ನಕಲಿ ಮುಖವಾಡದೊಳಗಿನ ಅಸಲೀ ಮುಖಗಳು..

Team Newsnap
6 Min Read
HIRITYRU PRAKASH 1
ಹಿರಿಯೂರು ಪ್ರಕಾಶ್

ನಮ್ಮ ನಾಡಿನಲ್ಲಿ ಜನಗಳನ್ನು ಮೂರ್ಖರನ್ನಾಗಿಸೋದು ಅತಿ ಸುಲಭ. ಹಾಗೆಯೇ ಅಲ್ಪಾವಧಿಯಲ್ಲೇ ಸಿಕ್ಕಾಪಟ್ಟೆ ದುಡ್ಡು ಮಾಡೋದು ಸಹಾ ಅದಕ್ಕಿಂತ ಸುಲಭ !

ಹೀಗೆ ಹೇಳಿದಾಗ, ಅಚ್ಚರಿಯಾಗುತ್ತದೆಯಲ್ಲವೇ.?

ನಿಜಾ ಕಣ್ರೀ..! ಬದುಕುವ ಕಲೆ ಗೊತ್ತಿಲ್ಲದಿದ್ದವರು ಮಾತ್ರ ಮುವ್ವತ್ತು- ನಲವತ್ತು ವರ್ಷಗಳ ಕಾಲ ಸಂಸ್ಥೆಗೋ, ಸರ್ಕಾರಕ್ಕೋ ನಿಯತ್ತಿನಿಂದ ದುಡಿದು ಅದರಲ್ಲಿ ಅರ್ಧಭಾಗ ಕಡ್ಡಾಯವಾಗಿ ತೆರಿಗೆ ಕಟ್ಟಿ, ಇನ್ನರ್ಧ ಭಾಗದಲ್ಲಿ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟಿ ಮಿಕ್ಕಿದ್ದರಲ್ಲಿ ಅಲ್ಪ ಸ್ವಲ್ಪ ಉಳಿತಾಯ ಮಾಡಿ ಕೊನೆಗೆ ಅದರಲ್ಲಿ ಒಂದು ಎಂಥದೋ ಒಂದು ಮನೆ ಕಟ್ಟಿ ಮಕ್ಕಳ ಮದುವೆ ಆಗುವಷ್ಟರಲ್ಲಿ ಮುಖದಲ್ಲಿ ಸುಕ್ಕು,ಮೂಡಿ ತಲೆಗೂದಲು ನೆರೆತು, ಉತ್ಸಾಹ ಬಾಡಿ ಅವರ ಲೈಫ಼ೇ ಮುಗಿದು ಹೋಗಿರುತ್ತೆ ! ಈ‌ ನಡುವಿನ ಒತ್ತಡದ ಬದುಕಲ್ಲಿ ಡಯಾಬಿಟೀಸು, ಬ್ಲಡ್ ಪ್ರೆಷರ್ರೂ, ಅದೂ ಇದೂ ಅಂತ ಹತ್ತಾರು ಆತ್ಮೀಯ ಸ್ನೇಹಿತರನ್ನೂ ದೇಹದೊಳಗೆ ಕಟ್ಟಿಕೊಂಡು ಕೊನೆಯ ಉಸಿರಿನವರೆಗೆ ಏದುಸಿರು‌ಬಿಡುತ್ತಾ ಹೆಣಗುವುದರಲ್ಲೇ ಬದುಕಿನ ಜಟಕಾ ಬಂಡಿಯ ಟೈರುಗಳು ಉಸಿರು ಕಳೆದುಕೊಂಡು ಪಂಚರ್ ಆಗಿರುತ್ತವೆ.

ನಾಲ್ಕು ದಿನಗಳ ಈ ಸ್ಟೀರಿಯೋಟೈಪ್ ಸರ್ಕಸ್ ಗಳ ಮಧ್ಯೆ ಜೀವನವನ್ನು ಎಂಜಾಯ್ ಮಾಡೋದು ಎಲ್ಲಿಂದ ಬಂತು ? ಎಲ್ಲೋ ಬಾಲ್ಯದಲ್ಲಿ ಎಲ್ಲವನ್ನೂ ಮರೆತು ಖುಷಿಯಿಂದ ನೋಡಿದ್ದ ಸಿನಿಮಾಗಳೋ , ಆಡಿರಬಹುದಾದ ಅಟಗಳೋ, ಮದುವೆಯ ಹೊಸದರಲ್ಲಿ ಹೆಂಡತಿಯೊಡನೆ ಹೋಗಿದ್ದ ಹನೀಮೂನೋ , ದೇವಸ್ಥಾನಗಳೋ ಇಲ್ಲವೇ ಮಕ್ಕಳು‌ ಚಿಕ್ಕವಾಗಿದ್ದಾಗ ಒಮ್ಮೆ ಕರೆದುಕೊಂಡು ಹೋಗಿದ್ದ ಫ಼ನ್ ವರ್ಲ್ಡ್‌, ಫ಼ೆಂಟಸಿ ಪಾರ್ಕೋ, ಒಂದೆರೆಡು ಸಾಧಾರಣ ದರ್ಜೆಯ ಹೊಟೆಲ್ಲುಗಳೋ‌….ಇವುಗಳನ್ನು ಬಿಟ್ರೆ ಇಡೀ ಬದುಕಲ್ಲಿ ಸಾಧಾರಣ ಮಧ್ಯಮ ವರ್ಗದ ಜನರು ಅನುಭವಿಸಿದ್ದು ಇನ್ನೇನಿರಲು ಸಾಧ್ಯ ?. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕೆನ್ನುವ ಅಮೃತವಾಣಿಯ ಅನುಸರಣೆ ಮಾಡುವವರಲ್ಲವೇ ನಾವು ?

ಆಯ್ತು , ನಮಗೆ ಇದಾವ ಕಿರಿಕ್ಕುಗಳೂ ಇಲ್ಲಪ್ಪಾ ನಾವು ಎಬೋವ್ ಆವರೇಜು, ಹೀಗಾಗಿ ತಕ್ಕಮಟ್ಟಿಗೆ ಅನುಕೂಲವಾಗಿದ್ದೇವೆಂದು ಕಾಲರ್ ಮೇಲೆತ್ತಿ ಬಿಲ್ಡಪ್ ಕೊಟ್ರೂ ಇದಕ್ಕಿಂತ ಸ್ವಲ್ಪ ಉತ್ತಮ ಮಟ್ಟದ ಲೈಫ಼್ ಸ್ಟೈಲ್ ನಿಮ್ಮದಾಗಿದ್ದಿರಬಹುದಷ್ಟೇ . ಪಾಕೆಟಲ್ಲಿ ಕ್ರೆಡಿಟ್ ಕಾರ್ಡೂ, ಮೊಬೈಲ್ ನಲ್ಲಿ ಪೇಟಿಎಂ ಕ್ಯೂ ಆರ್ ಕೋಡುಗಳ ಸಹಾಯದಿಂದ ಒಂದಷ್ಟು ದಿನ ಪಬ್ಬೂ ಬಾರೂ , ಓರಿಯನ್ , ಮಂತ್ರಿ, ಲುಲೂ , ವೆಗಾಸಿಟಿ, ಮೀನಾಕ್ಷಿ, ಗೋಪಾಲನ್ ಮಾಲೂ ಅಂತೆಲ್ಲಾ ಜೋಷ್ ಇರೋವರೆಗೂ ಎಂಜಾಯ್ ಮಾಡಿ , ಎಂಟಿಆರ್, ವಿಧ್ಯಾರ್ಥಿ ಭವನ, ಸಾಗರ್ ಹೊಟೆಲ್ಲು, ಇಲ್ಲವೇ ಎಂಪೈರ್‌, ನಾಗಾರ್ಜುನ, ಬನಶಂಕರಿ ದೊನ್ನೆ‌ಬಿರಿಯಾನಿ ಅಂತಾನೂ ವಾರಕ್ಕೆರಡು ಬಾರಿ ಎಂಜಾಯ್ ಮಾಡುತ್ತಾ ಬ್ಯಾಂಕ್ ಸಾಲಕ್ಕೆ ಕಟ್ಟುವ EMI ಜಾಸ್ತಿ ಮಾಡ್ಕೊಂಡಿರಬಹುದು ಅಷ್ಟೇ !

ಬಹುತೇಕರ ಬದುಕಿನ ತಥಾಕಥಿತ ಸೀನುಗಳ ಸೊಗಸೇ ಇದು. ದೃಶ್ಯಗಳ ಅವಧಿ, ಬಣ್ಣ ಬದಲಾಗಿರಬಹುದೇನೋ ಆದರೆ ಎಲ್ಲೆಲ್ಲೂ ಅವೇ ದೃಶ್ಯಗಳೇ !

ಇಷ್ಟೆಲ್ಲಾ ಬಕ್ವಾಸ್ ಯಾಕಪ್ಪಾ ಅಂತೀರ… ಸ್ವಲ್ಪ ಮುಂದೆ ಹೋಗಿ ನೋಡಿ..

ಒಮ್ಮೆ ಯೋಚಿಸಿ, ಜೀವನದಲ್ಲಿ ದುಡ್ಡಿಗಾಗಿ ಇಷ್ಟೆಲ್ಲಾ ಕಷ್ಟ ಪಡೋ ಬದ್ಲು ಜನರನ್ನು ಸುಲಭವಾಗಿ ವಂಚಿಸುವ, ಯಾಮಾರಿಸುವ ಅಥವಾ ದಿಕ್ಕು ತಪ್ಪಿಸುವ ಮುಖವಾಡದ ಕಸುಬುಗಳಲ್ಲಿ ಇಳಿದ ಆಷಾಢಭೂತಿಗಳನ್ನು, ಗೋಮುಖ ಧರಿಸಿದ ನರಿಗಳನ್ನೂ ಒಮ್ಮೆ ನೋಡಿ ! ನಿಮಗೆ ಮೂರು‌ ಇಂಕ್ರಿಮೆಂಟು ಬರೋದ್ರೊಳಗೆ ಅವರ ಆಸ್ತಿ ಕನಿಷ್ಠ ಮುವ್ವತ್ಮೂರು‌ ಕೋಟಿ ಆಗಿರುತ್ತೆ ! ಕತ್ತೆ ತರಹ ದುಡಿದ್ರೂ ಅಕ್ಕಪಕ್ಕದ ಮನೆಯವರಿಗೇ ನಿಮ್ಮ ಹೆಸರು‌ ಗೊತ್ತಿರೋಲ್ಲ, ಆದರೆ ಹೀಗೆ ಜನರಿಗೆ ಕೋಟಿಗಟ್ಟಲೆ ವಂಚಿಸಿ ಪಂಗನಾಮ ಹಾಕೋರ ಹೆಸರು ನಾಯಕನೆಂಬ ಅಭಿದಾನದಲ್ಲೋ, ಧರ್ಮ ರಕ್ಷಕರ ಅವತಾರದಲ್ಲೋ, ಸಾಮಾಜಿಕ ಹೋರಾಟಗಾರನ ರೂಪದಲ್ಲೋ, ಉಪದೇಶ ಮಾಡುವವನ ಇಲ್ಲವೇ‌ ಭವಿಷ್ಯ ಹೇಳುವವನ ಸೋಗಿನಲ್ಲೋ ಯಾವ ನ್ಯೂಸ್ ಚಾನೆಲ್ ಗಳನ್ನು ನೋಡಿದ್ರೂ ಮಿರಮಿರ ಮಿಂಚುತ್ತಾ ಅಂಥವರು ಏಕ್‌ದಂ ಸೆಲೆಬ್ರಿಟಿ ರೇಂಜಿಗೆ ಜಂಪ್ ಮಾಡಿರುತ್ತಾರೆ.

ಕೆಲವರಂತೂ ನೂರಾರು ಕೋಟಿ ಆಸ್ತಿ ಮಾಡುವುದರ ಜೊತೆಗೆ ನೂರಿಪ್ಪತ್ತು ಊರುಗಳಲ್ಲೂ ಸಿಕ್ಕಾಪಟ್ಟೆ ಹೆಸರು ಮಾಡಿರುತ್ತಾರೆ. ಅದು ಹೇಗೆ ಸಾಧ್ಯ ಅಂತಾನಾ..? ಅದಕ್ಕೆ ಕಾರಣ ಯಾರು ಅಂತಾ ಯೋಚಿಸ್ತೀರಾ ?

ಅದಕ್ಕೆಲ್ಲಾ ನಾವೇರೀ…..ನಮ್ಮಂತಹ ಅಮಾಯಕ ಜನ ಸಾಮಾನ್ಯರೇ ಕಾರಣ. ಯಾಕಂತೀರಾ ?

ಸಮಾಜದಲ್ಲಿನ ಕೆಲವು ನಯವಂಚಕರು ಗೋಮುಖವ್ಯಾಘ್ರನ‌ ಮುಖವಾಡ ಧರಿಸಿ ಜನರನ್ನು ಸುಲಭವಾಗಿ ಭಾವುಕತೆಗೊಳಗಾಗುವ ವಸ್ತು ವಿಷಯಗಳನ್ನು ಮುಂದಿಟ್ಟುಕೊಂಡು ಹೀರೋ ಥರಾ…ಅಲ್ಲಲ್ಲ ಈಗೀಗ ಮಾಸ್ ಹೀರೋಯಿನ್ ಥರಾನೂ ಪೋಸು ಕೊಡುತ್ತಾ , ನಿತ್ಯ ಮಾಧ್ಯಮಗಳಲ್ಲಿ ರೋಚಕತೆಯಿಂದ ಪುಂಖಾನುಪುಂಖ‌ವಾಗಿ ಭಾಷಣ ಮಾಡುತ್ತಿದ್ದರೆ ಸಾಕು, ಹಾವಾಡಿಗನ ಪುಂಗಿಯ ಮೋಡಿಗೆ ತಲೆದೂಗುವ ಹಾವಿನಂತೆ ಜನ‌ ಅವರ ಮಾತುಗಳ ಮತ್ತಿನ ಮೋಡಿಗೆ ಮರುಳಾಗಿ ಗುಂಡಿಗೆ ಬೀಳುತ್ತಾರೆ.

ಮೊದಲೇ ಜಾತಿ, ಧರ್ಮ, ಗಡಿ‌-ನುಡಿ- ಗುಡಿ ಅಂದ್ರೆ ಸಾಕು, ನಮ್ಮ ಜನ ಮೈಮೇಲೆ ಇರುವೆ, ಚೇಳು, ಚಿಟ್ಟೆ, ಐಸು ಬಿಟ್ಕೊಂಡವರಂತೆ ಆಡುವರೆಂಬ ನಂಬಿಕೆಯೇ ಈ ಮುಖವಾಡಧಾರಿಗಳ ಟ್ರಂಪ್ ಕಾರ್ಡ್ !. ಕಾವಿ, ಖಾಕಿ, ಖಾದಿ..… ನೋಡಿದರೇ ಸಾಕು, ನಾಲ್ಕಕ್ಷರ ಕಲಿತಿರೋ ವಿವೇಕವನ್ನೂ ಮರೆತು ಮಹಾನ್ ಮುಠಾಳರಾಗಿ ಅವರ‌ ಮುಂದೆ ಮಂಡಿಯೂರುತ್ತೇವೆ, ಅಂತಹವರೊಳಗಿರ ಬಹುದಾದ ಕೆಲವರ ಅಸಲೀಯತ್ತಿನ ಬಣ್ಣ‌ ಕಳಚುವವರೆಗೂ ಅವರನ್ನು ಜಟೆಯಲ್ಲಿಟ್ಟು ಮೆರೆಸುತ್ತೇವೆ.

ಯಾವಾನಾದ್ರೂ ಒಬ್ಬ ಪವಾಡ ಮಾಡ್ತೀನಿ ಅಂತ ನಂಬಿಸುವಂತೆ ಉಲಿದ್ರೆ, ಒಮ್ಮೆಲೇ ಒಲಿದು ನುಲಿದು ಬಿಡ್ತೀವಿ, ರಾಜಕಾರಣಿಯ ಅಬ್ಬರದ ಮಾತುಗಳಿಗೆ, ದೇಶಪ್ರೇಮದ, ಧರ್ಮದ ಹೆಸರಿನ ಭಾವಾವೇಶದ ಭಾಷಣಗಳಿಗೆ ಮಾರು ಹೋಗಿ ನಮ್ಮನ್ನು ನಾವೇ ಮರೆಯುತ್ತೇವೆ. ಕಾವೀಧಾರಿ ಸ್ವಾಮೀಜಿಗಳ ಮುಖವಾಡದೊಳಗಿನ ಅಂತರಂಗದ ಮುಖವನ್ನರಿಯದೇ ನಮ್ಮ ಮುಖವನ್ನು ಅವರ ಪದತಲದಲ್ಲಿಟ್ಟು ಸ್ಪರ್ಶಿಸಿ ಪುನೀತರಾಗುತ್ತೇವೆ, ಯಾರಾದ್ರೂ, ಯಾವುದಾದ್ರೂ ಧರ್ಮದ ಹೆಸರಿನಲ್ಲಿ ಸಂಘ- ಸಂಘಟನೆಯನ್ನು ಕಟ್ಟಿ ಜನರನ್ನು ರಂಜಿಸುವ, ಕೆರಳಿಸುವ, ಪ್ರಚೋದಿಸುವ ಭೋರ್ಗರೆವ ಭಾಷಣಗಳನ್ನು, ಸುಳ್ಳುಗಳ ಸರಮಾಲೆಯನ್ನು ಅದ್ಭುತವಾಗಿ ಕುಟ್ಟಿದರೆ ಅದಕ್ಕೆ ಕೈತಟ್ಟಿ ಕುಣಿಯುತ್ತೇವೆ. ನಾವೇ ಮತ ಹಾಕಿ ನಮ್ಮ ಸೇವೆಗೆ ಅಂತ ಗೆಲ್ಲಿಸಿರುವ ಜನಪ್ರತಿನಿಧಿಯನ್ನು ಕಾಣಲು ಅತ್ಯಂತ ಗೌರವ, ಭಯ, ಭಕ್ತಿಯಿಂದ ಕೈಕಟ್ಟಿ ನಿಲ್ಲುತ್ತೇವೆ.

ವಾಟ್ ಎ ಟ್ರಾಜಿಡಿ…!!

ನಮ್ಮ‌ ಈ‌ ದೌರ್ಬಲ್ಯಗಳನ್ನೇ ಅಸ್ತ್ರವನ್ನಾಗಿಸಿಕೊಂಡ ಕೆಲವರ ಸಂಪತ್ತು ಅಲ್ಪಾವಧಿಯಲ್ಲಿ ಯಾರೂ ಊಹಿಸದ ಮಟ್ಟಕ್ಕೆ ಜಂಪ್ ಆಗಿರುತ್ತದೆ. ಕೊನೇಪಕ್ಷ ಇದು ಹೇಗೆ ಸಾಧ್ಯ ಎಂಬ ಸರಳ ಪ್ರಶ್ನೆಯನ್ನೂ ಕೂಡಾ ನಾವು ಹಾಕಿಕೊಳ್ಳುವುದಿಲ್ಲ… ಏಕೆಂದರೆ ಜಾತಿ ಧರ್ಮಗಳ ಪೊರೆ ಕಟ್ಟಿಕೊಂಡಿರುವ ಕಣ್ಣುಗಳಿಗೆ, ದ್ವೇಷ ಭಾವನೆಗಳನ್ನು ಹೃದಯದೊಳಕ್ಕೆ ಬಿತ್ತಲು ಅವಕಾಶ ಮಾಡಿಕೊಟ್ಟಿರುವ ಮನಸುಗಳಿಗೆ ಇದಾವುದೂ ಬೇಕಿಲ್ಲ.

ಫ಼್ರೆಂಡ್ಸ್, ನೀವು ಸಾರ್ವಜನಿಕ ಬದುಕಿನಲ್ಲಿ ಯಾರನ್ನಾದರೂ ಅಭಿಮಾನಿಸಿ, ಆರಾಧಿಸಿ, ಅನುಸರಿಸಿ. ಆದರೆ ಯಾರನ್ನೂ ಕುರುಡಾಗಿ ನಂಬಿ ನಿಮ್ಮನ್ನು ನೀವೇ ವಂಚಿಸಿಕೊಳ್ಳಬೇಡಿ, ಜೊತೆಗೆ ಸಮಾಜವನ್ನು ‌ವಂಚಿಸಲು ಬಿಡಬೇಡಿ. ಏಕೆಂದರೆ ಇಂದು ನಮ್ಮೊಂದಿಗೆ ಮಹಾತ್ಮ ಗಾಂಧಿಯೂ ಇಲ್ಲ , ಸತ್ಯ ಹರಿಶ್ಚಂದ್ರನೂ ಇಲ್ಲ !

  • ಮರೆಯುವ ಮುನ್ನ * ವಿಜ್ಞಾನ ತಂತ್ರಜ್ಞಾನ ಏನೆಲ್ಲಾ ಮುಂದುವರೆದಿದ್ದರೂ, ಚಂದ್ರಲೋಕದಲ್ಲಿಯೂ ಸೈಟು ಕೊಳ್ಳಬಯಸುವ ನಮ್ಮ ಜನರ ಅಮಾಯಕತೆ ಹೇಗಿರುತ್ತದೆಯೆಂದರೆ , ಯಾರೋ ಒಬ್ಬರು ಅದ್ಭುತವಾಗಿ ಜನರನ್ನು ಮರುಳುಮಾಡುವ, ಭಾಷಣ ಮಾಡುತ್ತಾರೆಂದರೆ, ಹಿನ್ನೆಲೆ ಅರಿಯದೇ ಅವರನ್ನು ನಂಬಿ ಟಿಕೆಟ್ ಗಾಗಿ ಕೋಟಿ ಗಟ್ಟಲೆ ಹಣ ಕೊಟ್ಟು ಕೈಸುಟ್ಟು ಕೊಳ್ಳುತ್ತಾರೆ. ವೃತ್ತಿಯಲ್ಲಿದ್ದಾಗ ಸಾವಿರಾರು ಜನರಿಗೆ ನ್ಯಾಯದ ತೀರ್ಪು ಕೊಟ್ಟ ನ್ಯಾಯಾಧೀಶರೊಬ್ಬರಿಗೆ ಯಾವನೋ ಒಬ್ಬ 420, ಕೆಲ ಪ್ರಭಾವಿ ರಾಜಕೀಯ ನಾಯಕರ ಜೊತೆ ತೆಗೆಸಿಕೊಂಡ ಫೋಟೋ ತೋರಿಸಿ ರಾಜ್ಯಸಭೆ ಸೀಟು ಕೊಡಿಸುತ್ತೇನೆಂದು ಆಸೆ ಹುಟ್ಟಿಸಿ ಕೋಟಿ ಕೋಟಿ ಪೀಕಿ ಪಂಗನಾಮ‌ ಹಾಕುತ್ತಾನೆ. ಆರೇ‌ ತಿಂಗಳಲ್ಲಿ ಇಟ್ಟ ಹಣ ದುಪ್ಪಟ್ಟಾಗುವುದೆಂಬುವರ ಮಾತನ್ನು ನಂಬಿ ಯಾವುದೋ ಬ್ಲೇಡ್ ಕಂಪನಿಯಲ್ಲಿ ಹಣ ತೊಡಗಿಸಿ ದುರಾಸೆಯಿಂದ ಗುಂಡಿಗೆ ಬೀಳುತ್ತಾರೆ. ಸರ್ಕಾರಿ‌ ಕೆಲಸ ಕೊಡಿಸುತ್ತೇವೆ, ಸಾಲ ಕೊಡಿಸುತ್ತೇವೆ, ವಿದೇಶದಲ್ಲಿ ಉದ್ಯೋಗ ಕೊಡಿಸುತ್ತೇವೆಂದು ನಂಬಿಸುವವರ ಬಲೆಗೆ ಸುಲಭವಾಗಿ ಬಿದ್ದು ಮೋಸ ಹೋಗುತ್ತಾರೆ. ಬಡ್ಡಿ ಆಸೆಗಾಗಿ ಕೂಡಿಟ್ಟ ಹಣವನ್ನೆಲ್ಲಾ ಯಾವನೋ ನಯವಂಚಕನಿಗೆ ಕೊಟ್ಟು ಅಸಲೂ ಬಡ್ಡಿ ಎರಡನ್ನೂ ಕಳೆದುಕೊಳ್ಳುತ್ತಾರೆ.

ಇದು‌ ಒಂಥರವಾದರೆ,

ಸಮಾಜದಲ್ಲಿ ನಕಲಿ ಮುಖವಾಡ ಧರಿಸಿ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಲಾಭ ಮಾಡಿಕೊಳ್ಳುವ ಸಾತ್ವಿಕ ಮೋಸಗಾರರ ಕತೆಗಳು ಮತ್ತೂ ಅಸಹ್ಯಕರ ! ಇರುಳು ಕಂಡ ಬಾವಿಗೆ ಹಗಲು‌ ಬಿದ್ದಂತೆ .!

ಎಲ್ಲಿಯವರೆಗೆ ಎಲ್ಲರನ್ನೂ ಎಲ್ಲವನ್ನೂ ಕುರುಡಾಗಿ ನಂಬುತ್ತಾ ನಮ್ಮೊಳಗಿನ ಪ್ರಜ್ಞಾವಂತಿಕೆಯನ್ನು ಕೋಮಾದಲ್ಲಿಯೇ ಇಟ್ಟಿರುತ್ತೇವೆಯೋ ಅಲ್ಲಿಯವರೆಗೂ ಹಸುವಿನ ವೇಷದ ಹೆಬ್ಬುಲಿಗಳಿಗೆ ಎಂದೂ ಕುಂದದ ಚೈತ್ರ ಕಾಲ.!

Share This Article
Leave a comment