ಶಿಕ್ಷಕರು, ಶಿಕ್ಷಣ ಹೇಗಿರಬೇಕು ? – ಕೆ.ಟಿ.ಎಸ್ ಹೀಗಂತಾರೆ !

Team Newsnap
4 Min Read
kts

ದಕ್ಷಿಣ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ, ಉತ್ತಮ ವಾಗ್ಮಿ ಕೆ.ಟಿ.ಶ್ರೀಕಂಠೇಗೌಡರು ಉಪನ್ಯಾಸಕರಾಗಿ. ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದವರು. ಅವರ ಬದುಕಿನಲ್ಲಿ ಎರಡೇ ಕನಸು ಕಂಡವರು. ಒಂದು ಉಪನ್ಯಾಸಕರಾಗಿ ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ಬೆಳಕಾಗುವ ರೀತಿಯಲ್ಲಿ ಪಾಠ ಮಾಡಿ ಸೈ ಎನ್ನಿಸಿಕೊಳ್ಳಬೇಕು ಎನ್ನುವುದು ಮತ್ತೊಂದು ಅವಕಾಶ ಸಿಕ್ಕರೆ ಶಾಸನ ಸಭೆಯ ಯಾವುದಾದರೂ ಒಂದು ಸದನದಲ್ಲಿ ಭಾಷಣ, ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಬೇಕು ಎಂಬ ಅದಮ್ಯ ಕನಸು ಹೊಂದಿದವರು. ಗೌಡರ ಜೀವನದಲ್ಲಿ ಈ ಎರಡೂ ಕನಸುಗಳು ನನಸಾಗಿವೆ. ಶಿಕ್ಷಣ ಕ್ಷೇತ್ರದ ಅನುಭವಿ, ಎಲ್ಲಾ ಕ್ಷೇತ್ರಗಳ ಮಾಹಿತಿಯನ್ನು ಕಲೆ ಹಾಕಿ ಹರಿತ, ನಿಷ್ಠೂರವಾಗಿ ಮಾತನಾಡಿ ವೈರಿಗಳನ್ನೂ ಕೂಡ ತಣ್ಣಗಾಗಿಸುವಂತೆ ಮಾಡುವ ಶ್ರೀಕಂಠೇಗೌಡರ ಮಾತುಗಳು ಸುಸ್ಪಷ್ಟ. ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರ, ಉಪನ್ಯಾಸಕರ ಸಮಸ್ಯೆ, ಸವಾಲುಗಳೂ ಸೇರಿದಂತೆ ಶಿಕ್ಷಣ ಕ್ಷೇತ್ರದ ಹಲವಾರು ಮಜಲುಗಳನ್ನು ತುಲನೆ ಮಾಡಿ ನ್ಯೂಸ್ ಸ್ನ್ಯಾಪ್ ಗೆ ವಿಶೇಷ ಸಂದರ್ಶನ ನೀಡಿದ್ದಾರೆ.

—————————

ಸಮತೋಲನ ಕಾಯ್ದುಕೊಳ್ಳದ ಸಾಮಾಜಿಕ ವ್ಯವಸ್ಥೆಯನ್ನು ಸರಿದಾರಿಗೆ ತರಲು ಮತ್ತು ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗುವಂತೆ ಮಾಡುವ ಅಸ್ತ್ರ ಎಂದರೆ ಶ್ರೇಷ್ಠ ಗುಣ ಮಟ್ಟದ ಮೌಲ್ಯಯುತ ಶಿಕ್ಷಣ. ನಾವು ಈ ಮೌಲ್ಯಯುತ ಶಿಕ್ಷಣ ಕೊಡುವಲ್ಲಿ ತಪ್ಪು ಹೆಜ್ಜೆ ಇಡುತ್ತಿದ್ದೇವೆ ಎಂದು ನನಗೆ ಅನ್ನಿಸುತ್ತದೆ ಎನ್ನುವುದು ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡರ ಅಭಿಮತ.

ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರ, ಉಪನ್ಯಾಸಕರ ಮತ್ತು ಶಿಕ್ಷಣದ ಸವಾಲುಗಳು, ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಮಾತನಾಡಿ ಒಂದು ಅನಿಸಿಕೆ, ಅಭಿಪ್ರಾಯ ಹಾಗೂ ನೀಡಿರುವ ಸಲಹೆಗಳು ಹೀಗಿವೆ.


ಪ್ರತಿ ವರ್ಷವೂ ಶಿಕ್ಷಕರ ದಿನಾಚರಣೆ ಬರುತ್ತದೆ. ಈ ವೇಳೆಗೆ ಅನೇಕ ಚರ್ಚೆಗಳು ನಡೆಯುತ್ತವೆ. ಸರ್ಕಾರಗಳು ಕೂಡ ಅನೇಕ ಫಾಲ್ಸ್ ಭರವಸೆಗಳನ್ನು ಕೊಡುತ್ತವೆ. ನಾವು ಕೇಳಿಸಿಕೊಂಡು, ಹೊಂದಾಣಿಕೆ ಮಾಡಿಕೊಂಡೇ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದೇವೆ. ಮುಂದೆಯೂ ಹೀಗೆಯೇ ನಡೆಯುತ್ತಲೇ ಇರುತ್ತದೆ.

ದಾರಿ ತೋರುವ ಗುರುಗಳಿಗೆ ನಮನ :

ಶಿಕ್ಷಕರ ವೃತ್ತಿ ಶ್ರೇಷ್ಠವಾದದ್ದು. ವಿದ್ಯಾರ್ಥಿಗಳಿಗೆ ಜ್ಞಾನ, ಭವಿಷ್ಯದ ಬದುಕಿನ ದಾರಿ ತೋರುವ ಶಕ್ತಿ ಗುರುವಿಗೆ ಮಾತ್ರ ಸಾಧ್ಯ. ಇಂತಹ ಗುರು ಸಮಾಜದಲ್ಲಿ ಪೂಜ್ಯನೀಯ ಸ್ಥಾನದಲ್ಲಿ ನಿಲ್ಲುತ್ತಾರೆ. ಸರ್ವಪಲ್ಲಿ ಡಾ. ರಾಧಾಕೃಷ್ಣನ್ ಗುರು ಪರಂಪರೆಗೆ ಹೊಸ ಭಾಷ್ಯ ಬರೆದು ಗುರುವಿನ ಶಕ್ತಿ ಏನೆಂಬುದನ್ನು ಸಮಾಜಕ್ಕೆ ತೋರಿಸಿದ್ದಾರೆ. ಶಿಕ್ಷಕ ವೃತ್ತಿಯಿಂದ ಹಿಡಿದು ರಾಷ್ಟ್ರಪತಿ ಹುದ್ದೆಯವರೆಗೂ ಎಲ್ಲವನ್ನೂ ನಿಭಾಯಿಸಿದ ಅಂತಹ ಮಹಾನ್ ವ್ಯಕ್ತಿತ್ವವನ್ನು ನೆನೆಯುವುದು ಮಾತ್ರವಲ್ಲ ಅವರು ಹಾಕಿ ಕೊಟ್ಟ ದಾರಿಯಲ್ಲಿ ನಡೆಯುವುದೂ ಕೂಡ
ಅಷ್ಟೇ ಮುಖ್ಯ. ಈಗಿನ ಗುರು ವೃಂದವು ವ್ಯಕ್ತಿತ್ವವನ್ನು ಅವಲೋಕನ ಮಾಡಿಕೊಂಡು, ವೃತ್ತಿ ಗೌರವವನ್ನು ವೃದ್ದಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ಸಂಕಲ್ಪದ ಅನಿವಾರ್ಯತೆ ಇದೆ. ಆಗ ಮಾತ್ರ ಶಿಕ್ಷಕರ ದಿನಾಚರಣೆಗೆ ಒಂದು ಅರ್ಥ, ಮಹತ್ವವೂ ಬರುತ್ತದೆ.

ಇಂದಿನ ಹೊಸ ಶಿಕ್ಷಣ ನೀತಿಗೆ ಇನ್ನೂ ಒಂದು ರೂಪ ಬಂದಿಲ್ಲ. ಬದಲಾವಣೆಯನ್ನು ನಾವು ಒಪ್ಪಿಕೊಳ್ಳೋಣ. ಆದರೆ ಹೊಸ ಶಿಕ್ಷಣ ನೀತಿಯ ಸ್ವರೂಪ, ದೃಷ್ಠಿ ಕೋನ ಹೇಗಿರುತ್ತದೆ ಮತ್ತು ಬದಲಾವಣೆಯ ದಾರಿಗಳು ವಿದ್ಯಾರ್ಥಿಗಳಿಗೆ ಬದುಕು ರೂಪಿಸಲು ಹೇಗೆ ಸಹಾಯಕವಾಗುತ್ತವೆ ಎನ್ನುವುದು ಚರ್ಚೆಯಾಗಬೇಕು, ಎಲ್ಲದಕ್ಕಿಂತಲೂ ಮುಖ್ಯವಾಗಿ 1 ರಿಂದ 10 ನೇ ತರಗತಿಯವರೆಗಿನ ಶಿಕ್ಷಣವೂ ಕಡ್ಡಾಯವಾಗಿ ಮಾತೃಭಾಷೆಯಲ್ಲಿ ನಡೆಯುವಂತಾಗಬೇಕು. ಅದಕ್ಕೆ ತೊಡಕಾಗಿರುವ ಸಿಇಟಿ, ಜೆಇಇ ಹಾಗೂ ನೀಟ್ ಪರೀಕ್ಷೆಗಳು ಪ್ರಾದೇಶಿಕ ಮಾಧ್ಯಮದ ಪ್ರಾಥಮಿಕ ಶಿಕ್ಷಣಕ್ಕೆ ತೊಡಕಾಗಿವೆ. 1 ನೇ ತರಗತಿಯಿಂದ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತರೆ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉನ್ನತ ಶಿಕ್ಷಣ ಪಡೆಯಲು ಸಾಧ್ಯ ಎನ್ನುವ ವಾತಾವರಣ ಬದಲಾಗಬೇಕಿದೆ. ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ಕೊಟ್ಟಾಗ ಮಾತ್ರ ಕನ್ನಡ ಮತ್ತು ಕನ್ನಡ ಮಾಧ್ಯಮ ಶಾಲೆಗಳು ಹಾಗೂ ಶಿಕ್ಷಕರಿಗೆ ಮೌಲ್ಯ ಬರುತ್ತದೆ. ಇಲ್ಲದೇ ಹೋದರೆ ಕನ್ನಡ ಶಾಲೆಗಳು ಮುಚ್ಚಿ ಹೋಗುತ್ತವೆ. ನಾಯಿ ಕೊಡೆಗಳಂತೆ ಇಂಗ್ಲೀಷ್ ಮೀಡಿಯಂನ ಖಾಸಗಿ ಶಾಲೆಗಳು ತಲೆ ಎತ್ತುತ್ತವೆ. ಕನ್ನಡ ನಶಿಸಿ ಹೋಗುತ್ತವೆ ಎನ್ನುವುದರ ಬಗ್ಗೆ ಸರ್ಕಾರ ಎಚ್ಚರಿಕೆಯಿಂದ ಇರಬೇಕು. ಈಗ 250 ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಹಾಗೂ ಯುಕೆಜಿ ಆರಂಭಿಸುವ ನಿರ್ಧಾರ ಮಾಡಿರುವ ಸಂಗತಿ ಸ್ವಾಗತಾರ್ಹ.

ಶಿಕ್ಷಣಕ್ಕೆ ಭದ್ರ ಬುನಾದಿಬೇಕು :


ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಇದೆ. ಅನೇಕ ಸರ್ಕಾರಿ ಶಾಲೆಗಳಲ್ಲಿ ನಾಲ್ಕೈದು ಕ್ಲಾಸಿಗೆ ಒಬ್ಬರೇ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆ ಇದೆ. ಖಾಸಗಿ ಶಾಲೆ ಆರಂಭಿಸಲು ಸರ್ಕಾರವೇ ಹೇರಳವಾಗಿ ಅನುಮತಿ ನೀಡುತ್ತದೆ. ಇಂತಹ ಅನೇಕ ಕಾರಣಗಳು ಕನ್ನಡ ಶಾಲೆಗಳನ್ನು ಮುಚ್ಚಲು ಕಾರಣವಾಗಿವೆ. ಹೀಗಾಗಿ ಕೇರಳ ಮಾದರಿಯಲ್ಲಿ ವಿಧ್ಯಾರ್ಥಿಗಳ ಸಂಖ್ಯೆ ಎಷ್ಟೇ ಇದ್ದರೂ ತರಗತಿಗೆ ಒಬ್ಬ ಶಿಕ್ಷಕರನ್ನು ನೇಮಕ ಮಾಡಬೇಕು. ದೆಹಲಿ ಸರ್ಕಾರದ ಮಾದರಿಯಲ್ಲಿ ಸರ್ಕಾರಿ ಶಾಲೆಗಳಿಗೆ ಎಲ್ಲಾ ರೀತಿ ಮೂಲ
ಸೌಲಭ್ಯಗಳನ್ನು ನೀಡಬೇಕು. ಶಿಕ್ಷಣದ ವ್ಯವಸ್ಥೆಗೆ ಭದ್ರ ಬುನಾದಿ ಹಾಕದೇ ಹೋದರೆ ದೇಶ ಕಟ್ಟುವ ಕೆಲಸ ಕುಸಿಯುತ್ತಾ ಹೋಗುತ್ತದೆ ಎಂಬ ಅರಿವು ಸರ್ಕಾರಗಳಿಗೆ ಇರಬೇಕು.

ಮೊಬೈಲ್ ಪೋನ್ ಗಳೆ ಶಾಲೆಗಳು :

ಒಂದು ಕಾಲದಲ್ಲಿ ನಾವು ಮಕ್ಕಳ ಕೈಗೆ ಮೊಬೈಲ್ ಫೋನ್ ಕೊಡುತ್ತಿರಲಿಲ್ಲ. ಈಗ ಮೊಬೈಲ್ ಪೋನ್ ಗಳೆ ಶಾಲೆಗಳಾಗಿವೆ. ಎಂತಹ ವಿಪರ್ಯಾಸ. ಕೊರೋನಾದಿಂದಾಗಿ ಆನ್ ಲೈನ್ ಶಿಕ್ಷಣ ವ್ಯವಸ್ಥೆಯನ್ನು ಸರ್ಕಾರವೇ ಜಾರಿ ಮಾಡಲು ಹೊರಟಂತಿದೆ. ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯತೆ ಇರಬಹುದು. ಮುಂದೆ ಇದು ಒಳ್ಳೆಯದಲ್ಲ. ಈಗ ವಿವಿ ಹಾಗೂ ಪದವಿ ತರಗತಿಗಳನ್ನು ಮತ್ತು ಪದವಿ ಪೂರ್ವ, ಹೈಸ್ಕೂಲ್ ಶಾಲೆಗಳನ್ನು ಆರಂಭಿಸಿ ನಂತರ ಕೆಳ ಹಂತದ ಶಾಲೆಗಳನ್ನು ಆರಂಭಿಸಬೇಕು. ಏಕೆಂದರೆ ನಾವು ಕೊರೋನಾದೊಂದಿಗೆ
ಬದುಕು ಸಾಗಿಸುವ ಅನಿವಾರ್ಯತೆ ಇದೆ. ಶಿಕ್ಷಣದಲ್ಲಿ ಮಕ್ಕಳಿಗೆ ಮೌಲ್ಯ ಮತ್ತು ಗುಣಾತ್ಮಕ ಅಂಶಗಳು ಬೇಕಾಗಿವೆ. ಮಾರ್ಕ್ಸ್ ಆಧಾರಿತ ಪಾಠಗಳು ಬದುಕನ್ನು ರೂಪಿಸಲಾರವು. ಜ್ಞಾನ ಮತ್ತು ಬದುಕು ರೂಪಿಸುವ
ಸ್ವಾವಲಂಬಿತನದ ಶಿಕ್ಷಣದ ಅಗತ್ಯತೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಹೊಸ ಶಿಕ್ಷಣ ನೀತಿ ಅವೆಲ್ಲವನ್ನೂ ರೂಪಿಸಬಹುದು ಎಂಬ ಆಶಾವಾದವೂ ಇದೆ. ಈ ಕುರಿತಂತೆ ಇನ್ನೂ ಮಕ್ಕಳಲ್ಲಿ ರಾಷ್ಟ್ರೀಯತೆಯನ್ನು ಬಿಂಬಿಸುವುದರ ಜೊತೆಗೆ ಪ್ರಾದೇಶಿಕತೆ ಹಾಗೂ ಮಾತೃಭಾಷೆಯ ಕಲಿಕೆಯ ಬಗ್ಗೆ ಭದ್ರ ಬುನಾದಿ ಹಾಕುವ ಶಿಕ್ಷಣ
ನೀತಿ ಜಾರಿಯಾದರೆ ಮಾತ್ರ ಮುಂದಿನ ಪೀಳಿಗೆಗೆ ಹೊಸ ದಾರಿ ತೋರಿದಂತಾಗುತ್ತದೆ.

Share This Article
1 Comment