4 ಕೋಟಿ ಆಸ್ತಿವಂತ ಶಿರಾ ನಗರಸಭೆ ಸದಸ್ಯನ ಬಳಿ ಬಿಪಿಎಲ್ ಕಾರ್ಡ್ : ಸದಸ್ಯತ್ವದಿಂದ ವಜಾ

Team Newsnap
1 Min Read

ಕೋಟ್ಯಾಧಿಪತಿಯಾಗಿದ್ದರೂ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡು ಉಚಿತ ರೇಷನ್ ಪಡೆಯುತ್ತಿದ್ದ ಹಾಗೂ ಅಪರಾಧ ಪ್ರಕರಣಗಳನ್ನು ಮುಚ್ಚಿಟ್ಟ ಜೆಡಿಎಸ್ ನಗರಸಭಾ ಸದಸ್ಯನೊಬ್ಬನನ್ನು ಸದಸ್ಯತ್ವದಿಂದಲೇ ವಜಾ ಮಾಡಲಾಗಿದೆ.

ತುಮಕೂರ ಜಿಲ್ಲೆಯ ಶಿರಾ ನಗರ ಸಭೆಯ ಜೆಡಿಎಸ್ ಸದಸ್ಯ ರವಿಶಂಕರ್ ಆಯ್ಕೆಯನ್ನು ಶಿರಾ ಜೆಎಂಎಫ್‌ಸಿ ನ್ಯಾಯಾಲಯ ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ.

ಮೈಸೂರಲ್ಲೂ ಚಿರತೆ ಭೀತಿ: ಮೇಟಗಹಳ್ಳಿ ಸುತ್ತಮುತ್ತಲ ಶಾಲೆಗಳಿಗೆ ರಜೆ

ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಅಪರಾಧ ಕೃತ್ಯದ ಮಾಹಿತಿಯನ್ನು ಉಲ್ಲೇಖಿಸದ ಆರೋಪವೂ ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್‌ ರವಿಶಂಕರ್‌ ಆಯ್ಕೆಯನ್ನು ಅಸಿಂಧುಗೊಳಿಸಿದೆ.

ರವಿಶಂಕರ್ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಚೆಕ್ ಬೌನ್ಸ್, ಕೋಮು ಗಲಭೆ ಸೃಷ್ಟಿ, ಅಪಘಾತ ಪ್ರಕರಣ‌‌ಗಳು ರವಿಶಂಕರ್‌ ಮೇಲೆ ದಾಖಲಾಗಿತ್ತು. ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಗಳು ತಮ್ಮ ಮೇಲೆ ದಾಖಲಾಗಿರುವ ಎಲ್ಲಾ ಪ್ರಕರಣಗಳ ವಿವರಗಳನ್ನು ಅಫಿಡವಿಟ್‌ನಲ್ಲಿ ಉಲ್ಲೇಖಿಸಿ ಚುನಾವಣಾ ಆಯೋಗಕ್ಕೆ ಮಾಹಿತಿ ಕೊಡಬೇಕು.

ರವಿಶಂಕರ್ ಮಾತ್ರ ಎಲ್ಲಾ ಮಾಹಿತಿಗಳನ್ನು ನೀಡದೇ ಮುಚ್ಚಿಟ್ಟಿದ್ದರು. ಈ ಕಾರಣಕ್ಕೆ ಶಿರಾ ಜೆಎಂಎಫ್‌ಸಿ ಕೋರ್ಟ್‌ನ ನ್ಯಾ. ಗೀತಾಂಜಲಿ ಅವರು ವಾರ್ಡ್ ನಂಬರ್ 9 ರಿಂದ ಆಯ್ಕೆಯಾದ ರವಿಶಂಕರ್ ಸದಸ್ಯತ್ವ ವನ್ನು ರದ್ದುಗೊಳಿಸಿ ಉಪ ಚುನಾವಣೆ ನಡೆಸುವಂತೆ ಆದೇಶಿಸಿದ್ದಾರೆ.

ರವಿಶಂಕರ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ನಾಮಪತ್ರದಲ್ಲಿ ತನ್ನ ಬಳಿ 4 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಉಲ್ಲೇಖಿಸಿದ್ದರು. ಕೋಟಿಗಟ್ಟಲೇ ಆಸ್ತಿ ಇದ್ದರೂ ಬಿಪಿಎಲ್ ಕಾರ್ಡ್ ಪಡೆದು ಸರ್ಕಾರದ ಉಚಿತ ರೇಷನ್‌ ಪಡೆಯುತ್ತಿದ್ದರು.

ಈ ಮಾಹಿತಿ ತಿಳಿದಿದ್ದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಕೋರ್ಟ್ ಮೆಟ್ಟಿಲೇರಿದ್ದರು. ರವಿಶಂಕರ್ ನಾಮಪತ್ರದಲ್ಲಿ ಸುಳ್ಳು‌ಮಾಹಿತಿ ನೀಡಿದ್ದಾರೆ. 2021ರ ಡಿಸೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ರವಿಶಂಕರ್ ಸದಸ್ಯತ್ವ ಅನೂರ್ಜಿತಗೊಳಿಸಬೇಕು ಎಂದು ಮನವಿ ಮಾಡಿದ್ದರು.

Share This Article
Leave a comment