ಜನಮನ ಗೆದ್ದ ಮಂಡ್ಯ ಯೂತ್ ಗ್ರೂಪ್ ದಸರಾ ಉತ್ಸವ

Team Newsnap
2 Min Read

*ಬನ್ನಿ ಮರಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಚಾಲನೆ ಡೊಳ್ಳು ಕುಣಿತ, ತಮಟೆ, ನಗಾರಿ ಮೇಳಗಳ ಜನಾಕರ್ಷಣೆ

ಮಂಡ್ಯ ನಗರದಲ್ಲಿ ವಿಜಯದಶಮಿ ಅಂಗವಾಗಿ ಮಂಡ್ಯ ಯೂತ್ ಗ್ರೂಪ್ ವತಿಯಿಂದ ಆಯೋಜನೆಗೊಂಡಿದ್ದ ಮಂಡ್ಯ ದಸರಾ ಆಕರ್ಷಣಿಯವಾಗಿ ಜನಮನಸೊರೆಗೊಂಡಿತು.

ಮಂಡ್ಯನಗರದ ಗಜೇಂದ್ರ ಮೋಕ್ಷ ಕೊಳದ ಬಳಿ ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ಹಾಗೂ ಡಾ.ಯಾಶಿಕಾ ಅನಿಲ್ ಅವರು ಬನ್ನಿ ಮರಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ದಸರಾ ಮೆರವಣಿಗೆಗೆ ಚಾಲನೆ ನೀಡಿದರು.

ಕಾಳಿಕಾಂಬ ದೇವಾಲಯದಿಂದ ಮೆರವಣಿಗೆ ಆರಂಭಗೊಂಡು ಎಸ್.ಡಿ.ಜಯರಾಂ ವೃತ್ತ, ಬೆಂಗಳೂರು-ಮೈಸೂರು ಹೆದ್ದಾರಿ ತಲುಪಿತು. ಅಲ್ಲಿಂದ ವಿ.ವಿ.ರಸ್ತೆಯನ್ನು ತಲುಪಿತು. ಡೊಳ್ಳು ಕುಣಿತ, ತಮಟೆ, ನಗಾರಿ ಮೇಳಗಳು ಜನಾಕರ್ಷಣೆಗೆ ಪಾತ್ರವಾದವು. ರಸ್ತೆಗಳಲ್ಲಿ ಜಾನಪದ ಕಲಾತಂಡಗಳು ಸಾಗುವ ವೇಳೆ ಎರಡೂ ಬದಿಗಳಲ್ಲಿ ನಿಂತಿದ್ದ ಜನಸಮೂಹ ದಸರಾ ಮೆರವಣಿಗೆಯನ್ನು ಕಣ್ತುಂಬಿಕೊಂಡಿತು.

anil anand3

10 ವರ್ಷದ ಬಾಲಕ ಹಾಗೂ ಬಾಲಕಿಯೊಬ್ಬಳು ಪ್ರದರ್ಶಿಸಿದ ಪೂಜಾಕುಣಿತ ಪ್ರದರ್ಶನಕ್ಕೆ ಜನರು ಮಾರುಹೋದರು. ಯುವಕ-ಯುವತಿಯರು ಪ್ರದರ್ಶಿಸಿದ ಬೆಂಕಿ ಭರಾಟೆ, ದೊಣ್ಣೆ ವರಸೆಯ ಕೌಶಲ್ಯ ಕಂಡು ಬೆರಗಾದರು. ಜಡೆ ಕೋಲಾಟವು ಜನರ ಮನಸ್ಸನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಹೆದ್ದಾರಿಯಲ್ಲಿ ಸಾಗುತ್ತಿದ್ದ ಜನರು ಮಂಡ್ಯದ ಮಿನಿ ದಸರಾವನ್ನು ಕಣ್ತುಂಬಿಕೊಂಡರು. ಆಯುಧ ಪೂಜಾ ಸಂಭ್ರಮ

ಕೃಷ್ಣರಾಜ ಅಣೆಕಟ್ಟು ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ತಬ್ಧ ಚಿತ್ರ ಆಕರ್ಷಣೀಯವಾಗಿತ್ತು. ಮಹಿಷಿಯ ವೇಷಧಾರಿ ಎಲ್ಲರ ಗಮನ ಸೆಳೆಯಿತು. ಚಿಲಿಪಿಲಿ ಗೊಂಬೆ, ವೀರಗಾಸೆ ನಂದಿ ಧ್ವಜ ಕುಣಿತ, ಪೂಜಾ ಕುಣಿತ, ಪಟ ಕುಣಿತ, ನಂದಿಧ್ವಜ, ಸೋಮನಕುಣಿತ, ಗಾರುಡಿಗೊಂಬೆ, ದಾಸಯ್ಯನ ವೇಷಗಳು, ಕೊಂಬುಕಹಳೆ, ಲಗಾನ್, ಕಂಸಾಳೆ ತಂಡಗಳು ಮೆರವಣಿಗೆಯ ಸೊಬಗನ್ನು ಹೆಚ್ಚಿಸಿದವು.

anil anand 1

ಮೆರವಣಿಗೆ ವಿ.ವಿ.ರಸ್ತೆಯ ಮೂಲಕ ಸಾಗಿ ಬಂದು ಹೊಸಹಳ್ಳಿ ವೃತ್ತವನ್ನು ತಲುಪಿತು. ರಸ್ತೆಯುದ್ದಕ್ಕೂ ರಸ್ತೆಯ ಅಕ್ಕ-ಪಕ್ಕ ಹಾಗೂ ಮಹಡಿಯ ಮೇಲಿನಿಂದ ಜನರು ಮೆರವಣಿಗೆಯನ್ನು ವೀಕ್ಷಿಸಿದರು. ಅಶ್ವದಳದ ಮುಂದಾಳತ್ವದಲ್ಲಿ ಮೆರವಣಿಗೆ ಸಾಗಿಬರುತ್ತಿತ್ತು. ಪುಟ್ಟ ಮಕ್ಕಳು ಸೇರಿದಂತೆ ಎಲ್ಲ ವರ್ಗದ ಜನರೂ ಮಂಡ್ಯ ದಸರಾ ವೈಭವವನ್ನು ನೋಡಿ ಆನಂದಿಸಿದರು. ಹಳ್ಳಿಕಾರ್ ತಳಿಯ ಹಸುಗಳು, ಬಂಡೂರು ಕುರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ತಮ್ಮದೇ ಆದ ವಿಶೇಷತೆಯನ್ನು ಪ್ರದರ್ಶಿಸಿದವು.

ಯೂತ್‌ಗ್ರೂಪ್ ಸದಸ್ಯರಾದ ಬಿ.ಎಂ.ಅಪ್ಪಾಜಪ್ಪ, ದರ್ಶನ್, ಪ್ರಮೋದ್, ರಾಜಣ್ಣ, ನವೀನ್, ವಿನಯ್, ಮಲ್ಲೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
Leave a comment