ತಾಯ್ತಂದೆಯರ ಮರೆವುದುಂಟೇ?(ಬ್ಯಾಂಕರ್ಸ್ ಡೈರಿ)

Team Newsnap
3 Min Read
IMG 20180306 WA0008 1 edited
ಡಾ.ಶುಭಶ್ರೀಪ್ರಸಾದ್, ಮಂಡ್ಯ

ನೆನಪಾಗುತ್ತಿಲ್ಲ ಯಾವ ತಿಂಗಳು ಈ ಹುಡುಗಿಯ ಕಥೆಯನ್ನು ನಾನು ನಿಮಗೆ ಹೇಳಿದ್ದೆ ಎಂದು. ಬಹುಶಃ 2021ರ ಆಗಸ್ಟ್ ಇರಬೇಕು. ಅಂದರೆ ಎರಡು ವರ್ಷಗಳೇ ಕಳೆದುಹೋಗಿದೆ. ಆ ಹುಡುಗಿಯ ಹೆಸರನ್ನು ಬದಲಾಯಿಸಿ ರುಕ್ಸಾನಾ ಎಂದು ಹೇಳಿದ್ದೆ. ಮಂಡ್ಯದ ಶಾಖೆಯೊಂದರ ನನ್ನ ಗ್ರಾಹಕಿ ಆಕೆ. ಆ ಶಾಖೆಯನ್ನು ಬಿಟ್ಟು ಮತ್ತೊಂದು ಶಾಖೆಗೆ ವರ್ಗ ಆಗಿ, ಅದರಿಂದಲೂ ಮಗದೊಂದಕ್ಕೆ ವರ್ಗ ಆಗಿದ್ದಾಗ ಈ ಹುಡುಗಿ ನನ್ನನ್ನು ಹುಡುಕಿಕೊಂಡು ಅಲ್ಲಿಗೇ ಬಂದಿದ್ದಳು. ಅವಳ ಅಮ್ಮ ಹೋಗಿಬಿಟ್ಟಿದ್ದನ್ನು ಹೇಳಿಕೊಂಡು ಅತ್ತಿದ್ದಳು. ಅಕ್ಕಂದಿರ ಬಗ್ಗೆ ಹೇಳುತ್ತ ‘ನಂಗೆ ವಯಸ್ಸಿದ್ದಾಗ ಹುಡುಗನ್ನ ನೋಡಿ ಮದ್ವೆ ಮಾಡೋವ್ರು ಇರ್ನಿಲ್ಲ. ಮೊನ್ನೆ ಅಕ್ಕ ಫೋನ್ ಮಾಡಿ ಒಂದು ಹುಡ್ಗ ಇದಾನೆ. ಸ್ವಲ್ಪ ಲೂಸು. ಆದ್ರೆ ತುಂಬ ದುಡ್ಡಿದೆ. ಅವ್ನ ಮದ್ವೆ ಮಾಡ್ಕೋ. ಆರಾಮಾಗಿರ್ತೀಯಾ ಅಂದ್ರು. ತಲೆಕೆಟ್ಟವ್ನ ಮದ್ವೆ ಆಗಿ ಸೀರೆ ಒಡ್ವೆ ಹಾಕಾಬೇಕಾ ಮೇಡಂ.?’ ಎಂದು ಪ್ರಶ್ನಿಸಿದ್ದಳು. ಆ ಪ್ರಶ್ನೆ ನನ್ನ ಮನದಲ್ಲಿ ಇನ್ನೂ ಹಸಿಯಾಗಿ ಕಾಡುತ್ತಾ ಇರುವಾಗಲೇ ಅದೇ ಹುಡುಗಿ ಮತ್ತೆ ಭೇಟಿಯಾದಳು. ನಾನು ಮೊದಲಿದ್ದ ಶಾಖೆಗೇ ವರ್ಗವಾಗಿ ಬಂದಿರುವಾಗ ಹಳೆಯ ಗ್ರಾಹಕರ ಭೇಟಿ ಸಾಮಾನ್ಯವೇ. ರುಕ್ಸಾನನ ಅಕ್ಕಂದಿರೂ ನನಗೆ ಅಲ್ಲೇ ಭೇಟಿಯಾಗಿದ್ದರು. “ಅವಳು ಯಾವಾಗ್ಲೂ ಅಮ್ಮನ್ನ ನೆನೆದು ಅಳ್ತಾ ಇರ್ತಾಳೆ. ಗೋರಿ ಹತ್ರ ಕಣ್ಣೀರು ಹಾಕ್ತಾ ಇರ್ತಾಳೆ. ತಲೆ ಸರಿ ಇದ್ಯಾ ಅವಳಿಗೆ? ನಮ್ಮನೆಗೆ ಕರೆದೂ ಬರಲ್ಲ. ನೀವಾದ್ರೂ ಬುದ್ಧಿ ಹೇಳಿ ಮೇಡಂ” ಎಂದಿದ್ದರು.
ಹೀಗೊಂದು ದಿನ ರುಕ್ಸಾನ ನನ್ನ ಕಂಡು ಸಂತೋಷದಿಂದ ಬಂದು “ಮೇಡಂ ಅಂತೂ ವಾಪಸ್ ಬಂದ್ರಾ? ತುಂಬ ಕುಸ್ಯಾಯ್ತು” ಅಂದಳು. “ಯಾಕೆ ರುಕ್ಸಾನಾ ಅಕ್ಕಂದಿರ ಮನೆಗೆ ಹೋಗಲ್ಲವಂತೆ.? ದಿನಾ ಅಮ್ಮನ ಗೋರಿ ಹತ್ರ ಹೋಗ್ತೀಯಂತೆ? ವರ್ಷ ಆಯ್ತು ಈಗಲಾದ್ರೂ ಸಮಾಧಾನ ಮಾಡ್ಕೋಬಾರ್ದಾ? ನೋಡಿದ ಜನ ಏನಂತಾರೆ?” ಎಂದು ಕೇಳಿದೆ.
“ಅಮ್ಮ ನನ್ನ ಒಂಟಿ ಮಾಡ್ಬಿಟ್ಟು ಹೋಗ್ಬಿಟ್ರು. ಆದ್ರೆ ದಿನಾ ನನ್ ಕನಸಲ್ಲಿ ಅಮ್ಮ ಬರ್ತಾಳೆ. ರಾತ್ರಿಯೆಲ್ಲಾ ನನ್ ಜೊತೆ ಇರ್ತಾಳೆ. ಆಗ ನಾನು ಒಂಟಿ ಅನಿಸೋದೇ ಇಲ್ಲ ಮೇಡಂ. ಬೆಳಿಗ್ಗೆ ಕಣ್ಣು ಬಿಟ್ಟರೆ ಅವಳು ಹೋಗಿಬಿಡ್ತಾಳೆ. ಅದ್ಕೇ ಬೆಳಿಗ್ಗೆ ಎದ್ದ ಕೂಡಲೇ ಅಮ್ಮನ ಗೋರಿಯ ಹತ್ತಿರ ಹೋಗಿ ಒಂದು ಗಂಟೆ ಕುಳಿತು ಮಾತಾಡಿ ಬರುತ್ತೇನೆ. ಕೆಲಸ ಮುಗಿಸಿ ಬಂದು ಸಂಜೆ ಒಂದು ಗಂಟೆ ಮಾತಾಡಿ ಬರುತ್ತೇನೆ. ನನ್ನ ಮನಸ್ಸು ಹಗುರಾಗುತ್ತೆ. ಜನ ಏನಾದ್ರೂ ಅನ್ನಲಿ. ಕೆಲವರು ನಂಗೆ ತಲೆ ಕೆಟ್ಟಿದೆ ಅಂತಾರೆ. ನಾ ಕ್ಯಾರೇ ಅನ್ನಲ್ಲ. ಅನ್ನೋರ್ಯಾರು ನಂಗೆ ಆಗಲ್ಲ. ಅಮ್ಮನ ಜೊತೆ ಮಾತಾಡಿದ ಸಮಾಧಾನಾನೇ ನನಗೆ ಮುಖ್ಯ. ಬತ್ತೀನಿ ಮೇಡಂ” ಎಂದಂದು ಹೊರಟೇ ಹೋದಳು.

ಅದೇಕೋ ಆ ಕ್ಷಣ ನನಗೆ ಕಳೆದ ವರ್ಷ ಭೇಟಿಯಿತ್ತ ವೃದ್ಧಾಶ್ರಮದ ನೆನಪಾಯಿತು. ಅಲ್ಲಿನ ವೃದ್ಧರನೇಕರು ತಮ್ಮ ತಮ್ಮ ಮಕ್ಕಳು ಮೊಮ್ಮಕ್ಕಳನ್ನು ನೆನೆನೆನೆದು ಕಣ್ಣೀರಿಡುತ್ತಿದ್ದರು, ನಿಡುಸುಯ್ಯುತ್ತಿದ್ದರು, ಕೆಲವರು ಮಕ್ಕಳಿಗೆ ಹಿಡಿ ಶಾಪವನ್ನೂ ಹಾಕುತ್ತಿದ್ದರು. ಇನ್ನೂ ಕೆಲವರು ಮಕ್ಕಳ ಭಾವಚಿತ್ರವನ್ನು ನೋಡುತ್ತಾ ಮಂಕಾಗಿ ಕುಳಿತಿದ್ದರು. ಅಲ್ಲಿ ಬಹುತೇಕರು ಹಿಂದೆಲ್ಲ ಚೆನ್ನಾಗಿ ಬಾಳಿ ಬದುಕಿದವರೇ. ಜೀವನದ ಸಂಧ್ಯಾ ಸಮಯದಲ್ಲಿ ದೇಹದಲ್ಲಿ ಅಶಕ್ತಿಯುಂಟಾದಾಗ ಮಕ್ಕಳ ಮೇಲೆ ಅವಲಂಬಿತರಾಗಿರುತ್ತಾರೆ. ಬಾಲ್ಯದಲ್ಲಿ ಅಸಹಾಯಕರಾಗಿ ಅಪ್ಪ ಅಮ್ಮನ ಕೈ ಹಿಡಿದು ನಡೆದು ಅವರ ಆಶ್ರಯದಲ್ಲೇ ಬೆಳೆದ ಮಕ್ಕಳು, ತಾಯ್ತಂದೆಯರು ಅಶಕ್ತರಾದಾಗ ಯಾವ್ಯಾವುದೋ ನೆಪವೊಡ್ಡಿ ದೂರ ತಳ್ಳಿಬಿಡುತ್ತಾರಲ್ಲಾ, ತಾವೇ ಹೆತ್ತು ಹೆಗಲ ಮೇಲೆ ಹೊತ್ತು ತಮ್ಮದೆಲ್ಲವನ್ನೂ ಧಾರೆಯೆರೆದು ಬೆಳೆಸಿದ ಮಕ್ಕಳೇ ತಮ್ಮ ಅಸಹಾಯಕ ಕಾಲದಲ್ಲಿ ಕೈಬಿಟ್ಟುಬಿಡುತ್ತಾರಲ್ಲಾ ಎಂದು ಹಲುಬುವುದನ್ನು ನೋಡಿದಾಗ ನೋವಾಗುವುದು ಸಹಜ. ಅಂಥವರನ್ನು ನೋಡಿದಾಗ ಅನೇಕ ಪ್ರಶ್ನೆಗಳು ಏಕಕಾಲದಲ್ಲಿ ಕಾಡುತ್ತವೆ.

ರುಕ್ಸಾನಳ ಮಾತನ್ನು ಕೇಳಿ ಇದಕ್ಕೂ ಅದಕ್ಕೂ ತಾಳೆ ಹಾಕುವಂತಾಯಿತು. ಕಣ್ಣೆದುರು ಬದುಕಿರುವ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಮಕ್ಕಳೆಲ್ಲಿ? ಸತ್ತ ತಾಯಿಯೊಂದಿಗಿನ ಅನುಬಂಧವನ್ನು ಕಡಿದುಕೊಳ್ಳಲಾಗದೆ ಗೋರಿಯ ಬಳಿ ನಿತ್ಯವೂ ಮಾತನಾಡಿ ಬರುವ ರುಕ್ಸಾನ ಎಲ್ಲಿ?

ನಮ್ಮ ಅಂತರಾಳವನ್ನು ನಾವೇ ಬಗೆದುಕೊಳ್ಳಬೇಕಾದ ಅನುಭವಚಿತ್ರಣವನ್ನು ಬ್ಯಾಂಕಿನ ಗ್ರಾಹಕರು ಕಟ್ಟಿಕೊಡುತ್ತಲೇ ಇರುತ್ತಾರೆ. ಕಲಿಯುವ ಮನಸ್ಸು ನಮ್ಮಲ್ಲಿರಬೇಕಷ್ಟೇ.

Share This Article
Leave a comment