ಆಸೆಗಳ ಬೆನ್ನೇರಿ (ಬ್ಯಾಂಕರ್ಸ್ ಡೈರಿ)

Team Newsnap
5 Min Read
IMG 20180306 WA0008
-ಡಾ. ಶುಭಶ್ರೀಪ್ರಸಾದ್, ಮಂಡ್ಯ

ಬ್ಯಾಂಕಿನ ವ್ಯವಹಾರವೂ ಒಂದು ರೀತಿ ಮಾರುಕಟ್ಟೆಯ ಹಾಗೆಯೇ. ಯಾವಾಗ ಏರಿಕೆಯಾಗುತ್ತದೋ, ಯಾವಾಗ ಇಳಿಕೆಯಾಗುತ್ತದೋ ತಿಳಿಯುವುದೇ ಇಲ್ಲ. ಡಿಮ್ಯಾಂಡ್ ಸಪ್ಲೈ ಥಿಯರಿ ತರಹ. ಕೆಲವು ಸಲ ಸ್ಟಾಫ್ ಜಾಸ್ತಿ ಇದ್ದಾಗ ಗ್ರಾಹಕರು ಕಡಿಮೆ ಇರುತ್ತಾರೆ. ಗ್ರಾಹಕರು ಜಾಸ್ತಿ ಇದ್ದಾಗ ಸ್ಟಾಫ್ ಇರುವುದಿಲ್ಲ. ಹೇಗೆ ಮಾರುಕಟ್ಟೆಯನ್ನು ಪ್ರಿಡಿಕ್ಟ್ ಮಾಡಲು ಕಷ್ಟಸಾಧ್ಯವೋ ಇದೂ ಹಾಗೆಯೇ. ಚಿನ್ನದ ಬೆಲೆ ತುಸು ಇಳಿದಿದೆ ಎಂದು ಸುದ್ದಿ ಕಿವಿಗೆ ಬಿದ್ದರೆ ಸಾಕು ಚಿನ್ನದಂಗಡಿಯ ಮುಂದೆ ಸಾಲುಗಟ್ಟುವಂತೆ ಹೊಸ ಸರ್ಕಾರದ ಹಲವು ಗ್ಯಾರಂಟಿ ಯೋಜನೆಗಳು ಜಾರಿಗೆ ಬರುತ್ತಿರುವ ಹಾಗೆಯೇ ವಿದ್ಯುತ್ ನಿಗಮದ ಮುಂದೆ, ಸೈಬರ್ ಕೇಂದ್ರಗಳ ಮುಂದೆ, ರೇಷನ್ ಕಾರ್ಡುಗಳ ಕೇಂದ್ರದ ಮುಂದೆ, ಆಧಾರ್ ತಿದ್ದುಪಡಿ ಕೇಂದ್ರಗಳ ಮುಂದೆ ಜನ ಕ್ಯೂ ನಿಲ್ಲುತ್ತಿದ್ದಾರೆ – ಅಂತೆಯೇ ಬ್ಯಾಂಕುಗಳಲ್ಲಿಯೂ.

ಸರ್ಕಾರದ ಯೋಜನೆಗಳಿಗೂ ಬ್ಯಾಂಕುಗಳಲ್ಲಿ ಜನ ಹೆಚ್ಚಳಕ್ಕೂ ಏನು ಸಂಬಂಧ ಎಂದು ಹುಬ್ಬೇರಿಸಬೇಡಿ. ಸರ್ಕಾರದ ಬಹುತೇಕ ಎಲ್ಲ ಯೋಜನೆಗಳೂ ಬ್ಯಾಂಕುಗಳ ಮೂಲಕವೇ ಕಾರ್ಯಗತವಾಗುವುದು. ಈಗೇಕೆ ಈ ಸುದ್ದಿ ಎನ್ನುತ್ತಿದ್ದೀರಾ? ಈಚೆಗೆ ಕರ್ನಾಟಕದಲ್ಲಿ ರಚನೆಯಾದ ಹೊಸ ಸರ್ಕಾರವು ಜಾರಿಗೊಳಿಸುತ್ತಿರುವ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಲು ರೇಷನ್ ಕಾರ್ಡಿನಲ್ಲಿ ಫಲಾನುಭವೀ ಸ್ತ್ರೀ ಯಜಮಾನಿಯೆಂದು ಮೊದಲ ಹೆಸರಿನಲ್ಲಿ ಗುರುತಿಸಲ್ಪಟ್ಟಿರಬೇಕು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆಯನ್ನು ಹೊಂದಿರುವುದು ಕಡ್ಡಾಯ, ಆಧಾರ್ ಯು.ಐ.ಡಿ ಲಿಂಕ್ ಆಗಿರಬೇಕು… ಹೀಗೆ ಇನ್ನೇನೇನೋ ಇರುತ್ತವೆ. ಹಾಗಾಗಿ ಕಳೆದ ಹದಿನೈದು ದಿನಗಳಿಂದ ನಮ್ಮ ಶಾಖೆಯಲ್ಲಿ ಹೆಣ್ಣುಮಕ್ಕಳದ್ದೇ ಸಂತೆ. ನಮ್ಮ ಶಾಖೆ ಎಂದೇನಲ್ಲ. ಕರ್ನಾಟಕದಾದ್ಯಂತ ಬಹುತೇಕ ಎಲ್ಲ ಬ್ಯಾಂಕುಗಳಲ್ಲಿಯೂ ಇದೇ ಪರಿಸ್ಥಿತಿ. ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ಮತ್ತೂ ಹೆಚ್ಚು.

ವಯಸ್ಸಾದ ಮುದುಕಿಯರ ಕಣ್ಣಲ್ಲಿ ಹೊಸಬೆಳಕಿರುವುದು ಆಶಾಕಿರಣವೇ ಹೌದು. ವಯೋವೃದ್ಧ ಮಾಸಾಶನ, ವಿಧವಾ ಮಾಸಾಶನದ ಮೊತ್ತಕ್ಕಿಂತ ಗೃಹಲಕ್ಷ್ಮಿ ಯೋಜನೆಯ ಮೊತ್ತ ಹೆಚ್ಚಾಗಿರುವುದೇ ಇದಕ್ಕೆ ಕಾರಣ. ಔಷಧಕ್ಕೋ, ತಿನಿಸಿಗೋ ಕೈಗೆ ಇಷ್ಟು ಹಣ ಸಿಕ್ಕರೆ ತುಸು ಹಗುರ ಎನ್ನುವ ನಿರಾಳ. ಬೇರೆ ಬ್ಯಾಂಕುಗಳಲ್ಲಿ ದೊಡ್ಡ ಮೊತ್ತದ ವ್ಯವಹಾರ ಇಟ್ಟುಕೊಂಡಿರುವ ಕೆಲ ಜಾಣೆಯರು ಆ ಬ್ಯಾಂಕಿನ ಖಾತೆಯ ಸಂಖ್ಯೆಯನ್ನು ಕೊಟ್ಟರೆ ಮತ್ತೆಲ್ಲಿ ಏನು ತೊಡಕಾಗುತ್ತದೆಯೋ ಎಂದು ಹೆದರಿ ಹೊಸ ಖಾತೆಯನ್ನು ತೆರೆಯಲು ಧಾವಿಸಿ ಬರುತ್ತಿದ್ದಾರೆ.
ಹೀಗೆ ಹೆಣ್ಣುಮಕ್ಕಳ ಖಾತೆ ತೆರೆಯುವಿಕೆ ದಿಢೀರನೆ ಹೆಚ್ಚಾಗುತ್ತಿರುವಾಗಲೇ ನಮ್ಮಲ್ಲಿ ವರ್ಗಾವಣೆಯಿಂದಾಗಿ ಅನೇಕ ಶಾಖೆಗಳಲ್ಲಿ ಅಗತ್ಯದಷ್ಟು ಸಿಬ್ಬಂದಿಯೂ ಇಲ್ಲ. ನಂದು ಮೊದಲು ತನ್ನದು ಮೊದಲು ಎಂದು ಅವರವರಲ್ಲೇ ಕಿತ್ತಾಟವನ್ನೂ ಕಾಣುತ್ತೇವೆ. ಕ್ಯೂ ಪದ್ಧತಿ ಎಂದ ಮೇಲೆ ತುಸು ತಣ್ಣಗಾಗುವುದು. ತಿಂಗಳಿಗೆ ಕುಳಿತಲ್ಲಿಯೇ ಎರಡು ಸಾವಿರ ಹೆಚ್ಚಾಗಿ ಸಂಪಾದಿಸುವುದು ಗದ್ದೆ ಕೆಲಸ, ಹಸುವಿನ ಕೆಲಸ ಎಂದು ಮೈಮುರಿದು ದುಡಿಯುವ ಹಳ್ಳಿಯ ಹೆಣ್ಣುಮಕ್ಕಳಿಗೆ ದೊಡ್ಡ ವರದಾನವೇ ಹೌದು.

ಕಳೆದ ವಾರ ನಮ್ಮೊಂದು ಮಹಿಳಾ ಗ್ರಾಹಕರು ತಮ್ಮ ಮಗನೊಂದಿಗೆ ಯು.ಐ.ಡಿ ಲಿಂಕ್ ಮಾಡಿಸಲು ಬ್ಯಾಂಕಿಗೆ ಬಂದಿದ್ರು. ಆ ಹುಡುಗ ಒಮ್ಮೆಲೇ ಆವೇಶ ಬಂದವನ ಹಾಗೆ “ಮೇಡಂ ಹೆಣ್ಣು ಸಂಸಾರದ ಕಣ್ಣು ಅಂತಿದ್ರು. ಈಗ ಹೆಣ್ಣುಮಕ್ಕಳು ದುಡ್ಡೇ ದೊಡ್ಡಪ್ಪ ಅಂತಿದಾರೆ. ಹೀಗೇ ಇವರೆಲ್ಲ ಬದಲಾಗ್ತಿದ್ರೆ ಗಂಡು ಜಾತಿ ತೀರಾ ಹೀನಾಯವಾಗಿಬಿಡುತ್ತೆ ಮೇಡಂ” ಎಂದ. “ಎರಡು ಸಾವಿರ ರೂಪಾಯಿಗೆಲ್ಲಾ ಹೀಗಂದ್ರೆ ಹೇಗ್ರೀ? ಸುಮ್ನೆ ತಮಾಷೆ ಮಾಡ್ಬೇಡಿ” ಎಂದೆ. ಆತ ಸೀರಿಯಸ್ ಆಗಿ “ಇಲ್ಲ ಮೇಡಂ ನಂದು ಅನುಭವದ ಮಾತು” ಎಂದ. ಕೂಡಲೇ ಅವನ ತಾಯಿ “ನನ್ ಮಗಂಗೆ ಇನ್ನೂ ಮದ್ವೆ ಆಗಿಲ್ಲ” ಎಂದರು. ಅವರಿಗೆ ಗಾಬರಿ ನಾನೆಲ್ಲಿ ಅವರ ಕುಟುಂಬದ ಬಗ್ಗೆ ತಪ್ಪು ತಿಳಿದುಕೊಳ್ತೀನೋ ಎಂದು. ಹೊಸ ತಲೆಮಾರಿನ ಮಾಡ್ರನ್ ದಂಪತಿಗಳು ಏಕವಚನದಲ್ಲಿ ಕೂಗುವುದು ಈಗಿನ ಟ್ರೆಂಡ್. ಆದರೆ ಹಳ್ಳಿಯಲ್ಲಿ ಮುದುಕ ಮುದುಕಿಯರೂ ಹಾಗೆಯೇ ಏಕವಚನದಲ್ಲಿ ಮಾತಾಡೋದು. ಬ್ಯಾಂಕಿಗೆ ಬಂದ ಹೆಂಗಸರು ತಮ್ಮ ಗಂಡಂದಿರಿಗೆ “ಏ ತತ್ತಾ ಇತ್ಲಾಗೆ, ನೀ ಸುಮ್ಕೆ ಕೂತ್ಕೋ…: ಅಂತೆಲ್ಲ ಹೆಂಡತಿಯರು ಅನ್ನುವಾಗ ಮೊದಮೊದಲು ನನಗೆ ಅಚ್ಚರಿಯಾಗುತ್ತಿತ್ತು. ಈಗ ಅಭ್ಯಾಸ ಆಗಿಹೋಗಿದೆ. “ನನ್ ಗೆಳೆಯರ ಹೆಂಡ್ತೀರನ್ನ ನೋಡಿಯೇ ನಾ ಹೇಳ್ತಿರೋದು ಮೇಡಂ. ಆದರೆ ಈ ಹೊಸ ಯೋಜನೆ ಬಂದಮೇಲೆ ಹೆಂಡ್ತೀರು ಗಂಡಂದಿರಿಗೆ ‘ನಮ್ಗೆ ಓಡಾಡೋಕೆ ಫ್ರೀ ಬಸ್ ಇದೆ, ಫ್ರೀ ರೇಷನ್ ಇದೆ, ಕೈ ಖರ್ಚಿಗೆ ಎರಡು ಸಾವಿರ ಬರುತ್ತೆ. ನಿನ್ ಯಾವೋನ್ ಕಾಯ್ತಾನೋ. ಇನ್ಮುಂದೆ ನಮ್ದೇ ಜಮಾನ…. (ಇನ್ಮುಂದೆ ನಮ್ದೇ ಜಮಾನ, ನಮ್ದೇ ಹವಾ ಅನ್ನೋ ಮಾತುಗಳನ್ನು ನನ್ನೆದುರೇ ಹೆಣ್ಣುಮಕ್ಕಳೇ ಹೇಳಿದ್ದಾರೆ ಅನ್ನಿ) ಹೋಗೊಲೋ ನಿನ್ ಮಾತು ಯಾವೋಳ್ ಕೇಳ್ತಾಳೆ’ ಅಂದಿದ್ದನ್ನು ನನ್ನ ಕಿವಿಯಾರೆ ಕೇಳಿದೀನಿ. ಹೀಗಾದ್ರೆ ಸಮಾಜದ ಗತಿಯೇನು ಮೇಡಂ? ನಾನು ಮದ್ವೆ ಆಗ್ಬೇಕೋ ಬೇಡ್ವೋ ಅಂತ ಯೋಚನೆಗೆ ಬಿದ್ದಿದ್ದೀನಿ” ಎಂದ.

ಮೊನ್ನೆ ನಮ್ಮ ಗ್ರಾಹಕರಾದ ಉಮೇಶ್ (ಹೆಸರು ಬದಲಿಸಲಾಗಿದೆ) ಅವರು ತಮ್ಮ ಪತ್ನಿಯನ್ನು ಖಾತೆ ತೆರೆಯಲು ಕರೆದುಕೊಂಡು ಬಂದಿದ್ದರು. ಬಂದವರೇ “ಮೇಡಂ ತಿಂಗ್ಳಾ ತಿಂಗ್ಳಾ ಈ ಎರಡು ಸಾವಿರ ಕೈಗೆ ಬಂದ್ಬಿಟ್ರೆ ನಮ್ ಹೆಂಡ್ತೀರು ನಮ್ಮನ್ನ ಬಿಟ್ಟು ಹೋಗ್ತಾರೆ ಬಿಡಿ” ಎಂದರು. “ಎಲ್ಲಿಗೆ ಸರ್? ಫ್ರೀ ಬಸ್ ಅಂತ ತೀರ್ಥಯಾತ್ರೆ ಹೋಗ್ತಾರಂತಾನಾ?” ಅಂತ ಕುಶಾಲಿಯಿಂದ ಕೇಳಿದೆ. “ಅಯ್ಯೋ ತೀರ್ಥ ಯಾತ್ರೆ ಕಥೆ ಯಾಕೆ ಕೇಳ್ತೀರ ಮೇಡಂ? ನಮ್ ಅಕ್ಕ ಪಕ್ಕದ ಮನೆಯ ಹೆಂಗಸರನ್ನು ನೋಡಿದೀನಿ. ಜೊತೆಗೆ ವಾಟ್ಸಪ್ಪಿನಲ್ಲಿ ಬರೋ ವಿಡಿಯೋಗಳನ್ನು ನೋಡ್ತಾ ಇದ್ರೆ ನಮ್ ಹೆಣ್ ಮಕ್ಳು ಯಾಕೆ ಹೀಗೆ ಏಕಾಏಕಿ ಬದಲಾದ್ರು ಅಂತ ಗಾಬರಿ ಆಗ್ತೈತೆ ಮೇಡಂ. ‘ಮನೇಲಿ ಅಕ್ಕಿ ರಾಗಿ ತಂದು ಮಡ್ಗಿದೀನಿ. ನಾಳೆ ನಾ ಧರ್ಮಸ್ಥಳ ಯಾತ್ರೆಗೆ ನಮ್ ಸಂಘದವರ ಜೊತೆ ವಯ್ತಿದೀನಿ. ಅಲ್ಲಿಂದ ಸುಬ್ರಮಣ್ಯ, ಒರನಾಡು ಎಲ್ಲ ತಿರೀಕಂಡ್ ಬರ್ತೀವಿ. ಇಷ್ಟು ವರ್ಷ ನೀ ತೋರ್ಸಿದ್ ಅಷ್ಟ್ರ್ಯಾಗೇ ಇತ್ತು. ಈಗ ಸರ್ಕಾರದವ್ರು ಫ್ರೀ ಬಸ್ ಕೊಟ್ಟವ್ರೆ. ನಾವ್ ವಯ್ತೀವಿ. ನೀವೇ ಬೇಯಿಸ್ಕಂಡ್ ತಿನ್ನಿ’ ಅನ್ನೋ ವಿಡಿಯೋ ನೋಡಿ ತಲೆ ಸುತ್ತು ಬಂತು ಮೇಡಂ. ಮಕ್ಕಳನ್ನು ಒಳ್ಳೆಯ ಪ್ರಜೆಗಳನ್ನಾಗಿ ಮಾಡಿ, ಸಮಯಕ್ಕೆ ಸರಿಯಾಗಿ ಮಕ್ಕಳಿಗೆ ಉಣಿಸಿ, ಸರಿದಾರಿಗೆ ತರುವ ದೊಡ್ಡ ಜವಾಬ್ದಾರಿ ಹೊತ್ತ ತಾಯಂದಿರೇ ಹೀಗೆ ಆಸೆ ಬಿದ್ದು, ಮನೆ ಮಠ ಬಿಟ್ಟು ವಾರಗಟ್ಟಲೆ ಊರೂರು ತಿರುಗಿದ್ರೆ ಮಕ್ಕಳ ಗತಿ ಏನು? ಅಷ್ಟ್ಯಾಕೆ? ಬಸ್ಸುಗಳಲ್ಲಿ ಸೀಟಿಗಾಗಿ ಒಬ್ಬರ ಮೇಲೆ ಒಬ್ಬರು ಬಿದ್ದು ಮೈಮೇಲಿನ ಬಟ್ಟೆ ಮೇಲೆ ಎಚ್ಚರ ಇಲ್ಲದೆ ಕಿತ್ತಾಡ್ತಾ ಇರೋದನ್ನ ನೋಡಿದಾಗ ನಮ್ಮ ಹೆಣ್ಣುಮಕ್ಕಳು ಆಸೆಗಳ ಬೆನ್ನೇರಿ ಏನೇನು ಅನಾಹುತ ಮಾಡ್ಕೋತಾರೋ ಅಂತ ಭಯ ಆಗುತ್ತೆ. ಸೀರೆಯುಟ್ಟ ಹೆಂಗಸರು ಕಿಟಕಿಯಿಂದ ತೂರೋ ಸಾಹಸ ಮಾಡ್ತಿದಾರೆ, ಒಂದು ಊರಲ್ಲಿ ಹಾಗೆ ಹತ್ತೋಕೆ ಹೋಗಿ ಕೈ ಕತ್ತರಿಸಿಹೋದ ವಿಡಿಯೋ ನೋಡಿ ದಂಗಾದೆ. ಹೀಗೇ ಪರಿಸ್ಥಿತಿ ಮುಂದುವರೆದರೆ ಗಂಡ ಹೆಂಡತಿಯರ ದೈವೋರ್ಸ್ ಕೇಸುಗಳು ಜಾಸ್ತಿ ಆಗ್ತವೆ ಮೇಡಂ” ಎಂದು ಅಲವತ್ತುಕೊಂಡರು.

ಅಲ್ಲವೇ? ಅನುಕೂಲವಾಗಲೆಂದು ಜಾರಿಗೊಳಿಸಿದ ಯೋಜನೆಗಳನ್ನು ಹಸಿದವ ಆಹಾರ ಕಂಡ ಕೂಡಲೇ ಗಬಗಬ ತಿಂದು ಬಿಕ್ಕಳಿಕೆ ಬಂದು ಒದ್ದಾಡುವಂತೆ ಅನುಭವಿಸಬೇಕೆಂದರೆ ಹೇಗೆ? ಏಕಾಏಕಿ ಎಲ್ಲವನ್ನೂ ಒಮ್ಮೆಲೇ ದಕ್ಕಿಸಿಕೊಂಡುಬಿಡಬೇಕೆಂಬ ದುರಾಸೆಯನ್ನು ಬಿಡದೇ ಹೋದರೆ ‘ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂತೆ’ ಹಪಹಪಿಸಬೇಕಾಗುತ್ತದೆ.ಪಾರ್ವತಮ್ಮ ರಾಜ್ ಕುಮಾರ್ ತಮ್ಮನ ಮಗನಿಗೆ ಅಪಘಾತ: ಬಲಗಾಲು ಕತ್ತರಿಸಿದ ವೈದ್ಯರು

ಮಾಡುವ ಯಾವುದೇ ಕೆಲಸದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದದ್ದು ಯಾವಾಗಿನ ಅಗತ್ಯ.

Share This Article
Leave a comment