ಎಂದಿಗೂ ಗಾಂಧಿ

Team Newsnap
6 Min Read
leela
ಡಾ.ಲೀಲಾಅಪ್ಪಾಜಿ
ನಿವೃತ್ತ ಪ್ರಾಂಶುಪಾಲರು,ಮಂಡ್ಯ.

C.N.N ಸಂಸ್ಥಾಪಕ ಟೆಡ್ ಟರ್ನರ್ ಅವರಿಗೆ`ನಿಮಗೆ ತೀರಾ ಇಷ್ಟವಾದವರು ಯಾರು?’ ಎಂದು ಪತ್ರಕರ್ತ ಜಿ.ಎನ್. ಮೋಹನ್ ಹಾಕಿದ ಪ್ರಶ್ನೆಗೆ ಟೆಡ್ ಗಾಂಧಿ ಪ್ರತಿಮೆ ಹಿಡಿದು ತೋರಿಸಿದ್ದರು. ಮಾರ್ಟಿನ್ ಲೂಥರ್ ನೆನಪಿನ ಮನೆಯ ಕಾಂಪೌಂಡಿನಲ್ಲಿದ್ದ ಗಾಂಧಿ ಪ್ರತಿಮೆಗೆ ದಕ್ಷಿಣ ಆಫ್ರಿಕಾದ ನೋಕ್ವಾಸಿ ಶಬಲಾಲ ಕೆನ್ನೆಗೊಂದು ಮುತ್ತು ತೂರಿದಳು ತನ್ನ ಪ್ರೀತಿಯ ಸಂಕೇತವಾಗಿ. ಅಮೆರಿಕಾದಲ್ಲಿ ಬೀದಿ ಬೀದಿ ಸುತ್ತಿದ ಟ್ಯಾಕ್ಸಿಗೆ ಮೀಟರ್ ಮೇಲೆ 10% ಟಿಪ್ಸ್ ಸೇರಿಸಿ ಡ್ರೈವರ್ ಕೈಗಿಟ್ಟರೆ ಆತ ಹಿಂದುರಿಗಿಸಲು ಇದ್ದ ಕಾರಣ ತನ್ನ ಟ್ಯಾಕ್ಸಿಯಲ್ಲಿ ಸುತ್ತಿದವರು ಗಾಂಧಿ ನಾಡಿನಿಂದ ಬಂದವರೆಂದು. ಕನ್ನಡ ಲೇಖಕಿ ನೇಮಿಚಂದ್ರ ದಕ್ಷಿಣ ಅಮೆರಿಕಾದ ಸ್ಪಾನಿಷ್ ನೆಲದಲ್ಲಿ ಭಾಷೆ ತಿಳಿಯದೆ ಕಂಗಾಲಾಗಿದ್ದರೂ ಕೆಲವೇ ಕ್ಷಣದಲ್ಲಿ ಅವರನ್ನು ಮುತ್ತಿಕೊಂಡ ಜನರ ಬಾಯಲ್ಲಿ ಕೇಳಿದ್ದು ಗ್ಯಾಂಡಿ.

ಗೊತ್ತಿಲ್ಲದ ದೇಶದಲ್ಲಿ ಗಾಂಧಿ ಮಾತು ಕೂಡಿಸುವ ಸೇತುವೆಯಾಗಿ ಹೋಗಿದ್ದರೆ. ಗೊತ್ತಿಲ್ಲದ ಒಬ್ಬ ಗಾಂಧಿ ಎಲ್ಲಿಯೋ ಇರುವವರನ್ನು ಬದಲಿಸುತ್ತಾರೆ. `ಗಾಂಧಿ ಎಂಬ ಗಾಂಧಿ’ ತಾವೇ ಒಂದು ಸಂದೇಶವಾಗಿ ಬದುಕಿಬಿಟ್ಟರು. ಜಗತ್ತಿನ  ರಾಜಕೀಯ ಇತಿಹಾಸದಲ್ಲಿ ಇಂಥ ವರ್ಚಸ್ಸಿನ ಮತ್ತೊಬ್ಬರನ್ನು ಹುಡುಕುವುದು ಕಷ್ಟ. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲ, ಒಬಾಮಾ ಮುಂತಾದವರಿಗೆಲ್ಲ ಸ್ಫೂರ್ತಿಯ ಸೆಲೆಯಾಗಿದ್ದವರು. 

ನಾವೆಲ್ಲರೂ ಕುರುಡರಂತೆ ಗಾಂಧಿ ಎಂಬ ಆನೆಯನ್ನು ಮುಟ್ಟುತ್ತಿದ್ದೇವೆ. ಒಬ್ಬೊಬ್ಬರಿಗೂ ಗಾಂಧಿ ಒಂದೊಂದು ರೀತಿಯಲ್ಲಿ ಕೈಗೆಟುಕಿದ್ದಾರೆ. ಬದುಕಿದ್ದಾಗ ಕೆಲವರಿಗೆ ಯಕ್ಷಪ್ರಶ್ನೆಯಾಗಿದ್ದರು ಗಾಂಧಿ. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಗುರುತಿಸಿದಂತೆ `ಎಲ್ಲವನ್ನೂ ಕಟ್ಟಿಕೊಂಡೆ, ಆದರೂ ಏಕಾಂಗಿಯಾಗಿಯೇ’ ಸಂತೆಯ ಗದ್ದಲದಲ್ಲಿ ಸಂತನಂತೆ ಬದುಕಿದ ನಿಸ್ಸಂಗಿ. ಅವರಿಗೆ ಅನಾರೋಗ್ಯವಾದರೆ, ಉಪವಾಸಕ್ಕೆ ಕುಳಿತರೆ ಚರ್ಚಿಲ್ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದ, ಚಿತೆಗೆ ಸೌದೆಯನ್ನೂ ಸಿದ್ಧಪಡಿಸಿಕೊಳ್ಳಲೂ ಸೂಚಿಸುತ್ತಿದ್ದ, ರಾಜಭಕ್ತರು ಆನಂದಿಸುತ್ತಿದ್ದರು-ತಾಯ್ನಾಡ ಬಂಧನದ ಬಿಡುಗಡೆಗಿಂತಲೂ ತಮ್ಮನ್ನು ಆಳುವವರ ಅನ್ನಕ್ಕೆ ಒಗ್ಗಿದ ನಿಷ್ಠೆಯಿಂದಾಗಿ.

ಆದರೆ ಒಂದು ದೇಶದ ಆತ್ಮವೇ ಆಗಿದ್ದ ಗಾಂಧಿ ಕೊನೆಗೂ ತಮ್ಮ ಉಪವಾಸ, ಅನಾರೋಗ್ಯಗಳಿಂದ ಆಯುಸ್ಸು ಕಳೆದುಕೊಳ್ಳಲಿಲ್ಲ. ಅಂದು ಕಗ್ಗತ್ತಲ ಖಂಡದಲ್ಲಿ ನಟ್ಟ ನಡುರಾತ್ರಿಯಲ್ಲಿ ರೈಲಿನಿಂದ ತಳ್ಳಿಸಿಕೊಂಡ ಗಾಂಧಿ ಆಕ್ರೋಶಗೊಳ್ಳದೆ ಎಂದಿನ ಮಂದಹಾಸ ಬೀರುತ್ತಾ ಮಹಾಮೌನದಲ್ಲಿದ್ದು ಬಿಡುತ್ತಾರೆ. ಈ ಮುದುಕ ಹಟಮಾರಿ ಎಂದು ಪ್ರಶ್ನಿಸಿದವರಿಗೆ ಒಗಟಾಗಿದ್ದರು. ಒಗಟು ಬಿಡಿಸಲಾರದೆ ಸೋತವರೆ ಗಾಂಧಿಯನ್ನು ಮುಗಿಸಿದರು. ಸತ್ತ ಗಾಂಧಿ ಅಜರಾಮರರಾದರು.

ಗಾಂಧಿ ತಪ್ಪು ಮಾಡಿದರೆಂದು ಪಟ್ಟಿ ಮಾಡುವವರು ಮಾಡುತ್ತಲೇ ಇದ್ದಾರೆ, ಮನುಷ್ಯ ಮಾತ್ರರಾದ ಗಾಂಧಿ ಜೀವಮಾನದ ಉದ್ದಕ್ಕೂ ಪ್ರಯೋಗಗಳನ್ನು ಮಾಡುತ್ತಲೇ ತಪ್ಪೆನಿಸಿದವನ್ನು ತಿದ್ದಿಕೊಂಡು ಮುನ್ನಡೆದರು. ಸ್ವಾತಂತ್ರ್ಯ ನಮ್ಮ ಹಕ್ಕು, ಅದನ್ನು ಪಡೆಯುವ ಚೈತನ್ಯ ನಮ್ಮೊಳಗೂ ಇದೆ ಎಂದು ದೇಶವನ್ನು ಒಗ್ಗೂಡಿಸಿ ಪ್ರೀತಿಯಿಂದ ಮುನ್ನಡೆಸಿದರು. ಅವರು ಹೇಳಿದಂತೆ ದೇಶ, ಕಾಂಗ್ರೆಸ್ ಕೇಳುತ್ತಿದ್ದರೂ ನಾಯಕನೆಂಬ ಅಹಂ ಇರದಿದ್ದ ಹಟಮಾರಿ ಅಜ್ಜನಂತೆ ಇದ್ದು ತಮ್ಮ ವ್ಯಕ್ತಿತ್ವದಿಂದ ಇತರ ನಾಯಕರಿಗೆ ಅಂಕುಶದಂತಿದ್ದರು. ಎಲ್ಲ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಮೀರಿ ತಾತ್ವಿಕ ರಾಜಕಾರಣದಲ್ಲಿ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಪಡೆದಿದ್ದರು. ಈ ಶಕ್ತಿ ದೇಹದಿಂದ ಬರುವಂತದ್ದಲ್ಲ, ಆಂತರ್ಯದಿಂದ ಹೊರಹೊಮ್ಮುವಂತದ್ದು.

ಯುವಪಡೆಯನ್ನು ನಂಬಿಕೊಂಡು, ಅವರನ್ನು ತುಂಬಿಕೊಂಡು ಈ ದೇಶಕ್ಕೆ ಸ್ವಾತಂತ್ರ್ಯ ತರುವ ಕಾರ್ಯವನ್ನು ಗಾಂಧಿ ಮಾಡಿದ್ದರು. ನಮ್ಮ ದೇಶದ ಜನಸಂಖ್ಯೆಯಲ್ಲಿ ಶೇಕಡಾ 55-60% ಯುವಜನತೆ ಇದ್ದಾರೆ. ಅವರನ್ನು ಜವಾಬ್ದಾರಿಯುತ ಪ್ರಜೆಗಳಾಗಿ ರೂಪಿಸಬೇಕಿದೆ. ಅವರ ಏಳಿಗೆಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ. ಇಂದಿನ ಯುವಜನರ ಮನಸ್ಸು ಬಯಸುತ್ತಿರುವುದು ಗಾಂಧಿ ಚಿತ್ರ ಇರುವ ನೋಟಿನತ್ತ. ಗಾಂಧೀಜಿಯ ತತ್ವ, ಚಿಂತನೆ ಮರೆತರೂ ಅಕಾರ್ಯಗಳನ್ನು ಮಾಡಿದರೂ ಗಾಂಧಿಚಿತ್ರದ ನೋಟು ಅವರ ಕೈ ಸೇರುತ್ತಿದೆ. ಓಟಿಗಾಗಿ ನೋಟು ಕೊಡುವವರ ಕೈಯಲ್ಲೂ ಗಾಂಧಿ, ತನ್ನ ಅಮೂಲ್ಯವಾದ ಹಕ್ಕನ್ನು ಇದೇ ಗಾಂಧಿ ನೋಟಿಗಾಗಿ ಮಾರಿಕೊಂಡವರ ಕೈಯಲ್ಲೂ ಗಾಂಧಿ ಇದ್ದಾರೆ. ನಮ್ಮ ದೇಶದ ಬಹುಪಾಲು ಜನತೆ ಮಹಾತ್ಮರ ಮಾರ್ಗದಲ್ಲೇ ಹೋಗುತ್ತಾರೆ. ಪ್ರತಿ ನಗರದಲ್ಲೂ ಗಾಂಧಿ ಹೆಸರಿನ ರಸ್ತೆ ಇದೆ. ಮುಗ್ಧರಿಂದ ಹಿಡಿದು ಮೋಸಗಾರರ ತನಕ  ರಸ್ತೆಯಲ್ಲೇ ಓಡಾಡುತ್ತಾರೆ. ಹೆಸರಿಟ್ಟರೆ ಅಷ್ಟೇ ಸಾಕೆ? ಆ ಹೆಸರಿನ ಹಿಂದೆ ಆ ವ್ಯಕ್ತಿ ಹೇಗಿದ್ದ, ಹೇಗೆ ಬದುಕಿದ್ದ, ನಾವು ಅವನಂತೆ ಎಷ್ಟು ಬದುಕುತ್ತಿದ್ದೇವೆ ಎಂದು ಒಂದು ಕ್ಷಣವಾದರೂ ಯೋಚಿಸಬೇಕಿದೆ.

gandhi1

ತಾಂತ್ರಿಕ ಕ್ರಾಂತಿಯ ಬೆನ್ನುಹತ್ತಿರುವ ಯುವಜನತೆ ಗಾಂಧಿಯನ್ನು ತಪ್ಪು ತಿಳಿವಳಿಕೆಯ ಕಣ್ಣುಗಳಿಂದ ಕಂಡು ಗೊಂದಲದ ಮನೋಧರ್ಮದಲ್ಲಿದ್ದಾರೆ. ಆರ್ಥಿಕ ಕ್ಷೇತ್ರಗಳಲ್ಲಿ ಆದ ಧಿಡೀರ್ ಬೆಳವಣಿಗೆ, ಬದಲಾವಣೆಗಳು ದೇಶದ ಪರಿಸ್ಥಿತಿಯನ್ನು ಬದಲಾಯಿಸಿವೆ. ಈ ತರುಣ ಪೀಳಿಗೆ ಮನಸ್ಸು ಮಾಡಿದರೆ ದೇಶವನ್ನು ಸುವ್ಯವಸ್ಥೆಗೆ ತರಬಹುದು. ರಾಜಕೀಯ ಎಂದರೆ ಸಮಸ್ಯೆಗಳನ್ನು ಪರಿಹರಿಸುವುದು. ದೇಶಕ್ಕೆ ಮಾರಕವಾದ ಸಮಸ್ಯೆಗಳನ್ನು ಪರಿಹರಿಸಿ ಶಾಂತಿ ಸುವ್ಯವಸ್ಥೆ ಕಾಪಾಡುವುದು. ಅನ್ಯಾಯಗಳಾದಾಗ ಪ್ರತಿಭಟಿಸಿ ನ್ಯಾಯಕ್ಕಾಗಿ ಹೋರಾಡುವುದು ಕೂಡಾ ರಾಜಕೀಯ.

ಗ್ರಾಮೀಣ ಯುವಜನತೆ ತಮ್ಮ ಶಿಕ್ಷಣದ ಹಕ್ಕು ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ. ಶಿಕ್ಷಣ ಸಂಸ್ಥೆಗಳು ಅದ್ಭುತವನ್ನು ಸಾಧಿಸುವ ಸಾಧನಾ ಕೇಂದ್ರವಾಗಿ ಸಮರ್ಪಣಾ ಮನೋಭಾವದಿಂದ ದುಡಿಯಬೇಕಿದೆ.

ಗಾಂಧಿವಾದ  ಈ ಸಮಾಜಕ್ಕಲ್ಲ, ಈಗಿನ ಕಾಲಕ್ಕಲ್ಲ, ಅವೆಲ್ಲಾ ಆಗಿನ ಕಾಲಕ್ಕೆ ಸೀಮಿತ ಎನ್ನುವವರು ಒಂದು ಕ್ಷಣ ಚಿಂತನೆ ಮಾಡಬೇಕಿದೆ. ಬರ್ಲಿನ್ ಶಾಲೆಯೊಂದರ ಮಕ್ಕಳು ಗಾಂಧೀಜಿಯ ವಿಚಾರಗಳ ಬಗ್ಗೆ ಚಿಂತಿಸಿ ಅಂತಹ ವ್ಯಕ್ತಿಯ ಹೆಸರು ತಮ್ಮ ಶಾಲೆಗೆ ಬೇಕೆಂದು ಇಡಿಸಿಕೊಂಡರು. ಚೀನಾದಂತಹ ದೇಶದಲ್ಲೂ ಗಾಂಧಿ ಪಠ್ಯದಲ್ಲಿದ್ದಾರೆ. ಕುಲುಮೆಯ ತಿದಿ ಒತ್ತದೆ ಬೆಂಕಿ ಹೇಗೆ ಬರುತ್ತದೆ. ಕಬ್ಬಿಣ ಹೇಗೆ ಕರಗುತ್ತದೆ, ಬೇಕಾದ ಆಕಾರಕ್ಕೆ ಹೇಗೆ ರೂಪಿಸಿಕೊಳ್ಳಲು ಸಾಧ್ಯ. ಉಪಕರಣಗಳಿಲ್ಲದೆ ನೆಲ ಅಗೆಯಲು ಸಾಧ್ಯವೆ, ಹಸಿರು ಚಿಮ್ಮಲು ಸಾಧ್ಯವೆ? ಎಲ್ಲದಕ್ಕೂ ಸಹನೆಯೂ ಬೇಕು, ಒಳಿತರ ಬಗ್ಗೆ ವಿವೇಚನೆಯೂ ಇರಬೇಕು.

ಚರಕದ ಬಾಪುವಿನ ಭಾರತವೂ ಇಂದು ಉನ್ನತ ತಂತ್ರಜ್ಞಾನಗಳ ಮೂಲಕ ಜನಸಾಮಾನ್ಯರನ್ನು ತಲುಪಿದೆ. ಆದರೆ ಅದೇ ಸಂದರ್ಭದಲ್ಲಿ ನಮ್ಮ ನೈಸರ್ಗಿಕ ಸಂಪನ್ಮೂಲಗಳ ಲೂಟಿಯಾಟ ಸಾಗಿದೆ. ನಿರಂತರ ಬರ ಮತ್ತು ನೆರೆ ಕಂಗಾಲಾಗಿಸುತ್ತಿದೆ. ಈ ಎಲ್ಲ ಸಮಸ್ಯೆಗಳಿಗೂ ಅತಿಯಾದ ತಂತ್ರಜ್ಞಾನದ ಅವಲಂಬನೆಯೇ ಕಾರಣ. ತಂತ್ರಜ್ಞಾನದ ವಿಷಯದಲ್ಲಿ ಗಾಂಧಿಯವರ ಅಭಿಪ್ರಾಯ ತಿಳಿದು ಅದನ್ನು ಪುನರ್ವಿಮರ್ಶಿಸಬೇಕಿದೆ. 1910ರಲ್ಲಿ ಪ್ರಕಟವಾದ `ಹಿಂದ್ ಸ್ವರಾಜ್’ನಲ್ಲಿ ಗಾಂಧಿಗೆ ಉಪಕರಣಗಳ ಬಗ್ಗೆ ವಿರೋಧ ಇಲ್ಲದಿರುವುದು ಸ್ಪಷ್ಟವಾಗಿದೆ, ಆದರೆ ಬೃಹತ್ ಯಂತ್ರಗಳಿಂದ ಕೂಡಿದ ಕೈಗಾರಿಕೆಗಳ ಬಗೆಗೆ ನಂಬಿಕೆ ಇಲ್ಲ. ಭಾರತದಂತಹ ಬೃಹತ್ ಜನಸಂಖ್ಯೆಯ ದೇಶದಲ್ಲಿ ಸಣ್ಣ ಸಣ್ಣ ಗುಂಪುಗಳಲ್ಲಿ ತಮಗೆ ಬೇಕಾದ ವಸ್ತುಗಳನ್ನು ತಾವೇ ತಯಾರು ಮಾಡುವ `ಗ್ರಾಮ ಸ್ವರಾಜ್ಯ’ ಅವರ ಆದರ್ಶದ ಕಲ್ಪನೆಯಾಗಿತ್ತು. ಹಾಗಾಗಿ ಗಾಂಧೀಜಿಯವರನ್ನು ಯಂತ್ರದ್ವೇಷಿ ಎಂದು ನೋಡದೆ, `ಜನಪರ ತಂತ್ರಜ್ಞಾನದ ಬೆಂಬಲಿಗರು’ ಎಂದು ಗೌರವಿಸಬೇಕಿದೆ.

gandhi 2

ತನ್ನ ಕಾಲದ ಜಾಗತಿಕ ಸಮಸ್ಯೆಗಳಾದ ಹಿಂಸೆ, ದಬ್ಬಾಳಿಕೆ, ಯುದ್ಧ, ಹುಸಿ ನಾಗರಿಕತೆ, ಸ್ವಾರ್ಥ, ಅವಿದ್ಯೆ, ಬಡತನ, ಅಸ್ಪೃಶ್ಯತೆ, ಕೋಮುವಾದ ಖಂಡಿಸಿ, ಸತ್ಯ ಅಹಿಂಸೆ, ತ್ಯಾಗ, ಅಧ್ಯಾತ್ಮ, ಸಮಾನತೆ, ಧರ್ಮಸಹಿಷ್ಣುತೆಯಂತಹ ಮೌಲ್ಯಗಳನ್ನು ಎತ್ತಿಹಿಡಿದರು. ಸಪ್ತ ಮಹಾಪಾತಕಗಳಾದ ದುಡಿಯದೆ ಬರುವ ಸಂಪತ್ತು, ಆತ್ಮಸಾಕ್ಷಿ ಒಪ್ಪದ ಸುಖ, ಚಾರಿತ್ರ್ಯವಿಲ್ಲದ ಜ್ಞಾನ, ಮಾನವೀಯತೆಯಿಲ್ಲದ ವಿಜ್ಞಾನ, ತತ್ವರಹಿತ ರಾಜಕಾರಣ, ತ್ಯಾಗವಿರದ ಪೂಜೆ, ನಿಯತ್ತಿಲ್ಲದ ವ್ಯಾಪಾರದ ಬಗ್ಗೆ ಎಚ್ಚರಿಕೆ ನೀಡಿದರು.

ಮಿಲ್ಟನ್ ಪ್ರಕಾರ ಸ್ವರ್ಗ ನರಕಗಳೆರಡೂ ಮಾನವ ತಲೆಯಲ್ಲಿವೆ. ಎಲ್ಲ ಒಳಿತಿಗೂ ಕೆಡುಕಿಗೂ ಮನುಷ್ಯನ ಮನಸ್ಸೇ ಕಾರಣ. ಪ್ರಪಂಚದಲ್ಲಿ ನಿಜವಾದ ಶಾಂತಿ ತರಬೇಕೆಂದರೆ ಅದನ್ನು ಮಕ್ಕಳಿಂದ ಪ್ರಾರಂಭಿಸಬೇಕು. ಶಾಂತಿ ಎಲ್ಲೆಡೆ ಹರಡುತ್ತಾ ಹೋದರೆ ಜಗತ್ತಿನ ಮೂಲೆಮೂಲೆಗೂ ವ್ಯಾಪಿಸುತ್ತದೆ. ಮಾತಾಡಲು ಹೆದರುತ್ತಿದ್ದ ಗಾಂಧೀಜಿ ತಮ್ಮ ಸರಳವಾದ ಮಾತುಗಳಲ್ಲೇ ಸ್ವಾತಂತ್ರ್ಯದ ಅರ್ಥ ಮಹತ್ವವನ್ನು ಜನರಿಗೆ ಮನದಟ್ಟು ಮಾಡಿಕೊಟ್ಟರು. ಪಾಪವನ್ನು ದ್ವೇಷಿಸು, ಪಾಪಿಯನ್ನಲ್ಲ ಎನ್ನುವ ನೀತಿಯನ್ನು ನಂಬಿ ನಡೆದ ಅವರ ಪ್ರಕಾರ `ಔದಾರ್ಯದಂತೆ ಅಹಿಂಸೆಯೂ ಮನೆಯಿಂದಲೇ ಮೊದಲಾಗಬೇಕು. ವ್ಯಕ್ತಿಗೆ ಅಂತಹ ಶಿಕ್ಷಣ ಅಗತ್ಯವಿದೆ’.

ಕಾಪಿ ಹೊಡೆಯಲು ನಿರಾಕರಿಸಿದ ಹುಡುಗ, ರೈಲಿನಿಂದ ತಳ್ಳಿದವರ ಜನಾಂಗ ದ್ವೇಷದ ವಿರುದ್ಧ ಸತ್ಯಾಗ್ರಹ ಸಂಘಟಿಸಿದ ಯುವಕ, ಸ್ವದೇಶಿಯರು ತೊಟ್ಟ ವಿದೇಶಿ ವಸ್ತ್ರಗಳನ್ನು ಸುಟ್ಟುಹಾಕಿ ವಿದೇಶಿ ದಬ್ಬಾಳಿಕೆ ನಿಯಂತ್ರಿಸಿದ ಹೋರಾಟಗಾರ, ಗ್ರಾಮೀಣ ಸ್ವರ್ಗದ ಕನಸು ಕಂಡ ಪ್ರಜಾಪ್ರೇಮಿ, ನನ್ನ ಬದುಕೆ ಸಂದೇಶ ಎಂದ ವಿಶುದ್ಧ ರಾಜಕಾರಣಿ, ಶಕ್ತಿಯುತ ಹಿಂಸೆಗಿಂತ ಹೆಚ್ಚು ಶಕ್ತಿಶಾಲಿಯಾದದ್ದು ಅಹಿಂಸೆ, ಶಿಕ್ಷೆಗಿಂದ ಪೌರುಷಯುಕ್ತವಾದ್ದು ಕ್ಷಮೆ ಎಂದ ಅಹಿಂಸಾ ಸಂತ. ಬಂದವರನ್ನೆಲ್ಲಾ ಒಪ್ಪಿ ಜೊತೆಯಲ್ಲಿ ಕರೆದುಕೊಂಡು ಸಾಗಿದ ಈ ಗಾಂಧಿ ಭಾರತದ ಬದುಕು ಕಟ್ಟಲೆಂದು ಹಠಕ್ಕೆ ಬಿದ್ದು ದಿನಗಟ್ಟಲೆ ಊಟ ಬಿಟ್ಟು ತನ್ನ ಬದುಕನ್ನೇ ಪಣವಾಗಿಟ್ಟು ಪ್ರಾಣ ಕಳೆದುಕೊಳ್ಳುತ್ತೇನೆ ಎಂದು ಸ್ವಾರ್ಥವಿಲ್ಲದ ಪ್ರೀತಿಯಲ್ಲಿ ಸವಾಲು ಹಾಕಿ ಗೆದ್ದವರು.

ಗಾಂಧೀಜಿ ಬಗ್ಗೆ ಭಾವುಕರಾಗಿ ಮತ್ತೊಮ್ಮೆ ಹುಟ್ಟಿ ಬಾ ಗಾಂಧಿ ಎಂದು ಆರ್ತತೆಯಿಂದ ಕೇಳುತ್ತೇವೆ. ಸತ್ತವರು ಹುಟ್ಟಲೆಂದು ಕಾಯುತ್ತಾ ಕೂರುವುದು ಮನುಷ್ಯರ ಕ್ರಿಯಾಶಕ್ತಿಯನ್ನು ಅವಮಾನಿಸಿದಂತೆ. ಅವರು ತೋರಿಸಿದ ಬೆಳಕಲ್ಲಿ ನಮ್ಮ ಮನದ ಕತ್ತಲನ್ನು ಕಳೆದುಕೊಂಡು ಬೆಳಕು ಪಡೆಯಬೇಕಿದೆ. ಎಲ್ಲೆಲ್ಲೋ ಹುಡುಕುವ ಬದಲಿಗೆ ಈ ಬೆಳಕಿನ ಭಾಗ ಆಗಬೇಕಿದೆ. ಕುಗ್ಗಿದ ಕುಸಿದ ಸಂದರ್ಭಗಳಲ್ಲಿ ಕೈಯಾಸರೆಗಾಗಿ, ಶಾಂತಿಗಾಗಿ ಈ ಜಗತ್ತು ಕರುಣಾಳು ಬಾ ಬೆಳಕೆ ಎಂದು ಗಾಂಧಿಯಲ್ಲಿ ಹುಡುಕಬೇಕಿದೆ. ತುಕ್ಕು ಮುಕ್ಕಾಗಿರುವ ಗಾಂಧಿವಾದವನ್ನು ಸಾಣೆ ಹಿಡಿದು ಬಳಸಿಕೊಳ್ಳಬೇಕಾಗಿದೆ. ಜಗತ್ತಿನ ಉದ್ದಗಲಕ್ಕೂ ಪ್ರೇರಣೆ ನೀಡುತ್ತಿರುವ ಗಾಂಧಿ ಸಂದೇಶವನ್ನು ಅರ್ಥ ಮಾಡಿಕೊಂಡು ಸಾಗಬೇಕಿದೆ, ಬೆಳಕಿನ ಕಡೆಗೆ, ಶಾಂತಿಯ ಕಡೆಗೆ.

Share This Article
Leave a comment