ಫೆ. 10ರಿಂದ ಹೇಮಗಿರಿ ದನಗಳ ಜಾತ್ರೆ: ಫೆ.19ರಂದು ಶ್ರೀ ಕಲ್ಯಾಣ ವೆಂಕಟ ರಮಣಸ್ವಾಮಿ ಬ್ರಹ್ಮರಥೋತ್ಸವ

Team Newsnap
1 Min Read

ಕೆ ಆರ್ ಪೇಟೆ ತಾಲೂಕಿನ ಹೇಮಗಿರಿಯ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಯವರ ದನಗಳ ಜಾತ್ರೆಯು ಫೆ.10ರಿಂದ ಆರಂಭವಾಗಲಿದೆ. ಫೆ.19ರಂದು ಬ್ರಹ್ಮರಥೋತ್ಸವ ಹಾಗೂ ಫೆ. 23ರಂದು ತೆಪ್ಪೋತ್ಸವ ನಡೆಯಲಿದೆ ಎಂದು ತಹಶೀಲ್ದಾರ್ ಎಂ.ಶಿವಮೂರ್ತಿ ತಿಳಿಸಿದ್ದಾರೆ.‌

ಜಾತ್ರೆ ಕುರಿತಂತೆ ವಿವರ ನೀಡಿದ ಎಂ ಶಿವಮೂರ್ತಿ ಭೃಗು ಮಹರ್ಷಿಗಳ ತಪೋಭೂಮಿಯಾಗಿರುವ ಬಂಡಿಹೊಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೇಮಗಿರಿ ಕ್ಷೇತ್ರದಲ್ಲಿ ಈ ಭಾರಿ ದನಗಳ ಜಾತ್ರೆ ಹಾಗೂ ರಥೋತ್ಸವವನ್ನು ಅದ್ದೂರಿಯಾಗಿ ನಡೆಸಲಾಗುತ್ತಿದೆ ಎಂದರು.

ಫೆ.10 ರಿಂದ-15ರ ವರೆಗೆ ದನಗಳ ಜಾತ್ರೆಗೆ ತಾಲ್ಲೂಕು ಆಡಳಿತವು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಫೆ.10ರ ನಂತರವೇ ರೈತ ಬಾಂಧವರು ತಮ್ಮ ರಾಸುಗಳೊಂದಿಗೆ ಹೇಮಗಿರಿ ಜಾತ್ರೆಗೆ ಬರಬೇಕು. ನಿಗಧಿತ ದಿನಾಂಕಕ್ಕಿಂತ ಮುಂಚಿತವಾಗಿ ಆಗಮಿಸುವ ರಾಸುಗಳನ್ನು ಜಾತ್ರಾ ಮಾಳಕ್ಕೆ ಸೇರಿಸಲಾಗುವುದಿಲ್ಲ ಎಂದು ಹೇಳಿದರು.

ಜಾತ್ರೆಗೆ ಆಗಮಿಸುವ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಜಾತ್ರಾ ಮಾಳಕ್ಕೆ ಬೆಳಕಿನ ವ್ಯವಸ್ಥೆ ಸೇರಿದಂತೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಆದ್ದರಿಂದ ನಿಗಧಿತ ದಿನಾಂಕದ ನಂತರವೇ ಜಾತ್ರೆಗೆ ಬರಬೇಕು ಎಂದರು.

ಉತ್ತಮ ರಾಸುಗಳಗೆ ಉಡುಗೊರೆ:

ಜಾತ್ರೆಗೆ ಆಗಮಿಸಿರುವ ಉತ್ತಮವಾದ ರಾಸುಗಳಿಗೆ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆಯ ವತಿಯಿಂದ ಚಿನ್ನ ಮತ್ತು ಬೆಳ್ಳಿಯ ಉಡುಗೊರೆಗಳ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ನೀಡಲು ಬಹುಮಾನದ ಆಯ್ಕೆಗೆ ರಾಸುಗಳು ಹಾಗೂ ಕುರಿ, ಟಗರು ಸೇರಿದಂತೆ ಇತರೆ ಸಾಕು ಪ್ರಾಣಿಗಳನ್ನು ಫೆ.14ರಂದು ತಜ್ಞರ ಸಮಿತಿಯು ಆಯ್ಕೆಮಾಡಲಿದೆ.

ಕೇವಲ ಬಹುಮಾನ ಪಡೆಯಲು ಜಾತ್ರೆಯ ಹಿಂದಿನ ದಿನ ತೋರಿಕೆಗಾಗಿ ಜಾತ್ರಾಮಾಳಕ್ಕೆ ಬರುವ ರಾಸುಗಳಿಗೆ ಬಹುಮಾನವನ್ನು ನೀಡಲಾಗುವುದಿಲ್ಲ. ಫೆ.10ರ ನಂತರವೇ ರಾಸುಗಳನ್ನು ಜಾತ್ರೆಗೆ ಕರೆತರಬೇಕು ಎಂದು ಕೋರಿದರು.

ಹೇಮಾವತಿ ನದಿಯಲ್ಲಿ ಫೆ.23ರ ರಾತ್ರಿ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಯವರ ವೈಭವದ ತೆಪ್ಪೋತ್ಸವವು ಬಾಣಬಿರುಸುಗಳು ಹಾಗೂ ಹೂಕುಂಡಗಳ ನಕ್ಷತ್ರಗಳ ಬೆಳಕಿನಲ್ಲಿ ನಡೆಯಲಿದೆ. ಫೆ.19ರಂದು ಬೆಳಿಗ್ಗೆ 10ಗಂಟೆಗೆ ಜರುಗಲಿರುವ ಬ್ರಹ್ಮರಥೋತ್ಸವಕ್ಕೆ ಜಾನಪದ ಕಲಾತಂಡಗಳ ನೃತ್ಯ ಪ್ರದರ್ಶನಗಳ ಮೆರವಣಿಗೆಯು ಜಾತ್ರೆಯ ಅಂದಕ್ಕೆ ಕಳೆಕಟ್ಟಲಿದೆ.

Share This Article
Leave a comment