December 23, 2024

Newsnap Kannada

The World at your finger tips!

deepa1

ನನ್ನ ಬಳಿ ಇರುವ ಕೆಲವು ಸೀಡಿಗಳನ್ನು ಪ್ರಸಾರ ಮಾಡುವಿರಾ?

Spread the love

ನನ್ನ ಬಳಿಯು ಸಹ ಕೆಲವು ಸೀಡಿಗಳು ಇವೆ. ದಯವಿಟ್ಟು ಅದನ್ನು ಪ್ರಸಾರ ಮಾಡಿ…….

ಸುಮಾರು 110 ವರ್ಷ ಕಾಲ್ನಡಿಗೆಯಲ್ಲಿ ಹಳ್ಳಿ ಹಳ್ಳಿ ತಿರುಗಿ ಭಿಕ್ಷೆ ಬೇಡಿ ಅನ್ನ ದಾಸೋಹ – ಅಕ್ಷರ ದಾಸೋಹ ಮಾಡಿದ ನಿಜವಾದ ಕಾಯಕ ಯೋಗಿ ಸಿದ್ದಗಂಗೆಯ ಶಿವಕುಮಾರ ಸ್ವಾಮಿಗಳ ಸೀಡಿ……..

ಏಕಾಂಗಿಯಾಗಿ ತನ್ನ ಮಕ್ಕಳಂತೆ ಸಾವಿರಾರು ಗಿಡಗಳನ್ನು ನೆಟ್ಟು ಸಾಕಿ ಬೆಳೆಸಿ ಪ್ರಕೃತಿಯ ಋಣ ತೀರಿಸಿದ ಸಾಲು ಮರದ ತಿಮ್ಮಕ್ಕನ ಸಾಧನೆಯ ಸೀಡಿ……

ಇಡೀ ರಾಜ್ಯದಲ್ಲಿ ಆ ಕಾಲಕ್ಕೆ ಹಳ್ಳಿ ಹಳ್ಳಿಗೂ ಬೋರ್ ವೆಲ್ ಕೊರೆಸಿ ಜನರ ಕುಡಿಯುವ ದಾಹವನ್ನು ತಣಿಸಿ ನೀರ್ ಸಾಬ್ ಎಂದು ಹೆಸರಾದ ನಜೀರ್ ಸಾಬ್ ಅವರ ಸೀಡಿ……..

ಸಮಾನತೆ ಸ್ವಾತಂತ್ರ್ಯದ ವಿಷಯದಲ್ಲಿ ಇಡೀ ವಿಶ್ವಕ್ಕೆ ಮಾದರಿಯಾಗುವ ಸಮ ಸಮಾಜದ ಚಿಂತನೆಯನ್ನು ಬಿತ್ತಿದ ಶರಣ ಸಂಸ್ಕೃತಿಯ ಹರಿಕಾರ ಬಸವಣ್ಣನವರ ಸೀಡಿ………

ಸಾಹಿತ್ಯವೆಂದರೆ ಇದೇ ಎನ್ನುವ ರೀತಿಯಲ್ಲಿ ಅಕ್ಷರಗಳೊಂದಿಗೆ ವೈಚಾರಿಕ ಪ್ರಜ್ಞೆ ಮೂಡಿಸಿ ವಿಶ್ವ ಮಾನವ ಸಂದೇಶ ನೀಡಿದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ ಸೀಡಿ…….

ಶತ ಶತಮಾನಗಳಿಂದ ಶೋಷಣೆ ದೌರ್ಜನ್ಯಗಳಿಗೆ ಒಳಗಾಗಿ ಎಂಬತ್ತರ ದಶಕದಲ್ಲಿ ಬಂಡಾಯದ ದೃಢ ಕಳಹೆ ಊದಿದ ಸಾಹಿತ್ಯ ಸಂಘಟನೆ ಹೋರಾಟದ ಸೀಡಿ…………..

ಕೋರೋನಾ ಸಂಕಷ್ಟದ ಸಮಯದಲ್ಲಿ ತಮ್ಮ ಬದುಕಿನ ದಿಕ್ಕನ್ನೇ ಬದಲಿಸಿಕೊಂಡು ಎರಡು ಹೊತ್ತಿನ ಊಟಕ್ಕಾಗಿ ಶ್ರಮಪಡಬೇಕಾಗಿ ಬಂದ ಅನೇಕ ವಿದ್ಯಾವಂತ ನಿರುದ್ಯೋಗಿಗಳ ಬೆವರಿನ ಬವಣೆಯ ಸೀಡಿ……….

ಒಂದೇ ಎರಡೇ…..

ಸಾವಿರಾರು ಸಾಧಕರ ಸೀಡಿಗಳು ಈ ಕನ್ನಡದ ನೆಲದಲ್ಲಿ ಸಿಗುತ್ತವೆ…..

ಕೃಷಿ ಸಂಗೀತ ಸಾಹಿತ್ಯ ಸಿನಿಮಾ ಕಲೆ ವಿಜ್ಞಾನ ಕ್ರೀಡೆ ವ್ಯಾಪಾರ ವ್ಯವಹಾರ ಯಾವುದು ಬೇಕು ನಿಮಗೆ,
ಎಲ್ಲಾ ಸೀಡಿಗಳು ಲಭ್ಯ……

ಇಡೀ ಕರ್ನಾಟಕದ ಬದುಕಿನ ಜೀವನಶೈಲಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಿ ಅದನ್ನು ಮತ್ತಷ್ಟು ಶ್ರೀಮಂತ ಗೊಳಿಸುವ ಬಹುದೊಡ್ಡ ಜವಾಬ್ದಾರಿ ನಿರ್ವಹಿಸುವ ಸಾಧ್ಯತೆ ಮತ್ತು ಅವಕಾಶ ಇರುವ ಮಾಧ್ಯಮಗಳು ಸುಮಾರು ಒಂದು ತಿಂಗಳಿನಿಂದ ಒಂದು ಅಶ್ಲೀಲ ಸೀಡಿಯನ್ನು, ಅದಕ್ಕೆ ಸಂಬಂಧಿಸಿದವರ ಅಶ್ಲೀಲ ಮಾತುಗಳನ್ನು ಮತ್ತೆ ಮತ್ತೆ ಬೆಳಗಿನಿಂದ ರಾತ್ರಿಯವರೆಗೂ ವಿಧ ವಿಧವಾದ ರೀತಿಯಲ್ಲಿ ಪ್ರದರ್ಶಿಸುತ್ತಾ ಚರ್ಚಿಸುತ್ತಾ ಇದ್ದರೆ ಅದನ್ನು ನೋಡಿ ಬೆಳೆಯುವ ಯುವ ಜನರ ಮನಸ್ಥಿತಿ ಹೇಗೆ ಉತ್ತಮವಾಗಲು ಸಾಧ್ಯ……..

ಈ ಸಮಾಜದ ನಿಜವಾದ ಗುಣಲಕ್ಷಣಗಳಾದ ಮಾನವೀಯ ಮೌಲ್ಯಗಳನ್ನು ಜಾಗೃತಗೊಳಿಸುವ ಒಂದೇ ಒಂದು ಕಾರ್ಯಕ್ರಮ ಮಾಡದೆ ಡ್ರಗ್ಸ್, ಅಶ್ಲೀಲ ಸೀಡಿ, ಕೆಟ್ಟ ರಾಜಕೀಯದ ಬಗ್ಗೆಯೇ ಬಹುತೇಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಎಲ್ಲೋ ಒಂದೆರಡು ಒಳ್ಳೆಯ ಕಾರ್ಯಕ್ರಮ ಪ್ರಸಾರ ಮಾಡಿದರೆ ಪ್ರಯೋಜನವೇನು…..

ದೃಶ್ಯ ಮಾಧ್ಯಮದ ಹಿಡಿತ ಹೊಂದಿದ ಬುದ್ದಿವಂತ ಎಂದು ಭಾವಿಸಿರುವ ಗೆಳೆಯರೇ ದಯವಿಟ್ಟು ನಿಮ್ಮ ಮನೆಯವರು ಸಹ ನೀವು ಪ್ರಸಾರ ಮಾಡುವ‌ ಸೀಡಿ ಕಾರ್ಯಕ್ರಮಗಳನ್ನು ತುಂಬಾ ಆಸಕ್ತಿಯಿಂದ ನೋಡುತ್ತಾರೆ ಎಂಬ ಪ್ರಜ್ಞೆ ನಿಮ್ಮಲ್ಲಿ ಸದಾ ಜಾಗೃತವಾಗಿರಲಿ……

ಇದೇ ನಾಗರಿಕ ಪ್ರಜ್ಞೆ ಎಂದು ಅವರನ್ನು ಎಚ್ಚರಿಸುತ್ತಾ……

ಈ ನೆಲದಲ್ಲಿ ಈ ಕ್ಷಣದಲ್ಲಿ….

ಸೀಡಿಗಳಿಗಿಂತ ಮಹತ್ವದ ಸುದ್ದಿಗಳು ಇವೆ ಎಂಬುದನ್ನು ಗಮನಿಸಿ………

ರೈತ ಹೋರಾಟ, ಕೊರೋನಾ ಆರ್ಭಟ, ಬದುಕಿನ ಜಂಜಾಟ, ಆಹಾರ ಕಲಬೆರಕೆ, ನೀರು ಗಾಳಿಯ ನೈರ್ಮಲ್ಯ, ಪ್ರಕೃತಿಯ ವಿನಾಶ ಮುಂತಾದವು ನಿಮ್ಮ ಸುದ್ದಿಗಳಾಗಲಿ ಎಂದು ಆಶಿಸುತ್ತಾ.

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!