ಭೀಮನ ಅಮವಾಸ್ಯೆ (Bheemana Amavasya)

Team Newsnap
3 Min Read

ಆಷಾಢ ಬಹುಳ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಶ್ರೀ ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸಲಾಗುತ್ತದೆ, ಸತಿ ಸಂಜೀವಿನಿ ವ್ರತ, ಭೀಮನ ಅಮಾವಾಸ್ಯೆ ವ್ರತ, ಗಂಡನ ಪೂಜೆ, ಜ್ಯೋತಿಸ್ತಂಭ ವ್ರತ ಎಂದು ಕರೆಯುತ್ತಾರೆ. ಆದರೆ, ಭೀಮನ ಅಮಾವಾಸ್ಯೆ ಎಂದು ಎಲ್ಲೆಡೆ ಜನಪ್ರಿಯವಾಗಿದೆ.

ಯಾವುದೇ ಆಚರಣೆಯಾಗಿರಲಿ ಅದರ ಹಿಂದಿನ ಅರ್ಥ ತಿಳಿದಿದ್ದರೆ ಹಬ್ಬ ಮತ್ತು ಆಚರಣೆಯು ಹೆಚ್ಚು ಫಲಪ್ರದವಾಗಿರುತ್ತದೆ.

ಮಹಿಳೆಯರು ಮತ್ತು ಹುಡುಗಿಯರು ತನ್ನ ಸಹೋದರ ಮತ್ತು ಪತಿಯ ಆರೋಗ್ಯ, ಆಯುಷ್ಯ ಹಾಗೂ ಅವರ ಅಭಿವೃದ್ಧಿಗಾಗಿ ಈ ವ್ರತವನ್ನು ಮಾಡುತ್ತಾರೆ.

ಹೆಣ್ಣು ಮಕ್ಕಳು ಮದುವೆಯಾದ ನಂತರ ಪ್ರತೀ ವರ್ಷದ ಆಷಾಢ ಮಾಸದ ಅಮಾವಾಸ್ಯೆಯ ದಿನದಲ್ಲಿ ಒಟ್ಟು ಒಂಭತ್ತು ವರ್ಷಗಳ ಕಾಲ ತನ್ನ ಸೌಮಂಗಲ್ಯದ ವೃದ್ಧಿಗೋಸ್ಕರವಾಗಿ, ಗಂಡನ ಅಭ್ಯುದಯಕ್ಕಾಗಿ ಈ ವ್ರತ ಮಾಡುವ ಪದ್ಧತಿ ಇದೆ.

Shiva God

ಭೀಮನ ಅಮಾವಾಸ್ಯೆಯ ಕಥೆ:

ಸ್ಕಂದ ಪುರಾಣದ ಪ್ರಕಾರ –

ಬಹಳ ವರ್ಷಗಳ ಹಿಂದೆ ರಾಜನೊಬ್ಬ ತನ್ನ ಮಗನಿಗೆ ಅದ್ಧೂರಿಯಾಗಿ ಮದುವೆ ಮಾಡಬೇಕೆಂದು ನಿರ್ಧರಿಸಿದ್ದನು. ಆದರೆ ರಾಜನ ಮಗ ಅಕಾಲಿಕ ಸಾವಿಗೀಡಾದನು. ಆದರೂ ರಾಜ ತನ್ನ ಸತ್ತ ಮಗನಿಗೇ ಮದುವೆ ಮಾಡಲು ನಿರ್ಧರಿಸಿ ಘೋಷಣೆ ಹೊರಡಿಸಿದನು. ಯಾರು ತನ್ನ ಮಗನನ್ನು ಮದುವೆ ಮಾಡಿಕೊಳ್ಳುತ್ತಾರೋ ಅವರಿಗೆ ಅಪಾರ ಧನ ಸಂಪತ್ತನ್ನು ಕೊಡುವುದಾಗಿ ಘೋಷಿಸಿದನು.

ಒಬ್ಬ ಬಡ ಬ್ರಾಹ್ಮಣನು ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವುದಾಗಿ ಮುಂದೆ ಬಂದನು, ಮದುವೆ ವಿಜೃಂಭಣೆಯಿಂದ ನೆರವೇರಿತು.

ಆ ದಿನ ಅಮಾವಾಸ್ಯೆ. ಮದುವೆಯ ಸಮಾರಂಭ ಮುಗಿದ ಮೇಲೆ ರಾಜನ ಮಗನ ದೇಹವನ್ನು ಸುಡಲು ಭಾಗೀರಥಿ ನದಿ ತೀರಕ್ಕೆ ತೆಗೆದುಕೊಂಡು ಬಂದು ಅಂತಿಮ ಸಿದ್ಧತೆಯಲ್ಲಿ ತೊಡಗಿದ್ದಾಗ ಗುಡುಗು ಸಿಡಿಲಿನ ಸಹಿತ ಕುಂಭದ್ರೋಣ ಮಳೆ ಪ್ರಾರಂಭವಾಯಿತು.

ನೆರೆದಿದ್ದ ಜನರು ಹೆದರಿಕೊಂಡು ಆ ದೇಹವನ್ನು ಮತ್ತು ಆ ಅಮಾಯಕ ಹುಡುಗಿಯನ್ನು ಬಿಟ್ಟು ಓಡಿ ಹೋದರು. ಅಂದು ಜ್ಯೋತಿರ್ಭೀಮೇಶ್ವರನ ವ್ರತದ ದಿನ ಎಂಬುದು ಆ ಹುಡುಗಿಗೆ ನೆನಪಾಯಿತು.

ತನ್ನ ತಾಯಿಯು ಪ್ರತಿ ವರ್ಷ ಆ ವ್ರತವನ್ನು ಆಚರಿಸುವುದು ನೆನಪಾಗಿ ಕೂಡಲೇ ನದಿಯಲ್ಲಿ ಸ್ನಾನ ಮಾಡಿ ಎರಡು ಮಣ್ಣಿನ ಹಣತೆಯನ್ನು ಮಾಡಿ, ಅಲ್ಲೇ ಇದ್ದ ಮರದ ಬೇರಿನಿಂದ ಬತ್ತಿಯನ್ನು ಮಾಡಿ ಅದಕ್ಕೆ ನೀರನ್ನು ಹಾಕಿ, ಮಣ್ಣಿನಿಂದ ಭಂಡಾರವನ್ನು ಮಾಡಿ ಅದರಿಂದಲೇ ಪೂಜೆಯನ್ನು ಮಾಡಿದಳು.

ಅವಳ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷರಾದ ಶಿವ-ಪಾರ್ವತಿಯು ಭಂಡಾರವನ್ನು ಹೊಡೆದು ನಿನಗೆ ಏನು ವರ ಬೇಕು ಎಂದಾಗ ಸತ್ತ ತನ್ನ ಪತಿಯನ್ನು ಬದುಕಿಸಿಕೊಡಿ ಎಂದು ಆ ಹುಡುಗಿ ಬೇಡಿಕೊಂಡಳು.

ಶಿವ-ಪಾರ್ವತಿ ಕೂಡಲೇ ಆಕೆಯ ಬೇಡಿಕೆಗೆ ಅಸ್ತು ಎಂದು ಪತಿಯನ್ನು ಬದುಕಿಸಿದರು. ಈ ಘಟನೆ ಆಧರಿಸಿ ಜ್ಯೋತಿರ್ಭೀಮೇಶ್ವರನ ವ್ರತ ಪ್ರಸಿದ್ಧಿಯಾಯಿತು. ಮನೋನಿಯಾಮಕ ರುದ್ರದೇವರ ಮತ್ತೊಂದು ಹೆಸರು ಭೀಮ ಎಂಬುದರಿಂದ ಈ ವ್ರತವನ್ನು “ಭೀಮನ ಅಮಾವಾಸ್ಯೆ ” ಎಂದು ಕರೆಯುತ್ತಾರೆ.

ಪೂಜಾ ವಿಧಾನ:

ಒಂದು ತಟ್ಟೆಯಲ್ಲಿ ಧಾನ್ಯ ರಾಶಿ (ಅಕ್ಕಿ) ಹಾಕಿ , ಅದರ ಮೇಲೆ 2 ದೀಪದ ಕಂಭ ಇಡಬೇಕು. ತುಪ್ಪ ಹಾಕಿ ದೀಪ ಹಚ್ಚಬೇಕು . ಈ ದೀಪಸ್ತಂಭದಲ್ಲಿ ಈಶ್ವರ ಪಾರ್ವತಿಯನ್ನು ಆವಾಹನೆ ಮಾಡಿ ಪೂಜೆ ಮಾಡಬೇಕು .

ಪೂಜಾ ಸಾಮಾಗ್ರಿಗಳು:

ಮಣೆ , ಭೀಮೇಶ್ವರ ದೇವರ ಪಟ, ನಂದಾ ದೀಪ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಬತ್ತಿ ,ಘಂಟೆ, ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ, ನೀರು ,ಅರಿಶಿನ, ಕುಂಕುಮ, ಮಂತ್ರಾಕ್ಷತೆ ,ಶ್ರೀಗಂಧ, ಊದಿನ ಕಡ್ಡಿ ,ವಿವಿಧ ಹೂವು, ಬಿಲ್ವ ಪತ್ರೆ, ಗೆಜ್ಜೆ ವಸ್ತ್ರ , ವೀಳ್ಯದ ಎಲೆ, ಅಡಿಕೆ, ಹಣ್ಣು , ತೆಂಗಿನಕಾಯಿ,ದಕ್ಷಿಣೆ ,ನೈವೇದ್ಯ – ಪಾಯಸ, ಹಣ್ಣು.

ಭಂಡಾರಕ್ಕೆ ಮಾಡಿದ ಹಿಟ್ಟಿನ ಪದಾರ್ಥ,ಆರತಿ ತಟ್ಟೆ, ಹಲಗಾರತಿ, ಕರ್ಪೂರ, ಮಂಗಳಾರತಿ ಬತ್ತಿ. 9 ಗಂಟಿನ ಗೌರಿ ದಾರ ಇಟ್ಟು ಪೂಜೆ ಮಾಡಬೇಕು, ಪೂಜೆ ನಂತರ ಕೈಗೆ ಕಟ್ಟಿಕೊಳ್ಳಬೇಕು. ಇದನ್ನು ಓದಿ – ಕಾರ್ಗಿಲ್ ಯುದ್ಧ ನಡೆದ ಕಾರಣ

ಸಂಕಲ್ಪದಿಂದ ಗಣಪತಿ ಪೂಜೆ ಮಾಡಿ ನಂತರ ಭೀಮೆಶ್ವರನ ಪೂಜೆ ಮಾಡಬೇಕು. ಗಣಪತಿ ಅಷ್ಟೋತ್ತರ, ಶಿವ ಅಷ್ಟೋತ್ತರ, ದೇವರ ಆವಾಹನೆ,ಸ್ಥಾಪನೆ, ಅರ್ಚಣೆ, ಹೂವು, ನೈವೇದ್ಯ ಅರ್ಪಣೆ, ಆರತಿಯೊಂದಿಗೆ ಒಂದು ಹಂತ ಪೂಜೆ ಸಮಾಪ್ತಿಗೊಳಿಸಬಹುದು.

ಭೀಮನ ಅಮವಾಸ್ಯೆ ಭೀಮನ ಅಮವಾಸ್ಯೆ ಭೀಮನ ಅಮವಾಸ್ಯೆ ಭೀಮನ ಅಮವಾಸ್ಯೆ

Share This Article
Leave a comment