ ನೆನಪಾಗುವ ಹೆಸರೇ ನನ್ನ ನೆಚ್ಚಿನ ಯಶೋದಮ್ಮ ಟೀಚರ್.

Copyright © All rights reserved Newsnap | Newsever by AF themes.
error: Content is protected !!