ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ: ಅಮಿತ್ ಶಾ

Team Newsnap
1 Min Read

ದೇಶದಲ್ಲಿ ಕೊರೊನಾ ಸೋಂಕು ಎದುರಿಸಲು ಪ್ರಧಾನಿ ಕೈಗೊಂಡ ಕ್ರಮಗಳಿಂದಾಗಿ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ದಾವಣಗೆರೆಯಲ್ಲಿ ಗುರುವಾರ ಪೊಲೀಸ್ ಪಬ್ಲಿಕ್ ವಸತಿ ಶಾಲೆ, ಗಾಂಧಿ ಭವನ, ಗ್ರಂಥಾಲಯ ಸೇರಿದಂತೆ ಹಲವು ಯೋಜನೆಗಳಿಗೆ ಅವರು ಚಾಲನೆ ನೀಡಿದರು.

ರಾಜ್ಯಗಳಿಗೆ ಅಗತ್ಯವಿರುವ ಲಸಿಕೆಗಳನ್ನು ಪೂರೈಕೆ ಮಾಡಲಾಗುತ್ತಿದೆ. ಕೇಂದ್ರ -ರಾಜ್ಯ ಸರ್ಕಾರಗಳ ಸಹಕಾರದಿಂದ ಸೋಂಕು ತಡೆಯಲು ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ದೇಶದ ರಕ್ಷಣೆಗೆ ಆದ್ಯತೆ ನೀಡಲಾಗಿದೆ. ಭಯೋತ್ಪಾದನೆ ಚಟುವಟಿಕೆ ನಿಗ್ರಹಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಶಸ್ವಿಯಾಗಿದೆ.
ದಮನಕಾರಿ ಚಟುವಟಿಕೆಗಳನ್ನು ಹತ್ತಿಕ್ಕಲು ಎಲ್ಲ ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿ ಮುಂಬರುವ ಚುನಾವಣೆ ಎದುರಿಸಿ ಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಿಜೆಪಿ ಬರಲಿದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಆರ್ಥಿಕ ಶಿಸ್ತಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಅಭೃದ್ಧಿಗೆ ಆದ್ಯತೆ ನೀಡಲಾಗಿದೆ. ಅಪರಾಧ ಪ್ರಕರಣಗಳನ್ನು ಶೀಘ್ರವಾಗಿ ಪತ್ತೆ ಹಚ್ಚಲು ಸಹಕಾರಿಯಾಗುವ ವಿಧಿವಿಜ್ಞಾನ ಪ್ರಯೋಗಾಲಯ ಗಳನ್ನು ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳಲಾಗಿದೆ.
ರೈತ ಮಕ್ಕಳಿಗಾಗಿ ಪ್ರಕಟಿಸಿರುವ ವಿದ್ಯಾರ್ಥಿ ವೇತನಕ್ಕೆ ಸೆಪ್ಟೆಂಬರ್ ೫ರಂದು ಚಾಲನೆ ನೀಡಲಾಗುವುದು. ಇದರಿಂದ ರಾಜ್ಯದ ೨೦ ಲಕ್ಷ ರೈತ ಮಕ್ಕಳಿಗೆ ಅನುಕೂಲವಾಗಲಿದೆ.
ತಮ್ಮ ಸರ್ಕಾರ ಮಾತಿನ ಸರ್ಕಾರವಲ್ಲ. ಕೆಲಸದಲ್ಲಿ ನಿರೂಪಿಸಿ, ತೋರಿಸಲಿದೆ. ಇದು ಬಡವರ ಸರ್ಕಾರ. ಬಡವರಿಗಾಗಿ ಅನೇಕ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಬೊಮ್ಮಾಯಿ ವಿವರಿಸಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಗೃಹಸಚಿವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿದರು.

ಸಮಾರಂಭದಲ್ಲಿ ಸಚಿವರಾದ ಆರಗ ಜ್ಞಾನೇಂದ್ರ, ಮುರುಗೇಶ್ ನಿರಾಣಿ, ಆನಂದ್ ಸಿಂಗ್, ಭೈರತಿ ಬಸವರಾಜ್, ಸಿ.ಸಿ.ಪಾಟೀಲ್, ಸಂಸದ ಸಿದ್ದೇಶ್ವರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Share This Article
Leave a comment