November 27, 2021

Newsnap Kannada

The World at your finger tips!

ಬಿಟ್ ಕಾಯಿನ್ ಹಗರಣ ಮತ್ತು ನಿರಂತರ ದಂಧೆಗಳು

Spread the love

ಬಹುಶಃ ದೊಡ್ಡ ಮಟ್ಟದ ಹಣಕಾಸಿನ ವಹಿವಾಟು ಇರುವ ಯಾವುದೇ ಸರ್ಕಾರಗಳ ಯಾವುದೇ ಇಲಾಖೆಗಳನ್ನು ತನಿಖೆಗೆ ಒಳಪಡಿಸಿದರೆ ಎಲ್ಲವೂ ಹಗರಣಗಳೇ ಎಂಬುದು ಬಹುತೇಕ ಸ್ಪಷ್ಟ…….

ಸಿಕ್ಕಿ ಹಾಕಿಕೊಂಡವನು ಮಾತ್ರ ಕಳ್ಳ ಎಂಬಂತೆ ಬಿಂಬಿಸಲಾಗುತ್ತಿದೆ. ವಾಸ್ತವದಲ್ಲಿ ಅನೇಕರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಳ್ಳರೇ……..

ಅತ್ಯಂತ ಕಠಿಣ ನಿಯಮಗಳು ಮತ್ತು ಅದನ್ನು ಪಾಲನೆ ಮಾಡಲು ಅತ್ಯಂತ ದುರಾಸೆ ಮನಸ್ಥಿತಿಯ ಜನಗಳು ಹಾಗು ಅದರ ನಿರ್ವಹಣೆ ಮಾಡಲು ಭ್ರಷ್ಟ ಅದಕ್ಷ ಅಧಿಕಾರಿಗಳು. ಇನ್ನು ಹಗರಣಗಳು ನಡೆಯದೇ ಇರುತ್ತವೆಯೇ……

ಇದೀಗ ಬಯಲಾಗಿದೆ ಬಿಟ್ ಕಾಯಿನ್ ದಂಧೆ……

ಹಿಂದೆ ಬಯಲಾಗಿತ್ತು ಕ್ಯಾಪಿಟೇಷನ್ ದಂಧೆ…….

ಆಗೊಮ್ಮೆ ಬಯಲಾಗಿತ್ತು ವೇಶ್ಯಾವಾಟಿಕೆ ದಂಧೆ…..

ಹಿಂದೊಮ್ಮೆ ಬಯಲಾಗಿತ್ತು ಕಿಡ್ನಿ ಮಾರಾಟ ದಂಧೆ….

ಮತ್ತೊಮ್ಮೆ ಬಯಲಾಗಿತ್ತು ಮಾನವ ಕಳ್ಳ ಸಾಗಾಣಿಕೆ ದಂಧೆ……….

ಮಗದೊಮ್ಮೆ ಬಯಲಾಗಿತ್ತು ಮಾದಕವಸ್ತು ಮಾರಾಟ ದಂಧೆ……

ಮತ್ತೆ ಮತ್ತೆ ಬಯಲಾಗುತ್ತಿದೆ ಚಿನ್ನದ ಕಳ್ಳ ಸಾಗಾಣಿಕೆ ದಂಧೆ….

ಈಗಲೂ ಬಯಲಾಗುತ್ತಿದೆ ಆಹಾರ ಕಲಬೆರಕೆ ದಂಧೆ…

ಯಾವಾಗಲೂ ಬಯಲಾಗುತ್ತದೆ ಸರ್ಕಾರದ ಪ್ರಶಸ್ತಿ ಮಾರಾಟದ ದಂಧೆ…..

ಬಯಲಾಗುತ್ತಲೇ ಇದೆ ಕಪ್ಪು ಹಣದ ದಂಧೆ….

ದಿನವೂ ಬಯಲಾಗುತ್ತಿದೆ ಬೆಟ್ಟಿಂಗ್ ದಂಧೆ…..

ಹೆಚ್ಚಾಗುತ್ತಲೇ ಇದೆ ಬ್ಯಾಂಕ್ ವಂಚನೆಯ ದಂಧೆ…….

ಮುಂದೊಮ್ಮೆ ಬಯಲಾಗುತ್ತದೆ ಮಾನವ ಮೌಲ್ಯಗಳ ವಿನಾಶದ ದಂಧೆ…….

ಹೀಗೆ ದಂಧೆಗಳ ಬಗ್ಗೆ ಹೇಳುತ್ತಾ ಹೋದರೆ ಬಹುತೇಕ ನಮ್ಮ ಸಮಾಜದ ಎಲ್ಲಾ ಕ್ಷೇತ್ರಗಳನ್ನು ಒಳಗೊಳ್ಳುತ್ತದೆ.
ಅದಕ್ಕಾಗಿ ಒಂದು ದಿನಪತ್ರಿಕೆ ಅಥವಾ 24×7 ಟಿವಿ ವಾಹಿನಿ ಮತ್ತು ಒಂದು ದೊಡ್ಡ ಪ್ರತ್ಯೇಕ ಇಲಾಖೆಯೇ ಸ್ಥಾಪಿಸಬೇಕಾಗಬಹುದು.

ಮೊದಲು ವ್ಯವಸ್ಥೆ ಇಷ್ಟೊಂದು ಹದಗೆಟ್ಟಿರಲಿಲ್ಲ. ಕೆಟ್ಟವರು ವಂಚಕರು ವಿರಳವಾಗಿಯೂ ಪ್ರಾಮಾಣಿಕರು ಬಹುಸಂಖ್ಯಾತರಾಗಿಯೂ ಇದ್ದರು‌. ಆದರೆ ಈಗ ಎಲ್ಲವೂ ಉಲ್ಟಾ ಆಗಿದೆ.

ಆಧುನಿಕತೆ ಬೆಳೆದಂತೆಲ್ಲಾ, ಅಕ್ಷರಸ್ಥರ ಪ್ರಮಾಣ ಹೆಚ್ಚಾದಂತೆಲ್ಲಾ, ಜನರ ಮಾಹಿತಿ ತಿಳಿವಳಿಕೆಯ ಮಟ್ಟ ಉತ್ತಮವಾದಂತೆಲ್ಲಾ ಈ ದಂಧೆಗಳ ಪ್ರಮಾಣವು ಎಲ್ಲವನ್ನೂ ಎಲ್ಲರನ್ನೂ ಆಕ್ರಮಿಸುತ್ತಿದೆ.

ಬಹುಶಃ ಆಳವಾದ ಮತ್ತು ಪ್ರಾಮಾಣಿಕವಾದ ತನಿಖೆ ನಡೆದರೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಈ ದೇಶದ ಬಹುತೇಕ ಕೋಟ್ಯಾಧಿಪತಿಗಳು ಒಂದಲ್ಲ ಒಂದು ರೀತಿಯಲ್ಲಿ ಈ ದಂಧೆಗಳಲ್ಲಿ ಸಿಲುಕಬಹುದು.

ಕೆಲವರದು ಅನೈತಿಕ ದಂಧೆ, ಹಲವರದು ಕಾನೂನಿನ ಅಕ್ರಮ ದಂಧೆ, ಮತ್ತಷ್ಟು ಜನರದು ನೈತಿಕ ಮತ್ತು ಕಾನೂನಿನ ಸುಳಿಗೆ ಸಿಲುಕದ ಪ್ರಾಮಾಣಿಕ ಮುಖವಾಡದ ದಂಧೆ ಹೀಗೆ…..

ಹಣಕ್ಕೆ ಸಿಕ್ಕಾಪಟ್ಟೆ ಮಹತ್ವ ಬಂದ ಕಾರಣದಿಂದಾಗಿ, ಹಣವಿಲ್ಲದೆ ಬದುಕೇ ಅಸಾಧ್ಯ ಎನ್ನುವ ಪರಿಸ್ಥಿತಿಯಲ್ಲಿ ದಂಧೆಗಳು ವ್ಯಾಪಕವಾಗಿವೆ. ಏನಾದರೂ ಮಾಡಿ ಹಣ ಮಾಡುವುದು, ಹಣ ಹೆಚ್ಚಾದಾಗ ಆಸ್ತಿ ಅಧಿಕಾರ ಜನಪ್ರಿಯತೆ ಪಡೆಯಲು ಪ್ರಯತ್ನಿಸುವುದು, ಒಂದು ವೇಳೆ ಅದು ದೊರೆತರೆ ಅದನ್ನು ಉಳಿಸಿಕೊಳ್ಳಲು ಮತ್ತು ಬೆಳೆಸಿಕೊಳ್ಳಲು ಹಣವನ್ನೇ ಉಪಯೋಗಿಸಿ ಮತ್ತಷ್ಟು ದಂಧೆಗೆ ಕೈ ಹಾಕುವುದು…..

ಇದೊಂದು ವಿಷ ಚಕ್ರ. ಇಲ್ಲಿ ಇನ್ನೂ ಒಂದು ಸೂಕ್ಷ್ಮವಾದ ವಿಷಯವಿದೆ. ದಂಧೆಯ ಲಾಭ ಕೇವಲ ಬೆರಳೆಣಿಕೆಯ ಕೆಲವೇ ಜನರಿಗೆ ಸಿಗುತ್ತದೆ. ಆದರೆ ದಂಧೆಯಲ್ಲಿ ಬದುಕಿನ ಮೂಲಭೂತ ಅವಶ್ಯಕತೆಗಳ ಕೊರತೆಯಿರುವ ಹಲವಾರು ಜನ ದಲ್ಲಾಳಿಗಳಾಗಿ ಕೆಲಸ ಮಾಡುತ್ತಿರುತ್ತಾರೆ. ಅವರಿಗೆ ತಮ್ಮ ಅಪರಾಧದ ಪರಿಣಾಮದ ಬಗ್ಗೆ ಸರಿಯಾದ ತಿಳಿವಳಿಕೆ ಇರುವುದಿಲ್ಲ ಮತ್ತು ಇದ್ದರೂ ಇದೊಂದು ಅನಿವಾರ್ಯ ಕೆಲಸ ಎಂದೇ ಭಾವಿಸುತ್ತಾರೆ. ದೊಡ್ಡ ದೊಡ್ಡ ಕುಳಗಳೇ ಇದರಲ್ಲಿ ಭಾಗಿಯಾಗಿರುವಾಗ ನಾವ್ಯಾವ ಮಹಾ ಎಂಬ ನಿರ್ಲಕ್ಷ್ಯ ಸಹ ಇಲ್ಲಿ ಕೆಲಸ ಮಾಡುತ್ತದೆ.

ಈ ದಂಧೆಗಳನ್ನು ಪ್ರತ್ಯೇಕ ಘಟನೆಗಳಾಗಿ ನೋಡಬಾರದು. ಇದು ಇಡೀ ವ್ಯವಸ್ಥೆಯ ವಿಫಲತೆಯ ಸಂಕೇತ. ಎಲ್ಲವೂ ಒಂದಕ್ಕೊಂದು ಪೂರಕ. ಜನರು ಸಹ ಇದೆಲ್ಲ ಸಾಮಾನ್ಯ. ವ್ಯವಸ್ಥೆ ಇರುವುದೇ ಹೀಗೆ. ನಾವು ಇದರಲ್ಲೇ ಹೊಂದಾಣಿಕೆ ಮಾಡಿಕೊಂಡು ಬದುಕಬೇಕಿದೆ ಎಂಬ ಸಿನಿಕತನದ ಮನಸ್ಥಿತಿ ತಲುಪಿಯಾಗಿದೆ.

ನಾವೇ ನಮ್ಮ ಅಜ್ಞಾನ ದುರಾಸೆ ಸ್ವಾರ್ಥದ ಬಲದಿಂದ ಸೃಷ್ಟಿಸಿಕೊಂಡ ಬಲೆಯೊಳಗೆ ಬಂಧಿಯಾಗಿದ್ದೇವೆ. ಈ ದಂಧೆಗಳ ಭಾಗವಾಗಿದ್ದೇವೆ. ಆತ ರಾಜಕಾರಣಿಯಾಗಿರಬಹುದು, ಅಧಿಕಾರಿಯಾಗಿರಬಹುದು, ಧಾರ್ಮಿಕ ಮುಖಂಡನಾಗಿರಬಹುದು, ವೃತ್ತಿಪರನೇ ಆಗಿರಬಹುದು, ಜನಸಾಮಾನ್ಯನೇ ಆಗಿರಬಹುದು ದಂಧೆಗಳ ಒಳಗೆ ಅರಿತೋ ಅರಿಯದೆಯೋ ಸಿಲುಕಿಕೊಂಡಿದ್ದಾನೆ. ಇದು ಬ್ರೇಕಿಂಗ್ ನ್ಯೂಸ್‌ ಆಗಿ ಉಳಿದಿಲ್ಲ……..

ಇದೀಗ ನಮ್ಮ ಮುಂದಿರುವ ಬೃಹತ್ ಪ್ರಶ್ನೆ.
ಇದರಿಂದ ಹೊರಬರುವ ಮಾರ್ಗಗಳ ಹುಡುಕಾಟ. ಮತ್ತೊಮ್ಮೆ ಮಾನವೀಯ ಮೌಲ್ಯಗಳ ಪುನರ್ ಸ್ಥಾಪನೆ. ಸಹಜ ಸರಳ ಸ್ವಾಭಾವಿಕ ಸ್ವಾಭಿಮಾನಿ ಬದುಕಿನ
ರೀತಿ ನೀತಿಗಳ ಅಳವಡಿಕೆ. ನಮ್ಮ ಮಕ್ಕಳಲ್ಲಿ ಇದನ್ನು ಕಲಿಸುವುದು ಮತ್ತು ನಾವು ಕೂಡ ಇದನ್ನು ಅನುಸರಿಸುವುದು.

ಬಲಿತ ಮನಸ್ಸುಗಳಿಗೆ ಇದು ಕಷ್ಟವಾದರೂ ಅಸಾಧ್ಯವಲ್ಲ. ಪ್ರಯತ್ನಿಸೋಣ. ಇದರಲ್ಲಿ ನೆಮ್ಮದಿ ಮತ್ತು ಬದುಕಿನ ಸಾರ್ಥಕತೆ ಅಡಗಿದೆ……..

ವಿವೇಕಾನಂದ ಹೆಚ್ ಕೆ

error: Content is protected !!