ಅಂದು ತಿಂಗಳ ಮಧ್ಯದ ವಾರವಾದ್ದರಿಂದ ತೀರಾ ತಲೆಹೋಗುವಷ್ಟು ಜನಸಂದಣಿ ಇರಲಿಲ್ಲ ಬ್ಯಾಂಕಿನಲ್ಲಿ. ಹಿರಿಯ ಗ್ರಾಹಕರೊಬ್ಬರು ಹಣ ಹಿಂಪಡೆಯಲು ಬಂದರು. ಹಣ ಕೊಡುವ ವೇಳೆಗೆ ನಾನು “ನಾಮಿನೇಷನ್ ಮಾಡಿದ್ದೀರಾ? ಮಾಡಿಲ್ಲದಿದ್ದರೆ ಮಾಡಿಬಿಡಿ” ಎಂದೆ. ಸಾಧಾರಣವಾಗಿ ವಯಸ್ಸಾದವರು ಬಂದಾಗ ಹೀಗೆ ಹೇಳುವುದು ರೂಢಿ. ಅದಕ್ಕೆ ಆತ “ಮೇಡಂ ಯಾವ ಮಕ್ಕಳನ್ನು ನಂಬೋಕೆ ಆಗುತ್ತೆ ಈ ಕಾಲದಲ್ಲಿ ಸುಮ್ನೆ ನಮ್ ಭ್ರಾಂತು.” ಎಂದರು. ನಾನು “ಆ” ಎಂದೆ. “ಹಾ ಮೇಡಂ. ನಮ್ಮನೆ ಎದುರು ಮನೆಯಲ್ಲಿ ಆತನ ತಾಯಿ ಇಲ್ಲಿಗೆ ಒಂದು ತಿಂಗಳ ಹಿಂದೆ ಬಂದಿದ್ದಾರೆ. ನಿತ್ಯವೂ ಒಂದೇ ರಾಮಾಯಣ. ಬೆಳಿಗ್ಗೆ ನಾಲ್ಕರಿಂದ ದಿನವೂ ಶ್ಲೋಕ ಮಂತ್ರಗಳನ್ನು ಹೇಳುತ್ತಿದ್ದ ಆಕೆಯ ಮಗ ಸೊಸೆ ಈಕೆ ಬಂದಾಗಿನಿಂದ ಬರೇ ಬಯ್ಯುವುದೇ ಕೇಳುತ್ತೆ. ಶ್ಲೋಕ ಮಂತ್ರಗಳನ್ನು ಹೇಳುತ್ತಿದ್ದ ಬಾಯಿಗಳಾ ಇವುಗಳು ಎಂದು ಅನುಮಾನ ಬರುತ್ತದೆ. ಸದಾ ಆ ದೇವಸ್ಥಾನ ಈ ದೇವಸ್ಥಾನ ಆ ಪೂಜೆ ಈ ಪೂಜೆ ಎಂದು ಮಾಡುತ್ತಿದ್ದವರು ಇವರೇನಾ? ಎನಿಸಿದೆ ನಮ್ಮ ಸುತ್ತಮುತ್ತಲಿನ ಎಲ್ಲರಿಗೂ. ಮೊನ್ನೆ ಆ ಅಜ್ಜಿ ಸುಸ್ತಾಗಿ ಮಹಡಿಯಿಂದ ಮೆಲ್ಲಗೆ ಇಳಿದು ಬರುತ್ತಿದ್ದಾಗ ನಮ್ಮ ಪಕ್ಕದ ಮನೆಯವರು ಕಂಡರಂತೆ. ಅವರನ್ನು ಕಂಡು “ನೋಡಪ್ಪಾ ನನ್ ಸ್ಥಿತೀನಾ. ನನ್ ಗಂಡ ಆಪಾಟಿ ಆಸ್ತಿ ಪಾಸ್ತಿ ಮಾಡದಿದ್ರೆ ಒಳ್ಳೇದಿತ್ತು. ಮನಸ್ಸು ಕಲ್ಲು ಮಾಡಿಕೊಂಡು ವೃದ್ಧಾಶ್ರಮಕ್ಕಾದರೂ ಸೇರಿಕೊಳ್ಳುತ್ತಿದ್ದೆ. ನಾಲ್ಕು ಮಕ್ಕಳಿದ್ದೂ ಏನು ಪ್ರಯೋಜನ? ಎಲ್ಲರೂ ನೀ ನನ್ನೊಬ್ಬನ ಮನೇಲೇ ಇರಬೇಕಾ? ಅವರ ಮನೆಗೆ ಹೋಗು ಇವರ ಮನೆಗೆ ಹೋಗು ಎನ್ನುತ್ತಾರೆ. ಒಬ್ಬನೇ ಮಗ ಇದ್ದಿದ್ದರೆ ಆಸ್ತಿ ಹೇಗಿದ್ದರೂ ನನಗೇ ತಾನೇ ಮುಂದೆ ಎಂದಾದರೂ ನೋಡಿಕೊಳ್ಳೂತ್ತಿದ್ದರೇನೋ? ಈಗ ಆಸ್ತಿ ಪಾಲು ಮಾಡು. ನನಗೆ ಇದು ಕೊಡು, ತನಗೆ ಇದು ಕೊಡು ಎನ್ನುತ್ತಾರೆ. ಎಲ್ಲರೂ ಒಂದನ್ನೇ ಕೇಳುತ್ತಾರೆ. ಒಟ್ಟು ಎಷ್ಟಿದ್ಯೋ ಅದನ್ನು ನಾಲ್ಕು ಭಾಗ ಮಾಡೋದಕ್ಕೆ ನನಗೆ ಏನೂ ಅಭ್ಯಂತರ ಇಲ್ಲ. ನನಗೊಂದು ಪಾಲು ಬೇಕಲ್ವಾಪ್ಪ? ಆಸ್ತಿ ಭಾಗ ಆದ ಮೇಲೆ ಇವರ್ಯಾರೂ ನೋಡಿಕೊಳ್ಳದಿದ್ದರೆ ವೃದ್ಧಾಶ್ರಮಕ್ಕಾದರೂ ಕೊಟ್ಟು ಬದುಕಬಹುದು. ಎಲ್ಲರೂ ಬೆಂಗಳೂರಿನ ಸೈಟು ತನಗೇ ಬೇಕು ಎನ್ನುತ್ತಾರೆ. ಇವನೂ ಇವನ ಹೆಂಡತಿಯೂ ಬೆಂಗಳೂರಿನ ಜಾಗ ನಮಗೇ ಬರೆದುಕೊಡು. ನಮಗೆ ಬರೆದುಕೊಟ್ಟರೆ ಮಾತ್ರ ನಿನಗೆ ಊಟ ಕೊಡೋದು ಅಂತಾರೆ. ನನಗೀಗ ಎಂಬತ್ತೆರಡು ಆಯ್ತು. ಗಟ್ಟಿ ಅವಲಕ್ಕಿಗೆ ಸ್ವಲ್ಪ ತೆಳು ಮಜ್ಜಿಗೆ ಹಾಕಿ ಕೊಡ್ತಾರೆ ತಿನ್ನು ಅಂತ. ಬೇಕಂತಲೇ ಗಟ್ಟಿ ರೊಟ್ಟಿ ಮಾಡಿ ಕೊಡ್ತಾರೆ. ನನಗೆ ಅಗೀಲಿಕ್ಕೆ ಆಗಬಾರದು ಅಂತ. ಕೊಟ್ಟ ಹಾಗೂ ಇರಬೇಕು. ನಾ ತಿನ್ನಲೂ ಆಗಬಾರದು. ಈ ಹಿಂಸೆ ತಾಳಲಿಕ್ಕಾಗದೆ ನಾನೇ ಇವರಿಗೆ ಆ ಸೈಟು ಬರೆದುಕೊಟ್ಟುಬಿಡಲಿ ಅಂತ. ಜೊತೆಗೆ ಹಳ್ಳಿಯಲ್ಲಿರುವ ನೂರಾರು ಎಕರೆ ಜಮೀನನ್ನೂ ಎಲ್ಲರೂ ತಮಗೇ ಬೇಕು ಅಂತಾರೆ. ಎಲ್ಲ ಒಟ್ಟಿಗೆ ಕೂತು ಮಾತಾಡಿ ತೀರ್ಮಾನ ಮಾಡಿ ಎಂದರೆ ಅದಕ್ಕೂ ಸಿದ್ಧ ಇಲ್ಲ. ಕದ್ದೂ ಮುಚ್ಚೀ ನನ್ನ ಕೈಯ್ಯಿಂದ ಬರೆಸಿಕೊಳ್ಳೋಕೆ ಕಾಯ್ತಿದಾರೆ. ಎಲ್ಲರೂ ನನ್ನ ಮಕ್ಕಳೇ. ಯಾರಿಗೂ ಅನ್ಯಾಯ ಮಾಡೋಕೆ ನನಗಿಷ್ಟ ಇಲ್ಲ. ಇವರು ನನ್ನನ್ನು ಮೇಲಿನ ಮನೆಯಲ್ಲಿ ಇರಿಸಿದ್ದಾರೆ. ಬಲ್ಪ್ ಕಿತ್ತು ಹಾಕಿ ಕತ್ತಲಲ್ಲಿ ಕೂರಿಸಿದ್ದಾರೆ. ಟಿ.ವಿ. ಕನೆಕ್ಷನ್ ಕೂಡ ಕಿತ್ತುಹಾಕಿದ್ದಾರೆ. ಒಬ್ಬಳೇ ಹುಚ್ಚು ಬಂದ ಹಾಗೆ ಆಗುತ್ತೆ ಎಂದು ಕಣ್ಣೀರು ಹಾಕಿದರಂತೆ” ಎಂದರು. “ಹೀಗಾದ್ರೆ ಮಕ್ಕಳನ್ನು ನಂಬೋದು ಹೇಗೆ? ನಮ್ಮ ಜೀವದ ಭಾಗಗಳು ಎಂದು ಎಷ್ಟು ಮುದ್ದಿನಿಂದ, ಎಷ್ಟು ಪ್ರೀತಿಯಿಂದ ಬೆಳೆಸುತ್ತೇವೆ” ಎಂದು ನಾನೂ ದನಿಗೂಡಿಸಿದೆ. “ಮೊನ್ನೆ ಪೇಪರಿನಲ್ಲಿ ಓದಿದ್ದೆ – ಅಮ್ಮ ಮಗ ಸೇರಿಕೊಂಡು ಅಪ್ಪನನ್ನು ಕೊಲೆ ಮಾಡಿದ್ದರು. ಕಳೆದ ತಿಂಗಳು ಓದಿದ್ದ ನೆನಪು ಮೊಮ್ಮಗನೇ ಐವತ್ತು ಸಾವಿರ ರೂಪಾಯಿಗಳಿಗೆ ಅಜ್ಜಿಯನ್ನು ಕೊಲೆ ಮಾಡಿದ್ದಂತೆ. ನಮ್ಮವರೆಂದುಕೊಂಡವರನ್ನೂ ನಂಬಿ ನೆಮ್ಮದಿಯಿಂದ ನಿದ್ದೆ ಮಾಡಲಾಗದಿದ್ದರೆ ಇನ್ನೆಂಥಾ ಬದುಕು ಮೇಡಂ” ಎಂದರು. ಅಷ್ಟರಲ್ಲಿ ಅವರ ಕೆಲಸವೂ ಆಗಿತ್ತು. ಮ್ಲಾನವದನರಾಗಿ ಆತ ಹೊರಟರು.
ನಮ್ಮಿಬ್ಬರ ಮಾತುಗಳನ್ನು ಕೇಳುತ್ತಿದ್ದ ಮತ್ತೊಬ್ಬರು “ಮೇಡಂ ನೀವೂ ನೋಡಿದ್ರಾ ಈ ಸುದ್ದೀನಾ? ಇವತ್ತು ಬೆಳಿಗ್ಗೆ ನಮ್ಮ ವಾಟ್ಸಪ್ ಗುಂಪಿನಲ್ಲಿ ಬಂದಿತ್ತಲ್ಲಾ” ಆಕೆ ಮುಖ ಮುದುಡಿ ಕೇಳಿದರು. ಅವರು ಯಾವ ಸುದ್ದಿ ಕೇಳುತ್ತಿದ್ದಾರೆಂದು ನನಗೂ ತಿಳಿಯಿತು. ನಾನೂನೂ “ಹೌದು ಮೇಡಂ ಗೊತ್ತಾಯಿತು. ಎಂಥಾ ಅನ್ಯಾಯ ಅಲ್ವಾ? ನಮ್ಮೂರಿನ ಎಲ್ಲ ಚಾನೆಲ್‍ಗಳಲ್ಲೂ, ಆನ್‍ಲೈನ್ ಪತ್ರಿಕೆಗಳಲ್ಲೂ ಅದೇ ಸುದ್ದಿ ಹರಿದಾಡುತ್ತಿದೆ. ಮಕ್ಕಳನ್ನು ಕೂಡಾ ನಂಬೋಕಾಗಲ್ವಲ್ಲಾ ಈಗ? ಯಾವ ಧೈರ್ಯದಿಂದ ಅವರ ಜೊತೆ ಇರಬಹುದು ಮೇಡಂ?” ಎಂದು ಕೇಳಿದೆ. ಆಕೆ ತುಂಬ ಹಿರಿಯರು. ಇಂಥ ಸುದ್ಧಿಯನ್ನು ಅರಗಿಸಿಕೊಳ್ಳೋಕೆ ಆಗುತ್ತಿರಲಿಲ್ಲವೆನಿಸಿತು. ನಾನು ಕ್ಯಾಶ್ ಎಣಿಸುವವರೆವಿಗೂ ಆಕೆ ಮಾತನಾಡುತ್ತಲೇ ಇದ್ದರು. ಎಷ್ಟು ಚೆನ್ನಾಗಿ ಬಾಳಿ ಬದುಕಿದವರು. ಹೀಗೆ ಆಯಿತೆಂದರೆ ನಂಬೋಕಾಗೋಲ್ಲ. ಇನ್ನು ಅವರ ಕುಟುಂಬದವರು ಹೇಗೆ ಜೀರ್ಣಿಸಿಕೊಳ್ಳುತ್ತಾರೋ ಏನೋ?” ಎಂದು ಅಲವತ್ತುಕೊಂಡರು. ನಿಜಾ ಸಮಾಜದ ನಿರೀಕ್ಷೆಯೇ ಬೇರೆ ಆದರೆ ವೈಯಕ್ತಿಕ ಸ್ವಭಾವವೇ ಬೇರೆ. ವೈಯಕ್ತಿಕ ಸ್ವಭಾವಕ್ಕೆ ಜಾತಿ, ಧರ್ಮ, ಲಿಂಗಗಳ ಹಂಗಿಲ್ಲ. ಎಷ್ಟೇ ಸಂಸ್ಕಾರವಂತರ ಮನೆಯಾದರೂ ಎಲ್ಲೋ ಒಬ್ಬಿಬ್ಬರು ಹಾದಿತಪ್ಪುವುದುಂಟು. “ಅವರ ಮಗ ದುರಭ್ಯಾಸಗಳನ್ನು ಕಲಿತು ಅವರಪ್ಪ ಅಮ್ಮನ ಬಳಿಯಿದ್ದ ಕೋಟಿಗಟ್ಟಲೆ ಹಣವನ್ನೂ ಹಾಳುಮಾಡಿದನಂತೆ. ಇಲ್ಲೇ ಎಲ್ಲೋ ಒಂದು ಸಣ್ಣ ಮನೆಯಲ್ಲಿ ಇದ್ದರು. ಉಳಿದಿರುವ ಒಂದು ಸಣ್ಣ ಗಂಟಿನ ಮೇಲೆ ಮಗನ ಕಣ್ಣು ಬಿದ್ದಿತೇನೋ? ಅವನ ದುರಭ್ಯಾಸಕ್ಕೆ ಆ ಹಣವೂ ಬೇಕಿತ್ತೇನೋ? ಹಣದ ವಿಚಾರವಾಗಿ ಅಮ್ಮ ಮಗನ ನಡುವೆ ಏನು ಮಾತುಕತೆಯಾಗಿತ್ತೋ ಕಾಣೆ. ನಿನ್ನೆ ರಾತ್ರಿ ಯಾರೋ ದುಷ್ಕರ್ಮಿಗಳು ಅಮ್ಮನನ್ನು ಕೊಲೆ ಮಾಡಿದ್ದಾರೆ. ಮಗನೇ ಕಾರಣ ಇರಬಹುದು ಎಂದು ಎಲ್ಲರಿಗೂ ಅನುಮಾನ. ಈಗಿನ ಕಾಲದಲ್ಲಿ ಹಣ ಇದ್ದರೂ ಕಷ್ಟ ಇಲ್ಲದಿದ್ದರೂ ಕಷ್ಟ” ಎಂದು ನಿಟ್ಟುಸಿರು ಬಿಟ್ಟರು. ಹಣ ಪಡೆದು ಆಕೆ ಹೊರಟರು.
ಆಕೆ ಹೊರಟು ಎಷ್ಟು ಹೊತ್ತಾದರೂ ನನ್ನ ಮನಸ್ಸು ತಹಬದಿಗೆ ಬರಲಿಲ್ಲ. ಈ ಕಾಲದಲ್ಲಿ ಮಕ್ಕಳು ನಮ್ಮನ್ನು ಸಾಕುತ್ತಾರೆಂಬ ನಿರೀಕ್ಷೆಯೇನೂ ಬೇಕಿಲ್ಲ. ಆದರೂ ಅವರ ಜೊತೆ ನಾವು ಸುರಕ್ಷಿತವಾಗಿರುತ್ತೇವೆಂಬ ಭರವಸೆಯಾದರೂ ಇರದಿದ್ದರೆ ಬಾಳು ಹೇಗೆ? ಎಂಬ ಚಿಂತೆ ಕಾಡುತ್ತಿತ್ತು. ಮಕ್ಕಳಷ್ಟೇ ಅಲ್ಲ. ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು ಯಾವ ಕ್ಷಣ ಬೇಕಾದರೂ ಸಾಯಿಸಿಬಿಡಬಹುದೆಂದಾರೆ ಯಾವ ಭರವಸೆಯಿಂದ ಯಾರ ಜೊತೆಯಲ್ಲಿಯಾದರೂ ಬದುಕಲಿಕ್ಕೆ ಸಾಧ್ಯ? ಆ ಕ್ಷಣ ನನಗೆ ಪ್ರಿಯತಮೆಯನ್ನು ತುಂಡು ತುಂಡು ಮಾಡಿ ಫ್ರಿಡ್ಜ್‍ನಲ್ಲಿ ಇಟ್ಟ ವ್ಯಕ್ತಿಯೊಬ್ಬರ ಬಗ್ಗೆ ಪೇಪರಿನಲ್ಲಿ ಓದಿದ ನೆನಪೂ ಧುತ್ತೆಂದು ನೆನಪಿಗೆ ಬಂದಿತು.
ಆ ಸಂಜೆ ನನ್ನ ಟೆನಿಸ್ ಎಲ್ಬೋಗೆ ಫಿಸಿಯೋ ಥೆರಪಿಗೆ ಹೋದಾಗ ಪಾರ್ಶ್ವವಾಯು ಪೀಡಿತ ಹಳ್ಳಿ ಮನುಷ್ಯನನ್ನು ಆತನ ಮಗ ಥೆರಪಿ ಮುಗಿದ ಮೇಲೆ ಮಗುವನ್ನು ಕೈಯ್ಯಲ್ಲಿ ಎತ್ತಿಕೊಂಡು ಹೋಗುವಂತೆ ಎತ್ತಿಕೊಂಡು ಹೋಗಿ ಕಾರಿನ ಹಿಂದಿನ ಸೀಟಿನಲ್ಲಿ ವಾಲಿಸಿ ನಂತರ ಆತನ ಕಾಲುಗಳನ್ನು ಕಾರಿನೊಳಗೆ ಇಟ್ಟು ಕೂರಿಸಿ, ಆ ಹುಡುಗನೂ ಅವನ ತಾಯಿಯೂ ಮುಂದೆ ಕುಳಿತುಕೊಂಡು ಕಾರನ್ನು ಚಲಾಯಿಸಿ ಹೊರಟಿದ್ದನ್ನು ಕಂಡು ಎಲ್ಲ ಮಕ್ಕಳೂ ಕೆಟ್ಟವರಲ್ಲ; ಜಗತ್ತಿನ್ನೂ ತೀರಾ ಹಾಳಾಗಿಲ್ಲ ಎಂಬ ಭರವಸೆಯ ಬೆಳಕು ಚಿಗುರಿತು.
–ಡಾ.ಶುಭಶ್ರೀಪ್ರಸಾದ್, ಮಂಡ್ಯ
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
ತುಪ್ಪ ಎಂಬ ಮಹಾ ಔಷಧಿ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )