ಭಾರತಾಂಬೆ

Team Newsnap
1 Min Read
shewath m u
ಶ್ವೇತಾ ಎಂ ಯು
ಅಧ್ಯಾಪಕಿ,ಕವಿಯತ್ರಿ

ಭರತನಾಳಿದ ಈ ನಾಡು ಭಾರತಾಂಬೆಯ ಮಡಿಲಾಯಿತು ನೋಡಿ ಅವಳ ಬಂಧನದ ಪರ್ವ ಮೊದಲಾಯಿತು

ಭೂಮಿ ವಸುಂಧರೆಯಾದಳು ನೋಡಿ
ಅವಳ ಬಂಗಾರದೊಡಲ ಬಗೆದು,
ಬರಿದು ಮಾಡಲಾಯಿತು

ಜನನಿ ಜನ್ಮ ಭೂಮಿ
ಸ್ವರ್ಗ ಸಮಾನವೆಂದರು ನೋಡಿ
ಗಡಿಯ ಗೆರೆಯೆಳೆದು ವೈಷಮ್ಯದ
ಬೆಂಕಿ ಹಚ್ಚಲಾಯಿತು

ಕಾಡು ಗಿಡಗಂಟೆಗಳ ನಡುವೆ
ಕೋಗಿಲೆಯ ಉಲಿ ಪಲ್ಲವಿಸುವುದನು
ವನದೇವತೆ ಎಂದರು ನೋಡಿ
ಹುಡುಕಿ ಹುಡುಕಿ ಬುಡಕ್ಕೆ ಕೊಡಲಿ ಹಾಕಿ
ಹಸಿರ ನೆತ್ತರ ಹರಿಸುವಂತಾಯಿತು

ಅದೆಲ್ಲೋ ಹಿಮರಾಶಿಯ ನೆತ್ತಿಯಲಿ
ಭೂಮ್ಯಾ0ತರಾಳದಲಿ ನರ್ತನಗೈಯುತ್ತಿದ್ದ
ಜಲರಾಶಿಗೆ ಗಂಗಾ ಮಾತೆ
ಪುಣ್ಯಪ್ರದಾತೆ ಎಂದರು ನೋಡಿ
ಶವವ ಎಸೆದೆಸೆದು ವಿಷವ ಬೆರಸಿ
ಪರಮ ಮಾಲಿನ್ಯಗೊಳಿಸಲಾಯಿತು

ಹೆಣ್ಣು ಕ್ಷಮಯಾಧರಿತ್ರಿ ಎಂದಾಗಲೇ
ಕಂಬನಿಯ ಕರಗಿಸಿ
ಎಗ್ಗಿಲ್ಲದ ನೋವ ಅವುಡುಗಚ್ಚಿ
ಬಚ್ಚಿಡುವಂತಾಯಿತು

ಇದೆಂತಹ ನಂಟು
ಹೆಣ್ಣಿಗೂ ನೋವಿಗೂ?
ಪುಣ್ಯದ ಎಳೆಎಳೆಗೂ
ಪ್ರೀತಿಯ ಕಣಕಣಕ್ಕೂ
ಅಭಿಮಾನದ ಹೊಳೆಹೊಳೆಗೂ
ಹೆಣ್ಣರೂಪ ನೀಡಿದರು ನೋಡಿ
ಅವಳಿಗೂ ನೋವಿಗೂ ಆಗಲೇ
ಅವಿನಾಭಾವ ನಂಟು ಸೃಷ್ಟಿಯಾಯಿತು.

Share This Article
Leave a comment