ಕೃಷಿ ಮಸೂದೆ ವಿರೋಧಿಸಿ ಪಂಜಾಬ್‌ನ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೀನಾಮೆ

Team Newsnap
1 Min Read

ಪಂಜಾಬ್‌ನ ಬಿಜೆಪಿ ಪಕ್ಷದ ಮೌಲ್ವಿಂದರ್ ಸಿಂಗ್ ಕಾಂಗ್ ಕೇಂದ್ರ ಸರ್ಕಾರ ಜಾರಿ‌ ಮಾಡಿರುವ ಕೃಷಿ ಮಸೂದೆಗಳನ್ನು ವಿರೋಧಿಸಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಪಂಜಾಬ್‌ನ ಬಿಜೆಪಿಯ ಕೆಲವೇ ಸಿಖ್ ಮುಖಂಡರಲ್ಲಿ ಪಂಜಾಬ್‌ ಮೌಲ್ವಿಂದರ್‌ ಸಿಂಗ್ ಕಾಂಗ್ ಕೂಡ ಒಬ್ಬರು.

ಪಕ್ಷದ ರಾಜ್ಯಾಧ್ಯಕ್ಷ ಅಶ್ವಿನಿ ಶರ್ಮಾ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ, ‘ದೇಶದಾದ್ಯಂತ ವಿರೋಧಕ್ಕೆ ಒಳಗಾಗಿರುವ ಕೃಷಿ ಮಸೂದೆಗಳ ಚರ್ಚೆಗೆ ಪಕ್ಷದ ಹಿರಿಯರಾರೂ ಸಿದ್ಧರಿಲ್ಲ. ಕೇಂದ್ರವು ಪಂಜಾಬ್‌ನ ರೈತರ ವಿರೋಧವಾಗಿದೆ. ಸುಗ್ರೀವಾಜ್ಞೆಗಳ ಮೂಲಕ ಜಾರಿ ಮಾಡಿದ ಕೃಷಿ ಮಸೂದೆಗಳ ಬಗ್ಗೆ, ಪಕ್ಷದ ಪ್ರತೀ ಸಭೆಯಲ್ಲಿ ನಾನು ಪ್ರಶ್ನಿಸುತ್ತಿದ್ದುದಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರು ನನ್ನನ್ನು ಪಾಕಿಸ್ತಾನೀ ಎಂದು ಕರೆದಿದ್ದಾರೆ. ನನ್ನ ಪ್ರತಿಭಟನೆಯ ನಂತರ ಅವರು ಕ್ಷಮೆ‌ ಕೇಳಿದರು. ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಪಕ್ಷದ ಪ್ರಮುಖ ಗುಂಪಿನ ಸದಸ್ಯರಾಗಿ, ಪಕ್ಷದ ವೇದಿಕೆಯಲ್ಲಿ ಪ್ರತಿಭಟನಾ ನಿರತ ರೈತರು, ಸಣ್ಣ ವ್ಯಾಪಾರಿಗಳು ಮತ್ತು ಕಾರ್ಮಿಕ ಸಂಘಟನೆಗಳನ್ನು ಬೆಂಬಲಿಸಿ ನಾನು ಧ್ವನಿ ಎತ್ತಿದೆ. ರೈತರ ಆಂದೋಲನವನ್ನು ಬೆಂಬಲಿಸುವ ಸಲುವಾಗಿ ನಾನು ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಮೌಲ್ವೀಂದರ್ ಸಿಂಗ್ ಕಾಂಗ್ ಅವರ ರಾಜೀನಾಮೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಶ್ವಿನಿ ಶರ್ಮಾ ‘ಪ್ರತಿಯೊಬ್ಬರಿಗೂ ತಮ್ಮ ರಾಜಕೀಯದ ದಾರಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ. ಆದರೆ ಅವರ ಹಕ್ಕುಗಳಿಗೆ ಸಂಬಂಧಿಸಿದಂತೆ, ಎಲ್ಲಾ ವೇದಿಕೆಗಳಲ್ಲಿ ಧ್ವನಿ ಎತ್ತಬಹುದಾದ ಏಕೈಕ ಪಕ್ಷ ಬಿಜೆಪಿ. ಆದರೆ ಪಕ್ಷವು ಎಲ್ಲಾ ಧ್ವನಿಗಳನ್ನು ಒಪ್ಪಿಕೊಳ್ಳುವುದು ಅನಿವಾರ್ಯವಲ್ಲ’ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾಗಿದ್ದ ಕಾಂಗ್, ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಬಂದವರು. ಕೆಲವೇ ವರ್ಷಗಳಲ್ಲಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಏರಿದ್ದರು.

Share This Article
Leave a comment