December 25, 2024

Newsnap Kannada

The World at your finger tips!

deepa1

ವೇಗದ ಆಧುನಿಕ ಬದುಕಿನಲ್ಲಿ ಎಲ್ಲವೂ ವ್ಯಾಪರೀಕರಣ

Spread the love

ಒಳ್ಳೆಯ ಕೆಲಸದಲ್ಲಿ ಕೆಟ್ಟದ್ದನ್ನು,
ಕೆಟ್ಟ ಕೆಲಸಗಳಲ್ಲಿ ಒಳ್ಳೆಯದನ್ನು ಹುಡುಕುವ ಗುಣ ಜನರಿಂದ ರಾಜಕಾರಣಿಗಳಿಗೆ, ರಾಜಕಾರಣಿಗಳಿಂದ ಮಾಧ್ಯಮಗಳಿಗೆ ವರ್ಗಾಯಿಸಲ್ಪಟ್ಟಿದೆ.

ಪ್ರೀತಿಯಲ್ಲಿ ದ್ವೇಷವನ್ನು,
ದ್ವೇಷದಲ್ಲಿ ಪ್ರೀತಿಯನ್ನು ಹುಡುಕುವ ಮನೋಭಾವ ಧಾರವಾಹಿ ಸಿನಿಮಾ ಕಥೆ ಕಾದಂಬರಿಗಳಿಂದ ಜನರಿಗೆ ವರ್ಗಾಯಿಸಲ್ಪಟ್ಟಿದೆ.

ನಾಜೂಕಿನ ವಂಚನೆಯನ್ನು,
ಕಾನೂನಿನ ನೆರಳಲ್ಲಿ ಅಪರಾಧವನ್ನು, ಅಮಾಯಕರಿಗೆ ಹಿಂಸೆ ಕೊಡುವ ಉಪಾಯಗಳನ್ನು ನ್ಯಾಯಾಲಯಗಳು ಜನರಿಗೆ ವರ್ಗಾಯಿಸಿವೆ.

ಕಲೆಗಳಿಂದ ಜನಪ್ರಿಯತೆಯನ್ನು,
ಜನಪ್ರಿಯತೆಯಿಂದ ಸನ್ಮಾನಗಳನ್ನು,
ಸನ್ಮಾನಗಳಿಂದ ಪ್ರಶಸ್ತಿಗಳನ್ನು,
ಪ್ರಶಸ್ತಿಗಳಿಂದ ಅಧಿಕಾರವನ್ನು,
ಅಧಿಕಾರದಿಂದ ಹಣವನ್ನು ಪಡೆಯುವ ಮಾರ್ಗಗಳನ್ನು ಅಕ್ಷರ ಜ್ಞಾನ ಜನರಿಗೆ ವರ್ಗಾಯಿಸಿದೆ.

ತಪ್ಪುಗಳನ್ನು ಸರಿ ಎಂದು,
ಸರಿಯನ್ನು ತಪ್ಪೆಂದು,
ನಿಜವನ್ನು ಸುಳ್ಳೆಂದು,
ಸುಳ್ಳನ್ನು ನಿಜವೆಂದು,
ವಾಸ್ತವವನ್ನು ಭ್ರಮೆ ಎಂದು
ಭ್ರಮೆಯನ್ನು ವಾಸ್ತವ ಎಂದು ನಿರೂಪಿಸುವ ಕಲೆಗಾರಿಕೆ ಸಮೂಹ ಸಂಪರ್ಕ ಮಾಧ್ಯಮಗಳಿಂದ ಜನರಿಗೆ ವರ್ಗಾಯಿಸಲ್ಪಟ್ಟಿದೆ.

ಕಪಟ ಭಕ್ತಿಯಿಂದ, ಆಡಂಬರ ಪ್ರದರ್ಶನದ ಪೂಜೆಗಳಿಂದ ದೇವರನ್ನೇ ವಂಚಿಸುವ, ದೇವರಿಗೆ ಲಂಚ ಕೊಡುವ ಮನೋಭಾವ ಮಂದಿರ ಮಸೀದಿ ಚರ್ಚುಗಳ ಮುಖ್ಯಸ್ಥರಿಂದ ಜನರಿಗೆ ವರ್ಗಾಯಿಸಲ್ಪಟ್ಟಿದೆ.

ಪಾಶ್ಚಾತ್ಯ ಸಂಸ್ಕೃತಿಗಳ ನಾಗರಿಕ ಪ್ರಜ್ಞೆಯನ್ನು ಮರೆಮಾಚಿ ಅವರ ಊಟ ಬಟ್ಟೆ ಕುಡಿತ ಜೂಜು ಅನೈತಿಕ ಸಂಬಂಧಗಳು ದುಂದು ವೆಚ್ಚ ಮುಂತಾದ ಬಾಹ್ಯ ನಡವಳಿಕೆಗಳು ಮಾತ್ರ ಮಾಧ್ಯಮಗಳ ಮುಖಾಂತರ ಜನರಿಗೆ ವರ್ಗಾಯಿಸಲ್ಪಟ್ಟಿದೆ.

ಹೀಗೆ ವರ್ಗಾಯಿಸಲ್ಪಟ್ಟ ಮನಸ್ಥಿತಿ ಇಡೀ ವ್ಯವಸ್ಥೆಯ ಮೂಲದ್ರವ್ಯವನ್ನೇ ನುಂಗಿ ಮೌಲ್ಯಗಳ ಅಧಃಪತನ ಹೊಂದಿ ಕೇವಲ ಮುಖವಾಡಗಳ ವ್ಯಾವಹಾರಿಕ ಜೀವನವೇ ನಮ್ಮ ಸಮಾಜವಾಗಿದೆ.
ಇದನ್ನು ಬದಲಿಸುವುದೇ ನಮ್ಮೆಲ್ಲರ ಮೊದಲ ಆಧ್ಯತೆಯಾಗಿರಲಿ.

ಏಕೆಂದರೆ ಈಗ ನಾವು ನಮ್ಮ ಜವಾಬ್ದಾರಿ ನಿರ್ವಹಿಸದೆ ಮೌನವಾಗಿ ಎಲ್ಲವನ್ನೂ ಸಹಿಸಿಕೊಂಡರೆ ಭವಿಷ್ಯದಲ್ಲಿ ನಮ್ಮ ಮಕ್ಕಳ ಬದುಕು ತುಂಬಾ ಕಷ್ಟದ ಹಾದಿಯಾಗುತ್ತದೆ. ಹಾಲು ಕುಡಿಯುವವರೇ ಬದುಕುವುದು ಕಷ್ಟವಾಗಿರುವಾಗ ವಿಷ ಕುಡಿಯುವವರು ಬದುಕಲು ಸಾಧ್ಯವೇ ?

ವೇಗದ ಆಧುನಿಕ ಬದುಕಿನಲ್ಲಿ ಎಲ್ಲವೂ ವ್ಯಾಪರೀಕರಣ ಆಗಿರುವಾಗ ನಾವು ನಮ್ಮ ಜವಾಬ್ದಾರಿ ನಿರ್ವಹಿಸಲೇ ಬೇಕು. ಆ ಬಗ್ಗೆ ದಯವಿಟ್ಟು ಗಂಭೀರವಾಗಿ ಯೋಚಿಸಿ ಎಂದು ಮನವಿ ಮಾಡಿಕೊಳ್ಳುತ್ತಾ……,.

  • ವಿವೇಕಾನಂದ ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!