ಗಾಂಧೀ ಜೀ……
ಹರತಾಳ ಮಾಡುತಿದೆ ನನ್ನ ಲೇಖನಿ
ಬರೆಯಲಾರೆ ಇನ್ನು ನಿನ್ನ ಬಗೆಗೆ
ಸತ್ಯಾಗ್ರಹವೆನಲಾರೆ ಇನ್ನು….
ಚರಕವನೆಷ್ಟು ನೂತರೂ
ಹಸಿದಾರ ಕಡಿದುಹೋಗುತಿವೆ
ಎಷ್ಟು ನಕ್ಕರೂ ಅಳುವ ಮುಚ್ಚಿಡಲಾಪುದೇ?
ಗನ್ನುಗಳು ಪೆನ್ನುಗಳ ತಡೆತಡೆದು ದೂಡುತಿವೆ
ಪ್ರತಿ ಅಕ್ಷರವೂ ಕೆಂಪಾಗಿಯೇ ಮೂಡುವುದು
ಎದುರಿಸಲಾರೆ ನಿನ್ನ ಮೊಗವನಿಂದು
ಎಲ್ಲೋ ಅಳುವ ಮಗುವಿನ ಎಳೆಸದ್ದನೂ
ಅಡಿಗಿಸಿಡುತಾವೆ ಅಬ್ಬರದ ಏರು ದನಿಗಳು
ನನ್ನಲ್ಲೇ ಉಳಿದ ಮಾತುಗಳ ಹೇಳಲಾರೆ ನಿನ್ನಂತೆಯೇ
ದ್ವೇಷಾಸೂಯೆಗಳ ಹಂದರದಲಿ ಸಿಕ್ಕ
ಹಕ್ಕಿಯಿಂಚರದ ಸೊಗ ಮನಗಳ ಸೇರಬಹುದೇ?
ಗೀತ ನಾಟಕಗಳೆಲ್ಲವೂ ದೊಡ್ಡವರ ಸೊತ್ತು
ಲೋಲಾಕಿನಂತೆ ತೂಗುತಿಹ ಸಂಕೋಲೆಗಳ
ಕಡೆಗೇ ಎಲ್ಲರ ಕಣ್ಣೂ…ತೂಗುತಿವೆ ತೂಗುತಿವೆ
ಆದರೂ ನಿನ್ನ ಗಟ್ಟಿ ಫ್ರೇಮಿನ ಕನ್ನಡಕ ಚೂರೂ ಗುಟ್ಟು ಬಿಡದು
ಹರಿವ ನದಿಗಳು ಮನಸುಗಳ ಬೆಸೆಯುತಿಲ್ಲ
ನೋವ ಕಾಂಬ ಕಣ್ಣುಗಳೀಗ ಮಸುಕಾಗಿವೆ
ಧಾರಣ ಶಕ್ತಿಗೆಂದು ಚೈತನ್ಯವೆಂದು ಬರುವುದೋ?
ಎದೆತುಂಬಿದ ನನ್ನ ಸಿಟ್ಟನೆಂತು ತೋರಲಿ ಪದಗಳಲಿ
ಈ ನೆಲದ ಮಣ್ಣಿನ ಸೊಗಡು ಘಮಘಮಿಸಿ
ಮತ್ತೆ ಅರಳಿ ನಗಬಹುದೇ ಗಾಂಧೀ? ಜೀ….
ಚದುರಿಹೋಗಲಿ ಮೋಡ ಇಲ್ಲೊಂದಿಷ್ಟು ಮಳೆಸುರಿಸಿ
ಮತ್ತೆ ಮತ್ತೆ ಬೇರೆಡೆಯೂ ಸುರಿಯಲು
ಹೊಸ ಕಾವ್ಯವೀಗ ಹುಟ್ಟಬಹುದೇ?
ಗೋಡೆ ಗೋಡೆಗಳಲಿ ಪಿಸುಮಾತು
ಉಕ್ಕುಕ್ಕಿ ತಂತಾನೇ ಉದುರಿ ಹೋದರೆ ಚೆನ್ನು
ಇರು… ತುಸು ಉಸಿರೆಳೆದುಕೊಳ್ಳುವೆ….
ಪಪ್ಪುಸದ ತುಂಬ ಹೊಸ ಗಾಳಿ ತೂರಿಬರಲಿ
ಹೊಸತು ಹೊಸತು ಹೊಚ್ಚ ಹೊಸತು
ಹೊಸ ಗಾಳಿ ಹೊಸ ಬೆಳಕು ಹೊಚ್ಚ ಹೊಸತು
ಡಾ.ಶುಭಶ್ರೀಪ್ರಸಾದ್, ಮಂಡ್ಯ
- ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
- ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ
- ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು
- ಪ್ರತಿ ಗ್ರಾ.ಪಂ ಅಭಿವೃದ್ಧಿಗೆ 8-9 ಕೋಟಿ ರೂ. ಅನುದಾನ: ಸಚಿವ ಮಧು ಬಂಗಾರಪ್ಪ
- ಹುಲಿ ಉಗುರು ಸಾಗಿಸುತ್ತಿದ್ದ ಇಬ್ಬರು ಅರೆಸ್ಟ್: ನಾಲ್ಕು ಉಗುರು ವಶಕ್ಕೆ
More Stories
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
ಅಹಂಕಾರ , ಒಣಜಂಭ ಬೇಡ
ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್