ಸಾವು, ಸರ್ಟಿಫಿಕೇಟ್ ಮತ್ತು ಸಂಬಂಧಗಳ ಮೌಲ್ಯ

Team Newsnap
5 Min Read
love of mother ಏನದು ಅಮ್ಮ !

ಚಳಿಗಾಲ ಬಂದಿತೆಂದರೆ ನನ್ನೊಳಗೆ ಒಂದು ಬಗೆಯ ಮುದುಡುವಿಕೆ ಶುರುವಾಗುತ್ತದೆ. ಚಳಿಗಾಲವೆಂದರೆ ಹೂಗಳು ಮುದುಡುತ್ತವೆ ನಿಜ ಆದರೆ ಮನಸ್ಸು ಮುದುಡುವುದಕ್ಕೆ ಕಾರಣವಿದೆ. ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ನಮ್ಮ ಪಿಂಚಣಿ ಗ್ರಾಹಕರು ಲೈಫ್ ಸರ್ಟಿಫಿಕೇಟ್ ಕೊಡುವ ಕಾಲ. ಬಂದ ಕೆಲವರು ಸಂತೋಷದಿಂದ ‘ಮೇಡಂ ಇನ್ನೂ ಬದುಕಿದ್ದೀನಿ ನಾನು. ಲೈಫ್ ಸರ್ಟಿಫಿಕೇಟ್ ಕೊಡಿ ಸೈನ್ ಮಾಡ್ತೀನಿ’ ಅಂತಾರೆ. ಮತ್ತೆ ಕೆಲವರು ‘ಮುಂದಿನ ವರ್ಷ ಇರ್ತೀನೋ ಇಲ್ವೋ ಕೊಡಿ ಸೈನ್ ಮಾಡ್ತೀನಿ ಈ ಸಲ ಬದ್ಕಿದೀನಲ್ಲಾ’ ಅಂತಾರೆ. ಮತ್ತೆ ಕೆಲವರು ತಮಾಷೆಯಾಗಿ ‘ನೋಡಿ ಮೇಡಂ ನಾವು ಬದ್ಕಿದೀವಿ ಅಂತ ಮುಖ ತೋರ್ಸೋಕೆ ಬಂದಿದೀವಿ ನೋಡ್ಕೊಂಡ್ ಬಿಡಿ’ ಅಂತಾರೆ. ಅನಕ್ಷರಸ್ಥರು, ಹಳ್ಳಿಗರು ಕೆಲವರು ಲೈಫ್ ಸರ್ಟಿಫಿಕೇಟ್ ಅಂತಾನೂ ಹೇಳೋಕೆ ಬರದವರು ‘ಲೈಫ್ ಪಾಸ್‍ಗೆ ಸೈನ್ ಮಾಡ್ಬೇಕು ಅಂತಾರೆ, ‘ಬದ್ಕಿರೋ ಚೀಟಿ ಕೊಡಿ ಪಿಂಚಣಿಗೆ’ ಅಂತಾರೆ, ‘ಲೈಫ್ ರಿನ್ಯೂವಲ್ ಲೆಟರ್ ಕೊಡಿ ಸೈನ್ ಮಾಡ್ಬೇಕು’ ಅಂತಾರೆ, ‘ಡೆತ್ ಸರ್ಟಿಫಿಕೇಟ್ ಕೊಡಿ ಸೈನ್ ಮಾಡ್ಬೇಕು’ ಅಂದವರೂ ಇದ್ದಾರೆ. ಭಾಷೆ ಬೇರೆ ಭಾವ ಒಂದೇ ಎನಿಸುತ್ತದೆ ಆಗೆಲ್ಲ.


ಬರುವ ಹಿರಿಯ ಗ್ರಾಹಕರಲ್ಲಿ ಬಹುತೇಕರು ಆಗ್ಗಾಗ್ಗೆ ತಮ್ಮ ಖಾತೆಗೆ ನಾಮಿನೇಷನ್ ಆಗಿದೆಯೇ ಅಂತ ಕೇಳಿ ಖಾತ್ರಿ ಮಾಡಿಕೊಳ್ಳುತ್ತಿರುತ್ತಾರೆ. ಮಕ್ಕಳ ಹುಟ್ಟಿದ ತಾರೀಖು, ಇನಿಷಿಯಲ್ಸ್ ಎಲ್ಲವೂ ಸರಿಯಾಗಿದೆಯೇ ಎಂದು ಪದೇ ಪದೇ ಚೆಕ್ ಮಾಡಿಸುತ್ತಾರೆ. ತಮ್ಮ ನಂತರ ತಮ್ಮ ಮಕ್ಕಳಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶವೂ ಮತ್ತು ತಾವು ಹೆಚ್ಚು ದಿನ ಇರಲಾರೆವೇನೋ ಎಂಬ ಅಭದ್ರತೆಯ ಭಾವವೂ ಕಾಣುತ್ತಿರುತ್ತದೆ.


ಈ ಚಳಿಗಾಲದ ವಿಷಯ ಹೇಳುತ್ತಿದ್ದೆ. ಈ ಸಮಯದಲ್ಲಿ ಸಾವು ಹೆಚ್ಚು. ಬ್ಯಾಂಕಿನೊಳಗೆ ಯಾರಾದರು ಗಂಡು ಹುಡುಗರು ಬೋಳು ತಲೆಯಲ್ಲಿ ಬಂದರೆ ಸಾಕು ‘ಓ ನಮ್ಮವರು ಯಾರೋ ಹೋದ್ರು’ ಅನಿಸುತ್ತೆ. ಯಾರೆಂದು ಗೊತ್ತಾಗುವುದು ಅವರು ಬಂದು ನಮ್ಮಪ್ಪ ಹೋದ್ರು, ನಮ್ಮಮ್ಮ ಹೋದ್ರು ಅವರ ಅಕೌಂಟ್ ಕ್ಲೋಸ್ ಮಾಡಬೇಕು ಎಂದು ಪಾಸ್ ಪುಸ್ತಕದಲ್ಲಿನ ಫೋಟೊ ತೋರಿಸಿದಾಗಲೇ ಹೋದವರು ಯಾರೆಂದು ಗೊತ್ತಾಗುವುದು. ನೋಡಿದ ಕೂಡಲೇ ನಿಟ್ಟುಸಿರು ಜಾರುತ್ತದೆ. ಹೆಚ್ಚು ಬಳಕೆ ಇರುವವರಾದರೆ ಒಂದು ಕ್ಷಣ ಕಣ್ಣು ತುಂಬುತ್ತದೆ. ಸಾವರಿಸಿಕೊಂಡು ಮುಂದಿನ ಕೆಲಸ ಮಾಡುತ್ತೇನೆ. ಆಗೆಲ್ಲ ಮಕ್ಕಳು ಬ್ಯಾಂಕಿನ ವ್ಯವಹಾರ ಮಾಡುವ ರೀತಿ ಕಂಡಾಗ ಅಪ್ಪ ಅಮ್ಮ ಮಕ್ಕಳ ಬಗ್ಗೆ ಚಿಂತೆ ಮಾಡುವಷ್ಟು ಮಕ್ಕಳು ಅಪ್ಪ ಅಮ್ಮನ ಬಗ್ಗೆ ಚಿಂತಿಸುವುದಿಲ್ಲ ಎಂಬ ಭಾವ ಹಾದುಹೋಗುತ್ತದೆ.


ಈಗೊಂದೆರೆಡು ತಿಂಗಳಿಂದ ಹದಿನೆಂಟರಿಂದ ಇಪ್ಪತ್ತೈದು ವರ್ಷದ ಮಕ್ಕಳು ನಮ್ಮಲ್ಲಿ ಅಕೌಂಟ್ ತೆರೆಯಲು ಹೆಚ್ಚಾಗಿ ಬರುತ್ತಿದ್ದಾರೆ. ಬಹುಶಃ ಸ್ಕೂಲು ಕಾಲೇಜಿನ ಸ್ಕಾಲರ್‍ಶಿಪ್‍ಗಾಗಿ. ಅಥವಾ ಗೂಗಲ್, ಫೋನ್ಪೇ ಬಳಸುವುದು ಸುಲಭ ಎಂದೋ ಇರಬಹುದು. ಎಲ್ಲ ವಿವರಗಳನ್ನು ಪಟಪಟ ಹೇಳುವ ಮಕ್ಕಳು ನಾಮಿನೇಷನ್ ವಿಭಾಗಕ್ಕೆ ಬಂದಾಗ ನಿಮ್ಮ ಅಪ್ಪನ ಹುಟ್ಟಿದ ತಾರೀಖು ಹೇಳಿ ಅಥವಾ ನಿಮ್ಮ ಅಮ್ಮನ ಹುಟ್ಟಿದ ತಾರೀಖು ಹೇಳಿ ಅಂದಾಗ ಕಣ್ಕಣ್ಣು ಬಿಡ್ತಾರೆ. ಆಗ ಅವರಿಗೆ ಫೋನ್ ಮಾಡಿ ಹುಟ್ಟಿದ ತಾರೀಖು ಕೇಳುತ್ತಾರೆ. ಇದು ಬಹುತೇಕ ಮಕ್ಕಳ ಪರಿ.


ಒಂದು ಮಧ್ಯವಯಸ್ಕ ಮಹಿಳೆಯಂತೂ ಗಂಡನ ಹುಟ್ಟಿದ ದಿನಾಂಕ ಕೇಳಿದರೆ ‘ನಂಗೊತ್ತಿಲ್ಲ’ ಅಂದರು. ‘ಮದುವೆಯಾಗಿ ಎಷ್ಟು ವರ್ಷ ಆಯ್ತು’ ಎನ್ನುವ ನನ್ನ ಪ್ರಶ್ನೆಗೆ ‘ಹದಿಮೂರು’ ಎನ್ನುವ ಉತ್ತರ ಬಂದಿತು. ನನಗಚ್ಚರಿ. ಆಕೆಯ ಅಣ್ಣ ಫೇಸ್ ಬುಕ್ಕಿನಲ್ಲಿ ನೋಡಿ ಅವಳ ಗಂಡನ ಹುಟ್ಟಿದ ದಿನವನ್ನು ಹೇಳಿದರು. ತಮ್ಮ ಹುಟ್ಟುಹಬ್ಬವನ್ನು ತಮ್ಮ ಹತ್ತಿರದವರು ನೆನಪಿಟ್ಟುಕೊಂಡು ಶುಭಾಶಯ ಕೋರಬೇಕೆಂದು ಬಯಸುವ ನಾವು ಅದೇ ಸಂತೋಷವನ್ನು ಬೇರೆಯವರಿಗೆ ಕೊಡಬೇಕಲ್ಲವೇ?
ಇರಲಿ. ಇದು ಒಂದು ಮುಖ.


ತಂದೆ ತಾಯಿಯರು ಹಾಸಿಗೆ ಹಿಡಿದು ಮಲಗಿದಾಗ ವರ್ಷಗಟ್ಟಲೆ ಸೇವೆ ಮಾಡಿದ ಮಕ್ಕಳನ್ನೂ ನೋಡಿದ್ದೇನೆ. ನಮ್ಮ ಗ್ರಾಹಕರೊಬ್ಬರು ತಮ್ಮ ತಾಯಿಗೆ ಕಿಡ್ನಿ ತೊಂದರೆಯಾಗಿ, ಸುಮಾರು ಆರು ವರ್ಷಗಳು ಪ್ರತಿವಾರವೂ ಡಯಾಲಿಸಿಸ್ ಮಾಡಿಸುತ್ತಿದ್ದರು. ಅವರ ಸಂಬಳದ ಅರ್ಧ ಭಾಗ ತಾಯಿಯ ವೈದ್ಯಕೀಯ ಸೇವೆಗೇ ಹೋಗುತ್ತಿತ್ತು. ಒಂದು ದಿನವೂ ಬೇಸರಿಸಿಕೊಳ್ಳದೆ ‘ನಮಗೇ ಹೀಗಾಗಿದ್ರೆ ಅಪ್ಪ ಅಮ್ಮ ಸುಮ್ನೆ ಇರ್ತಿದ್ರಾ ಮೇಡಂ?’ ಎಂದು ಸಮಜಾಯಿಷಿ ಕೊಡುತ್ತಿದ್ದರು. ಇನ್ನೊಂದು ಕುಟುಂಬದಲ್ಲಿ ಒಬ್ಬ ವೃದ್ಧರು ‘ನನ್ನ ಸೊಸೆಯೇ ನನ್ನ ತಾಯಿ. ಆಕೆಯಿಂದಲೇ ನಾನು ಬದುಕಿರುವುದು’ ಎಂದದ್ದೂ ಇದೆ.


ಆವತ್ತು ಸುಮಾರು ಬೆಳಿಗ್ಗೆ ಹನ್ನೊಂದು ಗಂಟೆ ಇರಬಹುದು. ಬ್ಯಾಂಕಿನಲ್ಲಿ ಸಾಮಾನ್ಯವಾಗಿ ಗಿಜಿಗಿಜಿ ಎನ್ನುತ್ತಲೇ ಇರುತ್ತದೆ. ಆದರೆ ಅವತ್ತು ಸ್ವಲ್ಪ ವಿರಾಮವಿತ್ತು. ಜನ ಕಡಿಮೆ ಎಂದುಕೊಂಡರೆ ಸಾಕು ಅದು ಸುಳ್ಳು ಎನ್ನುವಂತೆ ಹುಚ್ಚುಪ್ರವಾಹದ ಹಾಗೆ ಯಾವಾಗ ದಿಢೀರ್ ಎಂದು ಸೇರುತ್ತಾರೋ ಗೊತ್ತೇ ಆಗುವುದಿಲ್ಲ. ಇದ್ಯಾಕೆ ಹೇಳಿದೆ ಎಂದರೆ ತುಸು ಬಿಡುವಿದ್ದರೆ ಗ್ರಾಹಕರ ಜೊತೆ ಪೂರ್ವಾಪರ ಮಾತನಾಡುತ್ತೇವೆ. ಇಲ್ಲದಿದ್ದರೆ ಅವರು ಕೇಳಿದ್ದಕ್ಕಷ್ಟೇ ಉತ್ತರ ಕೊಡಲು ಸಾಧ್ಯ.

ಅಂದು ಸುಶು ಬ್ಯಾಂಕಿಗೆ ಬಂದರು. ಆಕೆಯ ಪತಿ ಒಬ್ಬ ನಿವೃತ್ತ ಸಿಪಾಯಿ. ಆತನ ಪಿಂಚಣಿ ಈಕೆಗೆ ಬರಬೇಕಿತ್ತು. ಪತ್ರಗಳನ್ನು ಕೊಡಲು ಬ್ಯಾಂಕಿಗೆ ಬಂದಿದ್ದರು. ಇನ್ನೂ ಚಿಕ್ಕ ವಯಸ್ಸು. ಆತ ಸರ್ಕಾರದ ದೊಡ್ಡ ಹುದ್ದೆಗೆ ಆಯ್ಕೆಯಾಗಿದ್ದರು. ದುರದೃಷ್ಟಕ್ಕೆ ದ್ವಿಚಕ್ರವಾಹನ ಜಾರಿ ಬಿದ್ದು ಸ್ಪೈನಲ್ ಕಾರ್ಡ್ ತೊಂದರೆಯಾಗಿ ಒಂದೂವರೆ ವರ್ಷ ಹಾಸಿಗೆಯಲ್ಲೇ ಇರುವಂತಾಯಿತು. ಸರ್ಕಾರೀ ಕೆಲಸಕ್ಕೂ ಸೇರಲಾಗಲಿಲ್ಲ. ಮದುವೆಯಾಗಿ ಎಂಟು ವರ್ಷದ ಮೇಲೆ ಒಂದು ಮುದ್ದಾಗ ಹೆಣ್ಣು ಮಗು ಆಗಿತ್ತು. ಆ ಮಗುವಿಗೆ ಮೂರು ತಿಂಗಳಿದ್ದಾಗಲೇ ಈ ಅಪಘಾತ. ಆರು ತಿಂಗಳು ಆಸ್ಪತ್ರೆವಾಸ. ನಂತರ ಮನೆಯಲ್ಲೇ ಹಾಸಿಗೆ ವಾಸ. ಹಾಸಿಗೆಯಲ್ಲಿ ಇದ್ದರೂ ಬುದ್ಧಿ ಚುರುಕಾಗಿತ್ತಲ್ಲ. ಮಲಗಿದಲ್ಲೇ ಹೆಂಡತಿಗೆ ವ್ಯಾವಹಾರಿಕ ಜಗತ್ತಿನ ಪರಿಚಯ ಮಾಡಿಕೊಟ್ಟರು. ತಾ ಇಲ್ಲದಿದ್ದರೂ ಮುಂದೆ ಆಕೆ, ಮಗು ಹೇಗಿರಬೇಕು, ತನ್ನ ವ್ಯವಹಾರಗಳೇನು, ಆಕೆಗೆ ಬರಬೇಕಾದ ಸವಲತ್ತುಗಳೇನು, ಸಂಬಂಧಿಕರಲ್ಲಿ ಹೇಗಿರಬೇಕು? ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸಬೇಕು ಎಲ್ಲವನ್ನೂ ದಿನಲೂ ಉಪದೇಶಿಸುತ್ತಿದ್ದರೆಂತೆ. ಬ್ಯಾಂಕ್ ಕೆಲ್ಸ ಏನಿದ್ರೂ ಶುಭ ಮೇಡಂ ಹೇಳಿಕೊಡ್ತಾರೆ ಹೆದರಿಕೊಳ್ಳಬೇಡ ಎಂದಿದ್ದರಂತೆ. ಈಗ ಆಕೆ ತುಂಬು ಆತ್ಮವಿಶ್ವಾಸಿ. ನನ್ನ ಗೆಳತಿಯೂ ಆಗಿದ್ದಾಳೆ. ಈಗ್ಗೆ ಮೂರು ತಿಂಗಳ ಹಿಂದೆ ಆತ ತೀರಿಕೊಂಡಿದ್ದು. ಮೊನ್ನೆ ಸುಶು ಬ್ಯಾಂಕಿಗೆ ಬಂದಾಗ “ಮಗು ಹೇಗಿದೆ? ನೀವು ಸುಧಾರಿಸಿಕೊಂಡಿದ್ದೀರಾ? ಆಗಾಗ ಮಗುವಿಗೆ ಅಪ್ಪನ ಫೋಟೊ ತೋರಿಸಿ. ಪುಟ್ಟ ಮಗು ಅಲ್ವಾ ಇಲ್ಲದಿದ್ದರೆ ಅದಕ್ಕೆ ನೆನಪೇ ಉಳಿಯುವುದಿಲ್ಲ” ಎಂದೆ. ‘ಇರಿ ಮೇಡಂ ನಾನು ನಿಮಗೇನೋ ತೋರಿಸ್ತೀನಿ’ ಎಂದು ಮೊಬೈಲ್ ತೆಗೆದು ಅವಳ ಗಂಡ ಮಗುವಿಗಾಗಿ ಮಾಡಿದ್ದ ವಿಡಿಯೋ ತೋರಿಸಿದಳು. “ಹಾಯ್ ಚಿನ್ನುಪುಟ್ಟೂ.. ನಾನು ನಿಮ್ಮಪ್ಪ. ನಿನಗೀಗ ಒಂದು ವರ್ಷ ಎಂಟು ತಿಂಗಳು. ನೀ ಎಷ್ಟು ಮುದ್ದಾಗಿ ಪಪ್ಪ್ಪ್ಪ್ಪ್‍ಪ್ಪಾ… ಮ್ಮ್ಮ್ಮ್ಮ್‍ಮ್ಮಾಅ.. ಅಂತೀಯ. ಕೇಳಿ ನನಗೆ ಸ್ವರ್ಗ. ಈಗಾಗಲೇ ನನಗೆ ಬೆಡ್ ಸೋರ್ ಆಗಿದೆ. ತುಂಬ ದಿನ ಇರಲ್ಲ. ನೀ ದೊಡ್ಡವಳಾದಾಗ ನಿನ್ನಪ್ಪ ಹೇಗಿದ್ರು, ಹೇಗೆ ಮಾತಾಡ್ತಿದ್ರು ಅಂತ ಗೊತ್ತಾಗ್ಬೇಕಲ್ಲಾ. ಅದಕ್ಕೇ ಈ ವಿಡಿಯೋ ರೆಕಾರ್ಡಿಂಗ್ ಮಾಡ್ತಿದೀನಿ. ಅಮ್ಮನ್ನ ಚೆನ್ನಾಗಿ ನೋಡ್ಕೋ. ಚೆನ್ನಾಗಿ ಓದಿ ಒಳ್ಳೆ ಮಗು ಆಗಿ ಬದ್ಕು…” ವಿಡಿಯೋ ಇನ್ನೂ ನಡೀತಿತ್ತು. ನನ್ನ ಕಣ್ಣು ತುಂಬಿ ಮತ್ತೇನೂ ಕಾಣಲಿಲ್ಲ… ಕತ್ತೆತ್ತಿದಾಗ ಕಣ್ಣೊರೆಸಿಕೊಂಡು ಸುಶು ಹೊರಹೋಗುತ್ತಿದ್ದುದು ಕಂಡಿತು

IMG 20180306 WA0008 1 edited
ಡಾ.ಶುಭಶ್ರೀಪ್ರಸಾದ್, ಮಂಡ್ಯ


Share This Article
Leave a comment