ಪಟ್ಟಾಭಿಷೇಕ

Team Newsnap
5 Min Read

ಈ ಅಜ್ಜನೇ ಬ್ಲೇಡ್ ಹಾಕಿಸಿದ್ದು ಎಷ್ಟು ಉರಿತಾ ಇದೆ ಗೊತ್ತಾ? ಎಂಟು ವರ್ಷದ ನನ್ನ ಮೊಮ್ಮಗ ವಿಲೋಕನ ಅಳಲು’ ರಜಾದ ಮಜಾ ಸವಿಯಲು ತಾಯಿ ತಮ್ಮನೊಡನೆ ನಮ್ಮ ಮನೆಗೆ ಬಂದಿದ್ದ ವಿಲೋಕ. ಕೂದಲು ಹೆಚ್ಚು ಬೆಳೆದಿದ್ದರಿಂದ ಅವನಮ್ಮ ಅಂದರೆ ನನ್ನ ಮಗಳು ವಿಲೋಕನಿಗೆ ಹೇರ್ ಕಟಿಂಗ್ ಮಾಡಿಸಿ ಕೊಂಡು ಬರಲು ನನಗೆ ಹೇಳಿದಳು. ನಾನು ಒಲ್ಲದ ಮನಸ್ಸಿನಿಂದ ಮೊಮ್ಮಗನನ್ನು ಕರೆದುಕೊಂಡು ಹೊರಟೆ. ಭೃಂಗಾಮಲಕ ಹಚ್ಚಿ, ಸಿಕ್ಕ ಸಿಕ್ಕ ಹೇರ್ ಆಯಿಲ್ಗಳನ್ನು ಹಚ್ಚಿ ಮಸಾಜು ಮಾಡಿಸಿಕೊಂಡರೂ ಬೆಳೆಯದ ಕೂದಲು ಇವನಿಗೆ ಆರಾಮವಾಗಿ ಬೆಳೆಯುತ್ತದೆ. ಒಂದು ವಾರ ಬಿಡುವಷ್ಟರಲ್ಲಿ ಕಣ್ಣು ಮುಚ್ಚಿ ಹೋಗಿರುತ್ತದೆ. ಇವನು ಆಗಾಗ ಕತ್ತನ್ನು ಸ್ಟೈಲಾಗಿ ತಿರುಗಿಸುವುದು ಇಲ್ಲವೇ ಸಿನಿಮಾ ನಾಯಕ-ನಾಯಕಿಯರು ಮಾಡುವಂತೆ ಕೂದಲನ್ನು ಹಿಂದಕ್ಕೆ ತಳ್ಳಿಕೊಳ್ಳುವುದು. ಇದನ್ನು ತಪ್ಪಿಸಲು ಹದಿನೈದು ದಿನಕ್ಕೊಮ್ಮೆ ಅವನನ್ನು ಸೆಲೂನ್ ದರ್ಶನ ಮಾಡಿಸುವುದು ಅನಿವಾರ್ಯವಾಗಿದೆ. ಸಣ್ಣಗೆ ಕ್ರಾಪ್ ಮಾಡಿದ ನಂತರ ತಲೆಯ ಹಿಂಭಾಗಕ್ಕೆ ರೇಜರ್ ನಿಂದ ಸಮ ಮಾಡಲು ಹೊರಟ ನಾಪಿತ ಅದೇ ಸಮಯಕ್ಕೆ ಮುಂದಿರುವ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಳ್ಳಲು ಕತ್ತು ಎತ್ತಿದ ಜನ್ಮದಲ್ಲಿ ಸಲೂನ್ ಮೆಟ್ಟಿಲು ಹತ್ತಿರದಿದ್ದ  ನಾನು ಸುಮ್ಮನೆ ಇರಲಾರದೇ ಸ್ವಲ್ಪ ಹಿಂದೆ ಆ ಬ್ಲೇಡಿನಲ್ಲಿ ಹೆರೆದರೆ ಸರಿಯಾಗುತ್ತದೆನೋ ಅಂದುಬಿಟ್ಟೆ. ನಾನು ಹೇಳಿದ್ದೇ ತಡ ಅವನು ರೇಜರ್ ತೆಗೆದುಕೊಂಡು ಹೆರೆದುಬಿಟ್ಟ. ಅಷ್ಟು ಹೊತ್ತಿನವರೆಗೂ ಸುಮ್ಮನೆ ಕುಳಿತಿದ್ದ ವಿಲೋಕ ರಪ್ಪನೆ ಕತ್ತನ್ನು ಪಕ್ಕಕ್ಕೆ ತಿರುಗಿಸಿಬಿಟ್ಟ. ಅಪವಾದ ನನ್ನ ತಲೆಯ ಮೇಲೆ ಬಂತು. ಆ ದಿನಕ್ಕೇ ನಿಲ್ಲಲಿಲ್ಲ. ಅವರಪ್ಪ ಫೋನು ಮಾಡಿದಾಗ, ಇದಲ್ಲದೆ ಸುತ್ತ ಮುತ್ತಲಿದ್ದ ತನ್ನ ಗೆಳೆಯರೆಲ್ಲರಿಗೂ ತೋರಿಸಿಕೊಂಡು ಬಂದ.
 ಏನೂ ಆಗಿಲ್ಲ ಎಂಬಂತೆ ತಲೆಬಗ್ಗಿಸಿ ಕುಳಿತುಕೋ ಎತ್ತಬಾರದು ಎತ್ತಿದರೆ ಮತ್ತೆ ಕುಯ್ಯುತ್ತೆ ಎಂದು ತಲೆ ಹಿಂಭಾಗವನ್ನು ಸಮಾ ಮಾಡಿ ಬಟ್ಟೆ ಕೊಡವಿ ಎಬ್ಬಿಸಿದ. ನಾನು ಹಣ ಕೊಟ್ಟು ‘ಬಾ ಹೊರಡೋಣ ಎಂದೆ. ಅವನ ಮೂತಿ ಆಗಲೇ ಆಂಜನೇಯನ ಮೂತಿ ಆಗಿತ್ತು. ಮನೆಗೆ ಬರವಾಗ ದಾರಿಯುದ್ದಕ್ಕೂ ಧುಮ ಧುಮ ಎನ್ನುತ್ತಿದ್ದ. ನನ್ನ  ಪ್ರಕಾರ ಕಟಿಂಗ್ ಚೆನ್ನಾಗಿತ್ತು, ಆದರೆ ವಿಲೋಕ, ಅವನಮ್ಮ ಮತ್ತು ಅಮ್ಮಮ್ಮನ ಪ್ರಕಾರ ಒಂಚೂರು ಚೆನ್ನಾಗಿಲ್ಲ. ‘ಅಜ್ಜ ಬ್ಲೇಡ್ ಹಾಕಿಸಿ ಬಿಟ್ಟ’ ಎಂದು ಬಂದವರೆಲ್ಲರ ಮುಂದೆ ಅಸಮಾಧಾನದಿಂದ ಹೇಳುತ್ತಿದ್ದ ವಿಲೋಕನ ಮಾತುಗಳು ನನ್ನನ್ನು 55 ವರ್ಷ ಹಿಂದಕ್ಕೆ ಕರೆದು ಕೊಂಡು ಹೋಯಿತು. ಅದೊಂದು ರೋಚಕ ವಿಷಯ. ಆಯುಷ್ಕರ್ಮ ಇದು ನಮ್ಮ ಬಾಲ್ಯದಲ್ಲಿ ಒಂದು ಕರ್ಮವೇ ಸರಿ. ಊರಿಗೆಲ್ಲ ಒಬ್ಬನೇ ನಾಪಿತ. ಅರವತ್ತು ವರ್ಷದ ಕೈ ನಡುಗುವ ನಂಜಪ್ಪ. ಅವನ ಹತ್ತಿರ ಇದ್ದದ್ದು ಹೇರ್ ಕಟರ್ ಅಲ್ಲ ಕೂದಲನ್ನು ಕೀಳುವ ಮಿಷಿನ್ನು ಲಾನಿನಲ್ಲಿ ಹುಲ್ಲನ್ನು ಬೋಳಿಸುವಂತೆ ನಮ್ಮ ತಲೆಯ ಮೇಲೆ ಅದು ಓಡಾಡುತ್ತಿತ್ತು ಬಹಳ ಹಳೆಯದಾದ್ದರಿಂದ ಅದರ ಒರಟಾದ ಹಲ್ಲುಗಳು ತಲೆಗೆ ಚುಚ್ಚಿ ಬಹಳ ನೋವಾಗುತ್ತಿತ್ತು ಆದರೆ ನಂಜಪ್ಪನಿಗೆ ಇದ್ಯಾವುದರ ಪರಿವೇ ಇರುತ್ತಿರಲಿಲ್ಲ. ಗಲ್ಲವನ್ನು ಹಿಡಿದು ಕತ್ತನ್ನು ತಿರುಗಿಸಿದ ನೆಂದರೆ ಮೂರು ದಿನ ನೋವನ್ನು ತಿನ್ನ ಬೇಕಾಗುತ್ತಿತ್ತು. ಮನೆಗೆ ಬಂದು ಹಿತ್ತಲಿನಲ್ಲಿ ನಮಗೆ ಕ್ಷೌರ  ಮಾಡುತ್ತಿದ್ದ.  ಊರಿನಲ್ಲಿ ಇದ್ದ ಒಂದೇ ಒಂದು  ಸಲೂನ್ ನಲ್ಲಿ ನೀರು ಸ್ಪ್ರೇ ಮಾಡಿ ಕತ್ತರಿ ಬಾಚಣಿಗೆ ಉಪಯೋಗಿಸಿ ಕೂದಲನ್ನು ಚಕ ಚಕನೆ ಕತ್ತರಿಸುವ ರೀತಿಯನ್ನು  ದೂರದಿಂದ ನಾನು ಮತ್ತು ನನ್ನ ಮಿತ್ರ ಮೋಹನ ಬೆರಗುಗಣ್ಣಿನಿಂದ ನೋಡುತ್ತಿದ್ದವು.  ಮನೆಯಲ್ಲಿ ಅಮ್ಮನೊಡನೆ ನಾನು ಸಲೂನ್ ಗೆ ಹೋಗುವೆನು ನಂಜಪ್ಪ ಬೇಡ ಎಂದರೆ ನನ್ನ ತಾಯಿ ನಂಜಪ್ಪ ನಿಗೆ ಹತ್ತು  ಪೈಸೆ  ಮತ್ತು ಒಂದು  ಲೋಟ ಬೆಲ್ಲದ ಕಾಫಿ ಕೊಟ್ಟರೆ ಸಾಕು ಆದರೆ ಅಲ್ಲಿ ಒಂದು ರೂಪಾಯಿ ಕೊಡಬೇಕು ಬಿಲ್ಕುಲ್ ಸಾಧ್ಯವಿಲ್ಲ ಎಂದು ಹೇಳಿಬಿಟ್ಟಳು.  ಅಸಹಾಯಕನಾಗಿ ಎರಡು ತಿಂಗಳಿಗೊಮ್ಮೆ ಈ ಬೇಗುದಿಯನ್ನು ತಡೆಯಲೇ ಬೇಕಾಗಿತ್ತು. ನಂಜಪ್ಪ ಬರುವನೆಂದರೆ ಸಣ್ಣಗೆ ಛಳಿ ಜ್ವರ ಅಂದ ಹಾಗೆ. ‘ ನೀನು ನನಗಿಂತಾ ದೊಡ್ಡವನಲ್ಲವಾ ಅದಕ್ಕೆ ನೀನು ಮೊದಲು’ ಎಂದು ನನ್ನ ಅಣ್ಣನನ್ನು ದೂಡುತ್ತಿದ್ದೆ. ನೀನೂ ಮಾಡಿಸಿಕೊಳ್ಳಲೇ ಬೇಕಲ್ಲ ಹಿಂದಾದರೇನು ಮುಂದಾದರೇನು ಎನ್ನುತ್ತಿದ್ದ ಅವನು. ನೋವಾಗುತ್ತಿದ್ದರೂ ನಿರ್ಲಿಪ್ತನಂತೆ ಕುಳಿತು ಬಿಡುತ್ತಿದ್ದ. ಅವನನ್ನು ನೋಡುತ್ತಿದ್ದ ನಾನು ಹಾಂ, ಅಯ್ಯೋ’ ಎಂದು ಕಿರುಚುತ್ತಿದ್ದರೆ ‘ ಏಯ್ ನೀನು ಹೋಗೋ ಒಳಗೆ. ಇವನದ್ದು ಆದ ಮೇಲೆ ನಿನ್ನನ್ನು ಕರೆಯುತ್ತೇನೆ. ಅದಕ್ಕೆ ಮೊದಲು ಹೊರಗೆ ಬಂದೆಯೂ ಇದೆ ನಿಂಗೆ ‘ ಎಂದು ಬೈಯ್ಯುತ್ತಿದ್ದ. ನಾನು ಮನೆಯ ಒಳಗೆ ಬಂದು ಸಂದಿಯಲ್ಲಿ ಅಡಗಿಕೊಂಡು ನೋಡುತ್ತಿದ್ದೆ. ನನ್ನ ಅರಿವಿಗೆ ಬರುವ ಮೊದಲೇ ಕೂಗುತ್ತಿದ್ದೆ. ‘ ಏಯ್ ನೀನು ಇಲ್ಲೇ ಇದೀಯಾ ‘ ಎನ್ನುತ್ತಿದ್ದ ನಂಜಪ್ಪ. ನನ್ನ ಸರದಿ ಬಂದಾಗ ನಾನು ಕಾಣದ ದೇವರುಗಳಿಗೆಲ್ಲಾ ಕೈ ಮುಗಿದು ಅವನ ಮುಂದೆ ಆಸೀನನಾಗುತ್ತಿದ್ದೆ. ಅವನು ರೇಜರ್ ಹತ್ತಿರ ತರುವ ಮೊದಲೇ ಕಿರುಚುತ್ತಿದ್ದೆ. ಅಮ್ಮ ದೂರದಲ್ಲಿ ನಿಂತು ನನಗೆ ಒಂದು ಪೈಸೆಯ ಪೆಪ್ಪರ್ಮೆಂಟ್ ಆಸೆ ತೋರಿಸುತ್ತಿದ್ದಳು. ಮನೆಯ ಪಕ್ಕದಲ್ಲಿದ್ದ ಆಂಜನೇಯ ದೇವಸ್ಥಾನಕ್ಕೆ  ದಿನವೂ ಹೋಗಿ  ನಮಸ್ಕಾರ ಹಾಕುತ್ತಾ ಇದರಿಂದ ಪಾರು ಮಾಡು  ತಂದೆ ಎಂದು ಬೇಡಿಕೊಳ್ಳುತ್ತಿದ್ದೆ. ‘ದೇವರೇ ಬೇಕಾದರೆ ನನ್ನ ಕೂದಲೆಲ್ಲಾ ನೀನೇ ತೆಗೆದುಕೊ ನಾನು ಬೋಡನಾದರೂ ಪರವಾಗಿಲ್ಲ ಈ ನಂಜಪ್ಪನ ಕೈಗೆ ಸಿಗದಂತೆ ಮಾಡು ಅಥವಾ ನನ್ನಮ್ಮನಿಗೆ ಸೆಲೂನ್ ಗೆ ಕಳಿಸುವ ಬುದ್ಧಿ ಕೊಡು’. ನನ್ನ ಪ್ರಾರ್ಥನೆ ಫಲಿಸಿ ಆಂಜನೇಯ ವರ ಕೊಟ್ಟ. ಅವನು ಆತುರಗೆಟ್ಟ ಆಂಜನೇಯ. ನನ್ನ ಮೊದಲ ವಾಕ್ಯ ಕೇಳಿಸಿಕೊಂಡು ‘ತಥಾಸ್ತು’ ಎಂದುಬಿಟ್ಟ. ಅದೇ ಕಾರಣಕ್ಕೋ ಏನೋ ಗೃಹಸ್ಥ ನಾಗುವ ಸಂದರ್ಭದಲ್ಲಿದ್ದ ಅಲ್ಪಸ್ವಲ್ಪ ಕೂದಲು ಸಹ ಹೋಗಿ ಈಗ ನಾನು ಬಕ್ಕತಲೆಯವನಾಗಿದ್ದೇನೆ. ‘ನೀನು ಬಂದು ನನ್ನ ಕೂದಲು ಸಂಪೂರ್ಣವಾಗಿ ಹೋಯಿತು ಎಂದರೆ ಹೆಂಡತಿಯೇನು ಸುಮ್ಮನಿರುವವಳಲ್ಲ. ‘ನನಗೆ ಕೈಗೆ ಸಿಗುವ ಹೊತ್ತಿಗೆ ಬಂಜರು ಭೂಮಿಯಾಗಿತ್ತು. ನನ್ನದೆಂತ ದುರಾದೃಷ್ಟ ನೋಡಿ ನಿಮ್ಮ ಜುಟ್ಟು ನನ್ನ ಕೈಗೆ ಸಿಗಲೇ ಇಲ್ಲ.’ ಎಂದು ನಗುತ್ತಾಳೆ. ನನ್ನ ಕಷ್ಟ ನನಗೆ. ನಾನು ಸಮರ್ಥಿಸಿಕೊಳ್ಳಲು ‘ ನನ್ನ ತಲೆಯ ಒಳಗೆ ಇದ್ದುದುದರಿಂದ ತಾನೇ ನೀನು ಮದುವೆಯಾಗಲು ಒಪ್ಪಿದ್ದು.’ ಎಂದು ತೃಪ್ತಿಪಟ್ಟುಕೊಳ್ಳುತ್ತೇನೆ. ಚಿಕ್ಕವನಿದ್ದಾಗ ನನಗೆ ಮೊಗ್ಗಿನ ಜಡೆ ಹಾಕಿ ತೆಗೆಸಿದ ಫೋಟೋ ಇನ್ನೂ ನನ್ನ ಬಳಿ ಇದೆ. ಯಾರಿಗೆ ತೋರಿಸಿದರೂ ನಂಬುವುದೇ ಇಲ್ಲ.
‘ಅರೆ, ನಾನೇನು ಹುಟ್ಟುತ್ತಲೇ ಬಕ್ಕ ತಲೆಯವನಾಗಿದ್ದೆನೆ?’ ಎನ್ನುತ್ತೇನೆ. ಬಕ್ಕ ತಲೆಯವನಿಗೆ ಅನೇಕ ಉಪಯೋಗಗಳಿವೆ. ಕಾಲು ಚಮಚ ಎಣ್ಣೆ ಹಚ್ಚಿದರೆ ಸಾಕು. ಮಳೆಯಲ್ಲಿ ನೆಂದರೂ ಥಂಡಿಯಾಗುವುದಿಲ್ಲ. ಬಾಚಣಿಗೆಯ ಅವಶ್ಯಕತೆ ಇಲ್ಲ. ಶಾಂಪೂ, ಮತ್ತಿತರ ಸಾಧನಗಳ ತಂಟೆ ತಕರಾರಿಲ್ಲ. ತೊಂದರೆಗಳೆಂದರೆ ಲಟ್ಟಣಿಯಲ್ಲಿ ಏಟು ಜೋರಾಗಿ ಬಿದ್ದು ಬಾಸುಂಡೆ ಎಲ್ಲರಿಗೂ ಕಾಣಿಸುತ್ತದೆ. ಮಳೆ ಬಂದಾಗ ನೆಂದರೆ ತಲೆ ಒರೆಸುವ ಯೋಚನೆ ಇಲ್ಲ. ಎಣ್ಣೆ, ನೀರು ಹಾಕುವ ಸಂಭ್ರಮವಂತೂ ಇಲ್ಲವೇ ಇಲ್ಲ. ಟೋಪಿ ಹಾಕಲು ಸುಲಭ. ನಂಜಪ್ಪ ಕೈಯಿಟ್ಟ ಮೇಲೆ ತಲೆಯ ಮೇಲೆ ಇನ್ನ್ಯಾರೂ ಕೈ ಇಡಲಿಲ್ಲ. ಈಗಲೂ ಸೆಲೂನ್ ಕಡೆ ನೋಡುತ್ತೇನೆ ಆಸೆಯಿಂದ. ಇಲ್ಲಿಗೆ ಬರುವ ಪ್ರವೇಯವೇ ಬರಲಿಲ್ಲವಲ್ಲ ಎಂದು. ಎಪ್ಪತ್ತು-ಎಂಭತ್ತು ದಶಕದಲ್ಲಿ ಹಿಪ್ಪಿ ,ಹಿಪ್ಪೀಯಿಸಂ ಬರಲು ಈ ನಂಜಪ್ಪನಂತಹವರೆ ಕಾರಣವೇನೋ. ತಲೆ ಕೊಡಲು ಹೆದರಿಕೆಯಿಂದ ಹೊಸ ಫ್ಯಾಶನ್ ಗೆ ಮಾರು ಹೋಗಿದ್ದರು.

ravi sharma
ರವಿ ಶರ್ಮ ಕೆ
Share This Article
Leave a comment