December 23, 2024

Newsnap Kannada

The World at your finger tips!

indian festival

gowri festival

ಗೌರಿಹಬ್ಬ : ಸುಮಂಗಲೆಯರಿಗೆ ಸಕಲ ಸೌಭಾಗ್ಯ ನೀಡುವ ಹಬ್ಬ

Spread the love

ಭಾದ್ರಪದ ಶುಕ್ಲಮಾಸದ ತೃತೀಯದಿನ ಗೌರಿಹಬ್ಬಕ್ಕೆ ಪ್ರಶಸ್ತವಾದ ದಿವಸ. ಪುರಾಣದಲ್ಲಿ ವರ್ಣಿಸಿದಂತೆ ಶಿವನ ಪತ್ನಿ ಪಾವರ್ತಿದೇವಿ ಭೂಮಿಯ ಒಡತಿ. ಶಂಕರನ ಮಡದಿಗೆ ಪೃಥ್ವಿ ಎಂಬ ಹೆಸರೂ ಇದೆ. ಪೃಥ್ವಿ ಎಂದರೆ ವ್ಯಾಪಿಸಿರುವಳು ಎಂಬರ್ಥ.ಪ್ರಕೃತಿಯ ಪ್ರತಿರೂಪ ಗೌರಿ ದೇವಿ.

ಯಾವ ಹಬ್ಬಕ್ಕೂ ಇಲ್ಲದ ವಿಶೇಷತೆ ಗೌರಿ ಹಬ್ಬಕ್ಕಿದೆ ವಿಶೇಷವಾಗಿ ಮಹಿಳೆಯರಿಗೆ. ಮದುವೆಯಾದ ಮೊದಲ️ ವರ್ಷ ಹೆಣ್ಣುಮಗಳು ಗೌರಿ ಹಬ್ಬದಂದು ತಮ್ಮ ತವರು ಮನೆಗೆ ಬಂದು ಪೂಜೆ ಮಾಡಿದ ನಂತರ ಬಾಗಿನ ಕೊಟ್ಟು ಮತ್ತು ಪಡೆವ ಸಂಪ್ರದಾಯ ಹಿಂದಿನಿಂದಲೂ ಬಂದಿದೆ.

ಯಾರು ಸ್ವರ್ಣ ಗೌರಿ ವ್ರತ ಮಾಡುತ್ತಾರೋ ಅವರಿಗೆ ದೇವಿಯ ಅನುಗ್ರಹದಿಂದ ಸಕಲ️ ಇಷ್ಟಾರ್ಥಗಳು ಪ್ರಾಪ್ತಿಯಾಗುವುದು ಎಂದು ಪರಮೇಶ್ವರನು ಕುಮಾರಸ್ವಾಮಿಗೆ ಹೇಳಿದ್ದನ್ನು ಸೂತಮಹಾಮುನಿಯು ಶೌನಕಾದಿ ಮಹಾಮುನಿಗಳಿಗೆ ತಿಳಿಸಿದನು ಎಂದು ಪುರಾಣವು ಹೇಳುತ್ತದೆ.

ವಿವಾಹಿತ ಮಹಿಳೆ ತಮ್ಮ ಪತಿಯ ದೀರ್ಘಾಯುಷ್ಯ, ತಮ್ಮ ಜೀವನದ ಶ್ರೇಯೋಭಿವೃದ್ದಿಗಾಗಿ ಸ್ವರ್ಣಗೌರಿ ವ್ರತ ಆಚರಿಸುತ್ತಾರೆ. ಮದುವೆಯಾಗದ ಹೆಣ್ಣುಮಕ್ಕಳು ತಮಗೆ ಉತ್ತಮ ಜೀವನ ಸಂಗಾತಿ ದೊರೆಯಲಿ ಎಂದು ಬಯಸಿ ವ್ರತ ಮಾಡುತ್ತಾರೆ.

ಪಾರ್ವತಿ ದೇವಿಯ ಅನುಗ್ರಹ ದೊರೆತರೆ ಮನೆ ಸಂಪತ್ಭರಿತವಾಗುತ್ತದೆ. ಸಾಧನೆಯ ಮಾರ್ಗದಲ್ಲಿ ನಡೆಯಬಹುದಾಗಿದೆ ಎಂಬ ಭಾವನೆಯೂ ಆಸ್ತಿಕರಲ್ಲಿದೆ. ಶಕ್ತಿ, ಧೈರ್ಯ, ಸ್ಥೈರ್ಯದ ಪ್ರತಿರೂಪ ಗೌರಿದೇವಿ ತಮಗೂ ಎಲ್ಲಾ ರೀತಿಯ ಶಕ್ತಿ ನೀಡಬೇಕೆಂದು ಕೋರಿ ಭಕ್ತಿಯಿಂದ ಪೂಜಿಸುತ್ತಾರೆ ಮಹಿಳೆಯರು.

gowri

ಮಣ್ಣಿನ ದೇವಿ ವಿಗ್ರಹವನ್ನು ತಂದು ಪೂಜಿಸುವುದು ವಾಡಿಕೆ. ಕೆಲ️ವರು ಬೆಳ್ಳಿಯ ಗೌರಿ ಮೂರ್ತಿಯ ಜತೆಗೆ ಅರಿಶಿನದ ಗೌರಿ ಮಾಡಿ ಪೂಜೆ ಮಾಡುವರು.

ಸ್ವರ್ಣ ಎಂದರೆ ಬಂಗಾರ. ಸ್ವರ್ಣಗೌರಿ ವ್ರತ ಎಂದರೆ ಬಂಗಾರದಲ್ಲಿ ಗೌರಿ ಪ್ರತಿಮೆ ಮಾಡಿ ಪೂಜಿಸಿ ನಂತರ ಗೌರಿಶಂಕರರ ಅರಾಧನೆ ಮಾಡುವ ಸದ್ಭಕ್ತರಿಗೆ ದಾನ ಮಾಡುವ ಕ್ರಮವನ್ನೂ ಪುರಾಣದಲ್ಲಿ ಹೇಳಿದೆ. ಶಕ್ತಿ ಇದ್ದಲ್ಲಿ ಇದನ್ನೂ ಮಾಡಬಹುದು. ಬಂಗಾರದಲ್ಲಿ ಗೌರಿ ಪ್ರತಿಮೆ ಮಾಡಿಸಿದರೂ ಮಣ್ಣಿನಲ್ಲಿ ಒಂದು ಪ್ರತಿಮೆ ಮಾಡಿ ಪೂಜೆಯ ನಂತರ ಶುದ್ಧ ನೀರಿನಲ್ಲಿ ವಿಸರ್ಜಿಸುವುದು ಶ್ರೇಷ್ಠಕ್ರಮ ಎಂದು ತಿಳಿಸಲಾಗಿದೆ.

ಹಬ್ಬದಂದು ಸಂಪ್ರದಾಯಸ್ಥ ಹೆಂಗಸರು ಬೆಳಗಿನ ಜಾವ ಎದ್ದು ತಲೆಗೆ ಎಣ್ಣೆ ಸ್ನಾನ ಮಾಡತ್ತಾರೆ. ಅಲಂಕೃತ ಮಂಟಪದಲ್ಲಿ ಗೌರಿಯನ್ನು ಕೂರಿಸಲಾಗುತ್ತೆ. ಪೂಜಾ ದ್ರವ್ಯಗಳು, ವಿವಿಧ ಪುಷ್ಪಗಳಿಂದ ಪೂಜಿಸಿ ನಾನಾ ರೀತಿಯ ಹಣ್ಣುಗಳನ್ನು ತಟ್ಟೆಯಲ್ಲಿ ನೈವೇದ್ಯಕ್ಕಿಡಲಾಗುತ್ತೆ.

ಗೌರಿ ಎಳೆಗಳನ್ನು ದೇವಿಗೆ ಅರ್ಪಿಸಲಾಗುತ್ತೆ. ಇದೇ ವೇಳೆ ದೋರಾ ಎಂದು ಕರೆಯುವ 16 ಗಂಟುಗಳಿಂದ ಕೂಡಿದ ಅರಿಶಿನ ದಾರಕ್ಕೆ ಪೂಜೆ ಮಾಡಿ ಅದನ್ನು ಪೌರೋಹಿತರಿಂದ ಬಲ️ಗೈಗೆ ಕಟ್ಟಿಸಿಕೊಳ್ಳುವ ಸಂಪ್ರದಾಯವೂ ಇದೆ.

ಅಕ್ಕಿ, ನಾನಾ ಬೆಳೆ-ಕಾಳು ಇತರೆ ಪದಾರ್ಥಗಳ ಮೊರದ ಬಾಗಿನಲ್ಲಿ ಸೀರೆ ಇಲ್ಲವೆ ರವಿಕೆಬಟ್ಟೆ ಇಟ್ಟು ದೇವಿಗೆ ಅರ್ಪಿಸಿ ನಂತರ ಮುತೈದೆಯರಿಗೆ ಕೊಡಲಾಗುತ್ತೆ. ಗೌರಿ ಹಬ್ಬದ ವಿಶೇಷವೆಂದರೆ ಒಬ್ಬಟ್ಟು. ಸಾಮಾನ್ಯವಾಗಿ ಅದೇ ದಿನ ಸಂಜೆ ಆರತಿ ಬೆಳಗಿ ದೇವಿಯನ್ನು ವಿಸರ್ಜಿಸಲಾಗುತ್ತೆ.

ಕೆಲ️ವರ ಮನೆಯಲ್ಲಿ 3 ದಿನ, 5, 7, 9 ಇಲ್ಲವೆ 11ದಿನಗಳು ಹೀಗೆ ತಮ್ಮ ಪೂರ್ವಿಕರು ನಡೆಸಿಕೊಂಡು ಬಂದ ಸಂಪ್ರದಾಯದಂತೆ ಗೌರಿಯನ್ನು ಇಡಲಾಗುತ್ತೆ.

ಹೊಸದಾಗಿ ಮದುವೆಯಾದ ಹೆಂಗಸರು 16 ಜತೆ ಮೊರದ ಬಾಗಿಣವನ್ನು ಹಿರಿಯ ಮುತೈದೆಯರಿಗೆ ಕೊಡುತ್ತಾರೆ. ಎರಡರಿಂದ ಐದು ವರ್ಷದ ತನಕ ಐದು ಜತೆ ನಂತರ ಪ್ರತಿ ವರ್ಷ ಎರಡು ಜತೆ ಮೊರದಬಾಗಿನ ಕೊಡುವ ಸಂಪ್ರದಾಯವಿದೆ.

indian festival

ಮನೆಯೊಂದರಲ್ಲಿ ಗೌರಿಯನ್ನು ಕೂಡಿಸಿ ಅಲ್ಲಿನ ಹಲ️ವಾರು ಮಹಿಳೆಯರು ಒಗ್ಗೂಡಿ ಪೂಜೆ ಮಾಡುವ ಪದ್ಧತಿಯನ್ನು ಈ ಹಿಂದೆ ನಾನಾ ಊರುಗಳಲ್ಲಿ ನೋಡಬಹುದಿತ್ತು. ಈಗಲೂ ಕೆಲ️ವೆಡೆ ಅದು ಮುಂದುವರೆದಿದೆ. ಈ ದಿನ ಒಬ್ಬಟ್ಟು, ಪಾಯಸ, ಕೋಸುಂಬರಿ ಸೇರಿದಂತೆ ಬಗೆಗೆ ಬಗೆಯ ಖಾದ್ಯಗಳನ್ನು ಮಾಡಿ ನೈವೇದ್ಯ ಮಾಡಲಾಗುತ್ತದೆ, ಈ ರೀತಿಯಾಗಿ ಸ್ವರ್ಣ ಗೌರಿ ಪೂಜೆಯನ್ನು ಆಚರಿಸಲಾಗುತ್ತದೆ.

ಗೌರಿಹಬ್ಬ ಗೌರಿಹಬ್ಬ ಗೌರಿಹಬ್ಬ

ಹಿಜಬ್ ನಿಷೇಧ: ಅರ್ಜಿದಾರರ ವಿರುದ್ಧ ಸುಪ್ರೀಂಕೋರ್ಟ್ ಗರಂ – ರಾಜ್ಯ ಸರ್ಕಾರ, ಅರ್ಜಿದಾರರಿಗೆ ನೋಟಿಸ್

Copyright © All rights reserved Newsnap | Newsever by AF themes.
error: Content is protected !!