900 ಸೆಮಿ ಮಳೆಯಾದರೂ ಅತಿವೃಷ್ಠಿ ಪಟ್ಟಿಗೆ ಮೂಡಿಗೆರೆ ಸೇರಿಸಿಲ್ಲ – ಬಿಜೆಪಿ ಶಾಸಕನ ಪ್ರತಿಭಟನೆ

Team Newsnap
1 Min Read

ತಮ್ಮ ತಾಲೂಕನ್ನು ಅತಿವೃಷ್ಟಿಯ ಪಟ್ಟಿಗೆ ಸೇರಿಸದೇ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧವೇ ಆಡಳಿತ ಪಕ್ಷದ ಶಾಸಕ ಎಂಪಿ ಕುಮಾರಸ್ವಾಮಿಯವರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಿದರು.‌

ನಮ್ಮ ಸರ್ಕಾರದಲ್ಲಿ ನಮಗೆ ಬೆಲೆ ಸಿಗುತ್ತಿಲ್ಲ. ಮೀಸಲು ಕ್ಷೇತ್ರ ಎನ್ನುವ ಕಾರಣಕ್ಕೆ ಎಲ್ಲವನ್ನೂ ಕಡೆಗಣಿಸುತ್ತಿದ್ದಾರೆ. ನಮ್ಮ ಸರ್ಕಾರವೇ ಈ ರೀತಿ ತಾರತಮ್ಯ ಮಾಡಬಾರದು ಎಂದು ಬಿಜೆಪಿ ಶಾಸಕ ಕುಮಾರಸ್ವಾಮಿ ಹೇಳಿದರು.

ನಿನ್ನೆ ಕಂದಾಯ ಇಲಾಖೆ ಪಟ್ಟಿ ಮಾಡಿ ಮೂಡಿಗೆರೆ ಕ್ಷೇತ್ರ ಕೈಬಿಡಲಾಗಿದೆ. ಸಚಿವ ಆರ್. ಅಶೋಕ್ ಈ ತರಹ ಮಾಡಿದ್ದಾರೆ ಎಂದು ಅನಿಸುವುದಿಲ್ಲ. ಎಲ್ಲಾ ಉಸ್ತುವಾರಿ ಮಂತ್ರಿಗಳು ಬರುತ್ತಾರೆ. ಆದರೆ ಏನೂ ಮಾಡಲ್ಲ. ಇವರಿಗೆ ಬರಿ ಮಾತಲ್ಲಿ ಹೇಳಿದರೆ ಅರ್ಥ ಆಗುವುದಿಲ್ಲ ಎಂದರು.

ಎನ್‍ಡಿಆರ್‍ಎಫ್ ಪಟ್ಟಿಯಲ್ಲಿ ಮೂಡಿಗೆರೆ ಸೇರಿಸಬೇಕು. ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪರಿಹಾರ ಕೊಡಬೇಕು ಅದಕ್ಕಾಗಿ ನಾನು ಇಲ್ಲಿಯೇ ಧರಣಿ ಕೂರುತ್ತೇನೆ ಎಂದು ಎಂ.ಪಿ ಕುಮಾರಸ್ವಾಮಿ ಪ್ರತಿಭಟನೆ ನಡೆಸಿದರು.

2019 ರಲ್ಲಿ ಅತಿವೃಷ್ಟಿ ಆಗಿತ್ತು. ಈ ವೇಳೆ ಮನೆಗಳು ಕಾಫಿತೋಟ ಕೊಚ್ಚಿಕೊಂಡು ಹೋಗಿತ್ತು. ಅಲ್ಲದೇ 6 ಜನ ಮನೆ ಸಮೇತ ಕೊಚ್ಚಿಕೊಂಡು ಹೋಗಿದ್ದರು. ಆದರೂ ಪರಿಹಾರ ನೀಡದೇ ನಿರ್ಲಕ್ಷ್ಯ ಮಾಡಲಾಗಿತ್ತು.

ಶಿವಮೊಗ್ಗ ನಗರ ಎನ್‌ಡಿಆರ್‌ಎಫ್‌ ವ್ಯಾಪ್ತಿಗೆ ಸೇರುತ್ತದೆ. ಮೂಡಿಗೆರೆಯಲ್ಲಿ 900 ಸೆಂಟಿ ಮೀಟರ್ ಮಳೆಯಾಗಿದೆ. ನಾನು 2018 ರಲ್ಲಿ ಶಾಸಕನಾದಾಗ ಕುಮಾರಸ್ವಾಮಿ ಸಿಎಂ ಆಗಿದ್ದರು. ಕುಮಾರಸ್ವಾಮಿ ಸಿಎಂ ಆದಾಗ ನಮಗೆ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಆಗಿತ್ತು. ಆದರೆ ನಮ್ಮದೇ ಸರ್ಕಾರ ಇದ್ದರೂ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

Share This Article
Leave a comment