ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕರಾಗಿರುವ ಐಎಎಸ್ ಅಧಿಕಾರಿ ಕೆ.ಎ.ದಯಾನಂದ ಅವರ `ಹಾದಿಗಲ್ಲು’ ಆತ್ಮವೃತ್ತಾಂತದ ಒಂದು ಅಧ್ಯಾಯ `ನನ್ನ ದೌರ್ಬಲ್ಯಗಳೇ ನನ್ನ ಸಾಮರ್ಥ್ಯ’ ಹಳ್ಳಿಗಾಡಿನಿಂದ ಅಕ್ಷರ ಪ್ರಪಂಚಕ್ಕೆ ಪ್ರವೇಶ ಪಡೆಯುವವರಿಗೆ ಅತ್ಯಂತ ಸಮರ್ಥ ಕೈದೀವಿಗೆಯಾಗುತ್ತದೆ. ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯಲ್ಲಿದ್ದಾಗ `ಲೇ ಮುಂಡೇದೆ, ನೀನು ಬರೆದಿದ್ದನ್ನ ನೀನೇ ನೋಡ್ಕಂಡು ಓದ್ಬಿಟ್ರೆ ಸಾಕು, ನಿನ್ನ ಪಾಸ್ ಮಾಡ್ಬಿಡ್ತೀನಿ’ ಎಂದು ಮೇಷ್ಟರು ಹೇಳುತ್ತಿದ್ದರಂತೆ.
ಇಂಥ ವಿದ್ಯಾಥರ್ಿಯಾಗಿದ್ದ ದಯಾನಂದ ಎಸ್ಸೆಸ್ಸೆಲ್ಸಿಯನ್ನು ಮೂವತ್ತೈದಕ್ಕೆ ಕಡಿಮೆ ಆಗದಷ್ಟು ಅಂಕ ಪಡೆದು ಪವಾಡದಂತೆ ಪಾಸು ಮಾಡುತ್ತಾರೆ. ಆಗ ಅವರಿಗೆ ಕನ್ನಡ ಉಕ್ತಲೇಖನ ಕೊಟ್ಟು ಬರಹ ಪರೀಕ್ಷಿಸಿದ ಅವರ ಸಿದ್ದಪ್ಪ ಮಾವ `ಕನ್ನಡವನ್ನೇ ಬರೆಯಲು ಬಾರದವನು ನೀನು ಪಿಯುಸಿ ಏನು ಓದುತ್ತೀ? ಹೋಗಿ ಯಾವುದಾದರೂ ಇಲಾಖೆಯಲ್ಲಿ ಕೆಲಸ ಮಾಡು..’ ಎಂದು ಸ್ನೇಹಿತರೊಬ್ಬರಲ್ಲಿ ತಾತ್ಕಾಲಿಕ ಕೆಲಸಕ್ಕೆ ಸೇರಿಸುತ್ತಾರೆ. ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಕಂಬ ನೆಡುವುದು, ಕೇಬಲ್ ಅಗೆದು ರಿಪೇರಿ ಮಾಡುವುದು.. ಹೀಗೆ ಕೆಲಸ.. ಈ ಕೆಲಸ ಬೆಳಗ್ಗೆ ಎಂಟಕ್ಕೆ ಆರಂಭವಾಗಿ ಮಧ್ಯಾಹ್ನ ಹನ್ನೆರಡಕ್ಕೆ ಮುಗಿಯುತ್ತಿದ್ದ ಕಾರಣ ಸರ್ಕಾರಿ ಕಲಾ ಕಾಲೇಜಿಗೆ ಪಿಯುಸಿ ಓದಲು ಸೇರುತ್ತಾರೆ…
ಕೆಲಸ ಮಾಡುತ್ತಲೇ ಬಿಎ ಪದವಿಯನ್ನೂ, ಬಿಇಡಿ ತರಬೇತಿಯನ್ನೂ ನಂತರ ಸ್ನಾತಕೋತ್ತರ ಪದವಿಯನ್ನೂ ಗಳಿಸಿ, ದ್ವಿತೀಯ ದರ್ಜೆ ಸಹಾಯಕನಾಗಿ ಕಾಲೇಜು ಶಿಕ್ಷಣ ಇಲಾಖೆಯ ಮೂಲಕ ಮಾಲೂರಿನ ಪ್ರಥಮ ದರ್ಜೆ ಕಾಲೇಜಿಗೆ ಕೆಲಸಕ್ಕೆ ಸೇರಿಕೊಂಡರು. ನಂತರ ಶಿಕ್ಷಕನಾಗಿ ಆಯ್ಕೆಯಾಗಿ ಚಿಕ್ಕಮಗಳೂರಿನ ಗ್ರಾಮೀಣ ಭಾಗದಲ್ಲಿ ಹೈಸ್ಕೂಲು ಶಿಕ್ಷಕರಾದರು. ಮುಂದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉಪವಿಭಾಗಾಧಿಕಾರಿಯಾಗಿ ಸರ್ಕಾರದ ಸೇವೆಗೆ ಸೇರಿದರು. ತಮ್ಮ ನಿಷ್ಕಳಂಕ ಸೇವೆಯಿಂದ ಕೆಲವೇ ವರ್ಷಗಳಲ್ಲಿ ಐಎಎಸ್ ಶ್ರೇಣಿಗೆ ಪದೋನ್ನತಿ ಪಡೆದು ಜಿಲ್ಲಾಧಿಕಾರಿಯಾದರು..
ಓದು ಮತ್ತು ಉಪವಿಭಾಗಾಧಿಕಾರಿಯಾಗಿ ಸೇರಿಕೊಳ್ಳುವವರೆಗೆ ನಾನಾ ರೀತಿಯ ಕೊರತೆಗಳನ್ನೂ ದೌರ್ಬಲ್ಯಗಳನ್ನೂ ಎದುರಿಸುತ್ತ ಅವುಗಳಿಗೆ ಸ್ವಂತ ಪರಿಶ್ರಮದಿಂದ ಪರಿಹಾರ ಕಂಡುಕೊಳ್ಳುತ್ತಾ ಯಶಸ್ಸಿನ ಒಂದೊಂದೇ ಮೆಟ್ಟಲನ್ನು ಏರುತ್ತಾ ಬಂದ ದಯಾನಂದರ ಈ ಎಲ್ಲ ಅನುಭವಗಳನ್ನೂ ಅವರು ಯಾವುದೇ ಮುಚ್ಚುಮರೆ ಇಲ್ಲದೆ, ಸರಳವಾಗಿ ಪ್ರಾಮಾಣಿಕವಾಗಿ ನಿರೂಪಿಸಿದ್ದಾರೆ.
ಕೀಳರಿಮೆಯನ್ನು ನಿವಾರಿಸಿಕೊಳ್ಳುತ್ತಾ, ಅದಕ್ಕೆ ಕಾರಣವಾದ ಕೊರತೆಯನ್ನು ತುಂಬಿಕೊಳ್ಳುತ್ತಾ ಸಾಗುತ್ತಿದ್ದ ಅವರ ಸರ್ಕಾರಿ ಸೇವೆಯ ಪಯಣ ಅಂಥದ್ದೇ, ಅಥವಾ ಅದಕ್ಕಿಂತ ಇನ್ನೂ ಉತ್ತಮ ಸ್ಥಿತಿಯಲ್ಲಿರುವ ಗ್ರಾಮೀಣ, ಹಿಂದುಳಿದ ಪ್ರದೇಶಗಳ ಯುವಕ ಯುವತಿಯರಿಗೆ ನಿಶ್ಚಿತವಾಗಿಯೂ ಪ್ರೇರಣೆ ನೀಡುವ ಅಮೃತಸಿಂಚನವಾಗಿದೆ. ದೌರ್ಬಲ್ಯವನ್ನೇ ಸಾಮರ್ಥ್ಯವನ್ನಾಗಿ ಪರಿವರ್ತಿಸಿಕೊಂಡ ದಯಾನಂದ ಅವರ ಅನುಭವ ಪದವಿ ಹಂತದಲ್ಲಿ ಓದುತ್ತಿರುವ ನಾಡಿನ ವಿದ್ಯಾರ್ಥಿ ಸಮೂಹಕ್ಕೆ ಉಪಯುಕ್ತ ಉತ್ತೇಜನಕಾರಿ ಸಂಜೀವಿನಿ ಸೂತ್ರದಂತಿದೆ. ಈ ಬರಹವನ್ನು ಎಲ್ಲಾ ವಿಷಯಗಳ ಪದವಿ ಹಂತದ ವಿದ್ಯಾರ್ಥಿಗಳೂ ಕಡ್ಡಾಯವಾಗಿ ಓದಿ ತಮ್ಮಲ್ಲಿನ ಕೊರತೆಗಳನ್ನು ಸಾಮರ್ಥ್ಯಗಳನ್ನಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ. ಇದೊಂದು ಲೇಖನವನ್ನು ಕಾಲೇಜು ಹಂತದ ಎಲ್ಲ ವಿದ್ಯಾರ್ಥಿಗಳಿಗೂ ಓದುವ ಪಠ್ಯವಾಗಿಸಿದರೆ ಅದರಿಂದ ಉತ್ತಮ ಪರಿಣಾಮ ಉಂಟಾಗುವುದರಲ್ಲಿ ಸಂಶಯವಿಲ್ಲ.
ಕಾಲೇಜು ವಿದ್ಯಾರ್ಥಿಗಳು ಇಲ್ಲಿನ ಎಲ್ಲ ಲೇಖನಗಳಿಂದ ಪಡೆಯುವ ಉತ್ತೇಜನ ಅವರ ಬದುಕಿನ ಗತಿಯನ್ನೇ ಬದಲಿಸಬಲ್ಲದು. ಪದವಿ ಮುಗಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹುದ್ದೆಗಳಿಗೆ ಆಯ್ಕೆಯಾಗಲು ಕೋರಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವವರಿಗಂತೂ ದಯಾನಂದ ಅವರ `ಹಾದಿಗಲ್ಲು’ ಅತ್ಯಂತ ಪರಿಣಾಮಕಾರಿಯಾದ ಉತ್ತೇಜನಕಾರಿ ಟಾನಿಕ್ನಂತೆ ಅವರಲ್ಲಿ ನವ ಚೈತನ್ಯವನ್ನು ಮೂಡಿಸಬಲ್ಲದು. ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಕಡ್ಡಾಯವಾಗಿ `ಹಾದಿಗಲ್ಲ’ನ್ನು ಗಮನಿಸಲೇಬೇಕು. ತಮ್ಮ ಶಕ್ತಿ ಸಾಮರ್ಥ್ಯವನ್ನು ಒರೆಗೆ ಹಚ್ಚಿ ನೋಡುವುದಕ್ಕಾದರೂ ಈ ಕೃತಿಯನ್ನು ಅವರು ನೋಡಲೇಬೇಕು.
ಪದವಿಪೂರ್ವ ಕಾಲೇಜು ಮತ್ತು ಪ್ರಥಮ ದರ್ಜೆ ಕಾಲೇಜುಗಳ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ನೋಡಲೇಬೇಕಾದ ಪರಾಮರ್ಶನ ಕೃತಿಯಾಗಿ ಈ `ಹಾದಿಗಲ್ಲು’ ಕೃತಿಯನ್ನು ನಿಗದಿ ಪಡಿಸಿದರೆ ಲಕ್ಷಾಂತರ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ. ಪಠ್ಯವಾಗಿ ಅಧ್ಯಯನ ಮಾಡುವುದಕ್ಕೆ, ಇಲ್ಲವೇ ಪರಾಮರ್ಶನ ಕೃತಿಯಾಗಿ ಗಮನಿಸುವುದಕ್ಕೆ ರಾಜ್ಯದ ಎಲ್ಲ ಕಾಲೇಜು ಗ್ರಂಥಾಲಯಗಳಲ್ಲಿ ಇದರ ಪ್ರತಿಗಳು ಲಭ್ಯವಾಗುವಂತೆ ನೋಡಿಕೊಂಡರೆ ಹೆಚ್ಚಿನ ಪ್ರಯೋಜನವಾಗುತ್ತದೆ.
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ