ಬಿಎಸ್ಪಿ ವಿಪ್ ಉಲ್ಲಂಘನೆ: ಕೊಳ್ಳೇಗಾಲ ನಗರಸಭೆ 7 ಸದಸ್ಯರ ಸದಸ್ಯತ್ವ ರದ್ದು

Team Newsnap
1 Min Read

ಬಿಎಸ್‍ಪಿ ಪಕ್ಷದ ವಿಪ್ ಉಲ್ಲಂಘಿಸಿ ಬಿಜೆಪಿಯೊಂದಿಗೆ ಬಹಿರಂಗವಾಗಿ ಗುರುತಿಸಿಕೊಂಡ ಕೊಳ್ಳೇಗಾಲ ನಗರಸಭೆ 7 ಮಂದಿ ಸದಸ್ಯರ ಸದಸ್ಯತ್ವ ರದ್ದಾಗಿದೆ.

ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ವಿಪ್ ಉಲ್ಲಂಘನೆ ಮಾಡಿ ಮತ ಚಲಾಯಿಸಿದ ಕಾರಣ ಈ 7 ಮಂದಿ ಬಿಎಸ್‍ಪಿ ಸದಸ್ಯರ ಸದಸ್ಯತ್ವವನ್ನು ಚಾಮರಾಜನಗರ ಜಿಲ್ಲಾಧಿಕಾರಿಗಳ ನ್ಯಾಯಾಲಯ ರದ್ದುಗೊಳಿಸಿದೆ.

ಕೊಳ್ಳೇಗಾಲ ನಗರಸಭೆಯ ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ಎಲ್. ನಾಗಮಣಿ, ನಾಸೀರ್ ಷರೀಫ್, ಎನ್. ಪವಿತ್ರಾ, ಪ್ರಕಾಶ್, ಎನ್. ರಾಮಕೃಷ್ಣ, ನಾಗಸುಂದ್ರಮ್ಮ ಅವರ ಸದಸ್ಯತ್ವವನ್ನು ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿನಿಯಮ 1987ರ ಸೆಕ್ಷನ್ 4ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ರದ್ದುಗೊಳಿಸಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಆದೇಶ ಹೊರಡಿಸಿದ್ದಾರೆ.

ಬಿಎಸ್‍ಪಿಯ ನಗರಸಭಾ ಸದಸ್ಯರಾದ ಈ ಏಳು ಮಂದಿ ತಮ್ಮ ಪಕ್ಷದ ಅಧ್ಯಕ್ಷರು ನೀಡಿದ ನಿರ್ದೇಶನಕ್ಕೆ ವಿರುದ್ಧವಾಗಿ ಮತ ಚಲಾಯಿಸಿರುವುದು ಸಾಬೀತಾಗಿದೆ.

2020 ರ ಅಕ್ಟೋಬರ್ 29ರಂದು ಕೊಳ್ಳೇಗಾಲ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಲು ನಡೆದ ಸಭೆಯಲ್ಲಿ ಪಕ್ಷದ ವಿಪ್ ಆದೇಶದ ವಿರುದ್ಧ ಮತ ಚಲಾಯಿಸಿದ್ದಾರೆ.

ಸಭೆ ನಡೆದ 15 ದಿನಗಳ ಒಳಗೆ ಬಿಎಸ್‍ಪಿ ಈ ಸದಸ್ಯರನ್ನು ಮನ್ನಿಸದ ಕಾರಣ ಪಕ್ಷಾಂತರದ ಆಧಾರದ ಮೇಲೆ ಅನರ್ಹತೆಗೆ ಕಾರಣರಾಗಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.  

Share This Article
Leave a comment